ಪ್ರಜಾಪ್ರಭುತ್ವದ ಉಸಿರು ಭಿನ್ನಮತ ಮತ್ತು ಪ್ರತಿರೋಧ. ಇವೆರಡೂ ಇಲ್ಲದ ರಾಜಕೀಯ ವ್ಯವಸ್ಥೆ ಸರ್ವಾಧಿಕಾರಕ್ಕೆ ಎಡೆಮಾಡಿಕೊಡುತ್ತದೆ. ರಾಜಕೀಯ ವಿರೋಧ ಮತ್ತು ಪ್ರತಿರೋಧಗಳಿಗೆ ಮನ್ನಣೆ ನೀಡದ ಸಮಾಜ ಅರಾಜಕತೆಯತ್ತ ಸಾಗುತ್ತದೆ. ಇಂತಹ ಸಮಾಜವನ್ನು ನಿರ್ವಹಿಸುವ ರಾಜಕಾರಣ ನಿರಂಕುಶಾಧಿಕಾರದತ್ತ ಸಾಗುತ್ತದೆ. ರಾಜಕೀಯ ಪರಿಜ್ಞಾನ ಇರುವ, ರಾಜಕೀಯ ಶಾಸ್ತ್ರವನ್ನು ಅರಿತಿರುವ ಯಾವುದೇ ವ್ಯಕ್ತಿ, ಸಂಘಟನೆ, ಪಕ್ಷಗಳಿಗೆ ಈ ವಾಸ್ತವದ ಅರಿವು ಇರಲೇಬೇಕು. ಪ್ರಜಾತಂತ್ರ ವ್ಯವಸ್ಥೆಯನ್ನು ನಿರ್ವಹಿಸುವ ಜವಾಬ್ದಾರಿ ಹೊತ್ತ ” ಜನಪ್ರತಿನಿಧಿಗಳಿಗೆ” ಈ ಕನಿಷ್ಠ ಪ್ರಜ್ಞೆ ಅತ್ಯವಶ್ಯವಾಗಿ ಇರಲೇಬೇಕು. ಇಲ್ಲವಾದರೆ ಸರ್ಕಾರೇತರ, ಅಸಾಂವಿಧಾನಿಕ ಗುಂಪುಗಳು, ಶಕ್ತಿಗಳು ರಾಜ್ಯಭಾರ ನಡೆಸಲಾರಂಭಿಸುತ್ತವೆ. ಕರ್ನಾಟಕ ಬಹುಶಃ ಇಂತಹ ವಿಷಮ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇದನ್ನೇ ಪ್ರಾಯಶಃ ದೇವನೂರು ಮಹದೇವ ಅವರು ” ನಾಡಿಗೆ ಕೇಡಿನ ಲಕ್ಷಣಗಳು ” ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕರ್ನಾಟಕ ಈಗ ಎದುರಿಸುತ್ತಿರುವ ವಿವಾದ ಯಾವುದೇ ಜಾತಿ, ಮತ, ಸಮುದಾಯ, ಧರ್ಮಗಳಿಗಿಂತಲೂ ಮುಖ್ಯವಾಗಿ ಸಾಮಾಜಿಕ ಸ್ವಾಸ್ಥ್ಯಕ್ಕೆ ಸಂಬಂಧಿಸಿದೆ. ಈ ಸ್ವಾಸ್ಥ್ಯವನ್ನು ಈ ಹೊತ್ತಿಗೆ ಮಾತ್ರವಲ್ಲದೆ ಭವಿಷ್ಯದ ಹಲವು ಪೀಳಿಗೆಗಳವರೆಗೆ ಕಾಪಾಡುವ ನೈತಿಕ ಹೊರೆ ಶಿಕ್ಷಣ ವ್ಯವಸ್ಥೆಯ ಮೇಲಿರುತ್ತದೆ. ಶೈಕ್ಷಣಿಕ ವಲಯದಲ್ಲಿ ಕೈಗೊಳ್ಳಲಾಗುವ ಯಾವುದೇ ಬೌದ್ಧಿಕ ಬದಲಾವಣೆಗಳಿಗೆ ಸಾರ್ವಜನಿಕ ಮನ್ನಣೆ , ಸಮ್ಮತಿ ಮತ್ತು ಸಾರ್ವತ್ರಿಕ ಲಕ್ಷಣಗಳು ಅಗತ್ಯವಾಗಿ ಇರಬೇಕಾಗುತ್ತದೆ. ವಿಶೇಷವಾಗಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದ ಪಠ್ಯಕ್ರಮಗಳನ್ನು ರೂಪಿಸುವಾಗ, ತಿದ್ದುಪಡಿ , ಪರಿಷ್ಕರಣೆಮಾಡುವಾಗ ಈ ಲಕ್ಷಣಗಳು ಪ್ರದಾನ ಅಂಶಗಳಾಗುತ್ತವೆ.
ರಾಜ್ಯ ಬಿಜೆಪಿ ಸರ್ಕಾರ ಈಗ ಕೈಗೊಂಡಿರುವ ಪಠ್ಯಕ್ರಮ ಪರಿಷ್ಕರಣೆ ಹಲವು ಕಾರಣಗಳಿಗಾಗಿ ವಿವಾದಾಸ್ಪದವಾಗಿದೆ. ಪಠ್ಯ ಪರಿಷ್ಕರಣೆ ಸಮಿತಿಯ ಅಧ್ಯಕ್ಷರ ಅರ್ಹತೆಯೇ ಪ್ರಶ್ನಾರ್ಹವಾಗಿದೆ. ಒಂದು ಪೀಳಿಗೆಯ ಭವಿಷ್ಯ ರೂಪಿಸುವ ಶಾಲಾಪಠ್ಯಕ್ರಮವನ್ನು ರೂಪಿಸಲು ಶಿಕ್ಷಣ ತಜ್ಞರ ಅವಶ್ಯಕತೆ ಇದೆ ಎಂಬ ಸಾಮಾನ್ಯ ಗ್ರಹಿಕೆಯಾದರೂ ಸರ್ಕಾರ ಮತ್ತು ಶಿಕ್ಷಣ ಸಚಿವರಿಗೆ ಇರಬೇಕಿತ್ತು. ತಮ್ಮ ಪಕ್ಷ ರಾಜಕಾರಣದ ಸೈದ್ಧಾಂತಿಕ ನಿಲುಮೆಗಳಿಗೆ ಶಾಲಾ ಶಿಕ್ಷಣವನ್ನು ಗುರಾಣಿಯಾಗಿ ಬಳಸುವುದೇ ಅಕ್ಷಮ್ಯ ಮತ್ತು ಅಪ್ರಜಾತಾಂತ್ರಿಕ ಲಕ್ಷಣ. ಆದರೆ ರಾಜ್ಯ ಶಿಕ್ಷಣ ಸಚಿವರ ಈ ಪ್ರಮಾದ ಇಂದು ಕನ್ನಡ ಸಾಹಿತ್ಯವಲಯವನ್ನೇ ಪ್ರಕ್ಷುಬ್ಧಗೊಳಿಸಿದೆ.

ಪರ-ವಿರೋಧಗಳೇನೇ ಇರಲಿ , ಪ್ರಜಾಸತ್ತೆಯನ್ನು ಗೌರವಿಸುವ, ಸಂವಿಧಾನ ಬದ್ಧತೆ ಇರುವ ಯಾವುದೇ ಸರ್ಕಾರ ಸಾರ್ವಜನಿಕ ಪ್ರತಿರೋಧ ಮತ್ತು ಭಿನ್ನಮತಗಳನ್ನು ಗೌರವಿಸಬೇಕಾದ್ದು ನೈತಿಕವಾಗಿ ಅತ್ಯವಶ್ಯ. ಇಂತಹ ಸಂದಿಗ್ಧ ಸಂದರ್ಭಗಳಲ್ಲಿ ವಿವೇಕ, ವಿವೇಚನೆ ಇರುವ ಯಾವುದೇ ಸರ್ಕಾರ ತನ್ನ ಪ್ರತಿಷ್ಠೆ, ಅಹಮಿಕೆ ಬದಿಗಿಟ್ಟು ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡುತ್ತದೆ, ಮಾಡಬೇಕು. ಏಕೆಂದರೆ ಇದು ಒಂದು ಪಕ್ಷ ಅಥವಾ ಸಿದ್ಧಾಂತದ ಪ್ರಶ್ನೆ ಅಲ್ಲ ಕೋಟ್ಯಂತರ ಮಕ್ಕಳ ಭವಿಷ್ಯದ ಪ್ರಶ್ನೆ. ಬಿಜೆಪಿ ನಾಯಕರ ಹೇಳಿಕೆ , ಪ್ರತಿಕ್ರಿಯೆ ಮತ್ತು ದೋಷಾರೋಪಣೆಗಳನ್ನು ಗಮನಿಸಿದರೆ ಈ ಅರಿವು ಇದ್ದಂತೆ ತೋರುವುದಿಲ್ಲ. ಪ್ರಜಾತಂತ್ರ ವ್ಯವಸ್ತೆಯಲ್ಲಿ ಸಂವಾದ, ಸಮಾಲೋಚನೆ, ಸಂಕಥನಗಳೇ ನಿರ್ಣಾಯಕವಾದರೆ ಮಾತ್ರ ಒಂದು ಮೌಲ್ಯಯುತ ಸಮಾಜ ನಿರ್ಮಾಣ ಸಾಧ್ಯ. ಪ್ರಾಯಶಃ ಪ್ರಜಾಸತ್ತೆಯ ಈ ಮೌಲಿಕ ಅಂಶಗಳಿಗೆ ರಾಜ್ಯ ಸರ್ಕಾರ ವಿಮುಖವಾದಂತಿದೆ.
ಇದು ರಾಜ್ಯ ಶಿಕ್ಷಣ ಸಚಿವರ ಪ್ರತಿಷ್ಠೆಯ ಪ್ರಶ್ನೆಯಲ್ಲ. ಅಥವಾ ಈ ಹೊತ್ತಿನ ಸರ್ಕಾರದ ಪ್ರಶ್ನೆಯೂ ಅಲ್ಲ. ಇದೊಂದು ಸಾಮಾಜಿಕ-ಸಾಂಸ್ಕೃತಿಕ ಪ್ರಶ್ನೆ. ಇಡೀ ರಾಜ್ಯದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸಿ, ಸಾಹಿತ್ಯ ವಲಯವನ್ನೂ ಕದಡಿ ರಾಡಿ ಮಾಡಿರುವ ಈ ವಿವಾದವನ್ನು ಸೌಹಾರ್ದಯುತವಾಗಿ ನಿವಾರಿಸುವುದು ಮುಖ್ಯಮಂತ್ರಿಯಾದವರ ನೈತಿಕ ಹೊಣೆ. ರಾಜ್ಯದಲ್ಲಿ ಶಿಕ್ಷಣ ತಜ್ಞರ ಕೊರತೆಯೇನೂ ಇಲ್ಲ, ಸಾಹಿತಿಗಳ ಕೊರತೆಯೂ ಇಲ್ಲ. ಮುಖ್ಯಮಂತ್ರಿ ಬೊಮ್ಮಾಯಿ, ವಿವಾದಾಸ್ಪದ ನಿರ್ಣಯವನ್ನು ಅಮಾನತಿನಲ್ಲಿಟ್ಟು, ಎಲ್ಲ ಭಾಗಿದಾರರೊಡನೆ ಸಮಾಲೋಚನೆ ನಡೆಸುವ ವ್ಯವಧಾನವನ್ನಾದರೂ ತೋರಬೇಕಲ್ಲವೇ ? ಸರ್ವಪಕ್ಷ ಸಭೆ ಕರೆದು, ಸಾರ್ವಜನಿಕ ವಲಯದ ಚಿಂತಕರನ್ನು, ಸಾಹಿತಿಗಳನ್ಮು, ಶೈಕ್ಷಣಿಕ ವಲಯದ ವಿಶೇಷಜ್ಞರನ್ನು ಸಂಪರ್ಕಿಸಿ, ಸಮಾಲೋಚನೆ ನಡೆಸಿ ರಾಜಕೀಯವಾಗಿ ಒಂದು ಪ್ರಜಾಸತ್ತಾತ್ಮಕ ನಿರ್ಧಾರ ಕೈಗೊಳ್ಳಬೇಕಲ್ಲವೇ ?
ಇಲ್ಲಿ ಎರಡು ಸಂಗತಿಗಳು ಢಾಳಾಗಿ ಕಾಣುತ್ತವೆ. ಹಾಲಿ ಬಿಜೆಪಿ ಸರ್ಕಾರ ತನ್ನ ಅಧಿಕಾರ ಶಾಶ್ವತ ಎಂಬ ಭ್ರಮೆಗೊಳಗಾದಂತಿದೆ. ಅಥವಾ ಮರು ಆಯ್ಕೆಯಾಗುವ ಭರವಸೆ ಕಳೆದುಕೊಂಡು ತನ್ನ ಸೈದ್ಧಾಂತಿಕ ಕಾರ್ಯಸೂಚಿಯನ್ನು ಹೇಗಾದರೂ ಮಾಡಿ ಜಾರಿಗೊಳಿಸುವ ಅವಸರ ತೋರುತ್ತಿದೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಶಾಶ್ವತವಲ್ಲ ಎಂಬ ಸಾಮಾನ್ಯ ಅರಿವು ಜನಪ್ರತಿನಿಧಿಗಳಲ್ಲಿ ಇಲ್ಲದೆ ಹೋದರೆ ಏನಾಗಬಹುದು ಎನ್ನುವ ಪ್ರಶ್ನೆಗೆ ಕರ್ನಾಟಕದ ಇಂದಿನ ರಾಜಕೀಯ ಬೆಳವಣಿಗೆಗಳು ಉತ್ತರ ನೀಡುತ್ತವೆ. ಮುಖ್ಯಮಂತ್ರಿ ಬೊಮ್ಮಾಯಿ ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ಮನಗಂಡು ಈ ವಿವಾದವನ್ನು ಬಗೆಹರಿಸಲು ಮುಂದಾಗಬೇಕಿದೆ. ಏಕೆಂದರೆ ಈ ರಾಜಕೀಯ-ಸೈದ್ಧಾಂತಿಕ ಮೇಲಾಟದಲ್ಲಿ ಬಲಿಯಾಗುತ್ತಿರುವುದು ಇಂದಿನ ಶಾಲಾ ಮಕ್ಕಳು, ಬಲಿಯಾಗುವುದು ಭವಿಷ್ಯದ ಪೀಳಿಗೆಯ ಮಕ್ಕಳು. ಈ ಸೂಕ್ಷ್ಮವನ್ನು ಮರೆತರೆ ಇತಿಹಾಸ ನಮ್ಮನ್ನು ಕ್ಷಮಿಸುವುದಿಲ್ಲ.