ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ನೇರವಾಗಿಯೇ ಆರೋಪ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೆ ನನ್ನ ಬಳಿಕ ಪೆನ್ ಡ್ರೈವ್ ಇದೆ. ಅದರಲ್ಲಿ ಸಾಕ್ಷಿ ಇದೆ ಎಂದು ಅಬ್ಬರಿಸುತ್ತಿದೆ. ಸರ್ಕಾರ ತಪ್ಪು ದಾರಿಯಲ್ಲಿ ನಡೆದಾಗ ವಿರೋಧ ಪಕ್ಷವಾಗಿ ಸರ್ಕಾರವನ್ನು ಕಿವಿ ಹಿಂಡಿ ಸರಿದಾರಿಗೆ ತರಬೇಕಿರುವುದು ವಿರೋಧ ಪಕ್ಷದ ನಾಯಕನಾಗಿ ಕುಮಾರಸ್ವಾಮಿ ಅವರ ಕರ್ತವ್ಯ ಆಗಿದೆ. ಆದರೆ ಕುಮಾರಸ್ವಾಮಿ ಭ್ರಷ್ಟಾಚಾರ ಮಾಡುತ್ತಿದೆ ಎಂದು ಅಬ್ಬರಿಸುತ್ತಿದ್ದಾರೆ. ಆದರೆ ಬುಟ್ಟಿಯಲ್ಲಿರುವ ಹಾವನ್ನು ಹೊರಕ್ಕೆ ಬಿಡದೆ ಬುಟ್ಟಿಯಲ್ಲಿ ಹಾವಿದೆ ಹಾವಿದೆ ಎಂದರೆ ಅರ್ಥವೇನಿದೆ..? ಎನ್ನುವುದು ವಿರೋಧ ಪಕ್ಷಗಳ ಪ್ರಶ್ನೆಯಾಗಿದೆ.
ಗಾಳಿಯಲ್ಲಿ ಗುಂಡು ಹಾರಿಸ್ತಾರೆ ಅನ್ನೋ ಪ್ರತೀತಿ..

ಕುಮಾರಸ್ವಾಮಿ ಸಾಕಷ್ಟು ನಾಯಕರ ವಿರುದ್ಧ ಆರೋಪ ಮಾಡುತ್ತಾರೆ. ಆ ಆರೋಪಗಳನ್ನು ತಾತ್ವಿಕ ಅಂತ್ಯಕ್ಕೆ ಕೊಂಡೊಯ್ಯುವ ಕೆಲಸ ಮಾಡುವುದಿಲ್ಲ. ಕೇವಲ ಕೇಳಿದ್ದು, ಕಂಡಿದ್ದನ್ನು ಮಾಧ್ಯಮಗಳ ಎದುರು ಹೇಳಿಕೊಂಡು ಬಾಯಿ ಚಪಲ ತೀರಿಸಿಕೊಳ್ತಾರೆ ಎಂದು ಕಾಂಗ್ರೆಸ್ ನಾಯಕರು ಕಿಚಾಯಿಸುತ್ತಿದ್ದಾರೆ. ಆದರೆ ಕುಮಾರಸ್ವಾಮಿ ಮಾತ್ರ ಜೇಬಿನಲ್ಲಿ ಪೆನ್ ಡ್ರೈವ್ ತೋರಿಸಿ ಇದರಲ್ಲಿ ಇದೆ ಇದೆ ಎನ್ನುತ್ತಿದ್ದಾರೆ. ಇಂದಿನ ದಿನಮಾನಗಳಲ್ಲಿ ಮಾಧ್ಯಮ ಅತ್ಯಂತ ಗಟ್ಟಧ್ವನಿಯಾಗಿದ್ದು, ಮಾಧ್ಯಮಗಳ ಎದುರು ಪೆನ್‌ಡ್ರೈವ್ ಪ್ಲೇ ಮಾಡಿ, ಇಡೀ ರಾಜ್ಯದ ಜನರ ಎದುರು ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಬಹಿರಂಗ ಮಾಡಲು ಅವಕಾಶವಿದೆ. ಆದರೆ ಕುಮಾರಸ್ವಾಮಿಗೆ ಆಡಿಯೋ ಬಹಿರಂಗ ಆಗೋದು ಬೇಕಿಲ್ಲ ಎನ್ನುವುದು ಹಲವಾರು ಜನರ ಅಭಿಪ್ರಾಯ.
ಸಿಎಂ ಕಚೇರಿಯಲ್ಲಿ ವರ್ಗಾವಣೆ ದಂಧೆ – HDK

CMO ಅಂದರೆ ಚೀಫ್ ಮಿನಿಸ್ಟರ್ ಆಫೀಸ್ ಎಂದರ್ಥ. ಆದರೆ ಕುಮಾರಸ್ವಾಮಿ CMO ಅಂದರೆ Corruption Management Office ಎಂದು ತಮ್ಮದೇ ಆದ ಅರ್ಥ ಕೊಟ್ಟಿದ್ದಾರೆ. ಕಾಸಿಗಾಗಿ ಪೋಸ್ಟಿಂಗ್ ನಡೆಯುತ್ತಿದೆ. ಸಿಎಂ ಕಚೇರಿಯಲ್ಲಿ ಅಧಿಕೃತವಾಗಿ ದಂಧೆ ನಡೆಯುತ್ತಿದೆ ಎಂದಿದ್ದಾರೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆ ಕೊಡಿ ಎಂದಿದ್ದರೆ ತನಿಖೆ ನಡೆಸುವ ದಮ್ಮು, ತಾಕತ್ತು ಇದ್ದರೆ ದಾಖಲೆ ಕೊಡುತ್ತೇನೆ ಎಂದಿದ್ದರು. ದಾಖಲೆ ಕೊಟ್ಟರೆ ಆರೋಪಿತ ಸಚಿವರನ್ನು ವಜಾ ಮಾಡುತ್ತೀರಾ..? ಎಂದು ಸವಾಲು ಹಾಕಿದ್ದರು. ಆದರೆ ಕೇವಲ ಒಂದು ಪೆನ್ ಡ್ರೈವ್ ತೋರಿಸಿ ಬಿಲ್ಡಪ್‌ಗೆ ಮಾತ್ರ ಸೀಮಿತ ಆಯ್ತು. ಒಂದು ವೇಳೆ ಸೂಕ್ತ ದಾಖಲಾತಿಗಳು ಇದ್ದಿದ್ದರೆ ಲೋಕಾಯುಕ್ತ ಅಥವಾ ಕರ್ನಾಟಕ ಹೈಕೋರ್ಟ್‌ಗೆ ಖಾಸಗಿ ದೂರು ದಾಖಲಿಸಲೂ ಅವಕಾಶ ಇದೆ ಅಲ್ಲವೇ..?
ಸರ್ಕಾರಕ್ಕೆ ಕೆಟ್ಟ ಹೆಸರು ತರವುದೇ HDK ಸಂಕಲ್ಪ..!

ರಾಜ್ಯ ಸರ್ಕಾರದ ಬಗ್ಗೆ ಜನರು ಒಳ್ಳೇ ಮಾತನಾಡ್ತಿದ್ದಾರೆ. ಕೊಟ್ಟ ಭರವಸೆಗಳನ್ನು ಈಡೇರಿಸುವತ್ತ ಸಿದ್ದರಾಮಯ್ಯ ಸರ್ಕಾರ ದಾಪುಗಾಲು ಇಟ್ಟಿದೆ. ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವುದಕ್ಕೆ ಇಂಧನ ಇಲಾಖೆ ಕೂಡ ಒಂದು ಕಾರಣ. ಸರ್ಕಾರ ಘೋಷಣೆ ಮಾಡಿದ 200 ಯೂನಿಟ್ ಫ್ರೀ ಕರೆಂಟ್ ಯೋಜನೆ ಜಾರಿಯಲ್ಲಿ ಸಚಿವ ಕೆ.ಜೆ ಜಾರ್ಜ್ ಶ್ರಮವನ್ನು ಕಡೆಗಣಿಸುವಂತಿಲ್ಲ. ಇದೀಗ ಕೆ.ಜೆ ಜಾರ್ಜ್ ವಿರುದ್ಧವೇ ಆರೋಪ ಮಾಡಿದರೆ ಅದರಿಂದ ಮಾನಸಿಕವಾಗಿ ಕುಕ್ಕುತ್ತಾರೆ ಎನ್ನುವ ಕಾರಣಕ್ಕೆ ಕೆ.ಜೆ ಜಾರ್ಜ್ ವಿರುದ್ಧವೇ ವರ್ಗಾವಣೆ ದಂಧೆ ಆರೋಪ ಮಾಡಿದ್ದಾರೆ. ಸುಮಾರು 10 ಕೋಟಿಗೆ ಹುದ್ದೆ ಬಿಕರಿ ಆಗಿದೆ. ಆ ಅಧಿಕಾರಿ ದಿನನಿತ್ಯ 50 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಾನೆ ಎಂದಿದ್ದಾರೆ. ಆದರೆ ತಿರುಗೇಟು ನೀಡಿರುವ ಇಂಧನ ಸಚಿವ ಕೆ.ಜೆ ಜಾರ್ಜ್, ದಾಖಲೆ ಇದ್ದರೆ ಜನತೆಯ ಮುಂದಿಟ್ಟು ಆರೋಪ ಮಾಡಲಿ ಎಂದು ಪ್ರತಿ ಸವಾಲು ಎಸೆದಿದ್ದಾರೆ.
ಮಾಜಿ ಸಿಎಂ ಆದವರಿಗೆ ಮುಖಭಂಗ ಸಹ್ಯವಲ್ಲ..!
ಮಾಜಿ ಮುಖ್ಯಮಂತ್ರಿ, ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ನಾಯಕರಲ್ಲಿ ಕುಮಾರಸ್ವಾಮಿ ಕೂಡ ಒಬ್ಬರು. ಸರ್ಕಾರವನ್ನು ತಪ್ಪು ದಾರಿಯಿಂದ ಸರಿದಾರಿಗೆ ತರುವ ಕೆಲಸ ಮಾಡಲಿ. ಆದರೆ ಉತ್ತಮ ಕೆಲಸ ಮಾಡುತ್ತಿರುವ ನಾಯಕರನ್ನು ಪದೇ ಪದೇ ಪೇಚಿಗೆ ಸಿಲುಕಿಸುವ ಯತ್ನ ಮಾಡುವುದು ಒಳಿತಲ್ಲ. ಸರ್ಕಾರಕ್ಕೆ ಕೆಲಸ ಮಾಡಲು ಅವಕಾಶ ನೀಡಬೇಕು. ಒಂದು ವೇಳೆ ಹಗರಣ, ಭ್ರಷ್ಟಾಚಾರ ನಡೆದಿದ್ದರೆ ಬಹಿರಂಗ ಮಾಡುವ ಮೂಲಕ ತಾನೂ ಜನಪರ ನಾಯಕ ಎನ್ನುವುದನ್ನು ಸಾಧಿಸಲಿ. ಅದನ್ನು ಬಿಟ್ಟು ಜೇಬಿನಲ್ಲಿದೆ.. ಬುಟ್ಟಿಯಲ್ಲಿದೆ ಎನ್ನುತ್ತ ಕಾಲಹರಣ ಮಾಡುವುದು ಸರ್ಕಾರದ ನಾಗಾಲೋಟಕ್ಕೆ ತಡೆ ಹಾಕುವ ಉದ್ದೇಶ ಎನ್ನುವುದು ಖಚಿತ ಆಗುತ್ತದೆ. ಪೆನ್ ಡ್ರೈವ್‌ನಲ್ಲಿ ಏನೂ ಇರಲಿಲ್ಲ ಎನ್ನುವ ಮಾತೂ ಇದೆ. ಇದಕ್ಕೆ ಕುಮಾರಸ್ವಾಮಿ ಅವರೇ ಉತ್ತರ ಕೊಡಬೇಕಿದೆ.
ಕೃಷ್ಣಮಣಿ