ಇಡೀ ಜಗತ್ತಿನ ಫ್ಯಾಸಿಷ್ಟರ ಇತಿಹಾಸವನ್ನು ಒಮ್ಮೆ ಸೂಕ್ಷ್ಮವಾಗಿ ಅವಲೋಕಿಸಿದರೆ ಸಾಕುˌ ಅಲ್ಲಿ ಪುಂಡರೆ ಮುನ್ನೆಲೆಯಲ್ಲಿ ಮಿಂಚುವುದನ್ನು ಕಾಣುತ್ತೇವೆ. ಫ್ಯಾಸಿಷ್ಟ್ ಸಂಘಟನೆಗಳನ್ನು ಹುಟ್ಟು ಹಾಕುವವರು ಕುಟಿಲರುˌ ಹೇಡಿಗಳುˌ ಪುಕ್ಕಲರುˌ ಸ್ವಾರ್ಥಿಗಳುˌ ಯಥಾಸ್ಥಿತಿವಾದಿಗಳುˌ ಶ್ರೇಷ್ಟತೆಯ ವ್ಯಸನದಿಂದ ನರಳುವ ಮನೊರೋಗಿಗಳು. ಆದರೆ ಆ ಫ್ಯಾಸಿಷ್ಟ್ ಸಿದ್ಧಾಂತಗಳನ್ನು ಜನಪ್ರೀಯಗೊಳಿಸಿˌ ಉತ್ತುಂಗಕ್ಕೆ ಕೊಂಡೊಯ್ದು ಪುರೋಗಾಮಿ ಧೇಯೋದ್ಯೇಶಗಳನ್ನು ಜಾರಿಗೆ ತರುವವರು ಮಾತ್ರ ಪುಂಡರು ಎನ್ನುವುದನ್ನು ನಾವು ಗಮನಿಸಬೇಕು. ಇನ್ನೊಂದು ಕುತೂಹಲದ ಸಂಗತಿ ಎಂದರೆˌ ಆ ಪುಂಡರಿಂದಲೆ ಫ್ಯಾಸಿಷ್ಟ್ ಸಂಘಟನೆಗಳು ಅವಸಾನ ಕಂಡದ್ದನ್ನು ನಾವು ಗಮನಿಸಬೇಕು. ಎಂಟಾನ್ ಡ್ರೆಗ್ಜಲರ್ ಎಂಬಾತ ಜರ್ಮನಿಯಲ್ಲಿ ಯಹೂದಿಗಳು ಮತ್ತು ಕಮುನಿಷ್ಟರಮೇಲಿನ ದ್ವೇಷದಿಂದ ನಾಜಿ ಸಿದ್ಧಾಂತವನ್ನು ಹುಟ್ಟುಹಾಕಿದರೆ ಅದನ್ನು ರಾಜಕೀಯವಾಗಿ ಉತ್ತುಂಗಕ್ಕೆ ಕೊಂಡೊಯ್ದವ ಹಿಟ್ಲರ್ ಎಂಬ ಪುಂಡ. ಆನಂತರ ನಾಜಿ ಸಂತಾನವು ಅವಶೇಷ ಕಂಡದ್ದು ಕೂಡ ಆ ಪುಂಡನ ಮೂಲಕವೆ ಎನ್ನುವುದು ನಾವು ಇಲ್ಲಿ ಸೂಕ್ಷ್ಮವಾಗಿ ಅವಲೋಕಿಸಬೇಕು.
ಕುತೂಹಲದ ಸಂಗತಿ ಎಂದರೆ ಫ್ಯಾಸಿಷ್ಟರಲ್ಲಿ ಬುದ್ದಿಜೀವಿ ವಂಶವಾಹಿನಿ ಅತಿ ವಿರಳ ಅಥವಾ ಇಲ್ಲವೆ ಇಲ್ಲ ಎನ್ನಬಹುದು. ಫ್ಯಾಸಿಜಂ ಹುಟ್ಟುವುದೆ ಹುಂಬತನˌ ಶ್ರೇಷ್ಟತೆಯ ರೋಗಿಷ್ಟ ಮಾನಸಿಕತೆˌ ಮತ್ತು ಜೀವವಿರೋಧಿ ಮನಸ್ಥಿತಿಯಿಂದ. ಹಾಗಾಗಿ ಫ್ಯಾಸಿಷ್ಟರಲ್ಲಿ ಚಿಂತಕರಾಗಲಿˌ ಇಂಟಲೆಕ್ಚ್ಯುವಲ್ಸ್ ಆಗಲಿ ಹುಟ್ಟುವುದಿಲ್ಲ. ತಿರುಚುವುಕೆˌ ಕೆಡಿಸುವಿಕೆˌ ಹಾದಿ ತಪ್ಪಿಸುವಿಕೆˌ ಹುನ್ನಾರಗಳ ಪಟ್ಟು ˌ ಅಪಪ್ರಚಾರˌ ತೇಜೊವಧೆˌ ಸುಳ್ಳು ˌ ಕ್ರೌರ್ಯˌ ಅವಕಾಶವಾದಿ ಹೊಂದಾಣಿಕೆˌ ಸಮಯಸಾಧಕ ಗುಲಾಮಗಿರಿˌ ಕಪಟ ನಾಟಕ ಇತ್ಯಾದಿ ಇವು ಫ್ಯಾಸಿಷ್ಟರ ಮುಖ್ಯ ಗುಣಲಕ್ಷಣಗಳು ಹಾಗು ಮೂಲ ಧಾತುಗಳು. ಇವುಗಳನ್ನು ಹೊರತು ಪಡಿಸಿದ ಯಾವುದೇ ಧನಾತ್ಮಕ ಪ್ರತಿಭೆ ಫ್ಯಾಸಿಷ್ಟರ ವಂಶವಾಹಿನಿಯಲ್ಲಿ ಇರುವುದಿಲ್ಲ. ಅವರಲ್ಲಿನ ಪ್ರತಿಭೆ relative ಹೊರತು absolute ಅಲ್ಲ. ಉದಾಹರಣೆಗೆˌ ದಡ್ಡ ರಾಜಕಾರಣಿಗಳು ಮತ್ತು ಮಠಾಧೀಶರು ನಡೆಸುವ ಲಿಂಗಾಯತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವ ಒಬ್ಬ ಅತಿ ದಡ್ಡ ಲಿಂಗಾಯತ ನೌಕರನೊಂದಿಗೆ ಆತನಿಗಿಂತ ಪರವಾಗಿಲ್ಲ ಎನ್ನುವಷ್ಟು ಜಾಣನಾದ ಶಾನುಭೋಗನೊಬ್ಬ ತನ್ನನ್ನು ತಾನು ಭಾರೀ ಪ್ರತಿಭಾವಂತ ವಿಜ್ಞಾನಿಯಂತೆ ಬಿಂಬಿಸಿಕೊಳ್ಳುತ್ತಾನೆ ಮತ್ತು ಆ ಸಂಸ್ಥೆಯಲ್ಲಿ ತನಗಿಂತ ಪ್ರತಿಭಾವಂತರು ಸೇರದಂತೆ ಹುನ್ನಾರ ಮಾಡುತ್ತಾನೆ. ಇದನ್ನು ನಾನು ವಾಸ್ತವದಲ್ಲಿ ಕಣ್ಣಾರೆ ಕಂಡಿದ್ದೇನೆ.
ನಾನು ಈ ಮೊದಲು ನಮೂದಿಸಿದಂತೆ ಫ್ಯಾಸಿಷ್ಟರು ಪರಮ ಹೇಡಿಗಳಾಗಿರುತ್ತಾರೆ. ಅವರು ತಮ್ಮದಲ್ಲದ ಹಾಗು ತಮಗಿಂತ ಕೆಳಗಿನ ಜಾತಿಯ ಜನರ ಸ್ನಾಯುಬಲ ಮೇಲೆ ಅವಲಂಬಿತರಾಗಿರುತ್ತಾರೆ. ಅವಕಾಶ ದೊರೆತಾಗಲೆಲ್ಲ ಅನ್ಯರ ಸ್ನಾಯುಬಲವನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ. ಕೆಲವೊಂದು ಸಲ ಅಕಸ್ಮಾತಾಗಿ ತಮ್ಮವರಲ್ಲಿ ಒಬ್ಬ ಪುಂಡ ಗೋಚರಿಸಿದರೆ ಆತನನ್ನು ಬಳಸಿಕೊಂಡು ತಮ್ಮ ಕಾರ್ಯ ಸಾಧಿಸುತ್ತಾರೆ. ಇದಕ್ಕೆ ಸೂಕ್ತ ಉದಾಹರಣೆ ಎಂದರೆ ಸ್ವತಂತ್ರ ಭಾರತದ ಮೊದಲ ಧಾರ್ಮಿಕ ಭಯೋತ್ಪಾದಕ ನಾಥೂರಾಮ್ ಗೋಡ್ಸೆ. ಫ್ಯಾಸಿಷ್ಟರು ಸ್ವತಂತ್ರವಾಗಿ ಯೋಚಿಸುವುದನ್ನು ಇಚ್ಚಿಸುವುದಿಲ್ಲ. ಅವರು ಚಿಂತಕರುˌ ಬುದ್ದಿಜೀವಿಗಳು ಮತ್ತು ಪ್ರತಿಭಾವಂತರನ್ನು ನಂಬುವುದಿಲ್ಲ ಮಾತ್ರವಲ್ಲ ಅವರನ್ನು ದ್ವೇಷಿಸುತ್ತಾರೆ. ಅವರ ವಂಶವಾಹಿನಿಯಲ್ಲಿ ಪ್ರತಿಭೆˌ ಬುದ್ದಿ ˌ ಚಿಂತನೆಯ ಶಕ್ತಿ ಇಲ್ಲವೆನ್ನುವುದೆ ಪ್ರತಿಭಾವಂತರ ಮೇಲಿನ ಅವರ ಆಳವಾದ ದ್ವೇಷವೆ ಕಾರಣವಿರಬಹುದೆನೊ. ಈ ಗುಣಲಕ್ಷಣಗಳು ಜಗತ್ತಿನ ಎಲ್ಲ ಫ್ಯಾಸಿಷ್ಟರಲ್ಲಿ ಹೆಚ್ಚುಕಡಿಮೆ ಸಮಾನವಾಗಿರುವುದನ್ನು ನಾವು ಗಮನಿಸಬಹುದು.

ಈ ಹಿನ್ನೆಲೆಯಲ್ಲಿ ನಾನು ಭಾರತದ ಮೊಟ್ಟಮೊದಲ ಫ್ಯಾಸಿಷ್ಟ್ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತು ಒಂದಷ್ಟು ಸಂಗತಿಗಳನ್ನು ಇಲ್ಲಿ ವಿವರಿಸುತ್ತಿದ್ದೇನೆ. ಸಂಘವನ್ನು ಒಂದು ಸಾಂಸ್ಕೃತಿಕ ಸಂಸ್ಥೆಯೆಂದು ಅದಕ್ಕೆ ಸಂಬಂಧಪಟ್ಟವರು ಹೇಳುತ್ತಿದ್ದರೂ ಅದೊಂದು ಮೇಲ್ಜಾತಿ ಹಿತಾಸಕ್ತಿಯ ಉದ್ದೇಶದಿಂದ ಸ್ಥಾಪಿಸಲಾಗಿದೆ ಎಂದು ಇತ್ತೀಚಿಗೆ ಸಾಮಾನ್ಯ ಜನರಿಗೂ ಅರ್ಥವಾಗುತ್ತಿದೆ. ಸಂಘ ಹುಟ್ಟಿದಾಗಿನಿಂದ ಅದರ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವವರು ಮೇಲ್ಜಾತಿಯ ಚಿತ್ಪಾವನ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಆದರೆ ಅದು ಸಕಲ ಹಿಂದೂಗಳ ಒಳಿತಿಗಾಗಿ ಕೆಲಸ ಮಾಡುತ್ತದೆಂಬ ಭ್ರಮೆಯನ್ನು ಜನರಲ್ಲಿ ವ್ಯವಸ್ಥಿತವಾಗಿ ಹರಡಲಾಗಿದೆ. ಈ ಸಂಘ ಸ್ಥಾಪಿಸಿದ್ದು ಕೂಡ ಗಾಂಧಿ ಮುಂತಾದವರು ಬ್ರಿಟೀಷರ ವಿರುದ್ಧ ಹೋರಾಡಿ ಪಡೆಯುವ ಸ್ವಾತಂತ್ರವನ್ನು ತಮ್ಮದಾಗಿಸಿಕೊಂಡು ಭಾರತವನ್ನು ಹಿಂದೂ ರಾಷ್ಟ್ರವೆಂಬ ಭ್ರಮೆಯ ನೆರಳಿನಲ್ಲಿ ಒಂದು ಬ್ರಾಹ್ಮಣ ರಾಷ್ಟ್ರವಾಗಿ ರೂಪಿಸಬೇಕೆಂಬ ಉದ್ದೇಶದಿಂದ. ಸಂಘ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಮಹಾರಾಷ್ಟ್ರದ ಚಿತ್ವಾವನ ಬ್ರಾಹ್ಮಣರು. ಇವರು ತಮ್ಮನ್ನು ತಾವು ಟರ್ಕಿಯಿಂದ ಅರಬ್ಬಿ ಸಮುದ್ರದ ಕೊಂಕಣಿ ಪ್ರದೇಶದಿಂದ ಭಾರತಕ್ಕೆ ವಲಸೆಬಂದ ಯಹೂದಿಗಳೆಂತಲುˌ ಆರ್ಯರೆಂತಲುˌ ಹಾಗು ಜಗತ್ತಿನಲ್ಲಿ ತಾವೇ ಶ್ರೇಷ್ಟರು ಮತ್ತು ಪ್ರತಿಭಾವಂತರೆಂದು ಕರೆದುಕೊಳ್ಳುತ್ತಾರೆ.
ಸಂಘ ಹುಟ್ಟಿದಾಗಿನಿಂದ ಇಲ್ಲಿಯವರೆಗೆ ಅಂದಾಜು ಒಂದು ಶತಮಾನದ ಕಾಲಾವಧಿಯಲ್ಲಿ ದೇಶದಲ್ಲಿ ಒಬ್ಬನೆ ಒಬ್ಬ ಬಲಪಂಥೀಯ ಇಂಟಲೆಕ್ಚ್ಯೂವಲ್ ನನ್ನು ಹುಟ್ಟುಹಾಕಲು ಸಾಧ್ಯವಾಗಿಲ್ಲ. ಏಕೆಂದರೆˌ ಅವರ ಉದ್ದೇಶವೂ ಅದಲ್ಲ. ಹಾಗೆಂದು ಸಂಘಿಗಳಲ್ಲಿ ಯಾರೊಬ್ಬ ಅಲ್ಪಸ್ವಲ್ಪ ಬುದ್ದಿವಂತರು ಇಲ್ಲವೆಂಬಲ್ಲ. ಹಾಗೆ ಅವರೊಳಗೆ ಕಾಣಬರುವ ಅಲ್ಲೊಬ್ಬ ಇಲ್ಲೊಬ್ಬ ಬುದ್ದಿವಂತರನ್ನು ಅವರು ಎಂದಿಗೂ ಮುನ್ನೆಲೆಗೆ ತರಲಾರರು. ಒಂದು ವೇಳೆ ಅಕಸ್ಮಾತಾಗಿ ಅವರೊಳಗೊಬ್ಬ ಅಲ್ಪಸ್ವಲ್ಪ ಬುದ್ದಿವಂತ ಹಾಗು ಉದಾರವಾದಿ ಹೊರಹೊಮ್ಮಿದರೆ ಆತನನ್ನು ಅವರು ದ್ವೇಷಿಸುತ್ತಲೆ ಬಳಸಿಕೊಂಡು ಅಧಿಕಾರ ಹಿಡಿಯಬಲ್ಲರು. ಇದಕ್ಕೆ ನಾನು ಒಂದು ಸೂಕ್ತ ಉದಾಹರಣೆಯನ್ನು ಕೊಡಬಲ್ಲೆ. ಸಂಘದ ರಾಜಕೀಯ ಸಂಸ್ಥೆಯಾದ ಜನಸಂಘ ಮತ್ತು ಆಮೇಲೆ ಬಿಜೆಪಿ ಇವು ಆರಂಭದಿಂದ ಅಟಲ್ ಬಿಹಾರಿ ವಾಜಪೇಯಿಯವರನ್ನು ನಾಯಕನೆಂದು ಬಿಂಬಿಸುತ್ತ ಬಂದಿದ್ದನ್ನು ನಾವು ನೋಡಿದ್ದೇವೆ. ವಾಜಪೇಯಿಯವರ ಕವಿತ್ವ ˌ ಭಾಷಣ ಮಾಡುವ ಅನನ್ಯ ಶೈಲಿ ಹಾಗು ಅವರೊಳಗಿನ ಅಲ್ಪಸ್ವಲ್ಪ ತೋರಿಕೆಯ ಉದಾರವಾದ ದೇಶದ ಜನರನ್ನು ಆಕರ್ಶಿಸಿತ್ತು ಹಾಗು ಅವರ ಭಾಷಣ ಕೇಳಲು ಸಾವಿರಾರು ಜನ ಸೇರುತ್ತಿದ್ದರು.
ಅಷ್ಟೊಂದು ಜನಪ್ರೀಯರಾಗಿದ್ದರೂ ಕೂಡ ವಾಜಪೇಯಿ ನಾಯಕತ್ವ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ವಿಫಲವಾಯಿತು. ಆ ಪಕ್ಷವನ್ನು ತಳಮಟ್ಟದಿಂದ ಹಿಂದುತ್ವದ ಪ್ರಚೋದನಕಾರಿ ಅಜೆಂಡಾದ ತಳಹದಿಯ ಮೇಲೆ ಸಂಘಟಿಸಿ ಅಧಿಕಾರಕ್ಕೆ ತಂದವರು ಅಡ್ವಾಣಿ ಎಂಬ ಹಾರ್ಡಕೋರ್ ಹಿಂದುತ್ವವಾದಿ ನಾಯಕ ಎನ್ನುವ ಸಂಗತಿ ಯಾರೊಬ್ಬರೂ ಅಲ್ಲಗಳೆಯಲಾರರು. ಆದರೆˌ ದುರಂತದ ಸಂಗತಿ ಎಂದರೆˌ ಅಡ್ವಾಣಿ ಸಂಘದ ಸ್ಥಾಪಕ ಸಮುದಾಯಕ್ಕೆ ಸೇರಿದವರಲ್ಲದ್ದರಿಂದ ವಾಜಪೇಯಿ ಸುಲಭಲಾಗಿ ಅಧಿಕಾರ ಅನುಭವಿಸಿದರು. ಅದಕ್ಕೆ ಇನ್ನೊಂದು ಮುಖ್ಯ ಕಾರಣವೆಂದರೆˌ ವಾಜಪೇಯಿಯ ಉದಾರವಾದಿ ಮುಖವಾಡ ಬಳಸಿ ಅನೇಕ ಪ್ರಾದೇಶಿಕ ಪಕ್ಷಗಳ ನೆರವು ಪಡೆದು ಅಧಿಕಾರ ಹಿಡಿಯುವ ಸಂಘದ ತಂತ್ರವು ಕೂಡ ಕೆಲಸ ಮಾಡಿದ್ದನ್ನು ನಾವು ಉಪೇಕ್ಷಿಸುವಂತಿಲ್ಲ. ಪ್ರಧಾನಿ ಸ್ಥಾನಕ್ಕೆ ವಾಜಪೇಯಿ ಸಂಘದ ಮೊದಲ ಆಯ್ಕೆ ಹೇಗೊ ಹಾಗೆಯೆ ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷಗಳ ಆಯ್ಕೆಯೂ ವಾಜಪೇಯಿ ಆಗಿದ್ದರು. ಹಾಗಾಗಿ ವಾಜಪೇಯಿ ಆಡಳಿತದಲ್ಲಿ ಸಂಘ ಪ್ರಣೀತ ಹಿಂದುತ್ವದ ಗುಪ್ತ ಅಜೆಂಡಾಗಳನ್ನು ಜಾರಿಗೆ ತರಲು ಮಾಡಿದ ಪ್ರಯತ್ನಗಳು ಸಂಪೂರ್ಣ ಯಶಸ್ಸು ಕಾಣಲಿಲ್ಲ.

ವಾಜಪೇಯಿ ಸ್ವತಃ ತಾನೊಬ್ಬ ಸ್ವಯಂಸೇವಕನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು ಕೂಡ ಸಂಘದ ನಿಯಂತ್ರಣವನ್ನು ಮೀರಿ ನಿಂತ ಹಾಗು ಒಂದಷ್ಟು ಸ್ವಂತಿಕೆ ಹಾಗು ಸಂವೇದನೆಯುಳ್ಳ ನಾಯಕರಾಗಿದ್ದು ಅವರು ಸಂಘ ಹೇಳಿದ್ದನೆಲ್ಲ ಕೇಳುವ ವ್ಯಕ್ತಿಯಾಗಿರಲಿಲ್ಲ. ೧೯೨೫ ರಿಂದ ತಾನಂದುಕೊಂಡದ್ದೆಲ್ಲವೂ ಸಾಧಿಸದು ಆಗದಿದ್ದಕ್ಕೆ ವಾಜಪೇಯಿಯವರ ಉದಾರವಾದವೆ ಕಾರಣವೆನ್ನುವ ಸಂಗತಿ ವಾಜಪೇಯಿ ಆಡಳಿತದ ಕೊನೆಯ ಹಂತದಲ್ಲಿ ಸಂಘದಲ್ಲಿ ನಿರಾಶೆಯನ್ನು ಹುಟ್ಟುಹಾಕಿತ್ತು. ಆ ಕಾರಣದಿಂದಲೆ ಸಂಘ ಆಗ ವಾಜಪೇಯಿˌ ಅಡ್ವಾಣಿˌ ಮುಂತಾದ ಹಿರಿಯ ನಾಯಕರು ಮಾರ್ಗದರ್ಶಕ ಮಂಡಳಿಗೆ ಸೇರಬೇಕೆಂದು ಬಹಿರಂಗ ಹೇಳಿಕೆ ಕೊಟ್ಟಿತ್ತು. ಅದರ ಉದ್ದೇಶ ಸಂಪೂರ್ಣವಾಗಿ ತಾನು ಹೇಳಿದ್ದನ್ನು ಕೇಳುವ ಯುವ ನಾಯಕತ್ವವನ್ನು ಪರ್ಯಾಯವಾಗಿ ಬೆಳೆಸುವುದೆ ಆಗಿತ್ತು ಎಂದು ಬೇರೆ ಹೇಳುವ ಅಗತ್ಯವಿಲ್ಲ. ಅದರ ಫಲಶೃತಿಯೆ ಗುಜರಾತ ಮೂಲದ ನರೇಂದ್ರ ಮೋದಿ ಮತ್ತು ಅಮಿತ್ ಷಾರನ್ನು ಸಂಘ ಮುನ್ನೆಲೆಗೆ ತಂದುˌ ದೇಶದ ಅಧಿಕಾರ ಹಿಡಿದದ್ದು. ಮೋದಿ ಆಡಳಿತದ ಅವಧಿ ಸಂಘದ ಪಾಲಿನ ಅತ್ಯಂತ ಯಶಸ್ಸಿನ ದಿನಗಳು. ಶತಮಾನಗಳಿಂದ ತಾನಂದುಕೊಂಡದ್ದನ್ನು ಮೋದಿ-ಷಾ ಮೂಲಕ ಸಂಘ ಇಂದು ಸಾಧಿಸಿದ್ದನ್ನು ನಾವು ನೋಡುತ್ತಿದ್ದೇವೆ.
ಮೇಲೆ ವಿವರಿಸಿದ ಇಡೀ ವಿಷಯಕ್ಕೆ ಪೂರಕವಾಗಿ ಹಾಗು ಕರ್ನಾಟಕದಲ್ಲಿ ಇಂದಿನ ದಿನಗಳಲ್ಲಿ ಬಹುದೊಡ್ಡ ಚರ್ಚೆಯ ವಿಷಯವಾಗಿರುವ ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಇಲ್ಲಿ ನಾನು ಫ್ಯಾಸಿಷ್ಟರ ಕಾರ್ಯತಂತ್ರದ ವಿದಾನದ ಬಗೆಗಿನ ನನ್ನ ವಿವರಣೆಯನ್ನು ಮುಕ್ತಾಯಗೊಳಿಸುತ್ತೇನೆ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಶಿಕ್ಷಣ ಖಾತೆಯ ಮಂತ್ರಿ ಸಂಘಮೂಲದ ಬ್ರಾಹ್ಮಣ ವ್ಯಕ್ತಿಯೆ ಆಗಿರುವುದು ಕಾಳತಾಳಿಯ ಸಂಗತಿಯಂತೂ ಖಂಡಿತ ಅಲ್ಲ. ಶಾಲಾ ಪಠ್ಯವನ್ನು ಪರಿಷ್ಕರಿಸಲು ಸಂಘ ಹಾಗು ಬಿಜೆಪಿಯ ಪಾಳೆಯದಲ್ಲಿ ತಕ್ಕಮಟ್ಟಿಗೆ ಪ್ರತಿಭಾವಂತರು ಹಾಗು ಸುಶಿಕ್ಷಿತ ಅರ್ಹರು ಸಿಗಲಿಲ್ಲವೆಂದಲ್ಲ. ಆದರೆ ನಾನು ಮೇಲೆ ಹೇಳಿದಂತೆ ಅಂತಹ ಸುಶಿಕ್ಷಿತರನ್ನು ತಂದು ಕೂರಿಸಿ ಸಂಘದ ಉದ್ದೇಶಿತ ಕಾರ್ಯ ಸಾಧಿಸುವುದು ಸುಲಭವಲ್ಲ. ಏಕೆಂದರೆ ವಾಜಪೇಯಿಯಂತೆ ಅಲ್ಪಸ್ವಲ್ಪ ಬುದ್ದಿವಂತರು ತೀರ ಸುಳ್ಳುಗಳನ್ನು ಪಠ್ಯದಲ್ಲಿ ಅಳವಡಿಸಿˌ ಆತನಂತರ ಅದಕ್ಕೆ ಬರುವ ಪ್ರತಿರೋಧಗಳನ್ನು ಭಂಡತನದಿಂದ ಎದುರಿಸುತ್ತ ತಮ್ಮ ಕೃತ್ಯವನ್ನು ಸಮರ್ಥಿಸಲಾರರೆಂದು ಸಂಘದವರಿಗೆ ಚನ್ನಾಗಿ ಗೊತ್ತು. ಹಾಗಾಗಿಯೆ ಇದ್ದವರಲ್ಲಿಯೆ ಬುದ್ದಿವಂತರಾಗಿರುವ ಸಂಘ ಮೆಚ್ಚುವ ಹಾಗು ಸಂಘವನ್ನು ಅವರು ಮೆಚ್ಚುವ ಶಿಕ್ಷಣ ತಜ್ಞರನ್ನು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಗೆ ನೇಮಿಸದೆ ಧರ್ಮಾಂಧತೆಯೊಂದನ್ನು ಬಿಟ್ಟು ಬೇರಾವ ವಿಷಯದಲ್ಲೂ ಪರಿಣತನಲ್ಲದ ರೋಹಿತ್ ಚಕ್ರತೀರ್ಥನೆಂಬ ಆಗುಂತಕ ಮತ್ತು ವಿಕೃತ ಮನಸ್ಥಿತಿಯ ಆಸಾಮಿಯನ್ನು ಸಮಿತಿಯ ಮುಖ್ಯಸ್ಥನನ್ನಾಗಿ ಏಕೆ ಮಾಡಲಾಯಿತು ಎಂದು ತಮಗೆಲ್ಲ ಈಗ ತಿಳಿಯಿತು ಅಂದುಕೊಳ್ಳುತ್ತೇನೆ.
ಪುಂಡರ ಬಗೆಗಿನ ಫ್ಯಾಸಿಷ್ಟರ ವಿಶೇಷ ಒಲವು ಮತ್ತು ಪುಂಡರ ಮೂಲಕ ಅವರು ತಮ್ಮ ಫ್ಯಾಸಿಷ್ಟ ಸಿದ್ಧಾಂತಗಳ ಪ್ರಚಾರˌ ಪ್ರಸಾರˌ ಅನುಷ್ಟಾನಗಳನ್ನು ಹೇಗೆ ಮಾಡಿಸುತ್ತಾರೆ ಎನ್ನುವ ವಿಷಯದ ಮೇಲೆ ಪ್ರತಿಷ್ಟಿತ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಆಗಬೇಕಿದೆ. ಅದಷ್ಟೆ ಅಲ್ಲದೆ ಫ್ಯಾಸಿಷ್ಟರ ವಂಶವಾಹಿನಿಯಲ್ಲಿ ಇಂಟಲೆಕ್ಚ್ಯೂವಲ್ ಜೀನ್ಸ್ ಏಕೆ ಕಾಣಸಿಗುವುದಿಲ್ಲ ಹಾಗು ಫ್ಯಾಸಿಷ್ಟರಿಗೆ ಚಿಂತಕರುˌ ಬುದ್ದಿಜೀವಿಗಳುˌ ವಿಚಾರವಂತರನ್ನು ಕಂಡರೆ ಭಯˌ ದ್ವೇಷಗಳೇಕೆ ಎನ್ನುವ ಕುತೂಹಲಕಾರಿ ವಿಷಯದ ಮೇಲೂ ಕೂಡ ಸಾಕಷ್ಟು ಸಂಶೋಧನೆಯ ಅಗತ್ಯವಿದೆ ಅನ್ನುವುದು ನನ್ನ ಅಭಿಮತವಾಗಿದೆ. ಇದನ್ನು ನೀವೂ ಕೂಡ ಅನುಮೋದಿಸುತ್ತೀರಿ ಎಂದು ಆಶಿಸುತ್ತೇನೆ.