ದೇಶದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ. ಭಾರತೀಯ ಜನತಾ ಪಾರ್ಟಿ ಗೋವುಗಳನ್ನು ರಕ್ಷಣೆ ಮಾಡಬೇಕು. ಗೋವುಗಳನ್ನು ತಿನ್ನಬಾರದು. ಹಿಂದೂಗಳು ಪೂಜಿಸುವ ಗೋವುಗಳನ್ನು ಮುಸ್ಲಿಮರು ಕೊಂದು ನಾಶ ಮಾಡ್ತಾರೆ ಎನ್ನುತ್ತ ದೂರುತ್ತಾರೆ. ಅದರಲ್ಲೂ ಭಜರಂಗದಳ ಹಾಗು ವಿಶ್ವ ಹಿಂದೂ ಪರಿಷತ್ ಗೋವುಗಳ ರಕ್ಷಣೆಗೆ ಟೊಂಕ ಕಟ್ಟಿ ನಿಲ್ಲುತ್ತದೆ. ಕರ್ನಾಟಕದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಗೋವುಗಳನ್ನು ಸಾಗಾಟ ಮಾಡುವುದು ರೈತರಿಗೂ ಕಷ್ಟಕರ ಎನ್ನುವಂತೆ ಆಗಿದೆ. ಮಲೆನಾಡು ಭಾಗದಲ್ಲಿ ಪ್ರಯೋಜನಕ್ಕೆ ಬಾರದ ಗಂಡು ದನಗಳನ್ನು ಹಾದಿ ಬೀದಿಯಲ್ಲಿ ಬಿಟ್ಟು ಹೋಗ್ತಿದ್ದಾರೆ. ಈ ಪರಿಸ್ಥಿತಿ ಇರುವಾಗ ಒಂದು ವಿಡಿಯೋ ವೈರಲ್ ಆಗಿದೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಾಕಷ್ಟು ಏರ್ಪೋರ್ಟ್ ಹಾಗು ಬಂದರುಗಳನ್ನು ಖಾಸಗಿ ಸಂಸ್ಥೆಯವರಿಗೆ ಮಾರಾಟ ಮಾಡಿದೆ. ಉದಾಹರಣೆಗೆ ಮಂಗಳೂರು ಏರ್ಪೋರ್ಟ್, ಗುಜರಾತ್ನ ಬಂದರು ಸೇರಿದಂತೆ ಸಾಕಷ್ಟು ಕಡೆ ಮಾರಾಟ ಮಾಡಲಾಗಿದೆ. ಈ ರೀತಿಯ ಅದಾನಿ ಬಂದರು ಮೂಲಕ ಗೋವುಗಳ ಸಾಗಾಟ ಮಾಡಲಾಗ್ತಿದೆ ಎನ್ನುವ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿದೆ. ಗುಜರಾತ್ನ ಅದಾನಿ ಪೋರ್ಟ್ನಿಂದ ಅರಬ್ ದೇಶಗಳಿಗೆ ಗೋವುಗಳ ಸಾಗಾಟ ಮಾಡಲಾಗ್ತಿದೆ ಎನ್ನುವುದು ಪ್ರಮುಖ ಆರೋಪ. ಆದರೆ ಈ ವಿಡಿಯೋ ಸತ್ಯಾಸತ್ಯತೆ ಪರಿಶೀಲಿಸಿದಾಗ ನಿಜಾಂಶ ಬಯಲಾಗಿದೆ.

ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಈ ವಿಡಿಯೋ ಸಾವಿರಾರು ಸಂಖ್ಯೆಯಲ್ಲಿ ಶೇರ್ ಆಗಿದೆ. ಜನರು ಜಾಲತಾಣದಲ್ಲಿ ಬಿಜೆಪಿ ವಿರುದ್ಧ ಹರಿಹಾಯುತ್ತಿದ್ದಾರೆ. ಹಸುಗಳ ಮಾರಣ ಹೋಮ ಮಾಡಲಾಗ್ತಿದೆ. ಕೆಲವು ಉದ್ಯಮಿಗಳ ವ್ಯವಹಾರಕ್ಕೆ ಗೋವುಗಳನ್ನು ಬಳಸಿಕೊಳ್ಳಲಾಗ್ತಿದೆ ಎಂದು ಕಿಡಿಕಾರಿದ್ದಾರೆ. ಈಗಾಗಲೇ ಅದಾನಿ ಪೋರ್ಟ್ನಲ್ಲಿ ಗಾಂಜಾ, ಡ್ರಗ್ಸ್ ಸೇರಿದಂತೆ ಮಾದಕ ವಸ್ತುಗಳ ಸಾಗಾಟ ಎಲ್ಲೆ ಮೀರಿದೆ ಎನ್ನುವ ವರದಿಗಳ ಬೆನ್ನಲ್ಲೇ ಈ ರೀತಿಯ ಆರೋಪ ಬಿಜೆಪಿ ಪಾಲಿಗೆ ನುಂಗಲಾರದ ಬಿಸಿ ತುಪ್ಪ ಆಗಿದೆ. ಆದರೆ ಸತ್ಯಾಂಶವನ್ನು ಬಯಲು ಮಾಡಿದ್ದು, ಸದ್ಯಕ್ಕೆ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ಅದಾನಿ ಬಂದರು ಅಲ್ಲ ಎನ್ನುವ ವರದಿಗಳು ಬಂದಿವೆ.
ಈ ವಿಡಿಯೋ ಗುಜರಾತ್ನ ಅದಾನಿ ಬಂದರ್ನಿಂದ ಎಕ್ಸ್ಪೋರ್ಟ್ ಮಾಡಿರೋದು ಅಲ್ಲ. ಬದಲಿಗೆ ವಿಡಿಯೋ ಫ್ಯಾಕ್ಟ್ ಚೆಕ್ Facts Check ಮಾಡಿದಾಗ, ಈ ವಿಡಿಯೋ ಟಿಕ್ಟಾಕ್ನಲ್ಲಿ ಐದು ದಿನಗಳ ಹಿಂದೆ ಪೋಸ್ಟ್ ಆಗಿದೆ. ಇದು ಈಜಿಪ್ಟ್ನಲ್ಲಿ ನಡೆದಿರುವ ಘಟನೆ ಎನ್ನಲಾಗಿದೆ. ಅರೆಬಿಕ್ ಭಾಷೆಯಲ್ಲಿ ಬರೆದಿದ್ದು, ಈದ್ ಆಲ್ ಅಧಾ ಎಂದು ಬರೆಯಲಾಗಿದೆ. ಈಜಿಪ್ಟ್ ಹಾಗು ಇರಾಕ್ ನಡುವೆ ಈ ರೀತಿಯ ಕೊಡುಕೊಳ್ಳುವಿಕೆ ನಡೆದಿದ್ದು, ಭಾರತಕ್ಕೂ ಈ ವಿಡಿಯೋಗೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ವರದಿಗಳು ಖಚಿತಪಡಿಸಿವೆ.
ಕೃಷ್ಣಮಣಿ