ಯುದ್ಧಗ್ರಸ್ಥ ಉಕ್ರೇನಿನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಆಪರೇಷನ್ ಗಂಗಾ ಕಾರ್ಯಾಚರಣೆ ಚುರುಕಾಗಿದೆ.
ರಷ್ಯಾ ದಾಳಿಗೆ ಈಡಾಗಿರುವ ಉಕ್ರೇನಿನ ಕೀವ್ ಮತ್ತು ಕಾರ್ಕೀವ್ ನಗರಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದು, ನಾಗರಿಕ ಪ್ರದೇಶಗಳ ಮೇಲೆ ನಡೆಯುತ್ತಿರುವ ಕ್ಷಿಪಣಿ ದಾಳಿಯಿಂದ ತಮ್ಮನ್ನು ರಕ್ಷಿಸುವಂತೆ ಭಾರತೀಯ ವಿದ್ಯಾರ್ಥಿಗಳು ಅಂಗಾಲಾಚುತ್ತಿದ್ದಾರೆ. ಆಪರೇಷನ್ ಗಂಗಾ ಕಾರ್ಯಾಚರಣೆಯಡಿ ಸದ್ಯ ಉಕ್ರೇನ್ ಗಡಿಯಾಚೆಯ ನೆರೆ ರಾಷ್ಟ್ರಗಳಿಗೆ ತಲುಪಿದ ವಿದ್ಯಾರ್ಥಿಗಳನ್ನು ಮಾತ್ರ ಕರೆತರಲಾಗುತ್ತಿದ್ದು, ಉಕ್ರೇನ್ ಒಳಗೆ ಭಾರತೀಯ ವಿಮಾನಗಳು ಪ್ರವೇಶಿಸುತ್ತಿಲ್ಲ. ಅಲ್ಲದೆ ಭಾರತದ ಎಂಬೆಸಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡ ತಮ್ಮ ನೆರವಿಗೆ ಸಕಾಲಕ್ಕೆ ಧಾವಿಸುತ್ತಿಲ್ಲ ಎಂಬುದು ಅಲ್ಲಿನ ವಿದ್ಯಾರ್ಥಿಗಳ ಅಳಲು.
ಈ ನಡುವೆ ರಷ್ಯಾ ನೀಡಿದ ಮಾಹಿತಿಯ ಮೇರೆಗೆ ಕಾರ್ಕೀವ್ ನಗರವನ್ನು ತತಕ್ಷಣವೇ ತೊರೆಯುವಂತೆ ಭಾರತ ತನ್ನ ಪ್ರಜೆಗಳಿಗೆ ಸೂಚಿಸಿದೆ. ಆದರೆ, ಕಾರ್ಕೀವ್ ನಲ್ಲಿ ಬಂಕರುಗಳಲ್ಲಿ ಆಶ್ರಯಪಡೆದಿರುವ ವಿದ್ಯಾರ್ಥಿಗಳು ಅಲ್ಲಿಂದ ಹೊರಬಂದು ಬೇರೆ ಪ್ರದೇಶಗಳಿಗೆ ಪ್ರಯಾಣಿಸಲು ಸಾರಿಗೆ ವ್ಯವಸ್ಥೆಯ ಸಮಸ್ಯೆ ಇದೆ. ಜೊತೆಗೆ ಈಗಾಗಲೇ ಆ ನಗರದ ಮೇಲೆ ರಷ್ಯಾ ಪಡೆಗಳು ದಾಳಿ ನಡೆಸುತ್ತಿರುವುದರಿಂದ ರಸ್ತೆ, ಸೇತುವೆ ಸಂಪರ್ಕ ಕೂಡ ಅಸ್ತವ್ಯವಸ್ಥೆಗೊಂಡಿದೆ. ಜೊತೆಗೆ ಕ್ಷಿಪಣಿ ದಾಳಿಯಿಂದಾಗಿ ಹೊರಬರುವುದು ಕೂಡ ಜೀವಕಂಟಕವಾಗಿದೆ. ಈ ವಾಸ್ತವಿಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಭಾರತ ಯಾವ ಪ್ರಯತ್ನಗಳನ್ನು ಮಾಡಿದೆ ಎಂಬುದು ಅಲ್ಲಿನ ವಿದ್ಯಾರ್ಥಿಗಳ ಪ್ರಶ್ನೆ.
ಈ ನಡುವೆ, ಉಕ್ರೇನಿನಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆ ಮಾಡಿ ಸ್ವದೇಶಕ್ಕೆ ಸುರಕ್ಷಿತವಾಗಿ ಕರೆತರುತ್ತಿರುವುದಾಗಿ ಹೇಳುತ್ತಿರುವ ಕೇಂದ್ರ ಸರ್ಕಾರ ಮತ್ತು ಮೋದಿಯವರ ಸಂಪುಟದ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತರೆ ದೇಶಗಳು ಈಗಲೂ ರಾಯಭಾರ ಕಚೇರಿ ತೆರೆದಿದ್ದು, ಸಂಕಷ್ಟದಲ್ಲಿರುವ ತಮ್ಮ ದೇಶದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆದೊಯ್ಯುವ ಕಾರ್ಯ ಮಾಡುತ್ತಿವೆ. ಅವರಿಗೆ ತುರ್ತಾಗಿ ಬೇಕಾದ ನೆರವು ಮತ್ತು ಆಹಾರವನ್ನು ಒದಗಿಸುತ್ತಿವೆ. ಸಂಚಾರ ವ್ಯವಸ್ಥೆಯನ್ನೂ ಮಾಡುತ್ತಿವೆ. ಆದರೆ, ಭಾರತ ಸರ್ಕಾರ ಮಾತ್ರ ಯುದ್ದ ಆರಂಭವಾದ ದಿನವೇ ರಾಯಭಾರ ಕಚೇರಿಯನ್ನು ಸ್ಥಗಿತಗೊಳಿಸಿದೆ. ಅಲ್ಲದೆ ರಾಯಭಾರ ಕಚೇರಿಯ ಅಧಿಕಾರಿಗಳು ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳ ನೆರವಿನ ಕೋರಿಕೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಅವರಿಗೆ ತುರ್ತು ಆಹಾರ, ನೀರು, ಸಂಚಾರ ವ್ಯವಸ್ಥೆಯನ್ನು ಕೂಡ ಮಾಡಿಲ್ಲ. ಈಗ ಭಾರತ ಸರ್ಕಾರ ಆಪರೇಷನ್ ಗಂಗಾ ಹೆಸರಿನಲ್ಲಿ ಕರೆದೊಯ್ಯುತ್ತಿರುವುದು ತಮ್ಮ ಸ್ವಂತ ಶ್ರಮ ಮತ್ತು ವೆಚ್ಚದಲ್ಲಿ ತಾವಿರುವ ನಗರಗಳಿಂದ ಉಕ್ರೇನಿನ ಗಡಿಗೆ ತಲುಪಿದವರನ್ನು ಮಾತ್ರ. ಆದರೆ, ನಿಜವಾಗಿಯೂ ಅಲ್ಲಿ ಸಿಲುಕಿಕೊಂಡಿರುವವರಿಗೆ ನೆರವು ಬೇಕಾಗಿರುವುದು ಆ ದೇಶದ ವಿವಿಧ ನಗರಗಳಿಂದ ಸುರಕ್ಷಿತ ಗಡಿ ಪ್ರದೇಶಗಳಿಗೆ ತಲುಪಲು. ಅದನ್ನು ಭಾರತ ಸರ್ಕಾರ ವ್ಯವಸ್ಥೆ ಮಾಡಿಯೇ ಇಲ್ಲ ಎಂಬುದು ಅಲ್ಲಿಂದ ಮರಳಿರುವ ವಿದ್ಯಾರ್ಥಿಗಳ ಅಳಲು.

ಈ ನಡುವೆ, ಪ್ರಧಾನಿ ಮೋದಿಯವರು ಉತ್ತರಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣಾ ಲಾಭ ಮತ್ತು ತಮ್ಮ ವಿಶ್ವಗುರು ಎಂಬ ವೈಯಕ್ತಿಕ ವರ್ಚಸ್ಸು ವೃದ್ಧಿಗೆ ಆಪರೇಷನ್ ಗಂಗಾ ಕಾರ್ಯಾಚರಣೆಯನ್ನು ಬಳಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಕ ಟೀಕೆಗಳೂ ಕೇಳಿಬಂದಿವೆ. ಕಾರ್ಯಾಚರಣೆಗೆ ಗಂಗಾ ಎಂಬ ಹೆಸರು ಇಟ್ಟಿರುವುದಕ್ಕೂ ಉತ್ತರಪ್ರದೇಶದ ಚುನಾವಣೆಗೂ ನಂಟಿದೆ. ರಾಜಕೀಯವಾಗಿ ಚುನಾವಣೆಯ ಮೇಲೆ ಪ್ರಭಾವ ಬೀರಬಹುದು ಎಂಬ ಲೆಕ್ಕಾಚಾರದ ಮೇಲೆಯೇ ಬಿಜೆಪಿ ಸರ್ಕಾರ ಇಂತಹ ಹೆಸರು ಇಟ್ಟಿದೆ ಎಂಬ ವಾದವೂ ಇದೆ.
ಬಿಜೆಪಿ ಪಕ್ಷ ಈ ಕಾರ್ಯಾಚರಣೆಯನ್ನೇ ಐತಿಹಾಸಿಕ ಕ್ರಮ ಎಂದು ಬಣ್ಣಿಸುತ್ತಿದ್ದರೆ, ಸ್ವತಃ ಮೋದಿಯವರು ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ಭಾರತದ ಶಕ್ತಿಯ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ಸಾಧ್ಯವಾಗಿದೆ ಎನ್ನುವ ಮೂಲಕ ಹಿಂದೆಂದೂ ಇಂತಹ ಕಾರ್ಯಾಚರಣೆ ನಡೆದೇ ಇರಲಿಲ್ಲ ಎಂಬರ್ಥದ ಮಾತುಗಳನ್ನು ಆಡಿದ್ದಾರೆ.
ಆದರೆ, ಪ್ರಧಾನಿ ಮೋದಿ ಮತ್ತು ಬಿಜೆಪಿಯ ಬೆಂಬಲಿಗರ ಇಂತಹ ಪ್ರಚಾರಪ್ರಿಯತೆಯ ಹಪಾಹಪಿನತನಕ್ಕಿಂತ ವಾಸ್ತವ ಬೇರೆಯೇ ಇದೆ. ಈ ಹಿಂದೆಯೇ ಆಪರೇಷನ್ ಗಂಗಾಕ್ಕಿಂತ ಹತ್ತಾರು ಪಟ್ಟು ಬೃಹತ್ ಪ್ರಮಾಣದ ರಕ್ಷಣಾ ಕಾರ್ಯಾಚರಣೆಗಳು ನಡೆದಿವೆ. ಯುದ್ಧ, ಪ್ರವಾಹದಂತಹ ಸಂದರ್ಭದಲ್ಲಿ ವಿದೇಶಗಳಲ್ಲಿ ಸಿಲುಕಿದ್ದ ಲಕ್ಷಾಂತರ ಸಂಖ್ಯೆಯ ಭಾರತೀಯರನ್ನು ಬೃಹತ್ ಸ್ಥಳಾಂತರ(ಇವ್ಯಾಕ್ಯುಯೇಷನ್) ಕಾರ್ಯಾಚರಣೆಯ ಮೂಲಕ ಸುರಕ್ಷತವಾಗಿ ಸ್ವದೇಶಕ್ಕೆ ಕರೆತಂದ ಉದಾಹರಣೆಗಳು ಸಾಕಷ್ಟಿವೆ.
ಕಳೆದ ಮೂರ್ನಾಲ್ಕು ದಶಕಗಳಲ್ಲಿ ಭಾರತ ಸುಮಾರು 13 ಬಾರಿ ಅಂತಹ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿದೆ. ಆ ಪೈಕಿ ರಕ್ಷಣೆ ಮಾಡಿದ ಭಾರತೀಯರ ಸಂಖ್ಯೆ ಮತ್ತು ಕಾರ್ಯಾಚರಣೆಯ ಸ್ವರೂಪದ ಹಿನ್ನೆಲೆಯಲ್ಲಿ ಪರಿಗಣಿಸಲೇಬೇಕಾದ ಪ್ರಮುಖ ಕಾರ್ಯಾಚರಣೆಗಳು ಇಲ್ಲಿವೆ.
ಕುವೈತ್ ಏರ್ ಲಿಫ್ಟ್ 1990:
ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ರಕ್ಷಣಾ ಕಾರ್ಯಾಚರಣೆ ನಡೆದದ್ದು 1990ರ ಆಗಸ್ಟ್ ನಲ್ಲಿ. ಗಲ್ಫ್ ಯುದ್ಧದ ಹಿನ್ನೆಲೆಯಲ್ಲಿ ಅಪಾಯಕ್ಕೆ ಸಿಲುಕಿದ್ದ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವ ಬೃಹತ್ ಕಾರ್ಯಾಚರಣೆ ಅದು. ಏರ್ ಇಂಡಿಯಾ ಮತ್ತು ಭಾರತೀಯ ವಾಯುಪಡೆ ನಡೆಸಿದ ಆ ಜಂಟಿ ಕಾರ್ಯಾಚರಣೆಯಲ್ಲಿ ಸುಮಾರು 1.70 ಲಕ್ಷ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲಾಗಿತ್ತು. ಕವೈತ್ ಮೇಲೆ ಆಕ್ರಮಣ ಮಾಡಿದ ಇರಾಕ್ ವಿರುದ್ದ ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳು ನಡೆಸಿದ ಸೇನಾ ಕಾರ್ಯಾಚರಣೆಯ ವೇಳೆಯ ಈ ರಕ್ಷಣಾ ಕಾರ್ಯಾಚರಣೆಯನ್ನು ಆಧರಿಸಿಯೇ ನಟ ಅಕ್ಷಯ್ ಕುಮಾರ್ ಅವರ ಏರ್ ಲಿಫ್ಟ್ ಸಿನಿಮಾ ನಿರ್ಮಾಣವಾಗಿದೆ.

ಆಪರೇಷನ್ ಸುಕೂನ್ 2006:
ಇಸ್ರೇಲ್ ಮತ್ತು ಲೆಬನಾನ್ ನಡುವೆ ಯುದ್ಧ ತಲೆದೋರಿದಾಗ ಆಪರೇಷನ್ ಸುಕೂನ್ ಹೆಸರಿನಲ್ಲಿ ಸಂಘರ್ಷದ ನೆಲದಿಂದ ಭಾರತೀಯರನ್ನು ಪಾರು ಮಾಡಿ ಕರೆತರುವ ಕಾರ್ಯಾಚರಣೆ ನಡೆಯಿತು. ‘ಬೈರೂತ್ ಸೀಲಿಫ್ಟ್’ ಎಂದು ಈಗ ಕರೆಯಲಾಗುವ ಈ ಕಾರ್ಯಾಚರಣೆಯಲ್ಲಿ ಸುಮಾರು 2000 ಮಂದಿಯನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ತರಲಾಗಿತ್ತು. ಆ ವೇಳೆ ಕೇವಲ ಭಾರತೀಯರು ಮಾತ್ರವಲ್ಲದೆ ಕೆಲವು ನೇಪಾಳಿಗರು ಮತ್ತು ಶ್ರೀಲಂಕನ್ನರನ್ನು ಕೂಡ ಯುದ್ದಭೂಮಿಯಿಂದ ಸುರಕ್ಷಿತವಾಗಿ ಅವರ ಮನೆಗಳಿಗೆ ತಲುಪಿಸಲಾಗಿತ್ತು.

ಆಪರೇಷನ್ ಸೇಫ್ ಹೋಮ್ ಕಮಿಂಗ್ 2011:
ಲಿಬಿಯಾ ಅಂತಃಕಲಹ(ಸಿವಿಲ್ ವಾರ್) ವೇಳೆ ಆ ದೇಶದಲ್ಲಿದ್ದ ಸುಮಾರು 15,400 ಮಂದಿ ಭಾರತೀಯರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರಲು ನಡೆಸಿದ ರಕ್ಷಣಾ ಕಾರ್ಯಾಚರಣೆಯೇ ಆಪರೇಷನ್ ಸೇಫ್ ಹೋಮ್ ಕಮಿಂಗ್. 9 ವಿಶೇಷ ವಿಮಾನಗಳ ಮೂಲಕ ಲಿಬಿಯಾ, ಈಜಿಪ್ಟ್ ಮತ್ತು ಮಾಲ್ಟಾದಲ್ಲಿದ್ದ ಭಾರತೀಯರುನ್ನು ಕರೆತರಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಭಾರತೀಯ ವಾಯುಪಡೆಯಷ್ಟೇ ಅಲ್ಲದೆ, ನೌಕಾಪಡೆಯನ್ನೂ ಬಳಸಿಕೊಳ್ಳಲಾಗಿತ್ತು.

ಆಪರೇಷನ್ ಮೈತ್ರಿ 2015:
ಇದು ಪಾಕೃತಿಕ ಅವಗಢದ ಹಿನ್ನೆಲೆಯಲ್ಲಿ ನಡೆದ ಅತಿ ದೊಡ್ಡ ರಕ್ಷಣಾ ಕಾರ್ಯಾಚರಣೆ. ನೇಪಾಳ ಭೂಕಂಪದ ವೇಳೆ ಭಾರತೀಯ ಸೇನಾಪಡೆಗಳು ನಡೆಸಿದ ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಆ ದೇಶದಲ್ಲಿ ಸಿಲುಕಿದ್ದ ಸುಮಾರು 5000 ಭಾರತೀಯರನ್ನು ವಾಯುಪಡೆಯ ವಿಮಾನ ಮತ್ತು ನಾಗರಿಕ ವಿಮಾನಗಳ ಮೂಲಕ ವಾಪಸು ಕರೆತರಲಾಗಿತ್ತು. ಅದೇ ವೇಳೆ ಅಮೆರಿಕ, ಬ್ರಿಟನ್, ರಷ್ಯಾ ಮತ್ತು ಜರ್ಮನಿಯ ಕೆಲವು ನಾಗರಿಕರನ್ನು ಕೂಡ ಭಾರತೀಯ ವಾಯುಪಡೆ ರಕ್ಷಿಸಿ ಸುರಕ್ಷಿತವಾಗಿ ಆಯಾ ದೇಶಗಳಿಗೆ ಕಳಿಸಿಕೊಟ್ಟಿತ್ತು.

ಆಪರೇಷನ್ ರಾಹತ್ 2015:
ಯೆಮನ್ ನಲ್ಲಿ ಅಲ್ಲಿನ ಸರ್ಕಾರ ಮತ್ತು ಹೈಟಿ ಬಂಡುಕೋರರ ನಡುವೆ ಸಂಘರ್ಷ ತಲೆದೋರಿದಾಗ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ನಡೆಸಿದ ಕಾರ್ಯಾಚರಣೆಗೆ ಆಪರೇಷನ್ ರಾಹತ್ ಎಂದು ಹೆಸರಿಸಲಾಗಿತ್ತು. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಸುಮಾರು 5,600 ಭಾರತೀಯರನ್ನು ರಕ್ಷಿಸಿ ಸ್ವದೇಶಕ್ಕೆ ಕರೆತರಲಾಗಿತ್ತು. ಆಡೆನ್ ಬಂದರಿನಿಂದ ನೌಕಾಪಡೆಯ ಹಡಗುಗಳ ಮೂಲಕ ಮತ್ತು ವಾಯುಪಡೆಯ ವಿಮಾನಗಳ ಮೂಲಕ ಸನಾ ವಿಮಾನ ನಿಲ್ದಾಣದಿಂದ ಈ ಕಾರ್ಯಾಚರಣೆ ನಡೆದಿತ್ತು.
ಆಪರೇಷನ್ ಸಮುದ್ರ ಸೇತು 2021:
ಕೋವಿಡ್ ಜಾಗತಿಕ ಮಹಾಮಾರಿಯ ವೇಳೆ ಜಗತ್ತಿನ ವಿವಿಧ ರಾಷ್ಟ್ರಗಳು ದಿಢೀರ್ ಲಾಕ್ ಡೌನ್ ಹೇರಿದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಕೈಗೊಂಡ ಕಾರ್ಯಾಚರಣೆ ಇದು. ಸುಮಾರು 3000 ಭಾರತೀಯರನ್ನು ಈ ಕಾರ್ಯಾಚರಣೆಯಲ್ಲಿ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲಾಗಿತ್ತು. ಭಾರತೀಯ ನೌಕಾಪಡೆಯ ಜಲಾಶ್ವ, ಐರಾವತ್, ಶಾರ್ದೂಲ ಮತ್ತು ಮಗರ್ ಹೆಸರಿನ ನೌಕೆಗಳ ಮೂಲಕ 55 ದಿನಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ ಸುಮಾರು 23 ಸಾವಿರ ಕಿ.ಮೀ ಜಲಮಾರ್ಗವನ್ನು ಕ್ರಮಿಸಿ ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿತ್ತು.
ಆಪರೇಷನ್ ವಂದೇ ಭಾರತ್ 2021:
ಕೋವಿಡ್ ಮಹಾಮಾರಿಯ ನಡುವೆ ಬೇರೆ ಬೇರೆ ದೇಶಗಳಿಂದ ಭಾರತಕ್ಕೆ ವಾಪಸ್ಸಾದ ಭಾರತೀಯರನ್ನು ವಾಪಸ್ ಕರೆತರಲು ನಡೆಸಿದ ಈ ಕಾರ್ಯಾಚರಣೆ 2020ರ ಮೇ 7ರಂದು ಆರಂಭವಾಗಿದ್ದು ವಿವಿಧ ಹಂತಗಳಲ್ಲಿ ಮುಂದುವರಿದಿದೆ. ಸದ್ಯ ಈ ಕಾರ್ಯಾಚರಣೆಯ 16ನೇ ಹಂತ ಜಾರಿಯಲ್ಲಿದ್ದು, 1.83 ಕೋಟಿ ಪ್ರಯಾಣಿಕರು ಈ ನಾಗರಿಕ ವಿಮಾನಯಾನ ಸೌಲಭ್ಯವನ್ನು ಬಳಸಿಕೊಂಡು ಕೋವಿಡ್ ನಿರ್ಬಂಧಗಳ ನಡುವೆಯೂ ತಮ್ಮ ತಮ್ಮ ದೇಶಗಳಿಗೆ ತಲುಪಿದ್ದಾರೆ.
ಆಪರೇಷನ್ ದೇವಿಶಕ್ತಿ 2021:
ಆಫ್ಘಾನಿಸ್ತಾನದಲ್ಲಿ ಅಲ್ಲಿನ ನಾಗರಿಕ ಸರ್ಕಾರ ಪತವನಾಗಿ ತಾಲಿಬಾನ್ ಶಕ್ತಿಗಳು ಅಧಿಕಾರ ಹಿಡಿದ ಹಿನ್ನೆಲೆಯಲ್ಲಿ ಉಂಟಾಗಿದ್ದ ಪ್ರಕ್ಷುಬ್ಧ ಪರಿಸ್ಥಿತಿಯಿಂದ ಭಾರತೀಯರನ್ನು ಪಾರು ಮಾಡಲು ನಡೆಸಿದ ಕಾರ್ಯಾಚರಣೆ ಇದು. ಈ ಕಾರ್ಯಾಚರಣೆಯಲ್ಲಿ ನೂರಾರು ಭಾರತೀಯರನ್ನು ಆಫ್ಘಾನಿಸ್ತಾನದಿಂದ ರಕ್ಷಿಸಿ ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಯಿತು.