ಬರೋಬ್ಬರಿ ನಲವತ್ತು ಮಂದಿ ಭಾರತೀಯ ಯೋಧರನ್ನು ಬಲಿತೆಗೆದುಕೊಂಡು ಹೀನಾಯ ಪುಲ್ವಾಮಾ ದಾಳಿಗೆ ಮೂರು ವರ್ಷ. ಭಾರತೀಯ ಸೇನಾ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಸೇನಾ ಯೋಧರ ವಾಹನಗಳ ಮೇಲೆ ಅಂತಹದ್ದೊಂದು ಭೀಕರ ಬಾಂಬ್ ದಾಳಿ ನಡೆದಿತ್ತು. ಸೇನಾ ಯೋಧರ ವಾಹನಗಳ ಮೇಲೆ ಭಯೋತ್ಪಾದಕ ದಾಳಿ ನಡೆದು ಅಷ್ಟೊಂದು ಪ್ರಮಾಣದ ಯೋಧರು ಜೀವ ಕಳೆದುಕೊಂಡದ್ದು ಇಡೀ ದೇಶವನ್ನೂ ಆಘಾತಕ್ಕೀಡುಮಾಡಿತ್ತು.
ಮೂರು ವರ್ಷಗಳ ಹಿಂದೆ 2019ರ ಫೆಬ್ರವರಿ 14 ಮಧ್ಯಾಹ್ನ 3.15ರ ಸುಮಾರಿಗೆ ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪುರದ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸಾಗುತ್ತಿದ್ದ 78 ಸಿಆರ್ ಪಿಎಫ್ ವಾಹನಗಳ ಮೇಲೆ ನಡೆದ ಆ ಭೀಕರ ದಾಳಿಯಲ್ಲಿ 44 ಮಂದಿ ಯೋಧರು ತುಂಬಿದ್ದ ಒಂದಿಡೀ ಬಸ್ಸು ಅಕ್ಷರಶಃ ಛಿದ್ರವಾಗಿತ್ತು. 350 ಕೆಜಿ ಸ್ಫೋಟಕ ತುಂಬಿದ ಎಸ್ ಯುವಿಯೊಂದನ್ನು ಬಸ್ಸಿಗೆ ಢಿಕ್ಕಿ ಹೊಡೆಸಿದ್ದ ಭಯೋತ್ಪಾದಕ ಒಂದೇ ಏಟಿಗೆ ದೇಶದ 40 ಮಂದಿ ಯೋಧರ ಜೀವ ಬಲಿತೆಗೆದುಕೊಂಡಿದ್ದ.
ಈ ಘಟನೆಯ ದೇಶವ್ಯಾಪಿ ಆಘಾತದ ಅಲೆ ಎಬ್ಬಿಸಿದ ಬೆನ್ನಲ್ಲೇ ಹಲವು ಪ್ರಶ್ನೆಗಳನ್ನು ಹುಟ್ಟಿಸಿತ್ತು. ಮುಖ್ಯವಾಗಿ ಸೇನಾ ವಾಹನಗಳ ಸಂಚಾರದ ವೇಳೆ ನಾಗರಿಕ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ. ಹಾಗಿದ್ದರೂ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಅಂದು ಭಯೋತ್ಪಾದಕ ಆದಿಲ್ ಅಹಮದ್ ದಾರ್ ತನ್ನ ಎಸ್ ಯುವಿಯೊಂದಿಗೆ ಕಿಮೀ ಗಟ್ಟಲೆ ಯೋಧರ ಬಸ್ಸಿನ ಜೊತೆ ಪ್ರಯಾಣಿಸಿದ್ದು ಹೇಗೆ? ಮತ್ತು ಬರೋಬ್ಬರಿ 35 ಕೆ ಜಿ ಸ್ಟೋಟಕ ಹೇಗೆ ಉಗ್ರರ ಕೈಗೆ ಸಿಕ್ಕಿತ್ತು ಮತ್ತು ಯಾವ ಹಂತದಲ್ಲೂ ಆ ಪ್ರಮಾಣದ ಸ್ಫೋಟಕ ತನಿಖಾ ಸಂಸ್ಥೆಗಳ ಗಮನಕ್ಕೆ ಬಾರದ ಸರಬರಾಜಾಯ್ತು ? ಎಂಬ ಪ್ರಶ್ನೆಗಳು ಎದ್ದಿದ್ದವು.
ಜೊತೆಗೆ, ಘಟನೆ ನಡೆದಾಗ ಉತ್ತರಾಖಂಡದ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ ನಲ್ಲಿ ಡಿಸ್ಕವರಿ ಚಾನೆಲ್ ಗಾಗಿ ಬೇರ್ ಗಿಲ್ಸ್ ನೊಂದಿಗೆ ಸಾಕ್ಷ್ಯಚಿತ್ರದ ಚಿತ್ರೀಕರಣದಲ್ಲಿದ್ದರು. ಮಧ್ಯಾಹ್ನ 3.15 ಸುಮಾರಿಗೆ ಭೀಕರ ಪುಲ್ವಾಮಾ ದಾಳಿ ನಡೆದು ಯೋಧರು ಹತರಾದ ಘಟನೆ ನಡೆದ ಬಳಿಕ ಮೂರು ತಾಸುಗಳವರೆಗೆ ಪ್ರಧಾನಿ ಮೋದಿಯವರಿಗೆ ಆ ಬಗ್ಗೆ ಮಾಹಿತಿಯೇ ಇರಲಿಲ್ಲ ಅಥವಾ ಮಾಹಿತಿ ಇದ್ದರೂ ಅವರು ತಮ್ಮ ಚಿತ್ರೀಕರಣದಲ್ಲಿ ಮುಂದುವರಿದಿದ್ದರು ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು.
ಆ ಬಳಿಕ ಘಟನೆಯ ಕುರಿತು ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ) ಬರೋಬ್ಬರಿ ಒಂದೂವರೆ ವರ್ಷದ ತನಿಖೆಯ ಬಳಿಕ 2020ರ ಆಗಸ್ಟ್ ನಲ್ಲಿ ಜಮ್ಮು ವಿಶೇಷ ನ್ಯಾಯಾಲಯಕ್ಕೆ 13,500 ಪುಟಗಳ ಆರೋಪ ಪಟ್ಟಿ ಸಲ್ಲಿಸಿತ್ತು. ಮುಖ್ಯವಾಗಿ ಯೋಧರ ದೇಹ, ಅವರ ಪರಿಕರ, ಬಸ್ ಮತ್ತು ಭಯೋತ್ಪಾದಕನ ಎಸ್ ಯುವಿ ಬಿಡಿಭಾಗಗಳು ಕೂಡ ಛಿದ್ರಛಿದ್ರವಾಗಿದ್ದರಿಂದ ಘಟನೆಯ ಕುರಿತ ಸಾಕ್ಷ್ಯಾಧಾರಗಳನ್ನು ಕಲೆಹಾಕುವುದು ಎನ್ ಐಎಗೆ ದೊಡ್ಡ ಸವಾಲಾಗಿತ್ತು. ಬಳಿಕ ಜಮ್ಮುಕಾಶ್ಮೀರದಲ್ಲಿ ಪ್ರಕರಣದ ಕೆಲವು ಆರೋಪಿಗಳು ಸೇನಾ ಕಾರ್ಯಾಚರಣೆಯಲ್ಲಿ ಹತರಾದಾಗ ಅವರ ಬಳಿ ಇದ್ದ ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಫೋನ್ ಗಳಲ್ಲಿ ಪುಲ್ವಾಮಾ ದಾಳಿಯ ವಿವರಗಳು ಮತ್ತು ದಾಳಿಯ ಹಿಂದೆ ಪಾಕಿಸ್ತಾನದ ಜೈಷ್ ಎ ಮೊಹಮ್ಮದ್(ಜೆಇಎಂ) ಕೈವಾಡ ಇರುವುದು ಸಾಬೀತಾಗಿತ್ತು. ಆ ಸಾಕ್ಷ್ಯಾಧಾರಗಳ ಆಧಾರದ ಮೇಲೆಯೇ ಎನ್ ಐಎ, ಆರೋಪ ಪಟ್ಟಿಯಲ್ಲಿ ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ಮತ್ತು ಆತನ ಸಹೋದರ ಸೇರಿ 19 ಮಂದಿಯನ್ನು ಪುಲ್ವಾಮಾ ದಾಳಿಯ ಸಂಚುಕೋರರು ಎಂದು ಹೆಸರಿಸಿತ್ತು. 2021 ಆಗಸ್ಟ್ ಹೊತ್ತಿಗೆ ಆ ಪೈಕಿ ಬಹುತೇಕ ಆರೋಪಿಗಳು ವಿವಿಧ ಸೇನಾ ಮತ್ತು ಪೊಲೀಸ್ ಕಾರ್ಯಾಚರಣೆಯಲ್ಲಿ ಹತರಾಗಿದ್ದರು.
ಆದರೆ, ಭೀಕರ ದಾಳಿಯ ಹಿಂದಿನ ಭಯೋತ್ಪಾದಕ ಸಂಘಟನೆಗಳು ಮತ್ತು ಪಾಕಿಸ್ತಾನದ ಕುಮ್ಮಕ್ಕಿನ ಕುರಿತು ಮಹತ್ವದ ಮಾಹಿತಿ ಕಲೆಹಾಕಿದ ಎನ್ ಐಎ, ತನ್ನ ಆರೋಪ ಪಟ್ಟಿಯಲ್ಲಿ ದಾಳಿಗೆ ಬಳಸಿದ್ದು 200 ಕೆ ಜಿ ಸ್ಫೋಟಕ ಮತ್ತು ಆ ಸ್ಫೋಟಕವನ್ನು ಅಮೆಜಾನ್ ನಂತಹ ಆನ್ ಲೈನ್ ಮಾರ್ಕೆಟಿಂಗ್ ವ್ಯವಸ್ಥೆಯ ಮೂಲಕ ಹಂತಹಂತವಾಗಿ ಸರಬರಾಜು ಮಾಡಿ ಸಂಗ್ರಹಿಸಿಡಲಾಗಿತ್ತು ಎಂದು ಹೇಳಿದೆ. ಆ ಹಿನ್ನೆಲೆಯಲ್ಲಿ ಅಷ್ಟೊಂದು ಬೃಹತ್ ಪ್ರಮಾಣದ ಸ್ಫೋಟಕದ ಕುರಿತು ಮಾಹಿತಿ ಸಂಗ್ರಹಿಸಲು ಗುಪ್ತಚರ ವ್ಯವಸ್ಥೆ ವಿಫಲವಾಯಿತು ಎನ್ನಲಾಗಿದೆ.
ಆದರೆ, ನೂರಾರು ಯೋಧರನ್ನು ಹೊತ್ತ ಸೇನಾ ವಾಹನಗಳು ಸಾಲಾಗಿ ಸಂಚರಿಸುವಾಗ ನಾಗರಿಕ ವಾಹನಗಳಿಗೆ ನಿರ್ಬಂಧವಿದ್ದಾಗಲೂ ಭಾರೀ ಸ್ಫೋಟಕ ಹೊತ್ತ ಭಯೋತ್ಪಾದಕನ ವಾಹನ ಹೇಗೆ ಕಿಮೀ ಗಟ್ಟಲೆ ಯೋಧರ ಬಸ್ ಜೊತೆ ಹೋಯಿತು ಮತ್ತು ಅದನ್ನು ಯಾರೂ ಯಾಕೆ ಗಮನಿಸಿ ತಡೆಯಲಿಲ್ಲ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿಲ್ಲ! ಈ ನಿಟ್ಟಿನಲ್ಲಿ ಅಗಿರುವ ಸೇನಾ ಮತ್ತು ಜಮ್ಮುಕಾಶ್ಮೀರ ಪೊಲೀಸ್ ಗುಪ್ತಚರ ಲೋಪದ ಕುರಿತು ಎನ್ ಐಎ ಹೆಚ್ಚೇನೂ ಹೇಳಲೇ ಇಲ್ಲ ಎಂಬುದು ಅಚ್ಚರಿಯ ಸಂಗತಿ.
ಕಳೆದ ಆರೇಳು ವರ್ಷಗಳಲ್ಲಿ ದೇಶದಲ್ಲಿ ನಡೆದ ರೈತ ಹೋರಾಟ, ಸಿಎಎ-ಎನ್ ಆರ್ ಸಿ ವಿರೋಧಿ ಹೋರಾಟ, ಭೀಮಾ ಕೋರೆಗಾಂವ್ ಹೋರಾಟ ಮತ್ತು ಇದೀಗ ಹಿಜಾಬ್ ವಿವಾದಗಳ ವಿಷಯದಲ್ಲಿ ಕೇವಲ ಎರಡು ಮೂರು ದಿನಗಳಲ್ಲೇ ಅಂತಹ ನಾಗರಿಕ ಹೋರಾಟ, ಪ್ರತಿರೋಧಗಳ ಹಿಂದೆ ವಿದೇಶಿ ಕೈವಾಡ ಇದೆ, ಪಾಕಿಸ್ತಾನದ ಕುಮ್ಮಕ್ಕು ಇದೆ ಎಂಬುದನ್ನು ಶೋಧಿಸುವ ದೇಶದ ತನಿಖಾ ಸಂಸ್ಥೆಗಳು, ಬರೋಬ್ಬರಿ 40 ಮಂದಿ ಯೋಧರ ಹೇಯ ಹತ್ಯೆಗೆ ಕಾರಣವಾದ ಮತ್ತು ಭಾರತೀಯ ಸೇನೆಯ ಪ್ರತಿಷ್ಠೆಗೆ ಮಸಿ ಬಳಿದ ಪುಲ್ವಾಮಾ ದಾಳಿಯ ವಿಷಯದಲ್ಲಿ ಮಾತ್ರ ಯಾಕೆ ಬರೋಬ್ಬರಿ ಒಂದೂವರೆ ವರ್ಷದ ತನಿಖೆಯ ಬಳಿಕವೂ ಕೆಲವು ಅನುಮಾನ ಮತ್ತು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲಿಲ್ಲ ಎಂಬುದು ವಿಪರ್ಯಾಸ.
ಹಾಗೇ, ಪುಲ್ವಾಮಾ ದಾಳಿ ಮತ್ತು ಆ ಬಳಿಕ ಪಾಕ್ ಗಡಿಯೊಳಗಿನ ಉಗ್ರರ ನೆಲೆಯ ಮೇಲೆ ಭಾರತೀಯ ಸೇನೆ ನಡೆಸಿದ ಬಾಲಾಕೋಟ್ ವಾಯುದಾಳಿಯ ವಿಷಯವನ್ನು ಭಾರತೀಯ ಜನತಾ ಪಾರ್ಟಿ ಮತ್ತು ಪ್ರಧಾನಿ ಮೋದಿಯೂ ಸೇರಿದಂತೆ ಅದರ ನಾಯಕರು ಚುನಾವಣಾ ವಿಷಯವಾಗಿ ಬಳಸಿಕೊಂಡಿದ್ದರು. ಪುಲ್ವಾಮಾ ದಾಳಿಯಲ್ಲಿ ಮಡಿದ ಯೋಧರ ಕುರಿತ ದೇಶದ ಜನಸಾಮಾನ್ಯರ ಭಾವನಾತ್ಮಕ ಸ್ಪಂದನೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಾಗಿತ್ತು. ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ದಾಳಿಯನ್ನು ಬಿಜೆಪಿ ಪಕ್ಷ ಮತ್ತು ಅದರ ಸರ್ಕಾರವೇ ನಡೆಸಿದ ಸಾಹಸ ಎಂಬಂತೆ ಬಿಂಬಿಸಲಾಗಿತ್ತು.
ಆದರೆ, 2020ರ ಜೂನ್ ನಲ್ಲಿ ಭಾರತದ ಮತ್ತೊಂದು ಗಡಿ ಗಲ್ವಾನಾ ಕಣಿವೆಯಲ್ಲಿ ಮತ್ತೊಂದು ನೆರೆಯ ರಾಷ್ಟ್ರ ಚೀನಾದ ಯೋಧರೊಂದಿಗೆ ನಡೆದ ತಿಕ್ಕಾಟದಲ್ಲಿ 20 ಮಂದಿ ಭಾರತೀಯ ಯೋಧರು ಮೃತಪಟ್ಟರು. ಯಾವುದೇ ಅಧಿಕೃತ ಸಮರ ಘೋಷಣೆ ಇಲ್ಲದೆ, ಯಾವುದೇ ಸಂಘರ್ಷವಿಲ್ಲದೆ, ಚೀನಾದ ಯೋಧರು ಭಾರತದ ಗಡಿಯೊಳಗೆ ನುಸುಳಿ ಸೇತುವೆ ಮತ್ತು ಸೇನಾ ಶಿಬಿರಗಳನ್ನು ನಿರ್ಮಾಣ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಹಿಮ್ಮೆಟ್ಟಿಸಲು ಹೋದ ಭಾರತೀಯ ಸೇನೆಯೊಂದಿಗೆ ಚೀನಾದ ಪೀಪಲ್ಸ್ ಆರ್ಮಿ ನಡೆಸಿದ ಹೇಯ ಸಂಘರ್ಷ ಅದಾಗಿತ್ತು. ಪರಸ್ಪರ ತಿಕ್ಕಾಟ, ತಳ್ಳಾಟದ ಆ ಘಟನೆಯಲ್ಲಿ 20 ಮಂದಿ ಭಾರತೀಯ ಯೋಧರು ನದಿಪಾಲಾಗಿದ್ದರು. ಅದೇ ಹೊತ್ತಿಗೆ ಕನಿಷ್ಟ 38 ಮಂದಿ ಚೀನಿ ಯೋಧರು ಕೂಡ ಘಟನೆಯಲ್ಲಿ ಸಾವು ಕಂಡಿದ್ದರು ಎಂಬುದು ತಡವಾಗಿ ಬೆಳಕಿಗೆ ಬಂದಿದೆ. ಆದರೆ, ಭಾರತದ ಗಡಿಯೊಳಗೆ ನುಸುಳಿ ದೇಶದ ಭೂ ಭಾಗವನ್ನು ಆಕ್ರಮಿಸಿ ನಮ್ಮದೇ ಯೋಧರ ಜೀವ ತೆಗೆದ ಚೀನಾದ ಉದ್ಧಟತನದ ಘಟನೆಯ ಬಗ್ಗೆ ಭಾರತೀಯ ಜನತಾ ಪಕ್ಷ ಮತ್ತು ಪ್ರಧಾನಿ ಮೋದಿಯವರು ಗಟ್ಟಿಯಾಗಿ ದನಿ ಎತ್ತಿದ್ದೇ ವಿರಳ!
ಒಂದು ಹೀನ ಭಯೋತ್ಪಾದಕ ಕೃತ್ಯ. ಮತ್ತೊಂದು ಕೂಡ ಭಯೋತ್ಪಾದನೆಯಂತಹದ್ದೇ ಆಕ್ರಮಣಕಾರಿ ಸೇನಾ ಸಂಘರ್ಷ. ಎರಡೂ ಘಟನೆಗಳಲ್ಲಿ ಸತ್ತವರು ಭಾರತೀಯ ಯೋಧರೇ. ಆದರೆ, ಭಾರತೀಯ ಜನತಾ ಪಾರ್ಟಿ, ಪಾಕಿಸ್ತಾನ ಮತ್ತು ಅದರ ಕುಮ್ಮಕ್ಕಿನ ಭಯೋತ್ಪಾದನಾ ಸಂಘಟನೆಗಳ ಕೈವಾಡದ ಪುಲ್ವಾಮಾ ಘಟನೆಗೆ ಪ್ರತಿಕ್ರಿಯಿಸಿದ ರೀತಿಗೂ, ಚೀನಾದ ಸೇನೆಯ ಕುಕೃತ್ಯಕ್ಕೆ ಬಲಿಯಾದ ಯೋಧರ ವಿಷಯದಲ್ಲಿ ಪ್ರತಿಕ್ರಿಯಿಸಿದ ರೀತಿಗೂ ಅಜಗಜಾಂತರ ವ್ಯತ್ಯಾಸವಿದೆ. ಅಷ್ಟೇ ಅಲ್ಲ, ಗಲ್ವಾನಾ ಕಣಿವೆಯಲ್ಲಿ ನೀರು ಪಾಲಾದ ಭಾರತೀಯ ಯೋಧರ ವಿಷಯದಲ್ಲಿ ಮುಖ್ಯವಾಹಿನಿ ಮಾಧ್ಯಮ ಕೂಡ ಜಾಣ ಕುರುಡು, ಜಾಣ ಮರೆವು ಪ್ರದರ್ಶಿಸುತ್ತಲೇ ಇದೆ. ಆದರೆ, ಪುಲ್ವಾಮಾ ದಾಳಿಯ ವಿಷಯವನ್ನು ಮಾತ್ರ ‘ಬ್ಲಾಕ್ ಡೇ’ ಆಗಿ ಆಚರಿಸುವ ಮೂಲಕ ಹಿಂದುತ್ವವಾದಿ ರಾಜಕಾರಣಕ್ಕೆ ತುಪ್ಪ ಸುರಿಯುವ ಯತ್ನ ಮಾಧ್ಯಮಗಳಿಂದಲೇ ನಡೆಯುತ್ತಿದೆ!
ಪುಲ್ವಾಮಾ ಮತ್ತು ಗಾಲ್ವಾನಾ ಘಟನೆಗಳಿಗೆ ದೇಶ ಪ್ರತಿಕ್ರಿಯಿಸುತ್ತಿರುವ ರೀತಿ ದೇಶದ ರಾಜಕೀಯ ವ್ಯವಸ್ಥೆ ಹೇಗೆ ಸೇನೆ, ಯೋಧರು ಮತ್ತು ಸೇನಾ ಕಾರ್ಯಾಚರಣೆಗಳನ್ನು ತನ್ನ ರಾಜಕೀಯ ಲಾಭಕ್ಕೆ ಚಾಣಾಕ್ಷತನದಿಂದ ಬಳಸಿಕೊಳ್ಳುತ್ತಿದೆ ಮತ್ತು ದೇಶದ ಬಹುಸಂಖ್ಯಾತ ಜನಸಮೂಹ ಕೂಡ ಅಂತಹ ತಂತ್ರಗಾರಿಕೆಗಳಿಗೆ ಸುಲಭವಾಗಿ ಮರುಳಾಗುತ್ತಿದೆ ಎಂಬುದಕ್ಕೆ ಉದಾಹರಣೆ. ಮಾತ್ರವಲ್ಲ; ಬದಲಾದ ಭಾರತದಲ್ಲಿ ದೇಶಕ್ಕಾಗಿ ಪ್ರಾಣ ಕೊಡುವ ಯೋಧರ ತ್ಯಾಗ ಮತ್ತು ಬಲಿದಾನಕ್ಕಿಂತ, ಅವರ ಸಾವಿಗೆ ಕಾರಣವಾದವರು ಯಾರು ಮತ್ತು ಅವರ ಧರ್ಮ ಯಾವುದು ಎಂಬುದರ ಮೇಲೆ ಹುತಾತ್ಮ ಯೋಧರ ‘ಅಮರತ್ವ’ ನಿಂತಿರುವ ವಿಪರ್ಯಾಸಕರ ಪರಿಸ್ಥಿತಿಗೂ ಈ ಎರಡು ದುರಾದೃಷ್ಟಕರ ಘಟನೆಗಳು ನಿದರ್ಶನ.