ದೇಶದಲ್ಲಿ ಕರೋನ ಎರಡನೇ ಹಲೆ ವ್ಯಾಪಕವಾಗಿ ಹರಡುತ್ತಿದೆ. ಕರೋನ ಬಂದು ಒಂದೂವರೆ ವರ್ಷ ಕಳೆದರು ಆಸ್ಪತ್ರೆಯಲ್ಲಿ ಹಾಸಿಗೆ, ಆಕ್ಸಿಜನ್, ಆಂಬ್ಯೂಲೆನ್ಸ್, ಲಸಿಕೆ ಇತ್ಯಾದಿ ಕೊರತೆಗಳಿರುವುದನ್ನು ಈಗಾಗಲೇ ಪ್ರತಿಧ್ವನಿ ಹಲವು ವರದಿ ಮಾಡಿದೆ. ಅದರಲ್ಲೂ, ಹಲವು ರಾಜ್ಯಗಳಲ್ಲಿ ಬಹುಮುಖ್ಯವಾಗಿ ಆಕ್ಸಿಜನ್ ಕೊರತೆ ಹಾಹಾಕಾರವೇ ಎದ್ದಿದ್ದು, ಇದರ ಕುರಿತಂತೆ ಡಾಕ್ಟರ್ ಕಫೀಲ್ ಖಾನ್ ಟ್ವೀಟ್ ಮಾಡಿದ್ದಾರೆ.

2017 ಆಗಸ್ಟ್ ತಿಂಗಳಲ್ಲಿ ಆಕ್ಸಿಜನ್ ಸಂಗ್ರಹ ಕೊರತೆಯ ಸಮಸ್ಯೆಯ ಬಗ್ಗೆ ನಾನು ಪ್ರಶ್ನೆ ಎತ್ತಿದ್ದಾಗ ಆಗ ಯಾರೂ ನನ್ನನ್ನು ಗಂಭೀರವಾಗಿ ಪರಿಗಣಿಸಲಿಲ್ಲ, ಬದಲಿಗೆ ನನ್ನನ್ನು ಜೈಲಿಗೆ ಕಳಿಸಲಾಯಿತು. ಅಂದಿನಿಂದಲೂ ‘ಎಲ್ಲರಿಗೂ ಉತ್ತಮ ಆರೋಗ್ಯ ವ್ಯವಸ್ಥೆ ಮತ್ತು ನೀತಿಗಾಗಿ’ ಒತ್ತಾಯಿಸುತ್ತಲೇ ಬಂದಿದ್ದೇವೆ. ಈಗ ಇಡೀ ದೇಶವು ಆಕ್ಸಿಜನ್ ಕೊರತೆಯಿಂದ ಬಳಲುತ್ತಿದೆ. ಆರೋಗ್ಯ ಸಚಿವ ಹರ್ಷವರ್ಧನ್ ಅವರೆ ದಯವಿಟ್ಟು ಎಚ್ಚರಗೊಳ್ಳಿ” ಎಂದು ಆಕ್ಸಿಜನ್ ಎಷ್ಟು ಮುಖ್ಯ ಅನ್ನುವುದು ಎಚ್ಚರಿಸಿದ್ದಾರೆ.
2017 ಆಗಸ್ಟ್ ಆಸುಪಾಸಿನಲ್ಲಿ ಗೋರಖ್ಪುರದ ಬಾಬಾ ರಾಘವ್ ದಾಸ್ ವೈದ್ಯಕೀಯ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯುಂಟಾಗಿ 70 ಮಕ್ಕಳು ಸಾವನಪ್ಪಿದ್ದರು. ಆಸ್ಪತ್ರೆಯಲ್ಲಿ ಒಂದೇ ಒಂದು ಸಿಲಿಂಡರ್ ಇದ್ದ ಕಾರಣ ಕೆಲ ಮಕ್ಕಳನ್ನು ಮಾತ್ರವೇ ಬದುಕಿಸಲು ಸಾಧ್ಯವಾಯಿತು ಇನ್ನುಳಿದ ಮಕ್ಕಳು ಸಾವನಪ್ಪಿದ್ದರು. ಈ ದುರಂತದ ಪ್ರಕರಣದಲ್ಲಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ ಮತ್ತು ವೈದ್ಯಕೀಯ ನಿರ್ಲಕ್ಷ್ಯದ ಕುರಿತು ಸಾಲು ಸಾಲು ಆರೋಪದ ಮೇಲೆ ಡಾ. ಕಫೀಲ್ ಖಾನ್ ಅವರು ಅಮಾನತ್ತಾದರು ಇದಲ್ಲದೆ 9 ತಿಂಗಳ ಜೈಲುವಾಸ ಕೂಡ ಅನುಭವಿಸಿದರು. ಆದರೆ ಇದನ್ನೆಲ್ಲ ಕೂಲಂಕುಷವಾಗಿ ಪರಿಶೀಲಿಸಿದ ನ್ಯಾಯಾಲಯ ಅವರು ಅಮಾಯಕರು ಮತ್ತು ಉದ್ದೇಶಪೂರ್ವಕವಾಗಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿ ಕೇಸನ್ನು ಕೈ ಬಿಟ್ಟರು.









