ಕೋವಿಡ್ -19 ಎರಡನೇ ಅಲೆಯ ನೆನಪುಗಳು ನಿಧಾನವಾಗಿ ಕಡಿಮೆಯಾಗುತ್ತಿವೆ. ಭಾರತವು ತನ್ನ ಹಳೆಯ ಸ್ಥಿತಿಗೆ ಮರಳುತ್ತಿದೆ. ಮಾಲ್‌ಗಳು, ರೆಸಾರ್ಟ್‌ಗಳು, ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬತೊಡಗಿವೆ. ಮೊದಲನೆಯ ಅಲೆಯ ನಂತರ ಅನೇಕ ಭಾರತೀಯರು ಸಾಂಕ್ರಾಮಿಕವನ್ನು ನಾವು ಗೆದ್ದಿದ್ದೇವೆ ಎಂದೇ ತಿಳಿದುಕೊಂಡಿದ್ದರು. ಈಗಲೂ ಅನೇಕರು ಸಾಂಕ್ರಾಮಿಕದ ಅಪಾಯ ತೊಲಗಿದೆ ಎಂದೇ ನಂಬಿದ್ದಾರೆ.
ಆದರೆ ತಜ್ಞರು ಈ ತಿಂಗಳ ಕೊನೆಯಲ್ಲಿ ಮತ್ತೊಂದು ಅಲೆ ಭಾರತಕ್ಕೆ ಬರಲಿದೆ ಮತ್ತು ಭಾರತವಿನ್ನೂ ಪೂರ್ತಿಯಾಗಿ ಅದಕ್ಕೆ ಸಿದ್ಧವಾಗಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಅತಿ ಆತ್ಮವಿಶ್ವಾಸದಿಂದಾಗಿಯೇ ವಿನಾಶಕಾರಿ ಎರಡನೇ ಅಲೆ ಭಾರತದಾದ್ಯಂತ ವ್ಯಾಪಕವಾಗಿ ಹರಡಿತು ಮತ್ತು ಭಾರತೀಯರು ಅತಿ ಸುಲಭವಾಗಿ ವೈರಸ್‌ಗೆ ತುತ್ತಾಗಲು ಕಾರಣವಾಯಿತು. ಈಗ ಭಾರತವು ಸ್ವಲ್ಪ ಮಟ್ಟಿಗೆ ರೋಗ ನಿರೋಧಕ ಶಕ್ತಿಯನ್ನು ಹೊಂದಿರಬಹುದು. ಆದರೆ ಮೂರನೆಯ ಅಲೆಯ ಬಗ್ಗೆ ಮುನ್ಸೂಚನೆ ಪಡೆದುಕೊಳ್ಳಬಹುದು ಅಂದರೆ ನಾವಿನ್ನೂ ಎರಡನೆಯ ಅಲೆಯ ಬಗ್ಗೆಯೇ ಪೂರ್ತಿ ತಿಳಿದುಕೊಂಡಿಲ್ಲ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಎಷ್ಟು ಭಾರತೀಯರು ಕೋವಿಡ್ -19 ಪ್ರತಿಕಾಯಗಳನ್ನು ಹೊಂದಿದ್ದಾರೆ ಎಂಬುವುದನ್ನು ತಿಳಿದುಕೊಳ್ಳಲು ನಾಲ್ಕು ಸಮೀಕ್ಷೆ ಗಳನ್ನು ನಡೆಸಿದೆ. ಭಾರತದ 21 ರಾಜ್ಯಗಳ 70 ಜಿಲ್ಲೆಗಳಲ್ಲಿ 29,000 ಮಂದಿಯನ್ನು ಈ ಸಮೀಕ್ಷೆಗಾಗಿ ಸಂಪರ್ಕಿಸಲಾಗಿದೆ.
ಜೂನ್ ಮತ್ತು ಜುಲೈನಲ್ಲಿ ನಡೆಸಲಾದ ನಾಲ್ಕನೇ ಸಮೀಕ್ಷೆಯ ಫಲಿತಾಂಶಗಳು, ಮೂರನೇ ಎರಡರಷ್ಟು ಭಾರತೀಯರು ಕೋವಿಡ್ -19 ಗೆ ಒಡ್ಡಿಕೊಂಡಿದ್ದಾರೆ ಎಂಬುವುದನ್ನು ಸೂಚಿಸುತ್ತದೆ. ಇದು ಡಿಸೆಂಬರ್ ಮತ್ತು ಜನವರಿಯಲ್ಲಿ ಸರಿಸುಮಾರು 24% ನಷ್ಟಿತ್ತು. ಆದರೆ 400 ಮಿಲಿಯನ್ ಭಾರತೀಯರು ಇನ್ನೂ ಪ್ರತಿಕಾಯಗಳನ್ನು ಹೊಂದಿಲ್ಲ . ಇದರಿಂದಾಗಿ ಮೂರನೇ ಅಥವಾ ನಾಲ್ಕನೇ ಅಲೆಯು ಒಟ್ಟಾರೆ ಸಾವಿನ ಸಂಖ್ಯೆಯನ್ನು ತೀವ್ರವಾಗಿ ಹೆಚ್ಚಿಸಬಹುದು.
ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವಂತೆ ಸರ್ಕಾರದ ಬಳಿ ಇಲ್ಲಿಯವರೆಗೆ ಎಷ್ಟು ಭಾರತೀಯರು ಸತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಸರ್ಕಾರವು ಸಾವಿನ ಸಂಖ್ಯೆಯನ್ನು ಅರ್ಧ ಮಿಲಿಯನ್‌ಗಿಂತ ಕಡಿಮೆ ಎಂದು ಹೇಳಿಕೊಂಡಿದೆ. ಕೆಲವು ಸಮೀಕ್ಷೆಗಳು ನೈಜ ಸಂಖ್ಯೆಯು ಎರಡರಿಂದ ಮೂರು ಮಿಲಿಯನ್ ಆಗಿರಬಹುದು ಎಂದು ಅಭಿಪ್ರಾಯ ಪಟ್ಟಿವೆ.
ಜಾಗತಿಕ ಅಭಿವೃದ್ಧಿ ಕೇಂದ್ರದ ಅರ್ಥಶಾಸ್ತ್ರಜ್ಞರು ಸಾಂಕ್ರಾಮಿಕ ಸಮಯದಲ್ಲಿ ಭಾರತದಲ್ಲಿ 3.4 ಮಿಲಿಯನ್ ನಿಂದ 4.7 ಮಿಲಿಯನ್‌ಗೂ ಅಧಿಕ ಸಾವುಗಳನ್ನು ಅಂದಾಜಿಸಿದ್ದಾರೆ -ಅವುಗಳಲ್ಲಿ ಎಲ್ಲವೂ ನೇರವಾಗಿ ಕೋವಿಡ್ -19 ನಿಂದಾಗಿರುವ ಸಾವುಗಳಲ್ಲ. ಕೆಲವು ರಾಜ್ಯ ಸರ್ಕಾರಗಳು ಕೋವಿಡ್ ಹೋರಾಟಗಾರರಾಗಿ ತಮ್ಮ ಖ್ಯಾತಿಯನ್ನು ಹೆಚ್ಚಿಸಲು ಸಾವುಗಳ ಸಂಖ್ಯೆಯನ್ನು ಮರೆಮಾಚಿವೆ.
ಭಾರತದ ಎರಡನೇ ಅಲೆಯ ಪ್ರಾಥಮಿಕ ಪಾಠವೆಂದರೆ ಪ್ರಕರಣಗಳು ಹೆಚ್ಚಾಗುವ ಮೊದಲು ಸ್ಥಳೀಯ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸಬೇಕು. ಆದರೆ ಹೆಚ್ಚಿನ ರಾಜ್ಯ ಸರ್ಕಾರಗಳು ನಿಜವಾದ ಸಂಖ್ಯೆಯನ್ನು ಮುಚ್ಚಿಟ್ಟಿರುವುದರಿಂದ ಎರಡನೇ ಅಲೆಯು ಹೇಗೆ ಮತ್ತು ಎಲ್ಲಿ ಹೆಚ್ಚು ವೈರಲ್ ಆಗಿತ್ತು ಎಂಬುದರ ಸ್ಪಷ್ಟ ಚಿತ್ರಣವಿಲ್ಲದೆ ಮೂರನೇ ಅಲೆಯು ಹೇಗೆ ದಾಳಿ ಮಾಡುತ್ತದೆ ಎಂಬುದನ್ನು ನಾವು ಕಂಡುಹಿಡಿಯಲು ಸಾಧ್ಯವಿಲ್ಲ. ಹಿಂದೆ ಯಾರು ಪ್ರಭಾವಕ್ಕೊಳಗಾದರು ಎಂಬುವುದನ್ನು ತಿಳಿಯದೆ, ಮುಂದಿನ ಬಾರಿ ಎಲ್ಲಿ ಮತ್ತು ಯಾರು ಹೆಚ್ಚು ಪ್ರಭಾವಕ್ಕೊಳಗಾಗಬಹುದು ಎಂಬುದನ್ನು ಅಂದಾಜಿಸಲು ಸಾಧ್ಯವಿಲ್ಲ.
ಈ ಮಧ್ಯೆ ಭಾರತೀಯ ನಿರ್ಮಿತ ಲಸಿಕೆಗಳ ಮೇಲೆ ಒಂದು ತಿಂಗಳ ಅವಧಿಯ ರಫ್ತು ನಿಷೇಧವು ಉಳಿದ ಅಭಿವೃದ್ಧಿ ಶೀಲ ಪ್ರಪಂಚವನ್ನು ಡೆಲ್ಟಾ ರೂಪಾಂತರದಿಂದ ದೂರವಿಡಲು ಹೆಣಗಾಡುವಂತೆ ಮಾಡಿತು. ಅಲ್ಲದೆ ಈ ಕ್ರಮದಿಂದ ಭಾರತಕ್ಕೆ ದೊಡ್ಡ ಸಹಾಯವೂ ಆಗಿಲ್ಲ. ಲಸಿಕೆ ತಯಾರಕರು ಅಗ್ಗದ ದರದಲ್ಲಿ ಡೋಸ್‌ಗಳನ್ನು ನೀಡುವಂತೆ ಸರ್ಕಾರವು ಪ್ರಯತ್ನಿಸುತ್ತಿದೆ. ಕಂಪನಿಗಳು ಹೆಚ್ಚಿನ ಸಾಮರ್ಥ್ಯದಲ್ಲಿ ಹೂಡಿಕೆ ಮಾಡಬಹುದೆಂದು ಖಚಿತಪಡಿಸಿಕೊಳ್ಳಲು, ಅವರು ಖಾಸಗಿ ವಲಯಕ್ಕೆ ಹೆಚ್ಚಿನ ಬೆಲೆಗೆ ಮಾರಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಇದೂ ಲಸಿಕಾಕರಣದಲ್ಲಿ ಹೆಚ್ಚಿನ ಸಹಾಯ ಮಾಡಿಲ್ಲ.
Pfizer Inc. ಮತ್ತು Moderna Inc. ಗಳ ಎಂಆರ್‌ಎನ್ಎ ಆಧಾರಿತ ಲಸಿಕೆಗಳು ಇತರ ಲಸಿಕೆಗಳಿಗಿಂತ ಡೆಲ್ಟಾ ರೂಪಾಂತರದ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿವೆ. ಆದರೂ ಸರ್ಕಾರ ಮೊದಲು ಫೈಜರ್ ಅನ್ನು ಕಡೆಗಣಿಸಿತು. ಇದರರ್ಥ, ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ಯುಎಸ್ ಕಳುಹಿಸಿದ 110 ಮಿಲಿಯನ್ ಡೋಸ್‌ಗಳಲ್ಲಿ ಯಾವುದನ್ನೂ ಭಾರತ ಸ್ವೀಕರಿಸಿಲ್ಲ. ಭಾರತಕ್ಕೆ ಕಳುಹಿಸಿದ ಲಕ್ಷಾಂತರ ಮಾಡರ್ನಾ ಲಸಿಕೆಗಳನ್ನು ಜುಲೈನಲ್ಲಿ ತಡೆಹಿಡಿಯಲಾಯಿತು. ತಿಂಗಳುಗಳ ಹಿಂದೆ ಯುಎಸ್ ಮತ್ತು ಭಾರತೀಯ ನಾಯಕರು ಭೇಟಿಯಾದಾಗ, ಭಾರತದಲ್ಲಿ ಜಾನ್ಸನ್ ಮತ್ತು ಜಾನ್ಸನ್ ಲಸಿಕೆ ತಯಾರಿಕೆಗೆ ಧನಸಹಾಯ ನೀಡುವ ಯೋಜನೆಯನ್ನು ಘೋಷಿಸಲಾಯಿತು. ಆದರೆ ಈ ಬಗ್ಗೆಯೂ ಆ ನಂತರ ಹೆಚ್ಚಿನ ಪ್ರಗತಿಯಾಗಿಲ್ಲ.
ಎರಡನೇ ಅಲೆಯ ಸಂದರ್ಭದಲ್ಲಿ ಭಾರತಕ್ಕೆ ಆಮ್ಲಜನಕ ಮತ್ತು ಔಷಧಿಗಳನ್ನು ಒದಗಿಸಲು ಜಗತ್ತು ಒಂದಾದಾಗ, ಭಾರತದಷ್ಟೂ ದೊಡ್ಡದಿಲ್ಲದ ದೇಶಗಳೂ ಸಾಂಕ್ರಾಮಿಕ ರೋಗವನ್ನು ನಿಭಾಯಿಸಿದೆ ಎನ್ನುವುದು ಅರ್ಥವಾಗಿತ್ತು. ಆದರೆ ಭಾರತ ಯಾವುದೇ ಮುಂಜಾಗ್ರತಾ ಕ್ರಮಗಳನ್ನು , ದೂರದೃಷ್ಟಿಯ ಯೋಜನೆಗಳನ್ನು ರೂಪಿಸದೆ ಸಾಂಕ್ರಾಮಿಕವನ್ನು ನಿಭಾಯಿಸಲು ವಿಫಲವಾಯಿತು ಎನ್ನುವುದು ಕೋವಿಡ್ ಎರಡನೇ ಅಲೆಯು ಭಾರತಕ್ಕೆ ಕಲಿಸಿದ ಅತ್ಯಂತ ನಿರ್ಣಾಯಕ ಪಾಠವಾಗಿದೆ. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಭಾರತವು ಮೂರನೆಯ ಅಲೆಯನ್ನು ಎದುರಿಸಲು ಸಜ್ಜಾಗಬೇಕಿದೆ.
The Print