ಬೆಂಗಳೂರು:ಮಾ.17: ಭಾರತೀಯ ಜನತಾ ಪಾರ್ಟಿಯಲ್ಲಿ ಯಡಿಯೂರಪ್ಪ ಅವರನ್ನು ತೆರೆಮರೆಗೆ ಸರಿಸಲಾಗ್ತಿದೆ ಅನ್ನೋ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅದಾದ ಬಳಿಕ ಯಡಿಯೂರಪ್ಪ ಹಾಗು ಬಿ.ವೈ ವಿಜಯೇಂದ್ರಗೆ ಪಕ್ಷದಲ್ಲಿ ಅವಕಾಶ ಕೊಡಲಾಗಿತ್ತು. ಅದಾದ ಬಳಿಕ ಯಡಿಯೂರಪ್ಪ ವರ್ಸಸ್ ವಿ ಸೊಮಣ್ಣ ಕುಟುಂಬದ ನಡುವೆ ಜಟಾಪಟಿ ಶುರುವಾಗಿದೆ. ಯಡಿಯೂರಪ್ಪ ಹಾಗು ವಿಜಯೇಂದ್ರ ಎಲ್ಲದಕ್ಕೂ ಮೂಗು ತೂರಿಸ್ತಾರೆ ಅನ್ನೋ ವಿಚಾರವಾಗಿ ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿ ಚಾಮರಾಜನ ನಗರದಲ್ಲಿ ಶುರುವಾದ ವಿಜಯ ಸಂಕಲ್ಪ ಯಾತ್ರೆ ಉದ್ಘಾಟನಾ ಸಮಾರಂಭಕ್ಕೆ ಗೈರು ಹಾಜರಾಗಿದ್ದರು. ರಾಷ್ಟ್ರೀಯ ಅಧ್ಯಕ್ಷರು ಭಾಗಿಯಾಗಿದ್ದ ಕಾರ್ಯಕ್ರಮದಿಂದ ಉಸ್ತುವಾರಿ ಸಚಿವರೇ ಗೈರಾಗಿದ್ದರು ಅಸಮಾಧಾನದ ಹೊಗೆಗೆ ತುಪ್ಪ ಸುರಿದಂತೆ ಆಗಿತ್ತು. ಆ ಬಳಿಕ ಸಾಕಷ್ಟು ವಾಕ್ಸಮರಗಳು ನಡೆದು ಅಂತಿಮವಾಗಿ ದೆಹಲಿ ಅಂಗಳಕ್ಕೆ ತೆರಳಿದ್ದರು ಸೋಮಣ್ಣ.
ಇಲಾಖೆ ಕೆಲಸದ ಮೇಲೆ ದೆಹಲಿಗೆ ಅಂದಿದ್ದ ಸೋಮಣ್ಣ..
ಸಚಿವ ವಿ.ಸೋಮಣ್ಣ ದೆಹಲಿಗೆ ತೆರಳುವ ವೇಳೆ ನಾನು ಇಲಾಖೆಗೆ ಸಂಬಂಧಿಸಿದ ಕೆಲಸಕ್ಕಾಗಿ ದೆಹಲಿಗೆ ಬಂದಿದ್ದೇನೆ ಎಂದಿದ್ದರು. ಇತ್ತ ಕರ್ನಾಟಕದಲ್ಲಿ ಮಾತನಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಸಚಿವ ಸೋಮಣ್ಣಗೆ ಯಾವುದೇ ಅಸಮಾಧಾನ ಇಲ್ಲ. ಅವರು ಇಲಾಖೆ ಕೆಲಸದ ಮೇಲೆ ದೆಹಲಿಗೆ ಹೋಗಿದ್ದಾರೆ ಎಂದಿದ್ದರು. ಆದರೆ ಸೋಮಣ್ಣ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಪಕ್ಷದಲ್ಲಿ ಯಡಿಯೂರಪ್ಪ ಹಾಗು ಬಿ.ವೈ ವಿಜಯೇಂದ್ರರಿಂದ ನನಗೆ ಸಮಸ್ಯೆ ಆಗುತ್ತಿದೆ. ಎಲ್ಲಾ ವಿಚಾರದಲ್ಲೂ ಮೂಗು ತೂರಿಸುವ ಕೆಲಸ ಮಾಡ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಹಾವೇರಿಯಲ್ಲಿ ಮಾತನಾಡಿದ್ದ ಬಿ.ವೈ ವಿಜಯೇಂದ್ರ ಯಡಿಯೂರಪ್ಪ ಬಗ್ಗೆ ಮಾತನಾಡುವಾಗ ಹುಷಾರ್..! ಎಂದು ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ವಿಜಯೇಂದ್ರ ಬೆಳವಣಿಗೆಗೆ ಏನು ಮಾಡ್ಬೇಕೋ ಅದ್ರು ಕಡೆಗೆ ಗಮನ ಕೊಡಲಿ ಎಂದು ಸೋಮಣ್ಣ ಟಾಂಟ್ ಕೊಟ್ಟಿದ್ದರು.
‘ದೆಹಲಿ ವರಿಷ್ಠರು ಸೋಮಣ್ಣ ಜೊತೆಗೆ ಚರ್ಚಿಸಿದ್ದಾರೆ’
ನಾನು ಇಲಾಖೆ ಕೆಲಸದ ಮೇಲೆ ಹೋಗ್ತಿದ್ದೀನಿ ಎಂದಿದ್ದ ಸೋಮಣ್ಣ, ನಮಗೆ ಯಡಿಯೂರಪ್ಪ ಅವರೇ ನಾಯಕರು ಎಂದು ತೇಪೆ ಸಾರಿಸುವ ಕೆಲಸ ಮಾಡಿದ್ದರು. ಆದರೆ ಸೋಮಣ್ಣ ಅಸಮಾಧಾನದ ಬಗ್ಗೆ ಯಡಿಯೂರಪ್ಪ ಅವರನ್ನು ಪತ್ರಕರ್ತರು ಪ್ರಶ್ನೆ ಮಾಡ್ತಿದ್ದ ಹಾಗೆ ದೆಹಲಿಯಲ್ಲಿ ಹೈಕಮಾಂಡ್ ನಾಯಕರು ಕರೆದು ಮಾತನಾಡಿದ್ದಾರೆ. ಯಾವುದೇ ಸಮಸ್ಯೆ ಇಲ್ಲ ಎನ್ನುವ ಮೂಲಕ ಹೈಕಮಾಂಡ್ ನಾಯಕರ ಬಳಿಗೆ ಹೋಗಿದ್ದು ದೂರು ದುಮ್ಮಾನ ಹೇಳಿಕೊಳ್ಳಲು ಎನ್ನುವುದನ್ನು ಬಹಿರಂಗ ಮಾಡಿದ್ದರು. ಇದರ ನಡುವೆ ಚಿಕ್ಕಮಗಳೂರು ಪ್ರವಾಸ ಮಾಡುತ್ತಿದ್ದ ಬಿ.ಎಸ್ ಯಡಿಯೂರಪ್ಪಗೆ ಮೂಡಿಗೆರೆಯಲ್ಲಿ ಬಿಜೆಪಿ ನಾಯಕರೇ ಧಿಕ್ಕಾರದ ಸುರಿಮಳೆ ಸುರಿಸಿದ್ದಾರೆ. ಎಂ.ಪಿ ಕುಮಾರಸ್ವಾಮಿಗೆ ಟಿಕೆಟ್ ನೀಡಬಾರದು ಅಂತಾ ಕಾರು ತಡೆದು ಪ್ರತಿಭಟಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಎದುರಲ್ಲೇ ಘಟನೆ ನಡೆದಿದೆ ಎನ್ನುವುದು ವಿಶೇಷ.
ಬಿಜೆಪಿ ವರ್ಸಸ್ ಬಿಎಸ್ವೈ ಅಂಡ್ ಸಿಎಂ
ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಬಿಟ್ಟು ಹೋದರೆ ಗೆಲ್ಲುವ ಸಾಮರ್ಥ್ಯ ಯಾರಿಗೆ ಇದೆ ಎನ್ನುವ ಮೂಲಕ ವಿಜಯೇಂದ್ರ ಸ್ವತಃ ಬಿಜೆಪಿ ಪಕ್ಷಕ್ಕೇ ಚಾಲೆಂಜ್ ಹಾಕುತ್ತಾರೆ. ಮತ್ತೊಂದು ಕಡೆ B.S ಯಡಿಯೂರಪ್ಪ ಟೀಕಿಸುವ ಉದ್ದೇಶಕ್ಕೆ ಒಂದು ತಂಡವನ್ನೇ ‘ಸಂತೋಷ ಕೂಟ’ ತಯಾರು ಮಾಡಿದೆ. ಆ ತಂಡದ ಪ್ರಮುಖ ವಕ್ತಾರರು ಬಸನಗೌಡ ಪಾಟೀಲ್ ಯತ್ನಾಳ್ ಹಾಗು ಸಿಟಿ ರವಿ ಎಂದು ಟೀಕಿಸಿದೆ. ಬಿಜೆಪಿಯಲ್ಲಿ B.S ಯಡಿಯೂರಪ್ಪ ನಾಯಕತ್ವವನ್ನು ಪ್ರಶ್ನಿಸುತ್ತಿರುವವರು ಯಾರು..? ವಿಜಯೇಂದ್ರ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ..? ಜೊತೆಗೆ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲು ಶತಪ್ರಯತ್ನ ನಡೆಸುತ್ತಿರುವವರು ಯಾರು..? ಎಂದು ಟ್ವಿಟ್ಟರ್ನಲ್ಲಿ ಕುಟುಕಿದೆ. ಇನ್ನು ಬಸವರಾಜ ಬೊಮ್ಮಾಯಿ ಅವರಿಗೆ ಶಿಗ್ಗಾಂವಿ ಟಿಕೆಟ್ ಸಿಗುತ್ತೋ ಇಲ್ವೋ ಅನ್ನೋ ಬಗ್ಗೆ ಬಿಜೆಪಿ ಸಂಸದ ಸಿದ್ದೇಶ್ವರ್ ಹೇಳಿಕೆ ನೀಡಿದ್ದಾರೆ. ಬಿಜೆಪಿಯಲ್ಲಿ ಪ್ರಮುಖ ನಾಲ್ಕೈದು ಶಾಸಕರಿಗೆ ಟಿಕೆಟ್ ಸಿಗಲ್ಲ ಎನ್ನುವ ಮಾತನ್ನು ಯಡಿಯೂರಪ್ಪ ಹೇಳಿದ್ದರು. ಆ ನಾಲ್ವರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಸೇರಿದ್ದಾರಾ..? ಎನ್ನುವ ಅನುಮಾನ ಮೂಡುವಂತೆ ಮಾಡಿದೆ. ಇದೆಲ್ಲವನ್ನೂ ನೋಡಿದಾಗ ಬಿಜೆಪಿಯಲ್ಲಿ ಏನಾಗ್ತಿದೆ ಎಂದು ಕಾರ್ಯಕರ್ತರು ಪ್ರಶ್ನಿಸುವಂತಾಗಿದೆ.
—-ಕೃಷ್ಣಮಣಿ——