ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸಿ.ಟಿ ರವಿ ಸತತವಾಗಿ ಗೆಲುವು ಸಾಧಿಸಿಕೊಂಡು ಬರುತ್ತಿದ್ದಾರೆ. 55 ವರ್ಷದ ಸಿ.ಟಿ ರವಿ ಬಿಜೆಪಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಯಾವಾಗಲೂ ಪಕ್ಷದ ಪರವಾಗಿಯೇ ಮಾತನಾಡುವ ಸಿ.ಟಿ ರವಿ ನಾಯಕರುಗಳಿಗೆ ಮಣೆ ಹಾಕುವ ಗೋಜಿಗೆ ಹೋಗುವುದಿಲ್ಲ. ಹೈಕಮಾಂಡ್ ಅಂಗಳ ಸೇರಿದ ಬಳಿಕ ರಾಜ್ಯ ನಾಯಕರ ಬಗ್ಗೆಯೂ ನೇರ ನಿಷ್ಠೂರವಾದಿಯಾಗಿಯೇ ಮಾತನಾಡುತ್ತಾರೆ. ಪಕ್ಷಕ್ಕೆ ಮಾತ್ರ ನಿಷ್ಠೆ ಎನ್ನುವ ಸಿ.ಡಿ ರವಿ ಎಲ್ಲಾ ಪಕ್ಷಗಳ ಕೆಂಗಣ್ಣಿಗೂ ಗುರಿಯಾಗಿದ್ದಾರೆ ಎಂದರೆ ಸುಳ್ಳಲ್ಲ. ಆದರೆ ಚಿಕ್ಕಮಗಳೂರು ಕ್ಷೇತ್ರದಲ್ಲಿ ಅಬಿವೃದ್ಧಿ ಕೆಲಸಗಳಿಂದ ಜನರ ಮನಸ್ಸು ಗೆದ್ದಿರುವ ರವಿಗೆ ಸೋಲುವ ಭಯ ಇಲ್ಲ. ಆದರೆ ಇದೀಗ ಸಿ.ಟಿ ರವಿಗೂ ಸೋಲಿನ ಭೀತಿ ಹುಟ್ಟಿಸಿಲು ಕಾಂಗ್ರೆಸ್ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅಖಾಡಕ್ಕೆ ಇಳಿದಿದ್ದಾರೆ.
ಟಿಕೆಟ್ ಕೊಡದಿದ್ದರೂ ಪರವಾಗಿಲ್ಲ – ಹೆಚ್.ಡಿ ತಮ್ಮಯ್ಯ
ಚಿಕ್ಕಮಗಳೂರಿನ ಬಿಜೆಪಿ ಮುಖಂಡ ಹೆಚ್.ಡಿ ತಮ್ಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಬಿ.ಎಲ್ ಶಂಕರ್ ಸಮ್ಮುಖದಲ್ಲಿ ಹೆಚ್.ಡಿ ತಮ್ಮಯ್ಯ ಸೇರಿ ಅಪಾರ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಆಪ್ತರಾಗಿದ್ದ ಹೆಚ್.ಡಿ ತಮ್ಮಯ್ಯ, ಚಿಕ್ಕಮಗಳೂರು ಪುರಸಭೆಯ ಸದಸ್ಯರಾಗಿ, ಅಧ್ಯಕ್ಷರಾಗಿದ್ದ ಹೆಚ್.ಡಿ ತಮ್ಮಯ್ಯ, ಸಿ.ಟಿ ರವಿಗೆ ಚುನಾವಣಾ ಫಲಿತಾಂಶ ತೊಡಕಾಗುವ ಲಕ್ಷಣ ಕಾಣಿಸುತ್ತಿದೆ. ಕಾಂಗ್ರೆಸ್ ಸೇರ್ಪಡೆ ಬಳಿಕ ಮಾತನಾಡಿದ ಹೆಚ್.ಡಿ ತಮ್ಮಯ್ಯ, ಬಿಜೆಪಿಯಲ್ಲಿ 17 ರಿಂದ 18 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಈಗ ಕಾಂಗ್ರೆಸ್ ಪಕ್ಷಕ್ಕೆ ತುಂಬು ಸಂತೋಷದಿಂದ ಸೇರಿದ್ದೇನೆ. ಡಿ.ಕೆ ಶಿವಕುಮಾರ್ ಅಧ್ಯಕ್ಷರಾದ ಮೇಲೆ ಇಡೀ ರಾಜ್ಯದಲ್ಲಿ ಒಂದು ಸಂಚಲನ ಮೂಡಿಸಿದ್ದಾರೆ. ಸಿದ್ದರಾಮಯ್ಯ ಕೂಡ ಹಲವು ಜನಪರ ಕಾರ್ಯಕ್ರಮ ಕೊಟ್ಟಿದ್ದಾರೆ. ಇವರಿಬ್ಬರ ನೇತೃತ್ವ ಒಪ್ಪಿ ತುಂಬಾ ಜನರು ಕಾಂಗ್ರೆಸ್ ಸೇರ್ತಿದ್ದಾರೆ. ನಾವು ಯಾವುದೇ ಕಂಡಿಷನ್ ಇಲ್ಲದೇ ಕಾಂಗ್ರೆಸ್ ಸೇರಿದ್ದೇವೆ ಎಂದಿದ್ದಾರೆ.

ಯಡಿಯೂರಪ್ಪ ಆಪ್ತನಿಗೆ ಮಣೆ ಹಾಕಿ ಮಾಸ್ಟರ್ ಪ್ಲ್ಯಾನ್..!
ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಗಳಿಗೂ ಟಿಕೆಟ್ ಕೊಟ್ಟರೂ ಒಟ್ಟಾಗಿ ಕೆಲಸ ಮಾಡ್ತೇನೆ, ಕಾಂಗ್ರೆಸ್ ಗೆಲ್ಲಿಸುತ್ತೇವೆ ಎಂದಿದ್ದಾರೆ. ಈಗಾಗಲೇ ಪಕ್ಷದಿಂದ ಸರ್ವೆ ಕೂಡ ಮಾಡಿಸಿದ್ದಾರೆ. ಸರ್ವೆಯಲ್ಲಿ ಗೆಲ್ಲುವಂತಹ ಯಾರಿಗೇ ಕೊಟ್ಟರೂ ಒಟ್ಟಾಗಿ ಕೆಲಸ ಮಾಡಿ, ಎದುರಾಳಿ ಯಾರೇ ಆಗಿದ್ರು ಎದೆಗುಂದದೆ ಕಾಂಗ್ರೆಸ್ ಗೆಲ್ಲಿಸುತ್ತೇವೆ ಎಂದಿದ್ದಾರೆ. ಚಿಕ್ಕಮಗಳೂರಲ್ಲಿ ಸಿ.ಟಿ ರವಿಯನ್ನು ಕಟ್ಟಿ ಹಾಕೋಕೆ ಹೆಚ್ ಡಿ ತಮ್ಮಯ್ಯರನ್ನು ಪಕ್ಷಕ್ಕೆ ಕರೆತಂದ್ರಾ ಎನ್ನುವ ವಿಚಾರದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿದ್ದು, ಸಿಟಿ ರವಿಯನ್ನು ನಾವೇನು ಕಟ್ಟಿ ಹಾಕೋದು ಬೇಡ. ನಮ್ಮ ಪಾರ್ಟಿಯವರಿಂದ ಅಲ್ಲಿಗೆ ಹೋದವರೇ ಅವರನ್ನು ಕಟ್ಟಿ ಹಾಕ್ತಿದ್ದಾರೆ. ಇಡೀ ಸರ್ಕಾರವನ್ನು ಅವ್ರು ಹಿಡಿದುಕೊಂಡು ಕುಳಿತಿದ್ದಾರೆ. ಅವರೇ ಸಾಕು ಅಲ್ವಾ..? ಸಿಟಿರವಿಯನ್ನು ಕಟ್ಟಿ ಹಾಕೋಕೆ ಎಂದು ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ. ಆದರೆ ಯಡಿಯೂರಪ್ಪ ಆಪ್ತನಾಗಿರುವ ಹೆಚ್.ಡಿ ತಮ್ಮಯ್ಯ, ಕಾಂಗ್ರೆಸ್ಗೆ ಬಂದಿರುವ ಉದ್ದೇಶವೇ ಸಿ.ಟಿ ರವಿಯನ್ನು ಕಟ್ಟಿ ಹಾಕಲು ಎನ್ನುವ ಚರ್ಚೆಗಳು ನಡೆಯುತ್ತಿವೆ.
ಲಿಂಗಾಯತ ಸಮುದಾಯದ ಮುಖಂಡ BSY ಪರಮಾಪ್ತ..!
ಲಿಂಗಾಯತ ಸಮುದಾಯದ ಪ್ರಮುಖ ನಾಯಕನಾಗಿರುವ ತಮ್ಮಯ್ಯ, ಬಿ.,ಎಸ್ ಯಡಿಯೂರಪ್ಪ ಅವರ ಪರಮಾಪ್ತ ಎನ್ನುವುದು ಬಹಿರಂಗ ಆಗಿದೆ. ಕಾಂಗ್ರೆಸ್ ಸೇರುವ ನಿರ್ಧಾರದ ಹಿಂದೆ ಯಡಿಯೂರಪ್ಪ ಅವರ ಸೂಚನೆ ಇದೆ ಎನ್ನಲಾಗ್ತಿದೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯವೇ ನಿರ್ಣಾಯಕ ಮತದಾರರು ಆಗಿರುವುದು ಸಿ.ಟಿ ರವಿ ಸೋಲಿಗೆ ಕಂಕಣ ಕಟ್ಟಿದಂತಾಗುತ್ತದೆ. ಇನ್ನು ಡಿ.ಕೆ ಶಿವಕುಮಾರ್ ಅಳಿಯ ಕಾಫಿ ಡೇ ಮಾಲೀಕ ದಿವಂಗತ ಸಿದ್ಧಾರ್ಥ್ ಅವರ ಪುತ್ರ ಎಸ್.ಎಂ ಕೃಷ್ಣ ಅವರ ಮೊಮ್ಮಗ ಚಿಕ್ಕಮಗಳೂರು ಕ್ಷೇತ್ರದಿಂದ ಅಖಾಡಕ್ಕೆ ಇಳಿಯುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿದೆ. ಇದರ ನಡುವೆ ಕಾಂಗ್ರೆಸ್ ಪಕ್ಷ ಸೇರಿರುವ ಹೆಚ್.ಡಿ ತಮ್ಮಯ್ಯ ಕೂಡ ನಾನು ಟಿಕೆಟ್ಗೆ ಷರತ್ತು ಹಾಕಿಕೊಂಡು ಕಾಂಗ್ರೆಸ್ಗೆ ಬಂದಿಲ್ಲ ಎಂದಿರುವುದು ಚಿಕ್ಕಮಗಳೂರು ಟಿಕೆಟ್ ಯಾರಿಗೆ ಎನ್ನುವ ಬಗ್ಗೆ ಸಂಶಯಗಳು ಮೂಡುವಂತೆ ಮಾಡಿದೆ. ಬಿ.ಎಸ್ ಯಡಿಯೂರಪ್ಪ ಸೂಚನೆಯಂತೆ ಬಿಜೆಪಿ ತೊರೆದಿರುವ ತಮ್ಮಯ್ಯ ಡಿ.ಕೆ ಶಿವಕುಮಾರ್ ಅಳಿಯನ ಗೆಲುವಿಗೆ ಟೊಂಕ ಕಟ್ಟಿ ನಿಲ್ತಾರಾ..? ಎನ್ನುವ ಗುಮಾನಿ ಮೂಡಿಸುತ್ತಿದೆ.











