ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ರೀತಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಕೂಡ ತನ್ನ ನೆಲೆ ವಿಸ್ತರಿಸಿಕೊಳ್ಳಲು ಶತಪ್ರಯತ್ನ ನಡೆಸುತ್ತಿದೆ. ಈ ಹಿನ್ನಲೆಯಲ್ಲಿ ಸದ್ಯ ಚುನಾವಣೆ ನಡೆಯುತ್ತಿರುವ ಉತ್ತರ ಪ್ರದೇಶ, ಉತ್ತರಖಂಡಾ, ಗೋವಾ, ಪಂಜಾಬ್ ಮತ್ತು ಮಣಿಪುರಗಳ ಪೈಕಿ ಮಣಿಪುರ ಒಂದನ್ನು ಬಿಟ್ಟು ಉಳಿದೆಲ್ಲೆಡೆ ಆಮ್ ಆದ್ಮಿ ಪಕ್ಷ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ. ಉತ್ತರ ಪ್ರದೇಶ, ಉತ್ತರಖಂಡಾ, ಗೋವಾ ಮತ್ತು ಪಂಜಾಬ್ ರಾಜ್ಯಗಳ ಪೈಕಿ ಪಂಜಾಬ್ ನಲ್ಲಿ ಅಧಿಕಾರಕ್ಕೆ ಬರಬಹುದು ಎಂದೇ ಹೋರಾಟ ನಡೆಸಿದೆ. ಉಳಿದೆಲ್ಲೆಡೆ ಸದ್ಯಕ್ಕೆ ಖಾತೆ ತೆರೆದರೆ ಸಾಕು ಎಂಬ ಸ್ಥಿತಿಯಲ್ಲಿದೆ.
ಪಂಜಾಬ್ ವಿಷಯಕ್ಕೆ ಬರುವುದಾದರೆ 2017ರಲ್ಲೇ ಆಮ್ ಆದ್ಮಿ ಪಕ್ಷ ಅಲ್ಲಿ ಬಹಳ ಗಂಭೀರವಾದ ಪ್ರಯತ್ನ ನಡೆಸಿತ್ತು. ದೆಹಲಿ ಮತ್ತು ಪಂಜಾಬಿನ ಸ್ಥಳೀಯ ಮಟ್ಟದ ತಂತ್ರಗಾರಿಕೆಗಳ ನಡುವೆ ಸಮನ್ವಯ ಸಾಧ್ಯವಾಗದೆ ಸೋತಿತ್ತು. ಅದಕ್ಕೂ ಮಿಗಿಲಾಗಿ ಪಂಜಾಬ್ ಘಟಕದಲ್ಲಿ ಒಳಜಗಳವೂ ಜೋರಾಗಿತ್ತು. ‘ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲೆಸಿಕೊಂಡರು’ ಎಂಬ ಮಾತಿನಂತೆ ಅಲ್ಲಿ ಗೆದ್ದೇ ಬಿಟ್ಟೆವು ಎಂದುಕೊಂಡು ‘ಯಾರಿಗೆ ಗದ್ದುಗೆ?’ ಎಂಬಂತೆ ಕಚ್ಚಾಡಲಾಗಿತ್ತು. ಹಾಗೆ ಗದ್ದುಗೆ ಹಿಡಿಯಲು ಹಪಹಪಿಸಿದವರ ಪೈಕಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮುಂಚೂಣಿಯಲ್ಲಿದ್ದರು. ಏಕೆಂದರೆ ಅವರಿಗೆ ಸಂಪೂರ್ಣ ರಾಜ್ಯದ ಸ್ಥಾನ ಹೊಂದಿರುವ ರಾಜ್ಯದ ಮುಖ್ಯಮಂತ್ರಿ ಆಗಬೇಕೆಂಬ ಹಂಬಲ ಆಗ ತೀವ್ರವಾಗಿತ್ತು (ಈಗಲೂ ಇದೆ, ಅನಿವಾರ್ಯವಾಗಿ ತೋರ್ಪಡಿಸಿಕೊಳ್ಳುತ್ತಿಲ್ಲ).
ಇಂಥ ಪಂಜಾಬ್ ಗೆಲ್ಲಲು ಈ ಬಾರಿ ಆಮ್ ಆದ್ಮಿ ಪಕ್ಷ, ಕಳೆದ ಬಾರಿ ಮಾಡಿದ್ದ ತಪ್ಪನ್ನು ಈ ಬಾರಿ ಮಾಡಬಾರದೆಂದು ನಿಶ್ಚಯಿಸಿದಂತಿದೆ. ಅದೇ ಕಾರಣಕ್ಕೆ ಕೆಲ ದಿನಗಳ ಹಿಂದಿನವರೆಗೂ ಇದ್ದ ಆಂತರಿಕ ಕಚ್ಚಾಟ ಈಗ ಅಷ್ಟಾಗಿ ಕಂಡುಬರುತ್ತಿಲ್ಲ. ಕಳೆದ ಬಾರಿಗೆ ಹೋಲಿಸಿಕೊಂಡರೆ ದೆಹಲಿ ಮತ್ತು ಅಮೃತಸರದ ನಡುವಿನ ಸಮನ್ವಯವೂ ಸುಧಾರಿಸಿದಂತಿದೆ. ಅರವಿಂದ ಕೇಜ್ರಿವಾಲ್ ಪಂಜಾಬ್ ಮುಖ್ಯಮಂತ್ರಿ ಆಗುವ ಬಯಕೆಯನ್ನು ಬಗಲಿಗಿಟ್ಟಿದ್ದಾರೆ. ಜೊತೆಗೆ ಆಮ್ ಆದ್ಮಿ ಪಕ್ಷದ ಪಂಜಾಬ್ ಘಟಕದಲ್ಲೇ ಅತ್ಯಂತ ಪ್ರಭಾವಿ ಹಾಗೂ ಮೆಚ್ಚುಗೆ ಇರುವ ಸಂಸದ ಭಗವಂತ್ ಮಾನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ.

ಇನ್ನು, ಪಂಜಾಬ್ನ ಧುರಿ ಕ್ಷೇತ್ರದಿಂದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರನ್ನು ಕಣಕ್ಕಿಳಿಸುತ್ತಿರುವುದು ಕೂಡ ಆಮ್ ಆದ್ಮಿ ಪಕ್ಷ ಮತ್ತೊಂದು ಮಹತ್ವದ ತಂತ್ರವಾಗಿದೆ. ಧುರಿ ವಿಧಾನಸಭಾ ಕ್ಷೇತ್ರವು ಮನ್ ಅವರ ಲೋಕಸಭಾ ಕ್ಷೇತ್ರ ಸಂಗ್ರೂರ್ ವ್ಯಾಪ್ತಿಯಲ್ಲಿ ಬರುತ್ತದೆ. ಈ ಕ್ಷೇತ್ರದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಭಗವಂತ್ ಮಾನ್ ಅವರಿಗೆ ದೊಡ್ಡ ಮಟ್ಟದ ಲೀಡ್ ಸಿಕ್ಕಿತ್ತು. ಸಂಗ್ರೂರ್ ಲೋಕಸಭಾ ಕ್ಷೇತ್ರವನ್ನು ಒಂಬತ್ತು ವಿಧಾನಸಭಾ ಕ್ಷೇತ್ರಗಳಾಗಿ ವಿಂಗಡಿಸಲಾಗಿದೆ ಅದರಲ್ಲಿ ಮೂರು ಪರಿಶಿಷ್ಟ ಜಾತಿ ವರ್ಗದ ಅಭ್ಯರ್ಥಿಗಳಿಗೆ ಮೀಸಲಾಗಿದೆ. ಇದು ಕೂಡ ಭಗವಂತ್ ಮಾನ್ ಅವರ ಪರವಾಗಿ ಕೆಲಸ ಮಾಡಿದೆ. ಏಕೆಂದರೆ ಅವರ ಜನಪ್ರಿಯತೆಯು ಸ್ವತಃ ಜಾಟ್ ಸಿಖ್ ಆಗಿದ್ದರೂ ಸಹ ಜಾತಿ ರೇಖೆಗಳನ್ನು ದಾಟಿದ್ದಾಗಿದೆ ಎಂದು ಹೇಳಲಾಗುತ್ತದೆ.
ಇವೆಲ್ಲಕ್ಕೂ ಮೀರಿ ಇದು ಮಾಲ್ವಾ ಪ್ರದೇಶದಲ್ಲಿ ಬರುತ್ತದೆ. ಇದರಿಂದ ಮಾಲ್ವಾ ಪ್ರದೇಶಕ್ಕೆ ಮುಖ್ಯಮಂತ್ರಿ ಪಟ್ಟ ಲಭಿಸುತ್ತದೆ ಎಂಬ ಸಂದೇಶ ಕಳುಹಿಸುವುದು ಆಮ್ ಆದ್ಮಿ ಪಕ್ಷದ ತಂತ್ರವಾಗಿದೆ. ಸದ್ಯ ಮಾಲ್ವಾ ಪ್ರದೇಶದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಇದ್ದು ಈಗ ಭಗವಂತ್ ಮಾನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ಹಾಗೂ ಇದೇ ಪ್ರದೇಶದಿಂದ ಕಣಕ್ಕಿಳಿಸುವ ಮೂಲಕ ಆಮ್ ಆದ್ಮಿ ಪಕ್ಷವು ಏಕಕಾಲಕ್ಕೆ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುವ ಹಾಗೂ ಕಾಂಗ್ರೆಸ್ ಬಲವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಇದಲ್ಲದೆ ಈ ಪ್ರದೇಶದ ಭಾಗವಾಗಿರುವ ದಿರ್ಬಾ ವಿಧಾನಸಭಾ ಕ್ಷೇತ್ರದಿಂದ ವಿರೋಧ ಪಕ್ಷದ ನಾಯಕ ಹರ್ಪಾಲ್ ಸಿಂಗ್ ಚೀಮಾ ಅವರನ್ನು ಕಣಕ್ಕೆ ಇಸುತ್ತಿರುವುದರಿಂದ 69 ಕ್ಷೇತ್ರಗಳನ್ನು ಹೊಂದಿರುವ ಮಾಲ್ವಾದಲ್ಲಿ ಆಮ್ ಆದ್ಮಿ ಪಕ್ಷ ಹೆಚ್ಚಿನ ಸೀಟು ಗೆಲ್ಲುವ ರಣತಂತ್ರ ರೂಪಿಸಿದೆ.
ಸಮೀಕ್ಷೆಗಳ ಪ್ರಕಾರ ಭಗವಂತ್ ಮನ್ ತಮ್ಮ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ 2019ರ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಹಣ ಖರ್ಚು ಮಾಡಿ ಗೆಲುವು ಸಾಧಿಸಿದ್ದರು. ಚುನಾವಣಾ ಆಯೋಗಕ್ಕೆ ನೀಡಿರುವ ಅಂಕಿಅಂಶಗಳ ಪ್ರಕಾರ ಅವರು ತಮ್ಮ ಜೇಬಿನಿಂದ ಖರ್ಚು ಮಾಡಿದ್ದು ಕೇವಲ 1,000 ರೂಪಾಯಿ. ಹೆಚ್ಚಿನ ಹಣವನ್ನು ಪಕ್ಷ ಮತ್ತು ದಾನಿಗಳಿಂದ ಸಂಗ್ರಹಿಸಿದ್ದರು. ಚುನಾವಣೆ ಗೆಲ್ಲಲು ಹಣಬಲದ ಅಗತ್ಯವಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಮಾನ್ ಅವರ ಜನಪ್ರಿಯತೆಯೇ ಅವರ ಗೆಲುವಿಗೆ ಕಾರಣವಾಯಿತು ಎಂದು ಎಎಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಈಗ ಭಗವಂತ್ ಮಾನ್ ಅವರ ಸರಳತೆ, ಜನಪ್ರಿಯತೆಯನ್ನು ಕೂಡ ಆಮ್ ಆದ್ಮಿ ಪಕ್ಷ ಚುನಾವಣಾ ಅಸ್ತ್ರ ಮಾಡಿಕೊಂಡಿದೆ.