ಸೆಪ್ಟೆಂಬರ್ 2014 ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ‘ಮೇಕ್ ಇನ್ ಇಂಡಿಯಾ’ ಯೋಜನೆಯನ್ನು ಪ್ರಕಟಿಸಿದಾಗ ಅದು ಮೂರು ಪ್ರಮುಖ ಉದ್ದೇಶಗಳನ್ನು ಹೊಂದಿತ್ತು . ಮೊದಲನೆಯದಾಗಿ 2022 ರ ವೇಳೆಗೆ ಉತ್ಪಾದನಾ ವಲಯದಲ್ಲಿ 100 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುವುದು. ಎರಡನೆಯದಾಗಿ 2025 ರ ವೇಳೆಗೆ ಉತ್ಪಾದನಾ ವಯದ ಜಿಡಿಪಿಯ ಪಾಲನ್ನು 25 ಪ್ರತಿಶತಕ್ಕೆ ಹೆಚ್ಚಿಸುವುದು ಮತ್ತು ಮೂರನೆಯದಾಗಿ 12 – 14 ರಷ್ಟು ವಾರ್ಷಿಕ ಬೆಳವಣಿಗೆ ದರವನ್ನು ಕಾಯ್ದುಕೊಳ್ಳುವುದು.
ಭಾರತದ ಸೇವಾ-ಆಧಾರಿತ ಬೆಳವಣಿಗೆಯು ಕಾರ್ಮಿಕ ಕೇಂದ್ರಿತವಾಗಿಲ್ಲ. ಸುಮಾರು ಅರ್ಧದಷ್ಟು ಕಾರ್ಮಿಕ ಬಲವು ಇನ್ನೂ ಕೃಷಿಯ ಮೇಲೆ ಅವಲಂಬಿತವಾಗಿರುವುದರಿಂದ, ಉತ್ಪಾದನಾ ವಲಯದಲ್ಲಿನ ಬೆಳವಣಿಗೆ ಮಾತ್ರ ದೊಡ್ಡ ಪ್ರಮಾಣದ, ಯೋಗ್ಯ ಉದ್ಯೋಗಾವಕಾಶಗಳನ್ನು ಯುವ ಕಾರ್ಮಿಕರಿಗೆ ಸೃಷ್ಟಿಸಬಹುದಾಗಿದೆ.
ಮೇಕ್ ಇನ್ ಇಂಡಿಯಾ ಯೋಜನೆ ಘೋಷಿಸಿದ ನಂತರ ಕೆಲವು ವಿಷಯಗಳಲ್ಲಿ ಭಾರತ ಉತ್ತಮ ಪ್ರಗತಿ ಸಾಧಿಸಿದೆ. ವಿದೇಶಿ ನೇರ ಹೂಡಿಕೆಯ (ಎಫ್ಡಿಐ) ಒಳಹರಿವು ಹೆಚ್ಚಾಗಿ, 2018-19ರಲ್ಲಿ 64 ಬಿಲಿಯನ್ ಡಾಲರ್ಗಳ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದೆ. ವಿಶ್ವಬ್ಯಾಂಕ್ನವ್ಯವಹಾರದಲ್ಲಿ ನಮ್ಮ ಶ್ರೇಣಿ 2016 ರಲ್ಲಿ 130 ರಷ್ಟಿದ್ದದ್ದು 2021 ರಲ್ಲಿ 63 ಕ್ಕೆ ಏರಿದೆ. ಆದರೆ ವಸ್ತುನಿಷ್ಠವಾಗಿ ಹೇಳುವುದಾದರೆ, ಉತ್ಪಾದನಾ ವಲಯದ ಕಾರ್ಯಕ್ಷಮತೆ ತೃಪ್ತಿಕರವಾಗಿಲ್ಲ. 2014 ರಿಂದ, ಕೈಗಾರಿಕಾ ಉತ್ಪಾದನೆಯ ಸೂಚ್ಯಂಕವು ವರ್ಷಕ್ಕೆ 12 – 14 ಪ್ರತಿಶತದ ಬೆಳವಣಿಗೆಗೆ ವಿರುದ್ಧವಾಗಿ ಎರಡು -ಅಂಕಿಯ ಬೆಳವಣಿಗೆಯನ್ನು ಮಾತ್ರ ದಾಖಲಿಸಿದೆ.
ಭಾರತೀಯ ಆರ್ಥಿಕತೆಯ ಮೇಲ್ವಿಚಾರಣೆಯ ಕೇಂದ್ರದ ಡೇಟಾವು ಉತ್ಪಾದನಾ ವಲಯದಲ್ಲಿನ ಕುಸಿತವನ್ನು ಸ್ಪಷ್ಟವಾಗಿ ತೋರಿಸುತ್ತದೆ. 100 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುವುದಕ್ಕೆ ವಿರುದ್ಧವಾಗಿ, ಅಶೋಕ ವಿಶ್ವವಿದ್ಯಾಲಯದ ಆರ್ಥಿಕ ಮಾಹಿತಿ ಮತ್ತು ವಿಶ್ಲೇಷಣೆಯ ಕೇಂದ್ರವು 2016 – 17 ಮತ್ತು 2019 – 20 ರ ನಡುವಿನ ನಾಲ್ಕು ವರ್ಷಗಳಲ್ಲಿ ಭಾರತವು 10 ಮಿಲಿಯನ್ ಉದ್ಯೋಗಗಳನ್ನು ಕಳೆದುಕೊಂಡಿದೆ ಎಂದು ಅಂಕಿಅಂಶಗಳನ್ನು ತೋರಿಸುತ್ತದೆ. ಸಾಂಕ್ರಾಮಿಕ ರೋಗವನ್ನು ಗಣನೆಗೆ ತೆಗೆದುಕೊಂಡರೆ, 2016 ಕ್ಕೆ ಹೋಲಿಸಿದರೆ ಈ ವಲಯವು ತನ್ನ ಶೇಕಡಾ 40 ರಷ್ಟು ಉದ್ಯೋಗಗಳನ್ನು (24 ಮಿಲಿಯನ್) ಕಳೆದುಕೊಂಡಿದೆ. 2018-19 ರಲ್ಲಿ ಆರ್ಥಿಕತೆಯಲ್ಲಿ ಉತ್ಪಾದನಾ ವಲಯದ ಪಾಲು ಕೇವಲ 14.9 ಶೇಕಡಾ ಮಾತ್ರ.
ಕೇಂದ್ರ ಸರ್ಕಾರವು ‘ಮೇಕ್ ಇನ್ ಇಂಡಿಯಾ’ಕ್ಕೆ ಪೂರಕವಾಗಿ ಕೌಶಲ್ಯ ಭಾರತ, ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಮುಂತಾದ ಯೋಜನೆಗಳನ್ನೂ ಘೋಷಿಸಿದೆ. ಸರ್ಕಾರವು ಬೌದ್ಧಿಕ ಆಸ್ತಿ ಹಕ್ಕುಗಳ ವ್ಯವಸ್ಥೆಯನ್ನು ಬಲಪಡಿಸಲು ರೆಡ್ ಟೇಪ್ ಅನ್ನು ಕಡಿಮೆ ಮಾಡುವ ಮೂಲಕ, ಡಿಜಿಟಲೀಕರಣಗೊಳಿಸುವ ಮೂಲಕ ಮತ್ತು ಹೊಸತನವನ್ನು ಉತ್ತೇಜಿಸಲು ಹೊಸ ಅಧಿಕಾರಿಗಳನ್ನು ನೇಮಿಸುವ ಕ್ರಮಗಳನ್ನೂ ಸಹ ಕೈಗೊಂಡಿದೆ. ಸಾಂಕ್ರಾಮಿಕದ ಸಮಯದಲ್ಲಿಯೂ ಸಹ, ಸರ್ಕಾರದ ವಿಶೇಷ ಆರ್ಥಿಕ ಉತ್ತೇಜನ ಪ್ಯಾಕೇಜ್ ಹಾಳಾದ ಆರ್ಥಿಕತೆಗೆ ಸ್ವಲ್ಪ ಮಟ್ಟಿಗೆ ಚೇತರಿಕೆ ನೀಡವಂತಿತ್ತು.

ಆದರೆ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ನಿರ್ಧಿರಿಸಲಾದ ಗುರಿಗಳು ಮಹತ್ವಾಕಾಂಕ್ಷೆಯನ್ನು ಹೊಂದಿದ್ದವು ಮತ್ತು ಭಾರತವು ಇಷ್ಟು ಕಡಿಮೆ ಅವಧಿಯಲ್ಲಿ ಉತ್ಪಾದನಾ ವಲಯದಲ್ಲಿ ಇಷ್ಟು ತೀವ್ರವಾದ ಬದಲಾವಣೆಯನ್ನು ತರಲು ಸಾಧ್ಯವೇ ಇರಲಿಲ್ಲ.
ವಿಶಾಲವಾದ ಜನಸಂಖ್ಯೆ ಹೊಂದಿರುವ ಭಾರತವು ಪ್ರವಾಸೋದ್ಯಮ, ರತ್ನಗಳು ಮತ್ತು ಆಭರಣಗಳು ಅಥವಾ ಹಾಸ್ಪಿಟಾಲಿಟಿಯಂತಹ ಕಾರ್ಮಿಕ-ಆಧಾರಿತ ವಲಯಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಬೇಕು. ಆದರೆ ಆರ್ಥಿಕ ಸಮೀಕ್ಷೆ 2020 -21ರ ವರದಿಯ ಪ್ರಕಾರ ಭಾರತದ ರಫ್ತು ಸುಮಾರು 40 ಪ್ರತಿಶತದಷ್ಟು ತಂತ್ರಜ್ಞಾನ ಆಧಾರಿತ ಸರಕುಗಳನ್ನು ಒಳಗೊಂಡಿದೆ.
ಎಫ್ಡಿಐ ಸುಧಾರಣೆಗಳು ವಿದೇಶಿ ನಿಧಿಯ ದೊಡ್ಡ ಒಳಹರಿವಿಗೆ ಕಾರಣವಾದರೂ, ವಿದೇಶಿ ಬಂಡವಾಳ ಮತ್ತು ಜಾಗತಿಕ ಮಾರುಕಟ್ಟೆಗಳ ಮೇಲೆ ದೇಶೀಯ ಉತ್ಪಾದನಾ ವಲಯವನ್ನು ಅಭಿವೃದ್ಧಿಪಡಿಸಲು ಅವಲಂಬಿಸುವುದು ನೀಡುವುದು ಸಂಪೂರ್ಣವಾಗಿ ಸಮರ್ಥನೀಯವಲ್ಲ.
ಮೂಲ ಸೌಕರ್ಯಗಳಲ್ಲಿನ ಕೊರತೆ ಸಹ ಈ ಯೋಜನೆ ಹಿಂದೆ ಬೀಳಲು ಮತ್ತೊಂದು ಕಾರಣವಾಗಿದೆ. ‘ಭಾರತಮಾಳ’ ಮತ್ತು ‘ಸಾಗರಮಾಲಾ’ ಯೋಜನೆಗಳಂತಹ ಕಾರ್ಯಕ್ರಮಗಳ ಮೂಲಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವತ್ತ ಸರ್ಕಾರ ಗಮನಹರಿಸಿದರೂ, ರಸ್ತೆಗಳು ಮತ್ತು ಬಂದರು ಸಂಪರ್ಕದ ಮೇಲೆ ಗಮನ ಕೇಂದ್ರೀಕರಿಸಿದರೂ, ಅನುಷ್ಠಾನದ ವೇಗ ನಿಧಾನವಾಗಿದೆ. ಉತ್ಪಾದನಾ ವಲಯದಲ್ಲಿನ ತೀವ್ರ ಬದಲಾವಣೆಗೆ ಅತ್ಯಾಧುನಿಕ ಮೂಲಸೌಕರ್ಯ ಅಗತ್ಯವಾದರೂ, ಈಗಿರುವ ಸೌಲಭ್ಯಗಳ ಗುಣಮಟ್ಟ ತೀರಾ ಕಳಪೆ. ಅನೇಕ ವಿಷಯಗಳಲ್ಲಿ ರಾಜ್ಯ ಮತ್ತು ಕೇಂದ್ರದ ನಡುವಿನ ಸಮನ್ವಯದ ಕೊರತೆಯಿಂದಾಗಿ ಕಂಪೆನಿಗಳು ಯೋಜನೆಯನ್ನು ರೂಪಿಸಲು ಆಸಕ್ತಿ ತೋರಿಸಿ ನಂತರ ಹಿಂದೆ ಸರಿದ ಘಟನೆಗಳೂ ನಡೆದಿವೆ.
2025 ರ ವೇಳೆಗೆ 40 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ನಂಬಲಾಗಿದ್ದ ‘ಅಸೆಂಬಲ್ ಇನ್ ಇಂಡಿಯಾ ಫಾರ್ ದಿ ವರ್ಲ್ಡ್’ ಯೋಜನೆಯೂ ಆರಂಭಿಕವಾಗಿ ಯಶಸ್ಸು ತಂದುಕೊಟ್ಟಿದ್ದರೂ ಆ ನಂತರ ಅದೇ ಪ್ರಗತಿಯನ್ನು ಸಾಧಿಸಲು ವಿಫಲವಾಯಿತು. ನೋಟು ರದ್ದತಿ ಮತ್ತು ಜಿಎಸ್ಟಿಯಂತಹ ದೊಡ್ಡ ಪ್ರಮಾಣದ ಸುಧಾರಣೆಗಳೂ ಆರ್ಥಿಕತೆಗೆ ಅಡ್ಡಿಪಡಿಸಿತು.
ವಿದೇಶಗಳ ನೀತಿಯೂ ಹಲವು ಕಡೆಗಳಲ್ಲಿ ಭಾರತಕ್ಕೆ ಅಡ್ಡಿಪಡಿಸಿವೆ. ಯುಎಸ್ಎ-ಚೀನಾ ಟ್ಯಾರಿಫ್ ವಾರ್ ಮತ್ತು ರಕ್ಷಣಾ ವ್ಯಯದಲ್ಲಿನ ಏರಿಕೆಯು ಭಾರತದ ರಫ್ತಿನ ಮೇಲೆ ಗಂಭೀರ ಪರಿಣಾಮ ಬೀರಿತು. ಸಾಂಕ್ರಾಮಿಕವು ರೋಗವು ಈಗಾಗಲೇ ನಿಧಾನಗತಿಯಲ್ಲಿದ್ದ ಉತ್ಪಾದನಾ ವಲಯ ಮತ್ತು ಆರ್ಥಿಕತೆಗೆ ಮತ್ತಷ್ಟು ಹೊಡೆತ ನೀಡಿತು.

ಭಾರತದಲ್ಲಿ ಸರಾಸರಿ 27 ವರ್ಷ ವಯಸ್ಸಿನ 900 ಮಿಲಿಯನ್ಗಿಂತಲೂ ಅಧಿಕ ಮಂದಿಯಿದ್ದಾರೆ. 2050 ರ ವೇಳೆಗೆ, ಸರಾಸರಿ ಭಾರತೀಯರು 37 ವರ್ಷಕ್ಕಿಂತ ಮೇಲ್ಪಟ್ಟವರಾಗುತ್ತಾರೆ. ಜನಸಂಖ್ಯೆಯಲ್ಲಿನ ಪ್ರಯೋಜನವು ನಮ್ಮಲ್ಲಿ ಶಾಶ್ವತವಾಗಿ ಉಳಿಯುವುದಿಲ್ಲ. ಭಾರತವು ಬೆಳವಣಿಗೆ ಹೊಂದಲು ಮತ್ತು ಜಾಗತಿಕ ವೇದಿಕೆಯಲ್ಲಿ ಗುರುತಿಸಲ್ಪಡುವ ರಾಷ್ಟ್ರವಾಗಿ ಉಳಿಯಬೇಕಾದರೆ ಮುಂದಿನ 30 ವರ್ಷಗಳು ಈ ದೇಶಕ್ಕೆ ನಿರ್ಣಾಯಕವಾಗಿರುತ್ತದೆ.