ಮಾನವ ಸಮಾಜದ ಅಭ್ಯುದಯಕ್ಕೆ ಬುನಾದಿಯೇ ಭೂಮಿ ಭೂಮಿಯನ್ನಾಧರಿಸಿದ ಕೃಷಿ, ಬೇಸಾಯ ಮತ್ತು ಹೈನುಗಾರಿಕೆಯ ವೃತ್ತಿಗಳು. ಬೇಸಾಯದ ತಂತ್ರಗಳು ಮತ್ತು ವಿಧಾನಗಳು ಎಷ್ಟೇ ಬದಲಾದರೂ, ಆಧುನಿಕ ವಿಜ್ಞಾನವು ಎಷ್ಟೇ ನವೀನ ಯಂತ್ರಗಳ ಅವಿಷ್ಕಾರಕ್ಕೆ ಕಾರಣವಾದರೂ, ಅನ್ನ ಬೆಳೆಯಲು ಬೇಕಿರುವ ಮೂಲ ತಳಹದಿ ʼ ಮಣ್ಣು ʼ ಅಥವಾ ಭೂಮಿ. ಆಧುನಿಕ ಜಗತ್ತಿನಲ್ಲಿ ಮಣ್ಣಿನಲ್ಲೇ ದುಡಿದು ಜೀವ ಸವೆಸುವ ಶ್ರಮಜೀವಿಗಳನ್ನು ಅಭಿವೃದ್ಧಿಯ ಏಣಿಯಲ್ಲಿ ಅತ್ಯಂತ ಕೆಳಸ್ತರದಲ್ಲಿಟ್ಟು ನೋಡುವ ಒಂದು ಮಾರುಕಟ್ಟೆ ವ್ಯವಸ್ಥೆಯ ನಾಗರಿಕತೆಯನ್ನು ನಾವು ಕಟ್ಟಿಕೊಂಡಿದ್ದೇವೆ. ನವ ಉದಾರವಾದಿ ಆರ್ಥಿಕ ಅಭಿವೃದ್ಧಿಯ ಶ್ರೇಣೀಕರಣದಲ್ಲಿ ಕೃಷಿ-ಬೇಸಾಯವನ್ನು ಅನುಷಂಗಿಕ (Secondary) ವೃತ್ತಿ ಎಂದು ಪರಿಭಾವಿಸುವ ಒಂದು ವರ್ಗವೂ ಸಹ ನಮ್ಮ ನಡುವೆ ಇದೆ.

ಹಾಗಾಗಿಯೇ ಭೂಮಿಯನ್ನೇ ನಂಬಿ ಬದುಕುವ ರೈತರು ಮತ್ತು ಅವರು ಎದುರಿಸುವ ಸವಾಲುಗಳು ಸರ್ಕಾರದ ದೃಷ್ಟಿಯಲ್ಲಿ ಹಾಗೂ ನಗರೀಕರಣಗೊಂಡ ಸಮಾಜದ ದೃಷ್ಟಿಯಲ್ಲಿ ನಗಣ್ಯವಾಗುತ್ತದೆ. ಒಬ್ಬ ಬಂಡವಾಳಶಾಹಿ ಉದ್ಯಮಿಯ ಆತ್ಮಹತ್ಯೆ ಗಂಭೀರ ಮಾಧ್ಯಮ ಚರ್ಚೆಗಳನ್ನು, ಸಂಕಥನಗಳನ್ನು ಸೃಷ್ಟಿಸುತ್ತದೆ ಆದರೆ ಸಾವಿರಾರು ರೈತರ ಆತ್ಮಹತ್ಯೆ ಸಾರ್ವಜನಿಕ ಸಂಕಥನದ ಒಂದು ಅಂಶಿಕ ಭಾಗವೂ ಆಗುವುದಿಲ್ಲ. ಅದು ಕೇವಲ ರೈತರಿಗೆ ಸಂಬಂಧಪಟ್ಟ ಸಮಸ್ಯೆಯಾಗಿ ಉಳಿಯುತ್ತದೆ. 21ನೆ ಶತಮಾನದ ಮೂರನೆ ದಶಕದಲ್ಲೂ ಇದೇ ಸನ್ನಿವೇಶವನ್ನು ನಾವು ಭಾರತದಾದ್ಯಂತ ಕಾಣಬಹುದು. ಈ ರೈತಾಪಿ ವರ್ಗದಲ್ಲೇ ಅಂತರ್ಗತವಾಗಿರುವ ಭೂ ರಹಿತ ಕೃಷಿಕರು, ಕೃಷಿ ಕಾರ್ಮಿಕರು ಇನ್ನೂ ನಿಕೃಷ್ಟವಾಗಿ ಕಾಣಲ್ಪಡುತ್ತಾರೆ.

ಸುಗ್ಗಿ ಸಂಭ್ರಮದ ನಡುವೆ
ಈ ವಿಷಮ ವಾತಾವರಣದಲ್ಲೇ ಭಾರತ ಮತ್ತೊಂದು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಿದೆ. ಮಕರ ಸಂಕ್ರಮಣ ಎಂದೂ ಈ ಹಬ್ಬವನ್ನು ನಾಡಿನಾದ್ಯಂತ ಆಚರಿಸಲಾಗುತ್ತದೆ. ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಕೃಷಿಯೊಡನೆ ಬೆಸೆದುಕೊಂಡಿರುವ ಹೈನುಗಾರಿಕೆ, ಗೋ ಸಾಕಾಣಿಕೆ ಸಂಕ್ರಾಂತಿಯ ಸಂಭ್ರಮವನ್ನು ಇನ್ನೂ ಹೆಚ್ಚಿಸುತ್ತದೆ. ಶತಮಾನಗಳಿಂದ ಅನುಸರಿಸಲಾಗುತ್ತಿರುವ ಸಾಂಪ್ರದಾಯಿಕ ಹಬ್ಬಗಳು ಆಚರಣಾತ್ಮಕವಾಗಿ ಅಧುನೀಕರಣಗೊಂಡಾಗ, ಅಲ್ಲಿ ಈ ಹಬ್ಬಗಳ ಹಿಂದಿನ ಔದಾತ್ಯಗಳು ಮತ್ತು ಮೂಲ ಭಾಗಿದಾರರ (Stake holders) ಪ್ರಾಮುಖ್ಯತೆ ಹಿಂಬದಿಗೆ ಸರಿದುಬಿಡುತ್ತದೆ. ಸಂಕ್ರಾಂತಿಯಂತಹ ರೈತಾಪಿಯ ಹಬ್ಬವೂ ಸಹ ನಗರ ಜೀವನದ ಒಂದು ಸಂಭ್ರಮವಾಗಿಬಿಡುತ್ತದೆ.

ನವ ಉದಾರವಾದದ ಸಂದರ್ಭದಲ್ಲಿ ಗಮನಿಸಬೇಕಾದ ಒಂದು ಸೂಕ್ಷ್ಮ ಎಂದರೆ, ಮೊದಲು ಜನರು ಹಬ್ಬ ಆಚರಿಸಿ ಸಂಭ್ರಮಿಸುತ್ತಿದ್ದರು, ಈಗ ಮಾರುಕಟ್ಟೆ ಸಂಭ್ರಮಿಸುತ್ತದೆ, ಜನರು ಆಚರಣೆಗಳಿಗೆ ಸೀಮಿತವಾಗುತ್ತಾರೆ. ಸಂಕ್ರಾಂತಿಯ ಎಳ್ಳು-ಬೆಲ್ಲ-ಒಣಕೊಬ್ಬರಿ ಮಿಶ್ರಣದ ಸುತ್ತ ಸೃಷ್ಟಿಯಾಗಿರುವ ಬೃಹತ್ ಮಾರುಕಟ್ಟೆ ಈ ಸಂಭ್ರಮವನ್ನು ಜನರ ಬಳಿಗೆ ಕೊಂಡೊಯ್ಯುವ ಸಲುವಾಗಿಯೇ, ಇದರ ಸಾಂಪ್ರದಾಯಿಕತೆಯನ್ನು ನುಂಗಿಹಾಕಿ ಮತ್ತೊಂದು ಮಾರುಕಟ್ಟೆ ಸರಕುಗಳನ್ನಾಗಿ ಮಾಡಿಬಿಡುತ್ತದೆ. ನಗರ ಜೀವನದಲ್ಲಿ ಕಾಣಬಹುದಾದ ಈ ಚಿತ್ರಣವನ್ನು ಇತ್ತೀಚೆಗೆ ಮುಂದುವರೆದ ಹಳ್ಳಿಗಳಲ್ಲೂ ಕಾಣಬಹುದು. ರೈತ ತಾನು ಬೆಳೆದ ಕಬ್ಬು, ತೆಂಗಿನಕಾಯಿ, ಎಳ್ಳು ಮತ್ತು ಕಬ್ಬಿನಿಂದಲೇ ತಯಾರಾಗುವ ಬೆಲ್ಲದ ಮೇಲೆ ಹಿಡಿತವನ್ನು ಕಳೆದುಕೊಂಡು, ಮಾರುಕಟ್ಟೆ ಜಗುಲಿಯಲ್ಲಿ ದೊರೆಯಬಹುದಾದ ಬೆಲೆಗೆ ತೃಪ್ತಿಪಟ್ಟುಕೊಳ್ಳುತ್ತಾನೆ. ಈ ಸರಕುಗಳಿಂದ ಉತ್ಪತ್ತಿಯಾಗುವ ಲಾಭಾಂಶದ ವಾರಸುದಾರರು ವಿಶಾಲ ಮಾರುಕಟ್ಟೆಯ ಉದ್ಯಮಿಗಳಾಗಿರುತ್ತಾರೆ.

ಸಂಪ್ರದಾಯ ಮತ್ತು ರೈತ ಜಗತ್ತು
ಹಾಗಾಗಿ ಸುಗ್ಗಿ ಹಬ್ಬ ಎಂದೇ ಕರೆಯಬಹುದಾದ ಸಂಕ್ರಾಂತಿಯಲ್ಲಿ ಹೊಸ ಬೆಳೆಗಳಾದ ಬತ್ತ-ಅಕ್ಕಿ, ಕಬ್ಬು ಮತ್ತು ದವಸ ಧಾನ್ಯಗಳ ಕೊಯ್ಲಿನ ಸಂಭ್ರಮವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ವೈಜ್ಞಾನಿಕವಾಗಿ ಸೂರ್ಯನು ಮಕರ ರಾಶಿಗೆ ಪ್ರವೇಶಿಸಿ ದಕ್ಷಿಣದಿಂದ ಉತ್ತರಕ್ಕೆ ಚಲಿಸಲು ಆರಂಭಿಸುತ್ತಾನೆ. ಸಾಂಪ್ರದಾಯಿಕ ಸಮಾಜದಲ್ಲಿ ಸೂರ್ಯನಿಗೆ ದೈವೀಕ ರೂಪ ನೀಡುವುದರಿಂದ ಇದಕ್ಕೆ ಸಂಬಂಧಿಸಿದ ಪೂಜೆಗಳನ್ನೂ ನಡೆಸಲಾಗುತ್ತದೆ. ಜ್ಯೋತಿಷಿಗಳಿಗೆ ಇದು ಪ್ರಶಸ್ತ ಕಾಲವಾಗಿದ್ದು, ಜನಸಾಮಾನ್ಯರಲ್ಲಿ ಮತ್ತಷ್ಟು ಭ್ರಮೆಗಳನ್ನು, ಮೌಢ್ಯಾಚರಣೆಗಳನ್ನು ಹುಟ್ಟುಹಾಕುವ ಪ್ರಕ್ರಿಯೆ ಬಹುಮಟ್ಟಿಗೆ ಔದ್ಯಮಿಕ ರೂಪ ಪಡೆದುಕೊಳ್ಳುತ್ತದೆ. ಈ ಸಂಭ್ಮದ ನಡುವೆ ಕಾಣದೆ ಹೋಗುವುದು ಈ ಪದಾರ್ಥಗಳನ್ನು ಬೆಳೆಯುವ ರೈತಾಪಿಯ ನಿತ್ಯಬದುಕಿನ ಸಿಕ್ಕುಗಳು ಮತ್ತು ಸವಾಲುಗಳು.

ಸಂಕ್ರಾಂತಿ ಹಬ್ಬದ ಭಾಗವಾಗಿಯೇ ಭಾರತೀಯ ಸಮಾಜದಲ್ಲಿ ರೂಢಿಗತವಾಗಿರುವ ಎಳ್ಳು ಬೆಲ್ಲ ಹಂಚುವ ಒಂದು ಪ್ರಕ್ರಿಯೆ, ತಳಮಟ್ಟದಲ್ಲಿ ಸಮಾಜವನ್ನು ಒಂದುಗೂಡಿಸುವ ವಿದ್ಯಮಾನವಾಗಿದೆ. “ ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು ” ಎಂಬ ನಾಣ್ಣುಡಿಯನ್ನು ಆಡುತ್ತಲೇ ಜನರು ಪರಸ್ಪರ ಹಂಚಿಕೆಯ ಮೂಲಕ ಸಂಭ್ರಮಿಸುತ್ತಾರೆ. ತಳಸ್ತರದ ಸಮಾಜದಲ್ಲಿ ಈ ಹಂಚಿಕೆಯ ಪ್ರಕ್ರಿಯೆ ಸೌಹಾರ್ದತೆಯ ಪ್ರತೀಕವಾಗಿ ಕಂಡರೆ, ಮೇಲ್ಪದರದ-ಮೇಲ್ವರ್ಗದ ಸಮುದಾಯಗಳಲ್ಲಿ ಇದು ಸಾಮಾಜಿಕ-ಆರ್ಥಿಕ ಅಂತಸ್ತು ಮತ್ತು ಮೇಲರಿಮೆಯನ್ನು ಬಿಂಬಿಸುವ ಕ್ರಿಯೆಯಾಗಿಯೂ ಕಾಣುತ್ತದೆ. ಆಧುನಿಕ ಕಾರ್ಪೋರೇಟ್ ಮಾರುಕಟ್ಟೆ ಈ ಕ್ರಿಯೆಗೆ ಪೂರಕವಾದ ಉಪಕರಣಗಳನ್ನೂ, ಸಾಧನಗಳನ್ನೂ ಉತ್ಪಾದಿಸುವ ಮೂಲಕ ತನ್ನ ಲಾಭವನ್ನು ಹೆಚ್ಚಿಸಿಕೊಳ್ಳುತ್ತದೆ.

ಸಾಮಾಜಿಕ ವಾಸ್ತವಗಳ ನಡುವೆ
ಆದರೆ ಈ ನಾಣ್ಣುಡಿಯನ್ನು ಜೋಳಿಗೆಯಲ್ಲಿಟ್ಟುಕೊಂಡು ನಮ್ಮ ಸಮಾಜದ ಎಲ್ಲ ಸ್ತರಗಳಲ್ಲೂ, ಎಲ್ಲ ಮಗ್ಗುಲುಗಳಲ್ಲೂ, ಎಲ್ಲ ವಲಯಗಳಲ್ಲೂ ಒಮ್ಮೆ ವಿಹರಿಸಿದಾಗ ಏನನ್ನಿಸಬಹುದು ? ಒಳ್ಳೆಯ ಮಾತು ಎನ್ನುವುದು ಸಾಪೇಕ್ಷ ಪದ, ವ್ಯಕ್ತಿಗತ ನೆಲೆಯಲ್ಲಿ ನಿಷ್ಕರ್ಷೆಯಾಗುವಂತಹುದು. ಹಾಗಾಗಿ ಈ ಹಂಚಿಕೆಯ ಭಾಗವಾಗಿ ʼ ಒಳ್ಳೆಯ ಮಾತು ʼ ಆಡುವ ವ್ಯಕ್ತಿಯಲ್ಲಿರುವ ಭಾವ ಮತ್ತು ಅಭಿವ್ಯಕ್ತಿಯ ರೂಪ ಮುಖ್ಯವಾಗುತ್ತದೆ. ರಾಜಕೀಯ ವಲಯದಲ್ಲಿ ಈ ʼ ಒಳ್ಳೆಯ ಮಾತು ʼ ಎನ್ನುವುದು ವಸ್ತುಸಂಗ್ರಹಾಲಯದ (Museum) ಆಲಂಕಾರಿಕ ಪದವಾಗಿರುವುದು ಸರ್ವವೇದ್ಯ. ಇದರಿಂದಾಚೆಗಿನ ಸಮಾಜದಲ್ಲೂ ನಾವು ಕಾಣುತ್ತಿರುವುದೇನು ? ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿರುವ ಭೇದಗಳು, ವೈಷಮ್ಯಗಳು, ದ್ವೇಷ ಭಾವನೆ ಮತ್ತು ʼ ಅನ್ಯತೆ ʼಯ ಭಾವ.

ನೂರಾರು ಕುಟುಂಬಗಳು ವಾಸಿಸುವ ಒಂದು ಅಪಾರ್ಟ್‌ಮೆಂಟ್ ನಿವಾಸಿಗಳು ʼ ಸಸ್ಯಾಹಾರಿಗಳು ಮಾತ್ರ ʼ (Veg Only) ಆಗಿರುವಾಗ ಅಲ್ಲಿ ಎಳ್ಳು-ಬೆಲ್ಲದ ಹಂಚಿಕೆಯ ಔಚಿತ್ಯವಾದರೂ ಏನಿರುತ್ತದೆ. ಇದರಿಂದಾಚೆಗಿನ ಬಯಲಿನಲ್ಲಿ ಬಡಾವಣೆಗಳ ನಿರ್ಮಾಣ ಹಂತದಲ್ಲೇ ನಿರ್ದಿಷ್ಟ ಜಾತಿಗಳನ್ನು ನಿಗದಿಪಡಿಸುವಂತಹ ವಾತಾವರಣವನ್ನೂ ನಾವು ನೋಡುತ್ತಿದ್ದೇವೆ. ದಲಿತ ಎಂಬ ಕಾರಣಕ್ಕೆ ಬಾಡಿಗೆಗೆ ಮನೆ ದೊರೆಯದಂತಹ ಸನ್ನಿವೇಶ ಇಂದಿಗೂ ಇರುವಾಗ, ಆ ದಲಿತ ಕುಟುಂಬಕ್ಕೆ ಎಳ್ಳು ಬೆಲ್ಲ ನೀಡಿ ಒಳ್ಳೆಯ ಮಾತನಾಡುವವರಾದರೂ ಯಾರು ? ಮತ್ತದೇ ಜಾತಿ-ಉಪಜಾತಿ ಕೋಶಗಳಲ್ಲಿ ಸಿಕ್ಕಿಹಾಕಿಕೊಂಡ ವಿದ್ಯಾವಂತ ಜನರಲ್ಲವೇ ? ಈ ವಾತಾವರಣದಲ್ಲಿ ಹಂಚಲ್ಪಡುವ ಪದಾರ್ಥಗಳನ್ನು ಬೆಳೆಯುವ ರೈತನ ಸ್ಥಾನ ಏನು ?

ರೈತಾಪಿಯ ಸಂಕಟಗಳ ನಡುವೆ
ಇದರ ಬಗ್ಗೆ ಸಮಾಜ ಯೋಚಿಸುವುದೇ ಇಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ರೈತ ಸಾಮಾನ್ಯರ ಪರಿಭಾಷೆಯಲ್ಲಿ ಸಾಲಗಾರನೋ, ದುಸ್ಸಾಹಸಿಯೋ ಅಥವಾ ದುಶ್ಚಟ, ದುಂದು ವೆಚ್ಚಗಳನ್ನು ಅಂಟಿಸಿಕೊಂಡವನೋ ಆಗಿಬಿಡುತ್ತಾನೆ. ಅವನ ಅಕಾಲಿಕ ಸಾವಿಗೆ ಕಾರಣವಾಗುವ ಹಣಕಾಸು ಮಾರುಕಟ್ಟೆಯ ವಾರಸುದಾರರು, ವ್ಯಕ್ತಿಯ ನಿರ್ಗಮನಕ್ಕಿಂತಲೂ ಹೆಚ್ಚು ಗಮನ ನೀಡುವುದು ಉಳಿದಿರುವ ಸಂತ್ರಸ್ತ ಕುಟುಂಬದ ಕಡೆಗೆ. ಇದೇ ಸೂತ್ರವನ್ನು ಬ್ಯಾಂಕುಗಳಿಗೂ, ಹಣಕಾಸು ಸಂಸ್ಥೆಗಳಿಗೂ ಅನ್ವಯಿಸಬಹುದು. ಆದರೆ ಈ ಸಂಸ್ಥೆಗಳು ನಿರ್ಜೀವ ಸ್ಥಾವರಗಳು ಹಾಗಾಗಿ ಭಾವನಾತ್ಮಕ ಸೂಕ್ಷ್ಮತೆಗಳಿಗೆ ಇಲ್ಲಿ ಆಸ್ಪದವೇ ಇರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸರ್ಕಾರಗಳೂ ಇದೇ ಧೋರಣೆಯನ್ನು ತೋರುತ್ತಿವೆ. ವರ್ಷಕ್ಕೆ ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಕೇವಲ ಅಂಕಿಸಂಖ್ಯೆಗಳ ದತ್ತಾಂಶ ಕೋಶಗಳಿಗೆ ಸೀಮಿತವಾಗುತ್ತದೆ.

ಸಂಕ್ರಾಂತಿಯ ಸಂಭ್ರಮದ ನಡುವೆಯೇ ಗಮನಿಸಬೇಕಾದ ಮತ್ತೊಂದು ಸೂಕ್ಷ್ಮ ವಿಚಾರ ಎಂದರೆ , ಮಣ್ಣನ್ನೇ ಅವಲಂಬಿಸಿ ಬದುಕು ಸವೆಸುವ ಕೃಷಿ ಕಾರ್ಮಿಕ ಸಮುದಾಯವನ್ನು , ತುಂಡು ಭೂಮಿ ಇದ್ದರೂ ಅದನ್ನು ಉಳುಮೆ ಮಾಡಲಾಗದೆ ಬೀಡುಬಿಟ್ಟು, ವಲಸೆ ಹೋಗುವ ಗ್ರಾಮೀಣ ಜನತೆಯನ್ನು, ವರ್ಷಕ್ಕೆ ಆರು ತಿಂಗಳು ಮಾತ್ರ ತಮ್ಮ ಸಂಸಾರಕ್ಕಾಗುವಷ್ಟು ದವಸ ಧಾನ್ಯಗಳನ್ನು ಬೆಳೆಯುವ, ಉಳಿದ ಸಮಯದಲ್ಲಿ ಕೂಲಿಕಾರರಾಗಿ ದುಡಿಯುವ ಅತಿ ಸಣ್ಣ ರೈತರನ್ನು ನಮ್ಮ ಆಧುನಿಕ ಸಮಾಜ ಮತ್ತು ಸರ್ಕಾರ ಯಾವ ನೆಲೆಯಲ್ಲಿಟ್ಟು ನೋಡುತ್ತದೆ ? ಈ ವರ್ಗಗಳಿಗೆ ಕಲ್ಪಿಸಿದ್ದಂತಹ ಸಾಂವಿಧಾನಿಕ ಉದ್ಯೋಗದ ಹಕ್ಕನ್ನೂ ಜಿ ರಾಮ್ ಜಿ ಕಾಯ್ದೆಯ ಮೂಲಕ ಕಸಿದುಕೊಳ್ಳಲಾಗಿದೆ. ಈ ವರ್ಗದ ಮಕ್ಕಳಿಗೆ ಲಭ್ಯವಿದ್ದ ಸಾವಿರಾರು ಸರ್ಕಾರಿ ಶಾಲೆಗಳನ್ನು ಕರ್ನಾಟಕ ಸರ್ಕಾರ ವಿಲೀನದ ಹೆಸರಿನಲ್ಲಿ ಮುಚ್ಚಿಹಾಕುತ್ತಿದೆ.

ಈ ಸಮಾಜದ ನಡುವೆ ನಮ್ಮ ಎಳ್ಳು ಬೆಲ್ಲ ತುಂಬಿದ ಜೋಳಿಗೆಯನ್ನು ಕೊಂಡೊಯ್ದರೆ ಯಾವ ಒಳ್ಳೆಯ ಮಾತನ್ನಾಡಲು ಸಾಧ್ಯ ? ಒಳ್ಳೆಯ ಮಾತು ಎನ್ನುವುದರ ಮೂಲ ಸದ್ಭಾವನೆ ಅಂದರೆ ಅಂತರಂಗದಲ್ಲಿರುವ ಉದಾತ್ತ-ಉನ್ನತ ಭಾವನೆ, ಮನುಷ್ಯ ಪ್ರೀತಿ, ಮನುಜ ಸಂಬಂಧದ ಸೂಕ್ಷ್ಮತೆ ಮತ್ತು ಸರ್ವರ ಸುಖ ಬಯಸುವ ಮನೋಭಾವ. ತಮ್ಮ ನಾಳೆಗಳಿಗಾಗಿ ಆತಂಕದಿಂದ ಕಾಯುತ್ತಿರುವ ಒಂದು ಸಮಾಜದಲ್ಲಿ, ಈ ಭಾವನೆಗಳಿಗೆ ಅರ್ಥ ಹುಡುಕುವುದಾದರೂ ಎಲ್ಲಿ ? ಈ ಸಾಮಾನ್ಯ ಅರೆ ಅಕ್ಷರಸ್ಥ, ಅನಕ್ಷರಸ್ಥ ಜನರನ್ನು ವಂಚಿಸುವ ಆರ್ಥಿಕ-ರಾಜಕೀಯ ವ್ಯವಸ್ಥೆಯನ್ನು ಪ್ರತಿನಿಧಿಸುವ ಅಥವಾ ಸಮರ್ಥಿಸುವ ಸಮಾಜವೊಂದು ಈ ಜನರಿಗೆ ಸದ್ಭಾವನೆಯ ಆಲಿಂಗನದ ಅವಕಾಶ ನೀಡಲು ಸಾಧ್ಯವೇ ? ನಮ್ಮ ಎದುರಿನಲ್ಲಿರುವ ವ್ಯಕ್ತಿಗೆ ಸಂತೋಷವಾಗುವ ಹಾಗೆ ಮಾತನಾಡುವುದನ್ನೇ ಒಳ್ಳೆಯ ಮಾತು ಎಂದು ತಪ್ಪಾಗಿ ಭಾವಿಸಿರುವ ಆಧುನಿಕ ನಾಗರಿಕತೆಯಲ್ಲಿ ಈ ವಿರೋಧಾಭಾಸವನ್ನು ಗುರುತಿಸಬಹುದು.

ಸೌಹಾರ್ದ-ಸದ್ಭಾವನೆಗಳನ್ನು ಹೊತ್ತು
ಎಲ್ಲ ಸಮಾಜ-ಸಮುದಾಯಗಳಲ್ಲೂ ʼ ತಮ್ಮವರ ನಡುವೆ ʼ ಹಂಚಿಕೊಳ್ಳುವ ಎಳ್ಳು-ಬೆಲ್ಲದಲ್ಲಿ ಸಿಹಿ ಕಹಿಯ ರುಚಿ ಖಂಡಿತವಾಗಿಯೂ ಇರುತ್ತದೆ. ಆದರೆ ತಾತ್ವಿಕವಾಗಿ ಇದು ಆತ್ಮವಂಚಕ ಭಾವನೆಯಾಗಿರುತ್ತದೆ. ಸಾಮಾನ್ಯ ಜನರ ನಿತ್ಯ ಜೀವನದಲ್ಲಿ ಇಪ್ಪತ್ನಾಲ್ಕು ಗಂಟೆಯೂ ಪರಸ್ಪರ ಸಂವಹನದ ಮೂಲಕ, ಕೊಡು ಕೊಳ್ಳುವಿಕೆಯ ಮೂಲಕ, ನೆರವು-ಉಪಕಾರ-ಸೇವೆ-ಸಹಕಾರದ ಮೂಲಕ ಒಂದು ಸಮಾಜವಾಗಿ ಬಿಂಬಿಸಿಕೊಳ್ಳುವ ನಾಗರಿಕತೆಯ ಬಯಲಲ್ಲಿ, ಮೇಲ್ಜಾತಿಯ ಸಮಾಜವು, ತಳಸ್ತರದ ಸಮಾಜದೊಡನೆ ಎಳ್ಳು ಬೆಲ್ಲ ಹಂಚಿಕೊಳ್ಳಲು ಸಾಧ್ಯವೇ ? ಅಥವಾ ಧಾರ್ಮಿಕ ಅಲ್ಪಸಂಖ್ಯಾತರ ನಡುವೆ ಹಂಚಿ ಆಲಿಂಗಿಸಿಕೊಳ್ಳಲು ಸಾಧ್ಯವೇ ?

ನವ ಭಾರತದ ವಿಕಾಸದ ಹಾದಿಯಲ್ಲಿ ಪರಸ್ಪರ ಆಲಿಂಗನ ದೂರದ ಮಾತು, ಮಾತುಕತೆಯೇ ಹಲವು ಸಿಕ್ಕುಗಳನ್ನು ಸೃಷ್ಟಿಸುತ್ತದೆ. ಸಾಮಾನ್ಯವಾಗಿ ಮನುಷ್ಯ ಸಂಬಂಧವನ್ನು ಬೆಳೆಸುವುದು ವ್ಯಕ್ತಿಗಳ ಊರು, ಭಾಷೆ, ವೃತ್ತಿ, ಆಹಾರ ಪದ್ಧತಿ ಮುಂತಾದ ವಿವರಗಳ ಪರಸ್ಪರ ಹಂಚಿಕೆಯ ಮೂಲಕ. ಆದರೆ ಈಗ ಈ ಮಾಹಿತಿಯನ್ನು ನೀಡಲು ಹಿಂಜರಿಯುವ ಪರಿಸ್ಥಿತಿ ಸೃಷ್ಟಿಯಾಗಿದೆ. ಬಾಂಗ್ಲಾ ಭಾಷೆ, ಗೋಮಾಂಸ ಇವೆಲ್ಲವೂ ಗುಂಪು ಥಳಿತಕ್ಕೆ ಕಾರಣವಾಗುತ್ತವೆ. ವ್ಯಕ್ತಿಯ ಹೆಸರು ಕೇಳುವುದಕ್ಕೂ ಮುನ್ನ ʼ ಜೈಕಾರಕ್ಕಾಗಿ ʼ ಬಲಾತ್ಕರಿಸುವ ಸಮಾಜ ನಮ್ಮ ನಡುವೆ ಎದ್ದು ನಿಂತಿದೆ. ಈ ಕ್ರಿಯೆಗೆ ಅಧಿಕೃತತೆ ನೀಡುವಂತಹ ಯುವ ಸೈನ್ಯಗಳೇ ದೇಶಾದ್ಯಂತ ತಯಾರಾಗಿವೆ. ವಿವಾಹಿತ ಯುವ ಸಮೂಹದ ಜಾತಿಗಳನ್ನು ಗೋಪ್ಯವಾಗಿಡುವಂತಹ ದುಸ್ಥಿತಿ ತಲುಪಿದ್ದೇವೆ. ಇಂತಹ ವಿಕೃತಿಗಳ ನಡುವೆ ʼ ಎಳ್ಳು-ಬೆಲ್ಲ ʼ ಹಂಚಿ ʼ ಒಳ್ಳೆಯ ಮಾತಾಡುವ ʼ ಸಮಾಜವನ್ನು ಹೇಗೆ ಕಟ್ಟುವುದು ?

ಅನ್ನ ಬೆಳೆಯುವ ರೈತರು ಜಾತಿ-ಮತ-ಧರ್ಮ-ಭಾಷೆಗಳ ಎಲ್ಲೆಗಳನ್ನು ಮೀರಿ ಮಣ್ಣಿನೊಡನೆ ತನ್ನ ಒಡನಾಟದಲ್ಲಿ ಬದುಕು ಸವೆಸುತ್ತಾರೆ. ಈ ಬೆಳೆಗಳನ್ನು ಬಳಸುವ ಸಮಾಜ ಈ ಎಲ್ಲೆಗಳೆಲ್ಲವನ್ನೂ ನವೀಕರಿಸಿ, ವಿಭಜಕ ಸಮುದಾಯಗಳನ್ನು ಸೃಷ್ಟಿಸುತ್ತದೆ. ಸುಗ್ಗಿಯ ಸಂಭ್ರಮದಲ್ಲಿರುವ ರೈತಾಪಿಯನ್ನು ಹೇಗೆ ತನ್ನ ಲಾಭಕ್ಕಾಗಿ ಬಳಸಿಕೊಳ್ಳಬಹುದು ಎಂದು ರಾಜಕೀಯ ಪಕ್ಷಗಳು ಯೋಚಿಸುತ್ತಿದ್ದರೆ, ಈ ರೈತರ ಮೂಲಾಧಾರವಾದ ಭೂಮಿಯನ್ನೇ ಹೇಗೆ ಕಸಿದುಕೊಳ್ಳಬಹುದು ಎಂದು ಕಾರ್ಪೋರೇಟ್ ಮಾರುಕಟ್ಟೆ ಯೋಚಿಸುತ್ತಿರುತ್ತದೆ. ಈ ದುಷ್ಟ ಯೋಚನೆಗಳ ನಡುವೆ ಸಮಾಜ ಸಂಕ್ರಾಂತಿಯನ್ನು ಸಂಭ್ರಮಿಸುತ್ತದೆ. ಹಬ್ಬಗಳ ಮೂಲಾರ್ಥಗಳನ್ನು ಕಳೆದುಕೊಂಡು, ಕೇವಲ ಆಚರಣೆಗಳಾದಾಗ ಹೀಗಾಗುತ್ತದೆ.
ಸಮಸ್ತರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು







