ಯುದ್ಧಗ್ರಸ್ಥ ಉಕ್ರೇನ್ ನೆರೆಹೊರೆಯ ದೇಶಗಳಿಗೆ ಕಾಲ್ನಡಿಗೆ ಹಾಗೂ ಇತರೆ ಸಾರಿಗೆ ಬಳಸಿ ತಲುಪಿರುವ ಭಾರತೀಯ ವಿದ್ಯಾರ್ಥಿಗಳನ್ನು ಕರೆ ತರುವ ಆಪರೇಶನ್ ಗಂಗಾ ಯೋಜನೆ ಮೇಲ್ವಿಚಾರಣೆಗೆ ನರೇಂದ್ರ ಮೋದಿ ಸಂಪುಟದ ನಾಲ್ವರು ಸಚಿವರನ್ನು ಉಕ್ರೇನ್ ಜೊತೆ ಗಡಿ ಹಂಚಿಕೊಂಡಿರುವ ದೇಶಗಳಿಗೆ ಕಳುಹಿಸಲಾಗಿದೆ. ಅದರಂತೆ, ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ರೊಮೇನಿಯಾ ದೇಶ ತಲುಪಿದ್ದಾರೆ.
ʼಆಪರೇಷನ್ ಗಂಗಾʼ ಸಲುವಾಗಿ ರೊಮೇನಿಯಾಗೆ ತೆರಳಿರುವ ಸಿಂಧಿಯಾ ಅವರು, ಅಲ್ಲಿ ಮಾಡಿರುವ ಯಡವಟ್ಟು ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವ್ಯಂಗ್ಯಕ್ಕೆ ಈಡಾಗಿದೆ. ಉಕ್ರೇನ್ ಸಂಘರ್ಷದ ಸಂತ್ರಸ್ತ ಭಾರತೀಯರಿಗೆ ಭಾರತ ಸರ್ಕಾರ ಎಲ್ಲಾ ನೆರವು ನೀಡುತ್ತದೆ ಎಂದು ಅಗ್ಗದ ಪ್ರಚಾರ ಪಡೆಯಲು ಹೋದ ಸಿಂಧಿಯಾಗೆ ರೊಮೇನಿಯಾ ಮೇಯರ್ ಹಿಗ್ಗಾ ಮುಗ್ಗಾ ಕ್ಲಾಸ್ ನೀಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ.
ವಿಡಿಯೋದಲ್ಲಿ, ರೊಮೇನಿಯಾದ ಮೇಯರ್ ಸಚಿವ ಸಿಂಧಿಯಾ ಅವರು ಮಾತನಾಡುವಾಗ ಅಡ್ಡಿಪಡಿಸಿದ್ದು, “ನಾವು ಈ ಭಾರತೀಯ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿಗಾಗಿ ವ್ಯವಸ್ಥೆ ಮಾಡಿದ್ದೇವೆ, ನಿಮ್ಮ ಸರ್ಕಾರವಲ್ಲ” ಎಂದು ತರಾಟೆಗೆ ತೆಗೆದುಕೊಳ್ಳುವ ವಿಡಿಯೋ ಈಗ ಸಾಕಷ್ಟು ಸದ್ದು ಮಾಡುತ್ತಿದೆ.
ಆದಾಗ್ಯೂ, ಮೇಯರ್ ನೀಡಿದ ಮಾತಿನೇಟಿನ ಆಘಾತವನ್ನು ಮರೆಮಾಚುವ ಸಲುವಾಗಿ, ಸಿಂಧಿಯಾ ಅವರು ಭಾರತೀಯರಿಗೆ ಸಹಾಯ ಮಾಡಿದ್ದಕ್ಕಾಗಿ ರೊಮೇನಿಯನ್ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿ ಮಾತು ಮುಗಿಸುತ್ತಾರೆ.
ರೊಮೇನಿಯಾದ ಶಿಬಿರದಲ್ಲಿದ್ದ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಿಂಧಿಯಾ ಮಾತನಾಡುತ್ತಾ, ತಮ್ಮ ಸರ್ಕಾರವನ್ನು ಹೊಗಳಿದ್ದಾರೆ. ಇದು ಅಲ್ಲೇ ಇದ್ದ ರೊಮೇನಿಯಾದ ಮೇಯರ್ ಅವರ ಸಿಟ್ಟಿಗೆ ಕಾರಣವಾಗಿದೆ. ಸಿಂಧಿಯಾ ಮಾತಿಗೆ ಅಲ್ಲಿಯೇ ಅಡ್ಡಿಪಡಿಸಿದ ಮೇಯರ್, “ಈ ವಿದ್ಯಾರ್ಥಿಗಳಿಗೆ ವಸತಿ ಮತ್ತು ಆಹಾರಕ್ಕಾಗಿ ನಾವು ವ್ಯವಸ್ಥೆ ಮಾಡಿದ್ದೇವೆ, ನೀವು ಅಥವಾ ನಿಮ್ಮ ಸರ್ಕಾರವಲ್ಲ” ಎಂದು ಹೇಳುತ್ತಾರೆ.
ಮೇಯರ್ ಮಾತಿಗೆ ಸಚಿವ ಸಿಂಧಿಯಾ ಸಿಡಿಮಿಡಿಗೊಂಡಿದ್ದು, ʼನಾನೇನು ಹೇಳುತ್ತೇನೆ ಎಂಬುದನ್ನು ನಾನೇ ನಿರ್ಧರಿಸುತ್ತೇನೆʼ ಎಂದು ಹೇಳುತ್ತಾರೆ. ಆದರೆ, ಮೇಯರ್ ಮತ್ತೆ ಅವರಿಗೆ ತೀಕ್ಷ್ಣ ಉತ್ತರ ನೀಡಿ ʼನಿಮ್ಮ ಬಗ್ಗೆ ನೀವೇ ಮಾತನಾಡಿಕೊಳ್ಳಿʼ ಎಂದು ಹೇಳಿದ್ದಾರೆ. ಅಲ್ಲಿರುವ ವಿದ್ಯಾರ್ಥಿಗಳು ಮೇಯರ್ ಮಾತಿಗೆ ಚಪ್ಪಾಳೆ ತಟ್ಟುವ ಮೂಲಕ ಬೆಂಬಲ ನೀಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಇದು ಕೇಂದ್ರ ಸಚಿವರ ಇರಿಸು-ಮುರಿಸುಗೆ ಕಾರಣವಾಗಿದೆ.
ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಟ್ವಿಟರಿನಲ್ಲಿ ಸಿಂಧಿಯಾ ಅವರ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ರೊಮೇನಿಯನ್ ಅಧಿಕಾರಿಯೊಂದಿಗೆ ದಾರ್ಷ್ಟ್ಯದಿಂದ ಮಾತನಾಡಿರುವುದು, ಭಾರತೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಾಯ ಪಡೆಯಲು ತೊಂದರೆ ಉಂಟುಮಾಡಬಹುದು. ಭಾರತದ ಪ್ರತಿನಿಧಿ ಆಗಿ ಹೋಗಿರುವಾಗ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಸಿಂಧಿಯಾಗೆ ಟ್ವಿಟರ್ ಬಳಕೆದಾರರು ಫುಲ್ ಕ್ಲಾಸ್ ತಗೊಂಡಿದ್ದಾರೆ.
ದುರಂತದ ಸಂಧರ್ಭದಲ್ಲಿಯೂ ರಾಜಕೀಯ ಲಾಭ ಪಡೆಯಲು ಹವಣಿಸುವುದು ಅಸಹ್ಯಕರ ಎಂದು ಇನ್ನೊಬ್ಬ ನೆಟಿಝನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುದ್ಧ ಸಂಧರ್ಭವನ್ನು ಲಾಭಕ್ಕಾಗಿ ಬಳಸುವ ಕೇಂದ್ರ ಸರ್ಕಾರದ ಪಿಆರ್ ಕಾರ್ಯಾಚರಣೆ ರೊಮೇನಿಯಾದಲ್ಲಿ ನೆಲಕಚ್ಚಿದೆ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಈ ನಡುವೆ ಆಪರೇಷನ್ ಗಂಗಾ ಮೂಲಕ ವಿದ್ಯಾರ್ಥೀಗಳನ್ನು ಕರೆ ತರವಾಗ ಮೋದಿಗೆ ಘೋಷಣೆ ಕೂಗಿದ್ದು, ವಿದ್ಯಾರ್ಥಿಗಳು ಮೋದಿಗೆ ಜೈಕಾರ ಹಾಕಲು ನಿರಾಕರಿಸುವ ವಿಡಿಯೋ ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.