ಹಾಸನ: ಬೆಂಗಳೂರು ಭೂಮಿ ಯೋಜನೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಹೋರಾಟಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಬೆಂಬಲ ವ್ಯಕ್ತಪಡಿಸಿದ್ದು, ಬಡವರು ಹಾಗೂ ಸಂಕಷ್ಟದಲ್ಲಿರುವ ಜನರ ಹಿತಾಸಕ್ತಿಗೆ ಧಕ್ಕೆ ತರುವ ಯಾವುದೇ ಕ್ರಮವನ್ನು ಸಹಿಸುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ಮಾತನಾಡಿದ ದೇವೇಗೌಡರು, ಬಿಡದಿ ಹೋರಾಟದ ಪಾದಯಾತ್ರೆಯಲ್ಲಿ ಭಾಗವಹಿಸಿ ವಾಪಸ್ ಬಂದ ಬಳಿಕ ಪಾದಯಾತ್ರೆಯನ್ನು ತಡೆದಿರುವ ವಿಚಾರ ತಿಳಿಯಿತು ಎಂದು ಹೇಳಿದರು.“ನಾನು ವಾಪಸ್ ಬಂದ ಮೇಲೆ ಪಾದಯಾತ್ರೆ ತಡೆದಿದ್ದಾರೆ ಎಂದು ಗೊತ್ತಾಯಿತು. ನಮ್ಮ ಮನೆಯಲ್ಲಿಯೇ ಕುಳಿತು ಈ ವಿಚಾರವನ್ನು ನೋಡಿದೆ” ಎಂದು ಅವರು ಹೇಳಿದರು.
ಭೂಮಿ ಹೊಂದಿರುವ ಬಡವರು ಹಾಗೂ ಸಣ್ಣ ರೈತರ ಹಿತಾಸಕ್ತಿಗೆ ಧಕ್ಕೆ ಉಂಟಾಗುವ ಯಾವುದೇ ಯೋಜನೆಯನ್ನು ವಿರೋಧಿಸುವುದಾಗಿ ತಿಳಿಸಿದ ದೇವೇಗೌಡರು, ತಮ್ಮ 70 ವರ್ಷಗಳ ರಾಜಕೀಯ ಜೀವನದಲ್ಲಿ ರೈತರ ಪರವಾಗಿ ನಡೆಸಿದ ಹಲವು ಹೋರಾಟಗಳ ಉದಾಹರಣೆಗಳಿವೆ ಎಂದರು.

ತಮ್ಮ ಕುಟುಂಬದ ಹೋರಾಟವನ್ನು ಕೇವಲ ಒಕ್ಕಲಿಗರ ಹಿತಾಸಕ್ತಿಗೆ ಸೀಮಿತಗೊಳಿಸಿ ನೋಡಬಾರದು ಎಂದು ದೇವೇಗೌಡರು ಹೇಳಿದರು.“ದೇವೇಗೌಡ, ಕುಮಾರಸ್ವಾಮಿ, ನಿಖಿಲ್ ಒಕ್ಕಲಿಗರಿಗಾಗಿ ಮಾತ್ರ ಹೋರಾಟ ಮಾಡುತ್ತಾರೆ ಎಂದು ಭಾವಿಸಬಾರದು. ಸಣ್ಣ ಸಮುದಾಯದವರು, ಹಿಂದುಳಿದ ವರ್ಗದವರು ಹಾಗೂ ಸಂಕಷ್ಟದಲ್ಲಿರುವ ಬಡವರು ಸಾಕಷ್ಟು ಮಂದಿ ಇದ್ದಾರೆ. ಅವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಿದರೆ ನಾವು ಸುಮ್ಮನಿರುವುದಿಲ್ಲ” ಎಂದು ಅವರು ಎಚ್ಚರಿಸಿದರು.

ಭೂಮಿ ಸ್ವಾಧೀನ ಹಾಗೂ ಯೋಜನೆಯ ಉದ್ದೇಶದ ಬಗ್ಗೆಯೂ ದೇವೇಗೌಡರು ಹಲವು ಪ್ರಶ್ನೆಗಳನ್ನು ಎತ್ತಿದರು.“ಈ ಯೋಜನೆಗೆ ಯಾರು ಅರ್ಜಿ ಹಾಕಿದ್ದಾರೆ? ಯಾವ ಉದ್ದೇಶಕ್ಕಾಗಿ ಈ ಯೋಜನೆ ಮಾಡಲಾಗುತ್ತಿದೆ? ಯಾರಿಗಾಗಿ ಈ ಸೈಟ್, ಯಾರಿಗಾಗಿ ನೀವು ಲೇಔಟ್ ಮಾಡುತ್ತಿದ್ದೀರಿ?” ಎಂದು ಅವರು ಪ್ರಶ್ನಿಸಿದರು.ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಟೊಯೋಟಾ ಕಂಪನಿಗೆ ಸುಮಾರು 3 ಸಾವಿರ ಎಕರೆ ಭೂಮಿ ನೀಡಿದ್ದನ್ನು ಪ್ರಸ್ತಾಪಿಸಿದ ದೇವೇಗೌಡರು, ಈಗ ಕೈಗೊಳ್ಳಲಾಗುತ್ತಿರುವ ಯೋಜನೆಯ ಉದ್ದೇಶವೇನು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಬೆಂಗಳೂರು ಅಭಿವೃದ್ಧಿ ಹಾಗೂ ಭೂಮಿ ವಿಚಾರವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ದೇವೇಗೌಡರು ಹಲವು ಪ್ರಶ್ನೆಗಳನ್ನು ಕೇಳಿದರು.“ಮೂರು ವರ್ಷ ನೀವೇ ಉಪಮುಖ್ಯಮಂತ್ರಿಯಾಗಿರಲಿಲ್ಲವೇ? ಬೆಂಗಳೂರಿನಲ್ಲಿ ಐದು ಕಾರ್ಪೊರೇಷನ್ ಮಾಡಿದ್ದು ನೀವೇ ತಾನೆ? ಆಗ ಯಾಕೆ ಭೂಮಿ ನೀಡಲಿಲ್ಲ? ಈಗ ಒಂದು ತಿಂಗಳಲ್ಲಿ ಈ ವಿಚಾರದಲ್ಲಿ ಯಾಕೆ ಇಷ್ಟು ತುರ್ತು?” ಎಂದು ಅವರು ಪ್ರಶ್ನಿಸಿದರು.

ಮುಖ್ಯಮಂತ್ರಿ ಬದಲಾವಣೆಯಾದ ಬಳಿಕ ಕೇವಲ ಒಂದು ತಿಂಗಳಲ್ಲೇ ಯೋಜನೆಯನ್ನು ತರಾತುರಿಯಲ್ಲಿ ಜಾರಿಗೆ ತರಲು ಮುಂದಾಗಿರುವುದರ ಹಿಂದೆ ರಾಜಕೀಯ ಕಾರಣಗಳಿವೆ ಎಂಬ ಆರೋಪವನ್ನೂ ದೇವೇಗೌಡರು ಮಾಡಿದರು.“ದೆಹಲಿಯ ಮುಖಂಡರಿಗೆ ಏನೇನು ಮಾತು ಕೊಟ್ಟಿದ್ದೀರೋ, ಅದನ್ನು ಕಾರ್ಯಗತಗೊಳಿಸಲು ಈ ಪ್ರಾಜೆಕ್ಟ್ ಮಾಡಲಾಗುತ್ತಿದೆ. ಹಾಗಾಗಿ ತರಾತುರಿಯಲ್ಲಿ ಯೋಜನೆ ಜಾರಿಗೆ ತರಲು ಹೊರಟಿದ್ದಾರೆ” ಎಂದು ಅವರು ಆರೋಪಿಸಿದರು.
ಬೆಂಗಳೂರಿಗೆ ತೆರಳಿದ ಬಳಿಕ ಹೋರಾಟದ ಕುರಿತು ಮಾಹಿತಿ ಪಡೆದು ಸಮಾಲೋಚನೆ ನಡೆಸುವುದಾಗಿ ದೇವೇಗೌಡರು ಹೇಳಿದರು.ಆಗಸ್ಟ್ 18ರಂದು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿರುವ ಹೋರಾಟಕ್ಕೆ ಯಾವುದೇ ರೀತಿಯ ಅಡ್ಡಿ ಅಥವಾ ಆತಂಕ ಉಂಟಾದರೆ ಸುಮ್ಮನಿರುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
“ಈ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಬೆಂಗಳೂರಿಗೆ ಹೋದ ಬಳಿಕ ಹೋರಾಟದ ಬಗ್ಗೆ ಚರ್ಚೆ ಮಾಡುತ್ತೇನೆ” ಎಂದು ದೇವೇಗೌಡರು ಸ್ಪಷ್ಟಪಡಿಸಿದರು.ಫ್ರೀಡಂ ಪಾರ್ಕ್‌ನಲ್ಲಿ ಈ ಹಿಂದೆ ಸಾವಿರಾರು ಹೋರಾಟಗಳು ನಡೆದಿವೆ. ತಾವೂ ಹಲವು ಬಾರಿ ಅಲ್ಲಿ ಹೋರಾಟ ನಡೆಸಿದ್ದೇನೆ ಎಂದು ಅವರು ಹೇಳಿದರು. ಫ್ರೀಡಂ ಪಾರ್ಕ್‌ನಲ್ಲಿನ ಹೋರಾಟದ ಕುರಿತು ಸರ್ಕಾರ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬುದನ್ನು ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.“ಈ ಜಮೀನನ್ನು ಕಬಳಿಸಿ ದೆಹಲಿಯ ಒಳಗೆ ಯಾರಿಗಾಗಿ ಮಾಡುತ್ತಿದ್ದೀರಿ?” ಎಂದು ಪ್ರಶ್ನಿಸಿದ ದೇವೇಗೌಡರು, ಬಡವರ ಪರವಾಗಿ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಪುನರುಚ್ಚರಿಸಿದರು.






