ರಾಜ್ಯ ರಾಜಕಾರಣದಲ್ಲಿ ಅಬ್ಬರಿಸಿದ್ದ ಬಿಜೆಪಿ ಹಿನಾಯ ಸೋಲು ಕಂಡಿದೆ. ಕಾಂಗ್ರೆಸ್ ಜಯಭೇರಿ ಬಾರಿ ಅಧಿಕಾರ ಹಿಡಿದಿದೆ. ಚುನಾವಣೆ ಎಂದ ಮೇಲೆ ಸೋಲು ಗೆಲುವು ಆರೋಪ ಪ್ರತ್ಯಾರೋಪ ಸಹಜ. ಒಂದು ಪಕ್ಷ ಅಧಿಕಾರ ಹಿಡಿದರೆ ಇನ್ನೊಂದು ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವುದು ನಿಶ್ಚಿತ. ಆದರೆ ರಾಜ್ಯದಲ್ಲಿ ಸೋಲು ಅನುಭವಿಸಿದ ಕಾರಣಕ್ಕಾಗಿ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರ ಮೇಲೆ ಕೆಂಗಣ್ಣು ಬೀರಿದೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಹೈಕಮಾಂಡ್ ನಾಯಕರು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಲು ಯಾವುದೇ ಸಲಹೆ ಸೂಚನೆಯನ್ನೂ ನೀಡಿಲ್ಲ. ರಾಜ್ಯ ಬಿಜೆಪಿ ಕಚೇರಿಯಿಂದ ಹೋಗಿರುವ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ ಎನ್ನುವ ಮಾಹಿತಿ ಹೊರಬಿದ್ದಿದೆ. ಅಂತಿಮವಾಗಿ ವಿರೋಧ ಪಕ್ಷದ ನಾಯಕನಿಲ್ಲದೆ ವಿಶೇಷ ಅಧಿವೇಶ ಮುಗಿದಿದ್ದು, ಮುಂದಿನ ದಿನಗಳಲ್ಲಿ ಆದರೂ ಅಧಿಕೃತ ವಿರೋಧ ಪಕ್ಷದ ನಾಯಕ ಇಲ್ಲದೆ ಕಾಂಗ್ರೆಸ್ ಸರ್ಕಾರವನ್ನು ಎದುರಿಸಿಲು ಕಷ್ಟ ಎನ್ನುವುದು ಬಿಜೆಪಿ ನಾಯಕರ ಮಾತು.

ರಾಜ್ಯ ಬಿಜೆಪಿ ನಾಯಕರ ಮೇಲಿನ ಸಿಟ್ಟಿಗೆ ಕಾರಣ..




ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಚುನಾವಣೆಯಲ್ಲಿ ಸಾಕಷ್ಟು ಬೆವರು ಹರಿಸಿದ್ದರು. ಬೆಂಗಳೂರಿನ 28 ಕ್ಷೇತ್ರಗಳ ಪೈಕಿ ಸುಮಾರು ಅರ್ಧಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ರೋಡ್ ಶೋ ನಡೆಸಿದ್ದರು. ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಅಬ್ಬರದ ಪ್ರಚಾರ ಮಾಡಿದ್ದರು. ಆದರೂ ಕರ್ನಾಟಕದ ಜನರು ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ಗೆ ಬಹುದೊಡ್ಡ ಜಯ ತಂದುಕೊಟ್ಟಿದ್ದು, ರಾಷ್ಟ್ರಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಮುಖಭಂಗ ಆದಂತೆ ಆಗಿದೆ. ರಾಹುಲ್ ಗಾಂಧಿ ಪ್ರಚಾರ ಮಾಡಿದ ಕಡೆಯಲ್ಲಾ ಕಾಂಗ್ರೆಸ್ ಸೋಲುತ್ತದೆ ಎಂದು ಬಿಜೆಪಿ ಮಾಡಿದ್ದ ಟೀಕೆ ಇದೀಗ ಬಿಜೆಪಿ ಪಾಲಿಗೆ ಸರಿಹೊಂದುವಂತಾಗಿದೆ. ನರೇಂದ್ರ ಮೋದಿಯೇ ಸ್ವತಃ ರಾಜ್ಯ ರಾಜಕಾರಣದ ಬಗ್ಗೆ ಟೀಕಾಪ್ರಹಾರ ನಡೆಸಿ ಕಾಂಗ್ರೆಸ್, ಜೆಡಿಎಸ್ ವಿರುದ್ಧ ಹರಿಹಾಯ್ದಿದ್ದರು. ಪ್ರಧಾನಿ ಅನ್ನೋದನ್ನು ಮರೆತು ಪಕ್ಷದ ನಾಯಕರಂತೆ ಅಬ್ಬರಿಸಿದ್ದರು. ಆದರೂ ಸೋಲನ್ನು ತಪ್ಪಿಸಲಾಗಲಿಲ್ಲ. ಇದು ಕಾಂಗ್ರೆಸ್ಗೆ ಬೂಸ್ಟ್ ಆಗುವ ಭೀತಿ ಬಿಜೆಪಿ ಹೈಕಮಾಂಡ್ ಕೋಪಕ್ಕೆ ಕಾರಣವಾಗಿದೆ.
ರಾಜಸ್ಥಾನ, ಮಧ್ಯಪ್ರದೇಶದಲ್ಲೂ ಮೋದಿಗೆ ಹಿನ್ನಡೆ..!?

ರಾಜಸ್ಥಾನ ಹಾಗು ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ಈ ವರ್ಷದ ಅಂತ್ಯಕ್ಕೆ ನಡೆಯಲಿದ್ದು, ಕರ್ನಾಟಕದ ಚುನಾವಣೆ ಭಾರೀ ಪರಿಣಾಮ ಬೀರುವ ಆತಂಕ ಕೇಸರಿ ಪಾಳಯದಲ್ಲಿ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಮಾಡಿದರೆ ದೊಡ್ಡ ಮಟ್ಟದಲ್ಲಿ ಗೆಲುವು ತಂದುಕೊಡುತ್ತಾರೆ ಎಂದು ಕಾರ್ಯಕರ್ತರನ್ನು ನಂಬಿಸಿದ್ದ ಬಿಜೆಪಿ, ಈ ಮೂಲಕ ಕಾಂರ್ಯಕರ್ತರು ಹುಮ್ಮಸ್ಸಿನಿಂದ ಕೆಲಸ ಮಾಡುವಂತೆ ನೋಡಿಕೊಂಡಿತ್ತು. ಇದೀಗ ಕರ್ನಾಟಕದಲ್ಲಿ ಸ್ವತಃ ನರೇಂದ್ರ ಮೋದಿ ಅವರೇ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸುತ್ತಾಡಿದರೂ ಸೋಲಾಗಿರುವುದು, ಮಧ್ಯಪ್ರದೇಶ ಹಾಗು ರಾಜಸ್ಥಾನದಲ್ಲಿ ಕಾರ್ಯಕರ್ತರನ್ನು ಆಕರ್ಷಿಸಲು ಸಂಕಷ್ಟ ಆಗಲಿದೆ. ಪ್ರಧಾನಿ ಮೋದಿ ಬಂದರೂ ಗೆಲ್ಲಿಸಲು ಸಾಧ್ಯವಿಲ್ಲ ಎನ್ನುವ ಹುಂಬ ಧೈರ್ಯ ಕಾಂಗ್ರೆಸ್ಗೆ ಹೆಚ್ಚಾಗುವ ಕಾರಣ ಜಯ ಅಂದುಕೊಂಡಷ್ಟು ಸುಲಭ ಆಗಿರುವುದಿಲ್ಲ. ಇನ್ನು ಮುಂದಿನ ಎಲ್ಲಾ ಚುನಾವಣೆಗೂ ಕರ್ನಾಟಕವೇ ಕಾಂಗ್ರೆಸ್ ಪಾಲಿಗೆ ಮಾದರಿ ಆಗುವುದರಿಂದ ಬಿಜೆಪಿಗೆ ಸಂಕಷ್ಟ ಎನ್ನಲಾಗ್ತಿದೆ.
ಕಾಂಗ್ರೆಸ್ ಪಾಲಿಗೆ ಕರ್ನಾಟಕವೇ ಕಾಮಧೇನು..!


ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿ ಇರುವ ಕಾರಣಕ್ಕೆ ಕಾಂಗ್ರೆಸ್ ಒಳ್ಳೆಯ ಶಕ್ತಿ ಬರುತ್ತದೆ ಎನ್ನುವುದನ್ನು ಯಾರೂ ಕೂಡ ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ ಕರ್ನಾಟಕದಲ್ಲಿ ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದ್ದ ಗ್ಯಾರಂಟಿಗಳನ್ನು ಶೀಘ್ರದಲ್ಲೇ ಜಾರಿ ಮಾಡುತ್ತಿರುವುದು ಕಾಂಗ್ರೆಸ್ ಪಾಲಿಗೆ ದಿವ್ಯಾಔಷಧ ಎನ್ನಬಹುದು. ಕರ್ನಾಟಕದಲ್ಲಿ ಕಾಂಗ್ರೆಸ್ ನುಡಿದಂತೆ ನಡೆದಿದೆ ಎಂದು ಅಬ್ಬರದ ಪ್ರಚಾರ ಮಾಡುವ ಮೂಲಕ ಮಧ್ಯಮ ಹಾಗು ಬಡ ವರ್ಗದ ಜನರ ಸಂಕಷ್ಟ ದೂರ ಮಾಡುವ ಭರವಸೆ ನೀಡುವುದು ಸುಲಭ. ಇನ್ನು ಕಾಂಗ್ರೆಸ್ ಹೇಗೆ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಕರ್ನಾಟಕವನ್ನು ನೋಡಿ ಎಂದು ತೋರಿಸಬಹುದು. ಸಿದ್ದರಾಮಯ್ಯ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡುತ್ತಿರುವುದನ್ನು ರಾಷ್ಟ್ರ ಮಟ್ಟದಲ್ಲಿ ಕೊಂಡಾಡುವ ಮೂಲಕ ಮುಸ್ಲಿಂ ಮತಗಳನ್ನು ಒಟ್ಟು ಮಾಡಬಹುದು. ಕರ್ನಾಟಕದಲ್ಲಿ ಶೇಕಡ 83 ಮುಸ್ಲಿಂ ಮತಗಳು ಕಾಂಗ್ರೆಸ್ಗೆ ಸಿಕ್ಕಿರುವುದು, ಬಿಜೆಪಿಯ ರಾಜಕೀಯ ತಂತ್ರಗಾರಿಕೆ ತಲೆಕೆಳಗಾಗುವಂತೆ ಮಾಡಿದೆ. ಈ ಎಲ್ಲಾ ಕಾರಣಗಳಿಂದ ಬಿಜೆಪಿ ಹೈಕಮಾಂಡ್ ಕರ್ನಾಟಕದಿಂದ ಅಂತರ ಕಾಯ್ದುಕೊಂಡಿದೆ ಎನ್ನುವ ಮಾಹಿತಿ ಬಿಜೆಪಿ ಪಾಳಯದಲ್ಲೇ ಹರಿದಾಡ್ತಿದೆ.
ಕೃಷ್ಣಮಣಿ