ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜ್ಯ ಪ್ರವಾಸದ ಬಗ್ಗೆ ಇದ್ದ ಗೊಂದಲಕ್ಕೆ ಕಡೆಗೂ ತೆರೆ ಬಿದ್ದಿದೆ. ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಯಾಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹಿರಿಯ ನಾಯಕ ಬಿಎಸ್ವೈ ಪರ ಫುಲ್ ಬ್ಯಾಟಿಂಗ್ ಮಾಡಿದ್ದಾರೆ. ಈ ಮೂಲಕ ಸಿಎಂ ಸ್ಥಾನದಿಂದ ಕೆಳಗಿಳಿದರೂ ರಾಜ್ಯ ಬಿಜೆಪಿಯಲ್ಲಿ ಬಿಎಸ್ವೈ ಅವರೇ ಮೇಲುಗೈ ಎಂಬ ಸಂದೇಶ ರವಾನಿಸಿದ್ದಾರೆ.
ನಾಯಕತ್ವ ಬದಲಾವಣೆ ನಂತರ ರಾಜ್ಯ ಪ್ರವಾಸ ಮಾಡಲು ಮಾಜಿ ಸಿಎಂ ಬಿಎಸ್ವೈ ಭಾರೀ ತಯಾರಿ ನಡೆಸಿಕೊಂಡಿದ್ದರು. ರಾಜ್ಯ ಪ್ರವಾಸಕ್ಕೆ ಗಣೇಶ ಚತುರ್ಥಿ ಬಳಿಕ ಮುಹೂರ್ತವೂ ಫಿಕ್ಸ್ ಮಾಡಿದ್ದರು. ಆದರೆ, ದಿಢೀರ್ ಬಿಎಸ್ವೈ ರಾಜ್ಯ ಪ್ರವಾಸ ಮುಂದೂಡಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಅಲ್ಲದೇ ಹೈಕಮಾಂಡ್ ಬಿಎಸ್ವೈ ರಾಜ್ಯ ಪ್ರವಾಸಕ್ಕೆ ಅನುಮತಿ ನೀಡಿರಲಿಲ್ಲ ಎಂಬ ಸುದ್ದಿ ಹರಡಿತ್ತು. ಈಗ ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಪ್ರವಾಸಕ್ಕೆ ಬಿಎಸ್ವೈಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಯಾಕೆ ಬೇಕು ಎಂದಿದ್ದಾರೆ.
ಇದನ್ನ ನಾನು ಹಲವು ಬಾರಿ ಹೇಳಿದ್ದೇನೆ. ಯಡಿಯೂರಪ್ಪರ ರಾಜ್ಯ ಪ್ರವಾಸಕ್ಕೆ ನಮ್ಮ ಗ್ರೀನ್ ಸಿಗ್ನಲ್ ಬೇಕಾಗಿಲ್ಲ. ಬಿಎಸ್ವೈ ಕರ್ನಾಟಕದಲ್ಲಿ ಹಿರಿಯ ನಾಯಕರು. ಅವರು ರಾಜ್ಯ ಪ್ರವಾಸ ಮಾಡಲು ಅನುಮತಿ ಬೇಕಾಗಿಲ್ಲ. ಪ್ರವಾಸ ಮಾಡಬಹುದು ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು, ಸಂಪುಟ ವಿಸ್ತರಣೆ ವಿಚಾರ ಸಿಎಂಗೆ ಬಿಟ್ಟ ವಿಚಾರ. ಅದನ್ನ ಸಿಎಂ ನೊಡಿಕೊಳುತ್ತಾರೆ ಎಂದಿರುವ ಅರುಣ್ ಸಿಂಗ್, ಬೊಮ್ಮಾಯಿ ಕಾರ್ಯವೈಖರಿಯನ್ನ ಶ್ಲಾಘಿಸಿದ್ದಾರೆ.
ರಾಜ್ಯದಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದೆ. ಸಿಎಂ ಸಮಾಜದ ಎಲ್ಲಾ ಜನಾಂಗದ ಬಗ್ಗೆ ಗಮನ ಹರಿಸಿದ್ದಾರೆ. ಯಡಿಯೂರಪ್ಪರ ಕಾರ್ಯಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ಎಂದರು.
ದಾವಣಗೆರೆಯಲ್ಲಿ ಇತ್ತೀಚೆಗೆ ಅರುಣ್ ಸಿಂಗ್ ನೇತೃತ್ವದಲ್ಲಿ ರಾಜ್ಯ ಬಿಜೆಪಿ ನಾಯಕರ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಅರುಣ್ ಸಿಂಗ್ ಬಿಜೆಪಿ ನಾಯಕರಿಗೆ ಪಕ್ಷ ಸಂಘಟನೆಯ ಬಗ್ಗೆ ಪಾಠ ಮಾಡಿದರು. ಮುಂಬರುವ ಚುನಾವಣೆಗಳ ಕಾರ್ಯತಂತ್ರದ ಬಗ್ಗೆಯೂ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಿದರು. ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಎಲೆಕ್ಷನ್ ಬಗ್ಗೆಯೂ ಮಾತುಕತೆ ನಡೆಸಿದರು.
ಸಭೆಯಲ್ಲಿ ಸ್ಥಳೀಯ ಹಾಗೂ ಎರಡು ಕ್ಷೇತ್ರದ ಉಪಚುನಾವಣೆ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದೆ. ಕ್ಷದ ಪದಾಧಿಕಾರಿಗಳೊಂದಿಗೆ ಮತ್ತೊಂದು ಸಭೆ ನಡೆಸಿರುವ ಅರುಣ್ ಸಿಂಗ್ ರಾಜ್ಯದಲ್ಲಿ ಪಕ್ಷದ ವರ್ಚಸ್ಸು ಹೆಚ್ಚಿಸುವ ಬಗ್ಗೆ ಮಾತುಕತೆ ಆಡಿದ್ದಾರೆ. ಪಕ್ಷವನ್ನು ಬೂತ್ ಮಟ್ಟದಿಂದ ಮತ್ತಷ್ಟೂ ಬಲಿಷ್ಠಗೊಳಿಸುವುದು ಸಭೆಯ ಮುಖ್ಯ ಉದ್ದೇಶವಾಗಿದೆ. ಪ್ರತೀ ಗ್ರಾಮದಲ್ಲೂ ಪಕ್ಷ ಸಂಘಟನೆಯಾಗಬೇಕು. ಅಲ್ಲದೆ ಪ್ರಧಾನಿ ಮೋದಿ ಸರ್ಕಾರದ ಸಾಧನೆ, ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶವನ್ನೂ ಹೊಂದಲಾಗಿದೆ ಎನ್ನಲಾಗಿದೆ.

ಯಡಿಯೂರಪ್ಪ ಅವರು ಈ ನಾಡು ಕಂಡ ಅತ್ಯಂತ ಅನುಭವಿ ನಾಯಕ. ಅವರು ರಾಜ್ಯ ಪ್ರವಾಸ ಮಾಡಲು ಬಯಸಿದರೆ, ಮಾಡಲಿ. ಇದು ಪಕ್ಷಕ್ಕೆ ಸಾಕಷ್ಟು ಲಾಭ ತರುತ್ತದೆ ಎಂದು ಅಡ್ಡ ಗೋಡೆಯ ಮೇಲೆ ದೀಪವಿಟ್ಟಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಧ್ಯಾವಧಿಯನ್ನು ಪೂರ್ಣಗೊಳಿಸಿದ ನಂತರ ಕಳೆದ ತಿಂಗಳು ಯಡಿಯೂರಪ್ಪ ಅವರು ತಮ್ಮ ಸಿಎಂ ಕುರ್ಚಿಗೆ ರಾಜೀನಾಮೆ ನೀಡಿದರು. ಆದರೆ ಮಾಜಿ ಸಿಎಂ, ಕಳೆದ ವಾರ ಮಾಲ್ಡೀವ್ಸ್ನಿಂದ ಹಿಂದಿರುಗಿದ ನಂತರ, ಸಕ್ರಿಯ ರಾಜಕಾರಣಕ್ಕೆ ಮರಳುವ ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ.
ರಾಜ್ಯ ಪ್ರವಾಸ ಯೋಜನೆ ಸಿದ್ಧವಾಗುತ್ತಿರುವಂತೆ ಯಡಿಯೂರಪ್ಪ ಅವರ ಪುತ್ರ ಹಾಗೂ ಪಕ್ಷದ ಉಪಾಧ್ಯಕ್ಷ ಬಿವೈ ವಿಜಯೇಂದ್ರ ರಾಜ್ಯ ಪ್ರವಾಸದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ವರದಿಗಳು ಹೇಳಿವೆ.
ಯಡಿಯೂರಪ್ಪ ಅವರ ಪುತ್ರ ಎನ್ನುವ ಇಮೇಜ್ ಒಂದುಕಡೆಯಾದರೆ, ಲಿಂಗಾಯತರ ನಾಯಕ ಎಂಬುದಾಗಿ ವಿಜಯೇಂದ್ರ ಮುಂದಿನ ಚುನಾವಣೆಗೆ ಮುನ್ನ ತಮ್ಮ ಸಾಮರ್ಥ್ಯವನ್ನು ಕೇಂದ್ರ ನಾಯಕತ್ವಕ್ಕೆ ತೋರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಮಂತ್ರಿ ಸ್ಥಾನ ಪಡೆಯಲು ವಿಜಯೇಂದ್ರ ಮಾಡಿದ ಪ್ರಯತ್ನಗಳು ಇಲ್ಲಿಯವರೆಗೆ ಯಶಸ್ವಿಯಾಗಿಲ್ಲ. ಈಗ ಮಾಡಲು ಹೊರಟಿರುವ ರಾಜ್ಯ ಪ್ರವಾಸ ಒಂದು ರೀತಿಯಲ್ಲಿ ಪಕ್ಷ ಸಂಘಟನೆ ಎಂದು ಹೇಳುತ್ತಿದ್ದರೂ, ಇದು
ತಂದೆ ಮತ್ತು ಮಗನ ಶಕ್ತಿಯನ್ನು ತೋರಿಸುವ ಉಪಾಯ ಎಂದು ಹೇಳಲಾಗುತ್ತಿದೆ.