ಬೆಂಗಳೂರು: ನಮ್ಮ ಮೆಟ್ರೋ ರೈಲು ಸಂಪರ್ಕವನ್ನು ಬೆಂಗಳೂರಿನಿಂದ ತುಮಕೂರು ನಗರಕ್ಕೆ ವಿಸ್ತರಿಸಲು ಬಿಎಂಆರ್‌ಸಿಎಲ್ ವಿಸ್ತ್ರತವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಟೆಂಡರ್ ಕರೆದಿದೆ. ಈ ಬಗ್ಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿದ್ದು, ಸರ್ಕಾರಕ್ಕೆ ತಲೆ ಕೆಟ್ಟಿದೆ ಎನ್ನುವುದಕ್ಕೆ ಇದೇ ಉದಾಹರಣೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಕೆಲಸ ಎಲ್ಲಿ ಮಾಡಬೇಕು ಎನ್ನುವ ಅರಿವು ಈ ರಾಜ್ಯ ಸರ್ಕಾರಕ್ಕಿಲ್ಲ. ನಾವು ತುಮಕೂರಿಗೆ ಮೆಟ್ರೋ ಸಂಪರ್ಕಕ್ಕೆ ವಿರೋಧ ಮಾಡುತ್ತಿದ್ದೇವೆ ಅಂತಾ ಜನ ಅಂದುಕೊಳ್ಳಬಾರದು. ಆದರೆ ಇದು ದುಬಾರಿ ಖರ್ಚಿನ ಉಪಯೋಗ ಇಲ್ಲದ ಯೋಜನೆ ಎಂದು ತೇಜಸ್ವಿ ಸೂರ್ಯ ಉದಾಹರಣೆ ಸಮೇತ ವಿವರಿಸಿದ್ದಾರೆ.

ಒಂದು ಕಿಲೋಮೀಟರ್ ಮೆಟ್ರೋ ವಿಸ್ತರಣೆಗೆ 450 ಕೋಟಿ ರೂಪಾಯಿ ವೆಚ್ಚಾವಾಗುತ್ತದೆ. ಆದರೆ ದೆಹಲಿಯಲ್ಲಿರುವಂತಹ ರಾಪಿಡ್ ರೈಲ್ ಟ್ರಾನ್ಸಿಟ್ ಸಿಸ್ಟಮ್ ಅಥವಾ ಸಬ್ ಅರ್ಬನ್ ರೈಲು ನಿರ್ಮಿಸಲು ಅಂದಾಜು 150 ಕೋಟಿ ರೂಪಾಯಿ ವೆಚ್ಚವಾಗಲಿದೆ. ಇದರಲ್ಲಿ ಹೆಚ್ಚು ಜನ ಕುಳಿತುಕೊಂಡು ಬರಬಹುದು. ಆದರೆ ಮೆಟ್ರೋ ನಿರ್ಮಿಸಿದರೆ ಕಡಿಮೆ ಜನ ಕುಳಿತು ಹೆಚ್ಚಿನ ಜನ ನಿಲ್ಲಬೇಕಾಗುತ್ತದೆ. ಯಾವುದನ್ನು ಎಲ್ಲಿ ಮಾಡಬೇಕು ಎನ್ನುವ ಅರಿವು ಸರ್ಕಾರಕ್ಕಿರಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.












