
ಛಲವಾದಿ ನಾರಾಯಣಸ್ವಾಮಿ ಯಾರು ಅನ್ನೋ ಸಚಿವ ಶರಣ ಪ್ರಕಾಶ ಪಾಟೀಲ್ ಹೇಳಿಕೆಗೆ ಛಲವಾದಿ ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ನೀವು ಸಚಿವ ಸ್ಥಾನ ಪಡೆದಿರುವುದು ನಿಮ್ಮ ವೈಯಕ್ತಿಕ ಅರ್ಹತೆಯಿಂದಲ್ಲ. ಅದು ಕೇವಲ ನಿಮ್ಮ ಚೇಲಾಗಿರಿಯಿಂದ ಎಂದಿದ್ದಾರೆ.
ನಾನು ವಿರೋಧ ಪಕ್ಷದ ನಾಯಕನಾಗಿ ರಾಜ್ಯದ ಎಲ್ಲಾ ಭಾಗಗಳ ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಹೊಣೆ ಹೊತ್ತಿದ್ದೇನೆ. ಸರ್ಕಾರದ ನಿರ್ಧಾರಗಳಲ್ಲಿ ತಪ್ಪು ಕಂಡರೆ ಅಥವಾ ಸಾರ್ವಜನಿಕರ ಹಿತಾಸಕ್ತಿಗಾಗಿ ಸರ್ಕಾರದ ನಿರ್ಣಯಗಳನ್ನು ಪ್ರಶ್ನಿಸುವ ಅಗತ್ಯವಿದೆ. ನಾನು ಅದನ್ನು ಮಾಡಬೇಕಾದುದು ನನ್ನ ಕರ್ತವ್ಯ ಎಂದಿದ್ದಾರೆ.

ತಳ ಸಮುದಾಯದ ಒಬ್ಬರು ಉನ್ನತ ಮಟ್ಟದ ಸಾಂವಿಧಾನಿಕ ಹುದ್ದೆ ಹೊಂದಿರುವುದರಿಂದ ನಿಮಗೆ ಅಸಹನೆ ಹುಟ್ಟಿಸಿದೆ. ಜನರ ಪರವಾಗಿ ಕೆಲಸ ಮಾಡುವುದು ಮತ್ತು ಜನರ ಸಮಸ್ಯೆಗಳನ್ನು ಸರ್ಕಾರದ ಮುಂದೆ ತರಲು ನಾನು ಯಾವತ್ತೂ ಸಿದ್ದನಾಗಿದ್ದೇನೆ. ವಿರೋಧ ಪಕ್ಷದ ನಾಯಕರು ಯಾರು ನನಗೆ ಗೊತ್ತಿಲ್ಲ ಎಂಬ ನಿಮ್ಮ ಹೇಳಿಕೆಯಲ್ಲಿ ಅಸಹನೆ ಇದೆ. ಆದರೆ ಮುಂದಿನ ದಿನಗಳಲ್ಲಿ ಸಮಯ ಸಿಕ್ಕಾಗ ನನ್ನ ಪರಿಚಯವನ್ನು ಖಂಡಿತ ನಿಮಗೆ ನೆನಪಿಸುತ್ತೇನೆ ಎಂದು ತಿರುಗೇಟು ಕೊಟ್ಟಿದ್ದಾರೆ.
