ಈ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ ಹಲವು ಅಚ್ಚರಿ ಫಲಿತಾಂಶಗಳು ಬಂದಿವೆ. ಆ ಮೂಲಕ ಮತದಾರನ ಆಯ್ಕೆಗಳ ಬಗ್ಗೆ ಸುಲಭದ ಲೆಕ್ಕಾಚಾರ ಹಾಕುವ ಹಾಗಿಲ್ಲ ಎಂಬ ಸಂದೇಶ ಮತ್ತೆ ರವಾನೆಯಾಗಿದೆ. ಜೆಡಿಎಸ್ ಭದ್ರಕೋಟೆಯಾದ ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳಲ್ಲಿ ಜೆಡಿಎಸ್ ಮೂರರಲ್ಲಿ ಸೋತಿರುವುದು ಜೆಡಿಎಸ್‌ಗೆ ಅನಿರೀಕ್ಷಿತವಾಗಿದೆ.
ರಾಮನಗರ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸೋತು, ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ವಿಜಯ ಸಾಧಿಸಿರುವುದು ಜೆಡಿಎಸ್‌ಗೆ ತೀವ್ರ ಮುಖಭಂಗ ಉಂಟು ಮಾಡಿದೆ. ಒಂದರ್ಥದಲ್ಲಿ ಗೆಲುವಿನ ಬಗ್ಗೆ ಪಕ್ಷಕ್ಕಿದ ಅತಿಯಾದ ಆತ್ಮವಿಶ್ವಾಸವೇ ಪಕ್ಷಕ್ಕೆ ಮುಳ್ಳಾಗಿದೆ. ಮೂಲಗಳ ಪ್ರಕಾರ ಕಾಂಗ್ರೆಸ್ ಅಭ್ಯರ್ಥಿ ಗೆಲುವನ್ನು ಸ್ವತಃ ಕಾಂಗ್ರೆಸಿಗರೂ ನಿರೀಕ್ಷಿಸಿರಲಿಲ್ಲ. ಹಾಗಾಗಿ, ಗೆಲುವಿನ ಕ್ಷೇತ್ರ ಎಂದು ಜೆಡಿಎಸ್ ರಾಮನಗರವನ್ನು ನಿರ್ಲಕ್ಷ್ಯ ಮಾಡಿತ್ತು ಎನ್ನಲಾಗಿದೆ.
ಅದೂ ಅಲ್ಲದೆ, ಈ ಬಾರಿ ಕಾಂಗ್ರೆಸ್ ಗೆದ್ದರೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವ ಅವಕಾಶ ಇರುವುದರಿಂದ ಒಕ್ಕಲಿಗ ಸಮುದಾಯದ ಮತದಾರರು ಕಾಂಗ್ರೆಸ್ ಕಡೆ ಒಲವು ತೋರಿದ್ದಾರೆ ಎನ್ನಲಾಗಿದೆ. ಹಾಗಾಗಿಯೇ, ಜೆಡಿಎಸ್ ನೀರಸ ಫಲಿತಾಂಶ ನೀಡಿದೆ. ಇನ್ನು, ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ ಐದು ಭರವಸೆಗಳು ಸಹ ಪ್ರಮುಖ ಪಾತ್ರ ವಹಿಸಿವೆ. ಅದರಲ್ಲೂ ಈ ಬೆಲೆ ಏರಿಕೆಯ ಸಮಯದಲ್ಲಿ ಉಚಿತ ವಿದ್ಯುತ್, ಧನಸಹಾಯ ಮೊದಲಾದ ಅಂಶಗಳು ಮತದಾರರನ್ನು ಕಾಂಗ್ರೆಸ್ ಸೆಳೆಯಲು ಸಹಾಯ ಮಾಡಿದೆ.

ಕಾಂಗ್ರೆಸ್ ಪಾಲಾಗಿರುವ ದಲಿತ, ಕುರುಬ ಮತ್ತು ಅಲ್ಪಸಂಖ್ಯಾತರ ಮತಗಳು ಕ್ರೋಡೀಕರಣಗೊಂಡಿರುವುದು ಮತ್ತೊಂದು ಕಾರಣ. ಸಿದ್ದರಾಮಯ್ಯ ಕಾರಣಕ್ಕೆ ಕುರುಬ, ದಲಿತ, ಮುಸ್ಲಿಂ ಮತಗಳು ಕ್ರೋಢೀಕರಣಗೊಂಡಿದೆ. ಕಾಂಗ್ರೆಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವವೂ ಹೊಸ ಭರವಸೆಯನ್ನು ಮೂಡಿಸಿದೆ.
ರಾಮನಗರದ ಜೆಡಿಎಸ್ ಕಾರ್ಯಕರ್ತರಿಗೆ ನಿಕಟಪೂರ್ವ ಶಾಸಕಿ ಅನಿತಾ ಕುಮಾರಸ್ವಾಮಿಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊಂದಿರುವುದೂ ನಿಖಿಲ್ ಸೋಲಿಗೆ ಕಾರಣ ಎಂಬ ಮಾತುಗಳೂ ಕೇಳೀ ಬಂದಿದೆ. ಮಗನ ರಾಜಕೀಯ ಭವಿಷ್ಯವನ್ನು ರೂಪಿಸಲು ತಮ್ಮ ಸ್ಥಾನವನ್ನು ತ್ಯಾಗ ಮಾಡಿದರಾದರೂ ಅದು ಮಗನಿಗೆ ನಷ್ಟವನ್ನೇ ತಂದೊಡ್ಡಿದೆ. ಕ್ಷೇತ್ರದಲ್ಲಿ ಅನಿತಾ ಅವರು ಏನೂ ಮಾಡಿಲ್ಲ ಮತ್ತು ಮತದಾರರಿಗೆ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ ಎಂದು ಆರೋಪವೂ ಇತ್ತು, ಹಾಗಾಗಿ, ನಿಖಿಲ್ ಗೆ ಮತಹಾಕದೆ ಆಕ್ರೋಶ ಹೊರ ಹಾಕಿದ್ದಾರೆ ಎನ್ನಲಾಗಿದೆ. ಅದೇ ವೇಳೆ ಇಕ್ಬಾಲ್ ಹುಸೇನ್ ಕ್ಷೇತ್ರದಲ್ಲಿ ಹಲವು ತಿಂಗಳ ಮೊದಲೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿದ್ದರು, ಇದೂ ಅವರಿಗೆ ವರದಾನವಾಗಿದೆ
ಕುಮಾರಸ್ವಾಮಿ ಅವರು ರಾಜ್ಯ ಪ್ರವಾಸ ಮಾಡಿ ತಮ್ಮ ಕ್ಷೇತ್ರಗಳತ್ತ ಗಮನ ಹರಿಸುವಿಕೆ ಕಡಿಮೆ ಮಾಡಿರುವುದು ಕೂಡಾ ರಾಮನಗರದಲ್ಲಿ ಎಫೆಕ್ಟ್ ಬಿದ್ದಿದೆ.