ಪತ್ರಿಕೋದ್ಯಮದ ಪಿತಾಮಹ ಎಂದೇ ಕರೆಯಲ್ಪಡುವ ತುಷಾರ್ ಕಾಂತಿ ಘೋಷ್ ಅವರನ್ನು ಕುರಿತು 1940ರ ದಶಕದಲ್ಲಿ ಆವತ್ತಿನ ಬಂಗಾಳದ ರಾಜ್ಯಪಾಲರು “ನಿಮ್ಮ ಪತ್ರಿಕೆಯನ್ನು ಅನೇಕ ಮಂದಿ ಓದುತ್ತಾರೆ ಎನ್ನುವುದು ನಿಜ. ಆದರೆ ಅದು ಇಂಗ್ಲಿಷ್ ಭಾಷೆಯನ್ನು ತುಂಬಾ ಕೆಟ್ಟದಾಗಿ ಬಳಸಿಕೊಳ್ಳುತ್ತದೆ” ಎಂದಿದ್ದರು. ಆಗ ತುಷಾರ್ ಇದನ್ನು ಸ್ವಾತಂತ್ರ್ಯ ಹೋರಾಟಕ್ಕೆ ನನ್ನ ಕೊಡುಗೆ ಎಂದುಕೊಳ್ಳಿ ಎಂದು ವ್ಯಂಗ್ಯವಾಡಿದ್ದರು. ತುಷಾರ್ ಅವರ ಪತ್ರಿಕೆ ‘ಅಮೃತ್ ಬಜಾರ್ ಪತ್ರಿಕಾ’ ಆ ಸಮಯದಲ್ಲಿ ದೇಶಾದ್ಯಂತ ಸರ್ಕಾರದ ವಿರುದ್ಧದ ಪ್ರಮುಖ ಧ್ವನಿಯಾಗಿ ಹೆಸರುವಾಸಿಯಾಗಿತ್ತು. ಸ್ಥಳೀಯ ಪತ್ರಿಕೆ ಎನ್ನುವ ಮಿತಿಯನ್ನು ಮೀರಿ ಬಂಗಾಳಿ ಮತ್ತು ಇಂಗ್ಲಿಷ್ ಎರಡರಲ್ಲೂ ವರದಿ ಮಾಡುತ್ತಿತ್ತು. ಆದರೆ ಅದರ ಇಂಗ್ಲಿಷ್ ವರದಿಗಾರಿಕೆ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಇದನ್ನೇ ರಾಜ್ಯಪಾಲರು ತುಷಾರ್ ಅವರಿಗೆ ಹೇಳಿ ತಿವಿಯಲು ಪ್ರಯತ್ನಿಸಿದ್ದರು.
ಈ ಘಟನೆಗೂ ಕೆಲವು ವರ್ಷಗಳ ಹಿಂದೆ, ತುಷಾರ್ ಅವರ ತಂದೆ ಸಿಸಿರ್ ಕುಮಾರ್ ಘೋಷ್ ಅವರು ಪತ್ರಿಕೆಯ ಸಂಪಾದಕರಾಗಿದ್ದಾಗ, ಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಲಾರ್ಡ್ ಲಿಟ್ಟನ್ ಅವರು ವೆರ್ನಾಕ್ಯುಲರ್ ಪ್ರೆಸ್ ಆಕ್ಟ್ (1878) ಅನ್ನು ಜಾರಿಗೊಳಿಸಿದ್ದರು. ಕಾಯಿದೆಯ ಅಂಗೀಕಾರದ ಮೊದಲು, ಸಿಸಿರ್ ಕುಮಾರ್ ಅವರನ್ನು ಆವತ್ತಿನ ರಾಜತಾಂತ್ರಿಕ ಆಶ್ಲೇ ಈಡನ್ ಅವರು ಸಂಪರ್ಕಿಸಿ ಪತ್ರಿಕೆಯಲ್ಲಿ ಪ್ರಕಟಿಸುವ ಮೊದಲು ಸಂಪಾದಕೀಯವನ್ನು ಸರ್ಕಾರದ ಗಮನಕ್ಕೆ ತರಬೇಕು ಎಂದಿದ್ದರು. ಆದರೆ ಸಿಸಿರ್ ತಕ್ಷಣವೇ “ಭೂಮಿಯಲ್ಲಿ ಕನಿಷ್ಠ ಒಬ್ಬ ಪ್ರಾಮಾಣಿಕ ಪತ್ರಕರ್ತರಾದರೂ ಇರಬೇಕು” ಎಂದು ಸರ್ಕಾರದ ಪ್ರಸ್ತಾವವನ್ನು ತಿರಸ್ಕರಿಸಿದ್ದರು.
ಈ ಘಟನೆಯೇ ಅಂತಿಮವಾಗಿ ಕಾಯಿದೆ ಅಂಗೀಕಾರಕ್ಕೆ ಕಾರಣವಾಯಿತು. ಅಷ್ಟು ದಿನಗಳ ಕಾಲ ಬಂಗಾಳಿಯಲ್ಲಿ ಮಾತ್ರ ಪ್ರಕಟವಾಗುತ್ತಿದ್ದ ‘ಪತ್ರಿಕಾ’ ತನ್ನ ಮುಂದಿನ ಸಂಚಿಕೆಯಿಂದ ದ್ವಿಭಾಷಾ ಪತ್ರಿಕೆಯಾಗಿ ಬದಲಾಯಿತು. ಭಾರತೀಯ ಪತ್ರಿಕೋದ್ಯಮದ ಇತಿಹಾಸದಲ್ಲಿ ಈ ಬದಲಾವಣೆಯನ್ನು ಅತ್ಯಂತ ಮಹತ್ವದ ಬದಲಾವಣೆ ಎಂದು ಗುರುತಿಸಲಾಗಿದೆ.
ತನ್ನ 123 ವರ್ಷಗಳ ಕಾಲದಲ್ಲಿ ‘ಪತ್ರಿಕಾ’ವು ಪತ್ರಿಕಾ ಸ್ವಾತಂತ್ರ್ಯವನ್ನು ರದ್ದುಗೊಳಿಸುವ ಅನೇಕ ಪ್ರಯತ್ನಗಳ ನಡುವೆಯೂ ಉಳಿದುಕೊಂಡಿತ್ತು ಎನ್ನುವುದು ಅದರ ಹೆಗ್ಗಳಿಕೆ. 1919 ರಲ್ಲೇ, ‘ಭಾರತ ಯಾರಿಗೆ ಸೇರಿದ್ದು?’ ಮತ್ತು ‘ಶ್ರೀ ಗಾಂಧಿಯವರ ಬಂಧನ: ಇನ್ನಷ್ಟು ಆಕ್ರೋಶಗಳು’ ಎಂಬ ಪತ್ರಿಕೆ ಬಿಡುಗಡೆ ಮಾಡಿದ ಎರಡು ಸಂಪಾದಕೀಯಗಳಿಂದಾಗಿ ಪತ್ರಿಕೆಯ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಲಾಯಿತು ಮತ್ತು ಅದೇ ವರ್ಷ ಮೇ ತಿಂಗಳಲ್ಲಿ, ಜನರಲ್ ಮೈಕೆಲ್ ಓ’ಡ್ವೈರ್ ಪಂಜಾಬ್ ರಾಜ್ಯದಲ್ಲಿ ಪತ್ರಿಕೆಯ ಪ್ರಕಟಣೆಯನ್ನು ನಿಷೇಧಿಸಿದರು.

ಈಗ ಬಾಂಗ್ಲಾದೇಶದಲ್ಲಿರುವ ಜೆಸ್ಸೋರ್ ಜಿಲ್ಲೆಯ ಪುಟ್ಟ ಗ್ರಾಮವಾದ ಮಗರಾದಲ್ಲಿ ಪತ್ರಿಕೆಯು ಮೊದಲು ಪ್ರಾರಂಭವಾಯಿತು. ಆನಂತರ ಸಿಸಿರ್ 1872 ರಲ್ಲಿ ಕಛೇರಿಯನ್ನು ಕಲ್ಕತ್ತಾಗೆ ಸ್ಥಳಾಂತರಿಸಿದರು. ಸಿಸಿರ್ ಪತ್ರಿಕೆಯ ಸಂಪಾದಕರಾಗಿದ್ದಾಗ ಮ್ಯಾನೇಜರ್, ಪ್ರಿಂಟರ್ ಮತ್ತು ಸಂಯೋಜಕ ಎಲ್ಲವೂ ಒಬ್ಬರೇ ಆಗಿದ್ದರು.
ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಪತ್ರಿಕೆಯನ್ನು ಅನೇಕ ರಾಷ್ಟ್ರೀಯವಾದಿ ನಾಯಕರು ಗೌರವಿಸುತ್ತಿದ್ದರು. ಗಾಂಧಿಯವರು ಇದು “ನಿಜವಾಗಿಯೂ ಅಮೃತ್” ಎಂದು ಹೇಳಿದರೆ, ಬಿಪಿನ್ ಚಂದ್ರ ಪಾಲ್ “ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದಂತೆ ಈ ಪತ್ರಿಕೆಯು ಅತ್ಯಂತ ವಿಷಯ ನಿಷ್ಠವಾಗಿದೆ” ಎಂದಿದ್ದರು. ಅಷ್ಟೇ ಅಲ್ಲದೆ ಪತ್ರಿಕಾ ಪ್ರಕಟಿಸಿದ ಲೇಖನಗಳು ಸುಭಾಸ್ ಚಂದ್ರ ಬೋಸ್ ಮತ್ತು ಪ್ರೆಸಿಡೆನ್ಸಿ ಕಾಲೇಜಿನಿಂದ ಹೊರಹಾಕಲ್ಪಟ್ಟ ಇತರ ವಿದ್ಯಾರ್ಥಿಗಳನ್ನು ಪುನಃ ಕಾಲೇಜಿಗೆ ಸೇರಿಸಲು ಕಾರಣವಾಯಿತು.
ಸಿಸಿರ್ ಕುಮಾರ್ ಅವರು 1911 ರಲ್ಲಿ ನಿಧನರಾಗುವವರೆಗೂ ಪತ್ರಿಕೆಯನ್ನು ನಿರ್ವಹಿಸಿದರು, ನಂತರ ಅದನ್ನು ಅವರ ಸಹೋದರ ಗೋಲಾಪ್ಲಾಲ್ ಘೋಷ್ ವಹಿಸಿಕೊಂಡರು. 1928 ರಲ್ಲಿ ತುಷಾರ್ ಪತ್ರಿಕೆಯನ್ನು ವಹಿಸಿಕೊಂಡರು.
ತುಷಾರ್ ಅಡಿಯಲ್ಲಿ, ಭಾರತದ ಅತ್ಯಂತ ಹಳೆಯ ಪತ್ರಿಕೆಗಳಲ್ಲಿ ಒಂದಾದ ಪತ್ರಿಕಾ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಪ್ರಸಾರವಾಯಿತು. “ರಾಷ್ಟ್ರೀಯವಾದಿ ಪತ್ರಿಕೆಯ ಸಂಪಾದಕರಾಗಿ, ಅವರು ಅಧಿಕಾರ ವಹಿಸಿಕೊಂಡಾಗ ಅವರು ಅನೇಕ ಜವಾಬ್ದಾರಿಗಳನ್ನು ಹೊಂದಿದ್ದರು” ಎಂದು ತುಷಾರ್ ಅವರ ಮರಿ ಮೊಮ್ಮಗಳು ತಾನಿಯಾ ಘೋಷ್ ‘ದಿ ಬೆಟರ್ ಇಂಡಿಯಾ’ಗೆ ಹೇಳಿದ್ದಾರೆ. “ತಮ್ಮ ಪೂರ್ವಜರ ಪರಂಪರೆಯನ್ನು ಅವರು ಮುಂದುವರಿಸಿದರು. ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸರ್ಕಾರದ ಪ್ರಯತ್ನಗಳನ್ನು ಅವರು ಎಂದಿಗೂ ಒಪ್ಪಲಿಲ್ಲ. ಇದಕ್ಕಾಗಿ, ಅವರು 1935 ರಲ್ಲಿ ಆಡಳಿತ ಮತ್ತು ನ್ಯಾಯಾಂಗದ ಕಾರ್ಯನಿರ್ವಹಣೆಯ ಬಗ್ಗೆ ವರದಿ ಮಾಡಿದಾಗ ಜೈಲು ಪಾಲಾದರು” ಎಂದು ಅವರು ಹೇಳಿದ್ದಾರೆ.

1943 ರಲ್ಲಿ ಬಂಗಾಳದಲ್ಲಿ ಕ್ಷಾಮ ತಲೆದೋರಿದ್ದರೆ ಇನ್ನೊಂದೆಡೆ ಎರಡನೇ ಮಹಾಯುದ್ಧವೂ ನಡೆಯುತ್ತಿತ್ತು. ಹಾಗಾಗಿ ಬ್ರಿಟಿಷರು ಧಾನ್ಯಗಳನ್ನು ತಡೆಹಿಡಿದು ತಮ್ಮ ಸೈನಿಕರಿಗಾಗಿ ಸಂಗ್ರಹಿಸುತ್ತಿದ್ದರು. ಆ ಸಂದರ್ಭದಲ್ಲಿ ತುಷಾರ್ ” ಕೆಲವು ರಾಜ್ಯಗಳಲ್ಲಿ ಧಾನ್ಯಗಳ ತೀವ್ರ ಕೊರತೆಯಿದ್ದರೆ, ಇನ್ನು ಕೆಲವು ರಾಜ್ಯಗಳು ಹೆಚ್ಚುವರಿ ಧಾನ್ಯಗಳನ್ನು ಹೊಂದಿದೆ. ಸರ್ಕಾರ ಸಮಾನ ಹಂಚಿಕೆ ಯಾಕೆ ಮಾಡುತ್ತಿಲ್ಲ” ಎಂದು ವರದಿ ಮಾಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.
ಬಂಗಾಳದ ವಿಭಜನೆಯನ್ನು ಟೀಕಿಸುವಾಗಲೂ ಪತ್ರಿಕೆಯು ಯಾವುದೇ ರಿಯಾಯಿತಿ ತೋರಲಿಲ್ಲ. ವಿಭಜನೆಯ ಅಧ್ಯಕ್ಷತೆ ವಹಿಸಿದ್ದ ಲಾರ್ಡ್ ಕರ್ಜನ್ ಬಗ್ಗೆ ಪತ್ರಿಕಾವು “ಅವರು ಯುವಕ ಮತ್ತು ಸ್ವಲ್ಪ ಕುಟಿಲತೆ ಹೊಂದಿರುವವರು. ಯಾವುದೇ ಅನುಭವವಿಲ್ಲದಿದ್ದರೂ ಬ್ರಿಟಿಷ್ ಸರ್ಕಾರ ಅವರಿಗೆ ಅನಿಯಮಿತ ಅಧಿಕಾರ ನೀಡಿದೆ” ಎಂದು ವರದಿ ಮಾಡಿತ್ತು. ಸರ್ಕಾರದ ವಿರುದ್ಧದ ಅಂತಹ ಸಂಪಾದಕೀಯಗಳು ಆಗಾಗ್ಗೆ ಪತ್ರಿಕೆಯನ್ನು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿಸುತ್ತಿತ್ತು. ಆದರೆ ಪ್ರಾಮಾಣಿಕ ವರದಿಗಳು ದೇಶದ ಮೂಲೆ ಮೂಲೆಗಳನ್ನು ತಲುಪುವಂತೆ ನೋಡಿಕೊಳ್ಳುವುದರಲ್ಲಿ ತನ್ನ ಮುತ್ತಜ್ಜನ ದೃಷ್ಟಿಕೋನ ಪ್ರಧಾನ ಪಾತ್ರ ವಹಿಸಿತ್ತು ಎಂದು ತಾನಿಯಾ ಹೇಳುತ್ತಾರೆ.
ಪತ್ರಿಕೆಯು ತನಿಖಾ ಪತ್ರಿಕೋದ್ಯಮಕ್ಕೂ ನಾಂದಿ ಹಾಡಿತ್ತು ಎನ್ನುವ ಬರಹಗಾರ ಜಾಯ್ ಭಟ್ಟಾಚಾರ್ಯ “”ಪತ್ರಿಕಾ’ವು ಒಮ್ಮೆ ವೈಸರಾಯ್‌ನ ಕಸದ ತೊಟ್ಟಿಯಲ್ಲಿದ್ದ ಪತ್ರವೊಂದನ್ನು ಕಂಡುಹಿಡಿದಿತ್ತು. ಅದು ಕಾಶ್ಮೀರದ ಡೋಗ್ರಾ ರಾಜರನ್ನು ಅಧಿಕಾರದಿಂದ ತೆಗೆದುಹಾಕುವ ಬ್ರಿಟಿಷರ ಸಂಚನ್ನು ಬಹಿರಂಗಪಡಿಸಿತು. ಪರಿಣಾಮವಾಗಿ ಬ್ರಿಟಿಷರು ಈ ಯೋಜನೆಯನ್ನೇ ಕೈಬಿಡುವಂತಾಯಿತು” ಎನ್ನುತ್ತಾರೆ.
‘ವಿಭಜಕ ರಾಜಕಾರಣ ಬೇಡ’
ತುಷಾರ್ ಅವರು 1991 ರಲ್ಲಿ ಪತ್ರಿಕೆಯನ್ನು ಮುಚ್ಚುವವರೆಗೆ 60 ವರ್ಷಗಳ ಕಾಲ ಪತ್ರಿಕೆಯನ್ನು ನಡೆಸಿದರು. 70 ಮತ್ತು 80 ರ ದಶಕದಲ್ಲಿ ಪತ್ರಿಕೆಯು ಸ್ವಲ್ಪ ವಿಭಿನ್ನ ದಿಕ್ಕನ್ನು ತೆಗೆದುಕೊಳ್ಳಲು ಪ್ರಾರಂಭಿಸಿತು. ಆ ಸಮಯದಲ್ಲಿ ಪತ್ರಿಕಾದಲ್ಲಿ ಕೆಲಸ ಮಾಡಿದ ಪತ್ರಕರ್ತ ಮನೋಜಿತ್ ಮಿತ್ರ ಅವರು ದಿ ಪ್ರಿಂಟ್ ಜೊತೆ ಮಾತನಾಡುತ್ತಾ “ಕೆಟ್ಟ ಆಡಳಿತವು ಪತ್ರಿಕೆಯನ್ನು ಕೊಂದಿತು. ನಾನು ಅಲ್ಲಿ ಕೆಲಸ ಮಾಡುವಾಗ ಅವರ ಸಂಪಾದಕೀಯ ನೀತಿಗಳಿಂದ ನನಗೆ ನಿರಾಸೆಯಾಯಿತು. ಸ್ವಾತಂತ್ರ್ಯಾನಂತರ ತಮ್ಮ ಪತ್ರಿಕೆ ಹೇಗಿರಬೇಕು ಎಂಬ ಕಲ್ಪನೆ ಅವರಿಗಿರಲಿಲ್ಲ. 80 ರ ದಶಕದ ಉತ್ತರಾರ್ಧದಲ್ಲಿ, ಇದು ಅಂದಿನ ಸರ್ಕಾರಕ್ಕೆ ಪೂರಕವಾಗಿ ಕೆಲಸ ನಿರ್ವಹಿಸುತ್ತಿತ್ತು” ಎಂದಿದ್ದಾರೆ.
ಆ ಹೊತ್ತಿಗೆ ಪತ್ರಿಕೆಯ ಪ್ರಸಾರವು 25,000 ಕ್ಕೆ ಕುಸಿದಿತ್ತು ಮತ್ತು ಅದರ ಯಾವುದೇ ಉದ್ಯೋಗಿಗಳಿಗೆ ಪಾವತಿಸಲು ಹಣವಿರಲಿಲ್ಲ. ‘ದಿ ಸ್ಟೇಟ್ಸ್‌ಮನ್’ ಮತ್ತು ‘ದಿ ಟೆಲಿಗ್ರಾಫ್’ನಂತಹ ಪತ್ರಿಕೆಗಳಿಂದ ಪ್ರಬಲ ಪೈಪೋಟಿಯೂ ಇತ್ತು. ತುಷಾರ್ ಅವರು 94 ರಲ್ಲಿ ಸಾಯುವವರೆಗೂ ಪತ್ರಿಕೆಯ ಸಂಪಾದಕರಾಗಿದ್ದರು. ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಕ್ಕೆ ಅವರ ಕೊಡುಗೆಗಳಿಗಾಗಿ, ಅವರಿಗೆ ಭಾರತ ಸರ್ಕಾರವು ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಇತ್ತೀಚೆಗೆ, ಭಾರತದಲ್ಲಿನ ರಾಷ್ಟ್ರೀಯತಾವಾದಿ ಚಳುವಳಿಗಳು, ಬಂಗಾಳದ ವಿಭಜನೆ, ಎರಡೂ ವಿಶ್ವಯುದ್ಧಗಳ ಬಗ್ಗೆ ಭಾರತೀಯ ದೃಷ್ಟಿಕೋನ, 1943 ರ ಕ್ಷಾಮ, ಭಾರತದ ಸ್ವಾತಂತ್ರ್ಯ, ವಿಭಜನೆ ಮತ್ತು ಒಳಹರಿವುಗಳ ವ್ಯಾಪಕ ಪ್ರಸಾರಕ್ಕಾಗಿ ಪತ್ರಿಕಾವನ್ನು ಡಿಜಿಟಲೀಕರಣಗೊಳಿಸುವ ಪ್ರಯತ್ನ ನಡೆದಿದೆ. ಸೆಂಟರ್ ಫಾರ್ ಸ್ಟಡೀಸ್ ಇನ್ ಸೋಶಿಯಲ್ ಸೈನ್ಸಸ್, ಕಲ್ಕತ್ತಾ 2010 ರಲ್ಲಿ ವಲಸೆ ಮತ್ತು ಸಂಬಂಧಿತ ಆಘಾತ, ವಸಾಹತುಶಾಹಿ ನಂತರದ ಅವಧಿಯಲ್ಲಿ ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯ ಬಗೆಗಿನ ದಾಖಲೆಗಳನ್ನು ಸಂರಕ್ಷಿಸುವುದಕ್ಕಾಗಿ ‘ಪತ್ರಿಕಾ’ ಮತ್ತು ‘ಜುಗಂತರ್’ ಅನ್ನು ಡಿಜಿಟಲೀಕರಣಗೊಳಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ. ದೆಹಲಿಯ ನೆಹರು ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿಯಲ್ಲಿ ಸಹ ಪತ್ರಿಕೆಗಳ ಆರ್ಕೈವ್‌ಗಳು ಲಭ್ಯವಿವೆ.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ತನ್ನದೇ ಆದ ಕೊಡುಗೆ ನೀಡಿದ್ದ ‘ಅಮೃತ ಬಜಾರ್ ಪತ್ರಿಕಾ’ವನ್ನು ಇಂದು ದೈರ್ಯ ಮತ್ತು ಪ್ರಾಮಾಣಿಕತೆಯ ಸಂಕೇತವೆಂದು ಪರಿಗಣಿಸಲಾಗುತ್ತಿದೆ. ಆದರೆ ತುಷಾರ್ ಮತ್ತು ಈಗಿನ ಪತ್ರಿಕಾ ವರದಿಯಲ್ಲಿ ಒಂದು ಸೂಕ್ಷ್ಮ ವ್ಯತ್ಯಾಸವಿದೆ ಎಂದು ತಾನಿಯಾ ಹೇಳುತ್ತಾರೆ. “ಅವರಿಗೆ ತಮ್ಮ ವಿಚಾರಗಳನ್ನು ಸಾಬೀತುಪಡಿಸಲು ಕಿರುಚುವ ಮತ್ತು ಬೆದರಿಸುವ ಅಗತ್ಯವಿರಲಿಲ್ಲ. ಅವರು ಎಲ್ಲಿ ಬೇಕಾದರೂ ಸರ್ಕಾರವನ್ನು ಟೀಕಿಸುತ್ತಿದ್ದರು. ಅವರ ಪತ್ರಿಕೆ ಎಂದಿಗೂ ವಿಭಜನೆಯಲ್ಲಿ ತೊಡಗಿರಲಿಲ್ಲ”ಎನ್ನುತ್ತಾರೆ.