
ಸ್ಯಾಂಡಲ್ವುಡ್ ನಟಿ ರಾನ್ಯ ರಾವ್ ಅವರನ್ನು ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ನಟಿ ರಾನ್ಯ ರಾವ್ ಜೊತೆಗೆ ಹೆಚ್ಚಿನ ಒಡನಾಟ ಹೊಂದಿದ್ದ ಆರೋಪದ ಮೇಲೆ ನಟಿ ರನ್ಯಾ ರಾವ್ ಸ್ನೇಹಿತ ತರುಣ್ ರಾಜ್ ಎಂಬಾತನನ್ನೂ ವಶಕ್ಕೆ ಪಡೆದಿದ್ದಾರೆ ಡಿಆರ್ಐ ಅಧಿಕಾರಿಗಳು. ನಟಿ ರನ್ಯಾ ರಾವ್ ಜೊತೆ ನಿರಂತರ ಸಂಪರ್ಕ ಹಾಗೂ ದುಬೈಗೆ ರನ್ಯಾ ಜೊತೆ ಪ್ರವಾಸ ಮಾಡಿದ್ದರಿಂದ ಬಂಧಿಸಿ ಕೋರ್ಟ್ಗೆ ಹಾಜರು ಪಡಿಸಿ ವಶಕ್ಕೆ ಪಡೆಯಲಾಗಿದೆ. ಖ್ಯಾತ ಹೊಟೇಲ್ನ ನಿರ್ದೇಶಕರೊಬ್ಬರ ಮಗನಾಗಿರೋ ತರುಣ್ ರಾಜ್ನನ್ನು ಕಸ್ಟಡಿಗೆ ಪಡೆದು ವಿಚಾರಣೆ ಮಾಡಲಾಗ್ತಿದೆ. ಈ ನಡುವೆ ಗೋಲ್ಡ್ ಸ್ಮಗ್ಲಿಂಗ್ನಲ್ಲಿ ಪ್ರಭಾವಿ ಸಚಿರೊಬ್ಬರು ಇದ್ದಾರೆ ಅನ್ನೋ ಶಂಕೆ ವ್ಯಕ್ತವಾಗ್ತಿದೆ.
ಬೆಂಗಳೂರಿನಲ್ಲಿ ಮಾತನಾಡಿದ ಬಿ ವೈ ವಿಜಯೇಂದ್ರ, ಇತ್ತಿಚಿಗೆ ಬೆಂಗಳೂರಿನ ಏರ್ಪೋರ್ಟ್ನಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಮಗಳು ಅರೆಸ್ಟ್ ಆಗಿದ್ದಾರೆ. ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಅರೆಸ್ಟ್ ಆಗಿರೋ ಆ ಯುವತಿಯ ಹಿಂದೆ ಘಟಾನುಘಟಿಗಳಿದ್ದಾರೆ. ಇದು ಸಣ್ಣ ಘಟನೆಯಲ್ಲ. ಬೆಂಗಳೂರಿಗೆ ವಾಪಸ್ ಬರೋವಾಗ ರನ್ಯಾ ರಾವ್ಗೆ ಪ್ರೋಟೋಕಾಲ್ ನೀಡಲಾಗ್ತಿತ್ತು. ಎಸ್ಕಾರ್ಟ್ ಮೂಲಕ ಪೊಲೀಸರು ಕರೆತರುತ್ತಿದ್ದರು. ಏರ್ಪೋರ್ಟ್ನಲ್ಲಿ ಸೆಕ್ಯೂರಿಟಿ ಚೆಕ್ ಕೂಡ ಆಗಲ್ಲ ಎಂದರೆ ಇದರ ಹಿಂದೆ ಪ್ರಭಾವಿಗಳಿದ್ದಾರೆ, ಸಚಿವರಿದ್ದಾರೆ ಅನ್ನೋದು ಗೊತ್ತಾಗ್ತಿದೆ. ಇಂತಹ ಗಂಭೀರ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಮಾಹಿತಿ ಇದ್ದೆ ಇರುತ್ತದೆ. ಈಗ ಆ ಸತ್ಯವನ್ನ ಬಹಿರಂಗ ಪಡಿಸಬೇಕು ಎಂದು ಆಗ್ರಹ ಮಾಡಿದ್ದಾರೆ.

ಹವಾಲಾ ಆಪರೇಟರ್ಸ್ ಪಾತ್ರವನ್ನ ಬಹಿರಂಗಪಡಿಸಬೇಕು ಎಂದು ಒತ್ತಾಯ ಮಾಡಿರುವ ವಿಜಯೇಂದ್ರ, ಇಂತವರಿಗೆ ಬೆಂಬಲ ನೀಡ್ತಿರೋರ ಬಗ್ಗೆ ಮಾಹಿತಿಯನ್ನ ಬಹಿರಂಗ ಪಡಿಸಬೇಕು. ಬರೋಬ್ಬರಿ 13 ಕೋಟಿಗೂ ಹೆಚ್ಚು ಬೆಲೆಬಾಳುವ ಚಿನ್ನದ ಹಗರಣ, ಸಿಬಿಐ, ಇಡಿ ತನಿಖೆ ಮಾಡ್ತಿದೆ. ಪತ್ರಿಕೆಯಲ್ಲಿಯೂ ಸಾಕಷ್ಟು ಮಾಹಿತಿ ಹೊರಗೆ ಬರ್ತಿದೆ. ಸಚಿವರುಗಳು ಭಾಗಿಯಾಗಿರೋ ಬಗ್ಗೆಯೂ ಮಾಹಿತಿ ಬರ್ತಿದೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಯಾವ ಸಚಿವರಿದ್ದಾರೆ ಅನ್ನೊದನ್ನ ಬಹಿರಂಗ ಪಡಿಸಬೇಕು. ಸ್ವತಃ ಸಿಎಂ ಸಿದ್ದರಾಮಯ್ಯ ಬಹಿರಂಗ ಮಾಡುವ ಕೆಲಸ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಕೆಐಡಿಬಿ ಜಮೀನು ಮಂಜೂರು ವಿಚಾರದ ಬಗ್ಗೆಯೂ ತನಿಖೆ ಮಾಡಲಿ ಎಂದಿದ್ದಾರೆ.

ನಟಿ ರನ್ಯಾರಾವ್ ಹಿಂದೆ ಸಚಿವರು ಇರಬಹುದು ಎಂದು ಶಿರಾ ಕ್ಷೇತ್ರದ ಶಾಸಕ ಟಿ.ಬಿ.ಜಯಚಂದ್ರ ಕೂಡ ಹೇಳಿದ್ದಾರೆ. ಇಸ್ರೋ ಇಂಡಿಯಾ ಪ್ರೈವೇಟ್ ಲಿಮಿಟೆಡ್ಗೆ 12 ಎಕರೆ ಜಮೀನು ಅಲಾಟ್ಮೆಂಟ್ ಆಗಿತ್ತು. ದುಡ್ಡು ಕಟ್ಟೋಕೆ ನೋಟಿಸ್ ನೀಡಿದ್ರು. ಆದರೂ ದುಡ್ಡು ಕಟ್ಟಿರಲಿಲ್ಲ, ಶಿರಾದಲ್ಲಿ ಸೈಟ್ ಅಲಾಟ್ಮೆಂಟ್ ಆಗಿತ್ತು. ಅದನ್ನು ಬೇರೆಯವರಿಗೆ ಕೊಡಬಾರದು ಅಂತ ಇತ್ತು. ನಾವು ಸ್ಥಳೀಯರಿಗೆ ಕೊಡಬೇಕು ಅಂತ ನಿರ್ಧಾರ ಮಾಡಲಾಗಿತ್ತು. ಸ್ಟೇಟ್ ಲೇವಲ್ ಕಮಿಟಿಯಲ್ಲಿ ಅದು ನಿರ್ಣಯ ಆಗಿದೆ. ರನ್ಯಾ ರಾವ್ ಹಿಂದೆ ಸಚಿವರು ಇರಬಹುದು, ಮಾಜಿ ಸಚಿವರು ಇರಬಹುದೇನೋ ಗೊತ್ತಿಲ್ಲ ಎಂದಿದ್ದಾರೆ. ಇನ್ನೂ ಅಲಾಟ್ಮೆಂಟ್ ಸ್ಟೇಟ್ ಸ್ಟೇಟ್ ಲೇವಲ್ ಕಮಿಟಿಯಲ್ಲಿ ಆಗಿದೆ. ಇದರ ಹಿಂದೆ ಯಾರಿದ್ದಾರೆ ಅನ್ನೋದು ಗೊತ್ತಿಲ್ಲ ಎಂದಿದ್ದಾರೆ.

ಯಾರು ಶಿಫಾರಸ್ಸು ಮಾಡಿದ್ದರಿಂದ ಜಾಗ ಮಂಜೂರಾಗಿತ್ತು ಗೊತ್ತಿಲ್ಲ. ಸಿಂಗಲ್ ವಿಂಡೋ ಕಮಿಟಿಯಲ್ಲಿ ರಾಜ್ಯಮಟ್ಟದಲ್ಲಿ ಆಗಿದೆ. ಸರ್ಕಾರದ ದಾಖಲೆಗಳನ್ನು ನೋಡಿದ್ರೆ ಎಲ್ಲವೂ ಗೊತ್ತಾಗುತ್ತದೆ. ಒಟ್ಟಾರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಕ್ಕೆ ಟಿ.ಬಿ ಜಯಚಂದ್ರ ಇಂಬು ನೀಡಿದ್ದಾರೆ. ಸಚಿವರಿದ್ದಾರೆ, ಶಿಫಾರಸು ಆಗಿದೆ, ಸಚಿವರ ಕೈವಾಡ ಇರಬಹುದು ಅನ್ನೋ ಅನುಮಾನ ವ್ಯಕ್ತವಾಗಿದೆ. ಯಾರು ಆ ಸಚಿವರು..? ಅನ್ನೋದು ಬಹಿರಂಗ ಆಗಬೇಕಿದೆ.