2023ರ ಕರ್ನಾಟಕ ವಿಧಾನಸಭೆಯ ಫಲಿತಾಂಶ ಹೊರಬಿದ್ದಿದೆ. ರಾಜ್ಯಾದ್ಯಂತ ಕಾಂಗ್ರೆಸ್ ಬಹುಮತ ಪಡೆದು ಭರ್ಜರಿ ಜಯ ಕಂಡಿದೆ. ಈ ಬೆನ್ನಲ್ಲೇ ಸಿಎಂ ಯಾರಾಗಲಿದ್ದಾರೆಂಬ ಕುತೂಹಲ ಹೆಚ್ಚಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರೂ ಪ್ರಬಲ ಆಕಾಂಕ್ಷಿಗಳಾಗಿರೋದ್ರಿಂದ ಈ ಇಬ್ಬರಲ್ಲಿ ಮುಖ್ಯಮಂತ್ರಿ ಯಾರಾಗ್ತಾರೆ ಎಂಬ ಕುತೂಹಲ ರಾಜ್ಯದಲ್ಲಿ ಹೆಚ್ಚಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ಗೊಂದಲಗಳಿದ್ದವು. ನಂತರ ಅವರು ವರುಣಾ ಕ್ಷೇತ್ರದಿಂದ ಕಣಕ್ಕಿಳಿದು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣನವರನ್ನು ಹೀನಾಯವಾಗಿ ಸೋಲಿಸಿ, ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದೀಗ ವರುಣಾ ಕ್ಷೇತ್ರದಿಂದ ಕಣಕ್ಕಿಳಿದು ಗೆದ್ದಿರುವ ಸಿದ್ದರಾಮಯ್ಯನವರಿಗೆಯೇ ಕಾಂಗ್ರೆಸ್ ಹೈಕಮಾಂಡ್ ಆದ್ಯತೆ ಎಂದು ಹೇಳಲಾಗ್ತಿದೆ.

ಇನ್ನು ಕಾಂಗ್ರೆಸ್ನ ಟ್ರಬಲ್ ಶೂಟರ್ ಎಂದೇ ಹೆಸರುವಾಸಿಯಾಗಿರುವ ಡಿಕೆ ಶಿವಕುಮಾರ್ ಅವರು ಬಿಜೆಪಿ ಅಭ್ಯರ್ಥಿ ಕಂದಾಯ ಸಚಿವ ಆರ್.ಅಶೋಕ್‌ರನ್ನು ನಿರಾಯಾಸವಾಗಿ ಸೋಲಿಸುವ ಮೂಲಕ ತಮ್ಮ ಭದ್ರಕೋಟೆ-ಕನಕಪುರವನ್ನು ಉಳಿಸಿಕೊಂಡಿದ್ದಾರೆ. ‘ಕನಕಪುರ ಬಂಡೆ’ ಎಂದೇ ಖ್ಯಾತರಾಗಿರುವ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ. ಇವರಲ್ಲಿ ಯಾರು ಸಿಎಂ ಆಗ್ತಾರೆ ಅಂತ ಕಾದು ನೋಡ್ಬೇಕಿದೆ.











