ತಾಂತ್ರಿಕ ಪ್ರಗತಿಗಳು ಜಗತ್ತನ್ನು ನಮ್ಮ ಬೆರಳ ತುದಿಯಲ್ಲಿ ತಂದಿರಿಸಿದೆ. ದಂಡಿಯಾಗಿ ಸಿಗುವ ಮಾಹಿತಿ, ಅವಕಾಶ, ಸವಲತ್ತುಗಳು ಡಿಜಿಟಲೀಕರಣದ ಕೊಡುಗೆ. ನಮ್ಮ ಫೋನ್ ಅಥವಾ ಕಂಪ್ಯೂಟರ್‌ನಿಂದ ಪೂರ್ತಿ ಜಗತ್ತಿನೊಡನೆ ಸಂವಹನ ನಡೆಸಬಹುದು. ಆದರೆ ಪ್ರತಿದಿನ ಹೆಚ್ಚು ಹೆಚ್ಚು ಡಿಜಿಟಲ್ ಸೇವೆಗಳನ್ನು ಬಳಸುವುದರಿಂದ, ಡೇಟಾ ಉತ್ಪಾದನೆ ಮತ್ತು ನಿರ್ವಹಣೆಗೆ ಹೊಸ ಪರಿಹಾರಗಳು ಬೇಕಾಗುತ್ತವೆ. ಪ್ರಸ್ತುತ ಡಾಟಾವನ್ನು ಹಲವಾರು ಫುಟ್ಬಾಲ್ ಮೈದಾನಗಳ ಗಾತ್ರದ ಎಕ್ಸಬೈಟ್ ಡಾಟಾ ಕೇಂದ್ರಗಳಲ್ಲಿ ಸಂಗ್ರಹಿಸಲಾಗುತ್ತಿದೆ, ಇದನ್ನು ನಿರ್ಮಿಸಲು ಮತ್ತು ನಿರ್ವಹಿಸಲು ಸುಮಾರು ಬಿಲಿಯನ್ ವೆಚ್ಚವಿದೆ. ಇದೀಗ ವಿಜ್ಞಾನಿಗಳು ಈ ಸಮಸ್ಯೆಗೆ ಹೊಸ ಪರಿಹಾರವನ್ನು ಪ್ರಸ್ತಾಪಿಸಿದ್ದು ಒಂದು ಮಗ್ ನಷ್ಟು ಡಿಎನ್ಎಗಳು ಇಡೀ ಜಗತ್ತಿನ ಡಾಟಾವನ್ನು ಸಂಗ್ರಹಿಸಿಡಲು ಸಾಕು ಎಂದಿದ್ದಾರೆ.

ನಮ್ಮ ಅನುವಂಶಿಕ ಮಾಹಿತಿಗಳನ್ನು ಅತಿ ಚಿಕ್ಕ ಸ್ಪೇಸ್‌ನಲ್ಲಿ ಸಂಗ್ರಹಿಸಿಡುವ ಡಿಎನ್ಎಗಳು ಜಗತ್ತಿನ ಡಾಟಾವನ್ನೂ ಸಂಗ್ರಹಿಸಿಡುವ ಸಾಮರ್ಥ್ಯ ಹೊಂದಿದೆ ಎನ್ನುವುದು ವಿಜ್ಞಾನಿಗಳ ನಂಬಿಕೆ.
ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಜೈವಿಕ ಎಂಜಿನಿಯರಿಂಗ್ ಪ್ರಾಧ್ಯಾಪಕ ಮಾರ್ಕ್ ಬಾಥೆ, “ನೀವು ಡಿಎನ್‌ಎಯನ್ನು ಬರೆಯಬಹುದು ಮತ್ತು ನಂತರ ಅದನ್ನು ಶಾಶ್ವತವಾಗಿ ಸಂಗ್ರಹಿಸಬಹುದು” ಎಂದು ಹೇಳಿದ್ದಾರೆ.
“ಜಗತ್ತು ಸಂಗ್ರಹಿಸುತ್ತಿರುವ ಈ ಬೃಹತ್ ಪ್ರಮಾಣದ ಡಾಟಾವನ್ನು ಸಂಗ್ರಹಿಸಲು ನಮಗೆ ಹೊಸ ಪರಿಹಾರಗಳು ಬೇಕಾಗುತ್ತವೆ, ವಿಶೇಷವಾಗಿ ಆರ್ಕೈವಲ್ ಡೇಟಾವನ್ನು” ಎಂದು ನೇಚರ್ ಮೆಟೀರಿಯಲ್ಸ್ ಜರ್ನಲ್ನಲ್ಲಿ ಪ್ರಕಟವಾದ ಲೇಖನದಲ್ಲಿ ಬಾಥೆ ಹೇಳಿದ್ದಾರೆ.

ವಿಜ್ಞಾನಿಗಳು ಈಗಾಗಲೇ ಕಂಡುಕೊಂಡಿರುವ ಹಾಗೆ ಚಿತ್ರಗಳು ಮತ್ತು ಪಠ್ಯಗಳನ್ನು ಡಿಎನ್‌ಎಯಲ್ಲಿ ಕೋಡ್ ಮಾಡಬಹುದು. ಸಿಲಿಕಾದ 6-ಮೈಕ್ರೊಮೀಟರ್ ಭಾಗವನ್ನು ಸಣ್ಣ ಡಿಎನ್‌ಎ ಅನುಕ್ರಮಗಳೊಂದಿಗೆ ಲೇಬಲ್ ಮಾಡಲಾಗಿದ್ದು, ಅದು ಡೇಟಾ ಫೈಲ್‌ಗಳೊಂದಿಗೆ ಸುತ್ತುವರಿಯಲ್ಪಟ್ಟಿದೆ.
ಡಿಎನ್‌ಎ ಅನುಕ್ರಮಗಳಾಗಿ ಸಂಗ್ರಹವಾಗಿರುವ 20 ಚಿತ್ರಗಳ ಗುಂಪಿನಿಂದ ನಮಗೆ ಬೇಕಾಗಿರುವ ಒಂ್ಉ ಚಿತ್ರವನ್ನು ಹೊರತೆಗೆಯಲು ಇದು ನಮಗೆ ಅವಕಾಶ ನೀಡುತ್ತದೆ. ಪ್ರಸ್ತುತ ಈ ಮಾದರಿಯಲ್ಲಿ ಒಂದು ಪೆಟಾಬೈಟ್ (1000 ಟಿಬಿ) ಡೇಟಾವನ್ನು ಬರೆಯಲು ಟ್ರಿಲಿಯನ್ ವೆಚ್ಚವಾಗಲಿದೆ. ಈ ತಂತ್ರಜ್ಞಾನದಲ್ಲಿನ ಅತಿಯಾದ ವೆಚ್ಚವೇ ಇದರ ಮುಖ್ಯ ಅಡಚಣೆಯಾಗಿದೆ. ಆದರೆ ಒಂದು ಅಥವಾ ಎರಡು ದಶಕಗಳಲ್ಲಿ ವೆಚ್ಚ ಕುಸಿಯುತ್ತದೆ ಎಂದು ಬಾಥೆ ಆಶಾವಾದ ವ್ಯಕ್ತಪಡಿಸುತ್ತಾರೆ.

ಪ್ರತಿ ನ್ಯೂಕ್ಲಿಯೋಟೈಡ್ ಅಥವಾ ನ್ಯೂಕ್ಲಿಯಿಕ್ ಆ್ಯಸಿಡ್‌ನ ಮೂಲ ಬಿಲ್ಡಿಂಗ್ ಬ್ಲಾಕ್, ಎರಡು ಬಿಟ್‌ಗಳಿಗೆ ಸಮಾನವಾಗಿರುತ್ತದೆ. ಅಂದರೆ ಸುಮಾರು 1 ಘನ ನ್ಯಾನೊಮೀಟರ್‌ಗೆ ಸಮವಾಗಿರುತ್ತದೆ. ಇದರರ್ಥ ಎಕ್ಸಬೈಟ್ ಡಾಟಾವನ್ನು ನಮ್ಮ ಅಂಗೈಗೆ ಸಮಾನವಾದ ಜಾಗದಲ್ಲಿ ಸಂಗ್ರಹಿಸಿಡಬಹುದು. ಹಾಗಾಗಿಯೇ ಅನುವಂಶಿಕ ಮಾಹಿತಿಯನ್ನು ಶೇಕರಿಸಿಡುವ ಡಿಎನ್ಎ ನಮ್ಮ ಡಾಟಾ ಬ್ಯಾಂಕ್ ಆಗಿ ಕಾರ್ಯ ನಿರ್ವಹಿಸುವ ದಿನಗಳು ದೂರವಿಲ್ಲ ಎಂದು ನಿಸ್ಸಂದೇಹವಾಗಿ ಹೇಳಬಹುದು.