ಬಜೆಟ್ ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾದ ಹಣದಲ್ಲಿ ಕಡಿಮೆ ಮಾಡಲಾಗಿದೆ. ಇರುವ ಹಣವನ್ನು ಬೇರೆ ಯೋಜನೆಗೆ ವರ್ಗಾಯಿಸಲಾಗಿದೆ. ಆದರೂ ದಲಿತ ಸಮುದಾಯಕ್ಕೆ ಅನ್ಯಾಯ ಆಗುತ್ತಿದ್ದರೂ ದಲಿತ ಶಾಸಕರು ಮತ್ತು ಸಂಸದರು ಮೌನವಾಗಿರುವುದಕ್ಕೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ಮೈಸೂರಿನಲ್ಲಿ ಶನಿವಾರ “ಸಿದ್ದರಾಮಯ್ಯ ಆಡಳಿತ: ನೀತಿ ನಿರ್ಧಾರಗಳು” ಪುಸ್ತಕ ಬಿಡುಗಡೆ ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ದಲಿತ ಸಮುದಾಯಕ್ಕೆ ಅನ್ಯಾಯ ಆಗಿದ್ದರೂ ಅದರ ನಾಯಕರು ಮೌನವಾಗಿದ್ದರೆ. ಹಾಗಿದ್ದರೂ ಅವರಿಗೆ ಯಾಕೆ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಿರಿ ಎಂದು ಪ್ರಶ್ನಿಸಿದರು.
ದಲಿತ ಸಮುದಾಯದಿಂದ ನಾಯಕರಿಗೆ ಗೌರವ ಕೊಡೋಣ. ಆದರೆ ಅವರು ತಮ್ಮ ಸಮುದಾಯಕ್ಕೆ ಅನ್ಯಾಯ ಆಗುತ್ತಿದ್ದರೂ ಧ್ವನಿ ಎತ್ತುತ್ತಿಲ್ಲ ಎಂದಾಗ ಅವರನ್ನು ಪ್ರಶ್ನಿಸುವುದು ಬಿಟ್ಟು ಜಿಂದಾಬಾದ್ ಎಂದು ಹೇಳುವುದು ಸರಿಯೇ? ಎಂದು ಪ್ರಶ್ನಿಸಿದರು.
ಬಜೆಟ್ ನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಕನಿಷ್ಠ ೪೦ ಸಾವಿರ ಕೋಟಿ ರೂ. ಮೀಸಲಿಡಬೇಕಿತ್ತು. ಆದರೆ ಈಗ ಇರುವುದು ೨೬ ಸಾವಿರ ಕೋಟಿ ರೂ. ಮಾತ್ರ. ಸುಮಾರು ೧೬ ಸಾವಿರ ಕೋಟಿ ರೂ. ಕಡಿತ ಮಾಡಲಾಗಿದೆ. ದಲಿತ ಸಮುದಾಯಕ್ಕೆ ಮೀಸಲಿಟ್ಟ ಹಣ ಬೇರೆ ಇಲಾಖೆ ಬಳಸುವಂತಿಲ್ಲ ಎಂಬ ಕಾನೂನು ಇದ್ದರೂ ೭೭೮೫ ಕೋಟಿ ರೂ.ವನ್ನು ಬೇರೆ ಕಡೆ ವರ್ಗ ಮಾಡಲಾಗಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಗುತ್ತಿಗೆಯಲ್ಲೂ ಮೀಸಲಾತಿ ನೀಡಿದೆವು. ಈ ಬಗ್ಗೆ ಕಾನೂನು ತಂದ ನಮ್ಮ ಸರಕಾರ ದೇಶದಲ್ಲೇ ಮೊದಲು. ಈಗಲೂ ಕರ್ನಾಟಕ ಬಿಟ್ಟು ದೇಶದ ಯಾವುದೇ ರಾಜ್ಯದಲ್ಲೂ ಜಾರಿಗೆ ತಂದಿಲ್ಲ. ಆದರೂ ದಲಿತ ಸಮುದಾಯಗಳು ಕಾಂಗ್ರೆಸ್ ಸರಕಾರವನ್ನು ಕಡೆಗಣಿಸಿದವು ಎಂದರು.
ನಾವು ಹಿಂದೂ ವಿರೋಧಿ ಅಂತೆ. ನಾನು ಯಾವಾಗ ಹಿಂದೂ ವಿರೋಧಿ ಕೆಲಸ ಮಾಡಿದ್ದೇನೆ. ಅಂದರೆ ನೀವು ಮುಸ್ಲಿಂ ಪರ ಅಂತೆ. ಸಂವಿಧಾನ ಆಶಯದಂತೆ ನಾನು ಕೆಲಸ ಮಾಡಿದ್ದೇನೆ. ಮಾಡುತ್ತೇನೆ. ಹಾಗೆ ಮಾಡಿದರೆ ಹಿಂದೂ ವಿರೋಧಿ ಹೇಗೆ ಆಗುತ್ತದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಪಠ್ಯಪುಸ್ತಕದಲ್ಲಿ ಸಂವಿಧಾನ ಶಿಲ್ಪಿ ಎಂಬ ಹೆಸರೇ ತೆಗೆದು ಹಾಕಿದರು. ಇದನ್ನು ಕೂಡ ಯಾರೂ ಪ್ರತಿಭಟಿಸಲಿಲ್ಲ. ಜನರು ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಆಲೋಚಿಸುವ ಶಕ್ತಿ ಕಳೆದುಕೊಂಡಿದ್ದಾರೆಯೇ ಎಂಬ ಅನುಮಾನ ಕಾಡತೊಡಗಿದೆ ಎಂದು ಅವರು ವಿಷಾದಿಸಿದರು.
ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪುಸ್ತಕವನ್ನು ಬಿಡುಗಡೆ ಮಾಡಿದರು. ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮೀಜಿ, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಸೋಮನಾಥ ಸ್ವಾಮೀಜಿ, ಶ್ರೀ ಶಿವಾನಂದಪುರಿ ಸ್ವಾಮೀಜಿ, ಮಾಜಿ ಸಚಿವರಾದ ಡಾ. ಎಚ್.ಸಿ. ಮಹಾದೇವಪ್ಪ, ಬಿ.ಎಲ್. ಶಂಕರ್ ಸೇರಿದಂತೆ ಅನೇಕ ಗಣ್ಯರು ಸೇರಿದಂತೆ ಸಿದ್ದರಾಮಯ್ಯ ಅವರ ಆಪ್ತ ಬಳಗ ಸಮಾರಂಭದಲ್ಲಿ ಹಾಜರಿದ್ದರು.


