ಬೆಂಗಳೂರು : ಏಳನೇ ವೇತನ ವರದಿ ಜಾರಿಗೆ ಆಗ್ರಹಿಸಿದ ಇಂದಿನಿಂದ ಮುಷ್ಕರಕ್ಕೆ ಕರೆ ನೀಡಿದ್ದ ಸರ್ಕಾರಿ ನೌಕರರ ಆಕ್ರೋಶಕ್ಕೆ ರಾಜ್ಯ ಸರ್ಕಾರ ಮಣಿದಿದೆ. ರಾತ್ರಿ ನಡೆದ ಸಂಧಾನ ಸಭೆಯಲ್ಲಿ 8 ಪ್ರತಿಶತ ವೇತನ ಏರಿಕೆ ಮಾತ್ರ ಸಾಧ್ಯ ಎಂದಿದ್ದ ಸಿಎಂ ಬಸವರಾಜ ಬೊಮ್ಮಾಯಿ ಇಂದು ಸರ್ಕಾರಿ ನೌಕರರ ಕೋಪ ತಣ್ಣಗಾಗಿಸಲು 17 ಪ್ರತಿಶತ ವೇತನ ಏರಿಕೆ ಮಾಡಿ ಮಧ್ಯಂತರ ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ನೌಕರರು ಮುಷ್ಕರ ನಡೆಸದಂತೆ ರಾಜ್ಯ ಸರ್ಕಾರ ತಡರಾತ್ರಿ ಖಡಕ್ ಆದೇಶವನ್ನು ಹೊರಡಿಸಿತ್ತು. ನಾಳೆ ಅನವಶ್ಯಕ ಕಾರಣದಿಂದ ಕಚೇರಿಗೆ ಹಾಜರಾಗದೇ ಇದ್ದಲ್ಲಿ ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಲಾಗಿತ್ತು . ಆದರೆ ಯಾವುದೇ ಬೆದರಿಕೆಗಳಿಗೆ ಮಣಿಯದ ರಾಜ್ಯ ಸರ್ಕಾರಿ ನೌಕರರು ಇಂದು ಮುಷ್ಕರ ನಡೆಸಿದ್ದಾರೆ. ಕೊನೆಗೂ ರಾಜ್ಯ ಸರ್ಕಾರಿ ನೌಕರರ ಮುಷ್ಕರಕ್ಕೆ ಮಣಿದ ಸಿಎಂ ಬಸವರಾಜ ಬೊಮ್ಮಾಯಿ ಏಪ್ರಿಲ್ 1ನೇ ತಾರೀಖಿನಿಂದ ಅನ್ವಯವಾಗುವಂತೆ 17 ಪ್ರತಿಶತ ವೇತನ ಏರಿಕೆ ಮಾಡಿ ಆದೇಶ ಹೊರಡಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರು ಸರ್ಕಾರದ ಮುಂದೆ ಇಟ್ಟಿರುವ ಬೇಡಿಕೆಗಳ ಪರಿಶೀಲನೆ ಮಾಡಲು 7ನೇ ವೇತನ ಆಯೋಗವನ್ನು ರಚನೆ ಮಾಡಲಾಗುತ್ತದೆ. 7ನೇ ವೇತನ ಆಯೋಗದ ಅಂತಿಮ ವರದಿ ಸರ್ಕಾರದ ಕೈ ಸಿಗುವವರೆಗೆ ರಾಜ್ಯ ಸರ್ಕಾರಿ ನೌಕರರಿಗೆ, ಸ್ಥಳೀಯ ಸಂಸ್ಥೆಗಳ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಾಗೂ ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳಿಗೆ ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ಸರ್ಕಾರವು ನಿರ್ಧರಿಸುತ್ತದೆ ಎಂದು ಆದೇಶ ಪ್ರತಿಯಲ್ಲಿ ತಿಳಿಸಲಾಗಿದೆ.
ರಾಜ್ಯ ಸರ್ಕಾರಿ ನೌಕರರು ಮೂಲ ವೇತನದ ಶೇಕಡಾ 40ರಷ್ಟು ಏರಿಕೆ , ಮೂಲ ವೇತನದೊಂದಿಗೆ ತುಟ್ಟಿ ಭತ್ಯೆ ಸೌಕರ್ಯ, ಹಳೆ ಪಿಂಚಣಿ ಜಾರಿ ವ್ಯವಸ್ಥೆ, ಎನ್ಪಿಎಸ್ ರದ್ದು ಮಾಡಿ ಒಪಿಎಸ್ ವ್ಯಾಪ್ತಿಗೆ ತರುವುದು ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿ ಮುಷ್ಕರಕ್ಕೆ ಕರೆ ನೀಡಿದ್ದರು.