ಶಿಸ್ತಿನ ಪಕ್ಷ ಎನಿಸಿಕೊಳ್ಳುವ ಬಿಜೆಪಿಯೊಳಗೆ ಏನೂ ಸರಿಯಿಲ್ಲ ಎನ್ನುವಂತಾಗಿದೆ. ಪಕ್ಷದಲ್ಲಿ ಒಳಬೇಗುದಿ ಭುಗಿಲೆದ್ದಿದ್ದು, ನಾಲ್ಕು ಗೋಡೆ ನಡುವೆ ನಡೆಯುತ್ತಿದ್ದ ಜಗಳ ಇದೀಗ ಹಾದಿ-ಬೀದಿ ರಂಪಾಟವಾಗಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಎಲ್ಲರೂ ಒಟ್ಟೊಟ್ಟಿಗೇ ಸಿಡಿಯುತ್ತಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ವಿಜಯೇಂದ್ರ ಹಿಂದೆ ಮುಂದೆ ಓಡಾಡುತ್ತ ಕೆಲಸ ಮಾಡಿಸಿಕೊಳ್ಳುತ್ತಿದ್ದ ನಾಯಕರೂ ವಿಜಯೇಂದ್ರ ವಿರುದ್ಧ ಮಾತಿನ ಸಮರ ಸಾರುತ್ತಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ರಾಜ್ಯಾಧ್ಯಕ್ಷ ಚುನಾವಣೆಗೂ ಮುನ್ನ ಮಂಡಲ ಅಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರುಗಳ ನೇಮಕ ಆಗಿರುವ ಬೆನ್ನಲ್ಲೇ ಆಕ್ರೋಶದ ಕಟ್ಟೆ ಒಡೆದಿದೆ. ನಳಿನ್ ಕುಮಾರ್ ಕಟೀಲ್ ಅವಧಿಯಲ್ಲಿ ನೇಮಕ ಆಗಿದ್ದವರ ಅವಧಿ ಮುಕ್ತಾಯವಾಗಿದ್ದು, ಆ ಜಾಗಕ್ಕೆ ಮಾತ್ರ ಹೊಸದಾಗಿ ನೇಮಕ ಮಾಡಲಾಗಿದೆ. ಒಟ್ಟು 23 ಜಿಲ್ಲಾಧ್ಯಕ್ಷರ ನೇಮಕ ಮಾಡಿದ್ದು, ಬೆಂಗಳೂರಿನ ಮೂವರು ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಹಾಲಿ ಅಧ್ಯಕ್ಷರನ್ನೇ ಮುಂದುವರಿಸಲಾಗಿದೆ. ಹೀಗಾಗಿ ವಿಜಯೇಂದ್ರ ತಮಗೆ ಬೇಕಾದವರನ್ನು ನೇಮಕ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸಣ್ಣಪುಟ್ಟ ನಾಯಕರು ಸಿಡಿಯುತ್ತಿರುವುದು ಒಂದು ಕಡೆ ಆದರೆ, ಬಿಜೆಪಿಯ ಹಿರಿಯ ನಾಯಕರು ಸಭೆ ಮಾಡಿದ್ದಾರೆ. ಪ್ರತಿಪಕ್ಷ ನಾಯಕ ಆರ್. ಅಶೋಕ್, ಡಾ. ಸಿ.ಎನ್ ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ ಹಾಗೂ ಮಾಜಿ ಮುಖ್ಯಮಂತ್ರಿ ಡಿ. ವಿ ಸದಾನಂದಗೌಡ ನೇತೃತ್ವದಲ್ಲಿ ಸಭೆ ಮಾಡಿದ್ದಾರೆ ಎನ್ನಲಾಗಿದೆ. ಇವರು ಪ್ರತ್ಯೇಕ ಸಭೆ ಮಾಡಿದ್ರೆ ಯತ್ನಾಳ್, ರಾಮುಲು ಆ ಬಳಿಕ ಸಂಸದ ಡಾ. ಕೆ. ಸುಧಾಕರ್ ಸಿಡಿದೆದ್ದಿದ್ದಾರೆ. ಜಿಲ್ಲಾಧ್ಯಕ್ಷರ ನೇಮಕದಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ ಎಂದರೂ ಬಿಜೆಪಿ ನಾಯಕರು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ.
ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ವಿಜಯೇಂದ್ರ ಜೊತೆಗೆ ಉತ್ತಮ ಸಂಬಂಧ ಇಟ್ಟುಕೊಂಡು ಕೆಲಸ ಕಾರ್ಯ ಮಾಡಿಸಿಕೊಳ್ತಿದ್ದ ನಾಯಕರು ಹಾಗು ಸಚಿವರಾಗಿ ಕೆಲಸ ಮಾಡ್ತಿದ್ದವರು ಇದೀಗ ವಿಜಯೇಂದ್ರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಅಂದ್ರೆ ಹೈಕಮಾಂಡ್ ನಾಯಕರು. ಬಿಜೆಪಿ ಹೈಕಮಾಂಡ್ ನಾಯಕರು ಉದ್ದೇಶ ಪೂರ್ವಕವಾಗಿಯೇ ಯತ್ನಾಳ್ ಅಂಡ್ ಗ್ಯಾಂಗ್ ಎತ್ತಿಕಟ್ಟುತ್ತಿದ್ದಾರೆ ಎಂದು ವಿಜಯೇಂದ್ರ ಆಪ್ತರು ಗುಡುಗುತ್ತಿದ್ದಾರೆ. ಯತ್ನಾಳ್ ಅಂಡ್ ಟೀಂ ಬೇಕಾಬಿಟ್ಟಿಯಾಗಿ ಮಾತನಾಡುತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದೆ ಬೇರೆ ಸಂದೇಶವನ್ನೇ ಕಳುಹಿಸುತ್ತಿದ್ದಾರೆ ಎನ್ನಲಾಗಿದೆ.