ಸಮ್ಮಿಶ್ರ ಸರಕಾರ ಬಿದ್ದಾಗಲೂ ನಾನು ಅಮೆರಿಕದಲ್ಲಿ ಇದ್ದೆ. ಈಗ ರಾಜ್ಯಸಭಾ ಸದಸ್ಯರ ಅಭ್ಯರ್ಥಿ ವೇಳೆಯೂ ಅಮೆರಿಕದಲ್ಲಿ ಇದ್ದೆ ಅಂತಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ರಾಜ್ಯಸಭಾ ಚುನಾವಣೆಯ ಮತದಾನ ಶುಕ್ರವಾರ ಬೆಳಿಗ್ಗೆ ಆರಂಭಗೊಂಡಿದ್ದು, ಮತದಾನಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಲವಾರು ಬಾರಿ ಜೆಡಿಎಸ್ ಗೆ ಬೆಂಬಲ ನೀಡಿದೆ. ಈ ಬಾರಿ ಜೆಡಿಎಸ್ ನಮ್ಮ ಅಭ್ಯರ್ಥಿಗೆ ಬೆಂಬಲ ನೀಡಲಿ ಎಂದು ಹೇಳಿದರು.
ನಾವು ಆತ್ಮಸಾಕ್ಷಿ ಮತಗಳನ್ನು ಕೇಳಿದ್ದೇವೆ. ಎಷ್ಟು ಮತಗಳು ಬರುತ್ತವೋ ಕಾದು ನೋಡೋಣ. ಜಾತ್ಯತೀತ ಶಕ್ತಿಗಳು ಒಂದಾಗಬೇಕಾದರೆ ಜೆಡಿಎಸ್ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಲಿ ಎಂದು ಅವರು ಹೇಳಿದರು.

ನಿನ್ನೆ ಯಾರು ಯಾರ ಮನೆಗೆ ಹೋಗಿದ್ದರು ಎಂಬುದೆಲ್ಲ ನನಗೆ ಗೊತ್ತಿದೆ. ಅಡ್ಡಮತದಾನ ಭಯದಿಂದಲೇ ತಾನೇ ಅವರು ಹೋಗಿರುವುದು. ಚುನಾವಣೆಯಲ್ಲಿ ಎಲ್ಲರೂ ಗೆಲ್ಲಬೇಕು ಅಂತನೇ ಇರೋದು. ನೋಡೋಣ ಏನಾಗುತ್ತೆ ಎಂದು ಡಿಕೆ ಶಿವಕುಮಾರ್ ನುಡಿದರು.