
ಹಜ್ ಯಾತ್ರಿಗಳ ವಿಮಾನ ಯಾನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಬೆಂಗಳೂರಿನ ಹೆಗಡೆ ನಗರದಲ್ಲಿರುವ ಹಜ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಿದ್ದರು. ಹಜ್ ಖಾತೆ ಸಚಿವ ರಹೀಂ ಖಾನ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ವಸತಿ ಸಚಿವ ಜಮೀರ್ ಖಾನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪಹಲ್ಗಾಮ್ನಲ್ಲಿ ಭಯೋತ್ಪಾದನಾ ದಾಳಿಯಲ್ಲಿ ಮೃತರಾದವರಿಗೆ ಒಂದು ನಿಮಿಷ ಮೌನ ಆಚರಣೆ ಮಾಡಲಾಯ್ತು.
ನಾನು ಈ ಹಜ್ ಯಾತ್ರೆಗೆ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಬಹಳ ಸಲ ಭಾಗವಹಿಸಿದ್ದೇನೆ. ಎಲ್ಲಾ ಯಾತ್ರಿಗಳಿಗೆ ಶುಭ ಕೋರಲು ರಾಜ್ಯದ ಏಳುಕೋಟಿ ಜನರ ಪರವಾಗಿ ಬಂದಿದ್ದೇನೆ. ಪ್ರತಿ ಮುಸಲ್ಮಾನ ಹಜ್ ಯಾತ್ರೆಗೆ ಹೋಗುವ ಆಸೆ ಇಟ್ಟುಕೊಂಡಿರುತ್ತಾರೆ. ಕನ್ನಡ ಅರ್ಥ ಆಗುತ್ತಾ ಎಂದು ವೇದಿಕೆ ಮೇಲಿದ್ದ ಮುಸಲ್ಮಾನ ಮುಖಂಡರನ್ನು ಕೇಳಿದ ಸಿದ್ದರಾಮಯ್ಯ, ಇತ್ತೀಚೆಗೆ ಪ್ರತಿಯೊಬ್ಬ ಮುಸಲ್ಮಾನ ಕೂಡಾ ಕನ್ನಡ ಮಾದ್ಯಮದಲ್ಲಿ ಓದುತ್ತಿರುತ್ತಾರೆ. ಅವರೆಲ್ಲರಿಗೆ ಕನ್ನಡ ಅರ್ಥ ಆಗುತ್ತೆ ಎಂದಿದ್ದಾರೆ ಸಿಎಂ. ಜೊತೆಗೆ ಮೆಕ್ಕಾದಲ್ಲಿ ಭಾರತೀಯರ ಪರವಾಗಿ ಪ್ರಾರ್ಥನೆ ಮಾಡಲಿ, ಏಳು ಕೋಟಿ ಕನ್ನಡಿಗರ ಪರವಾಗಿ ಹಜ್ ಯಾತ್ರೆಗೆ ಹೋದವರು ಪ್ರಾರ್ಥನೆ ಮಾಡಲಿ ಎಂದಿದ್ದಾರೆ.
ನಮ್ಮ ಸರ್ಕಾರ ಯಾರನ್ನೋ ಓಲೈಕೆ ಮಾಡಲು ಯಾವ ಕಾರ್ಯಕ್ರಮವನ್ನೂ ಮಾಡಲ್ಲ. ನಾವು ಕರ್ನಾಟಕದ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು ಎಂದು ಆಸೆ ಇಟ್ಟುಕೊಂಡಿರುವ ಜನ. ನಾವು ಯಾವುದೇ ಜನಾಂಗಕ್ಕೆ ಸೇರಿದವರು ಆಗಿರಬಹುದು. ಆದ್ರೆ ನಾವು ಮಾನವರು. ಯಾವುದೇ ಧರ್ಮ ಕೂಡಾ ಮಾನವರಾಗುವಂತೆ ಹೇಳುತ್ತವೆಯೇ ವಿನಹಃ ಮೃಗಗಳಾಗಿ ಎಂದು ಹೇಳಲ್ಲ. ನೀವು ನಾವೆಲ್ಲ ಮನುಷ್ಯರಾಗಿ ಇರೋಣ, ದ್ವೇಷ ಅಸೂಯೆ ಯಿಂದ ಏನೂ ಸಾಧನೆ ಮಾಡಲು ಆಗಲ್ಲ ಎಂದಿದ್ದಾರೆ ಸಿದ್ದರಾಮಯ್ಯ.

ಸಮಸಮಾಜ ನಿರ್ಮಾಣ ಮಾಡಲು ಪರಸ್ಪರ ಪ್ರೀತಿ ಗೌರವ ಅವಶ್ಯಕತೆ ಇದೆ. ಸಂವಿಧಾನದಲ್ಲಿ ಸಹಿಷ್ಣುತೆ, ಸಹಬಾಳ್ವೆ ಭೋದಿಸಲಾಗಿದೆ. ಹಿಂದೂ, ಮುಸ್ಲಿಂ, ಬೌದ್ಧ, ಸಿಖ್ ಯಾರೇ ಇದ್ರೂ ಒಂದೇ ತಾಯಿ ಮಕ್ಕಳಂತೆ ಬದುಕುವವರಾಗಬೇಕು. ಹಜ್ ಯಾತ್ರೆಗೆ ಹೋಗುವವರೆಲ್ಲಾ ಸಮಾಜದಲ್ಲಿ ಸೌಹಾರ್ದ ಬೆಳೆಯುವಂತೆ ಪ್ರಾರ್ಥನೆ ಮಾಡಬೇಕು. ದ್ವೇಷದಿಂದ ಯಾರನ್ನೂ ಗೆಲ್ಲಲು ಆಗಲ್ಲ, ಸ್ನೇಹ ಪ್ರೀತಿಯಿಂದ ಗೆಲ್ಲುವುದಕ್ಕೆ ಸಾಧ್ಯ ಅಗುತ್ತದೆ. ಸರ್ಕಾರದ ಮುಖ್ಯಸ್ಥನಾಗಿ ಯಾವುದೋ ಒಂದು ಧರ್ಮದವರಿಗಾಗಿ ನಾನು ಕೆಲಸ ಮಾಡುವುದಲ್ಲ. ಎಲ್ಲರೂ ಸಮಾನವಾಗಿ ಬದುಕಬೇಕು ಎಂದು ಆಶಯ ಇಟ್ಟುಕೊಂಡವನು ನಾನು ಎಂದಿದ್ದಾರೆ.
ಸ್ವಾತಂತ್ರ್ಯ ಬಂದ ಬಳಿಕ ವಿಭಜನೆ ಆಯಿತು, ಭಾರತದಲ್ಲಿ ಉಳಿದುಕೊಂಡ ಮುಸಲ್ಮಾನರು ಕೂಡ ಭಾರತೀಯರು. ಮುಸಲ್ಮಾನರೂ ಸಹಾ ನಮ್ಮ ಸೋದರರು, ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ನಮ್ಮ ಸರ್ಕಾರ ಎಲ್ಲ ಜನಾಂಗ, ಧರ್ಮದವರನ್ನು ಸಮಾನವಾಗಿ ನೋಡುತ್ತದೆ. ನಮ್ಮ ಸರ್ಕಾರ ಬಜೆಟ್ನಲ್ಲಿ ನಿಮಗೆ ನಾಲ್ಕೂವರೆ ಸಾವಿರ ಕೊಟಿ ಮೀಸಲಿಟ್ಟಿದೆ. ಅದೇನೂ ದೊಡ್ಡದಲ್ಲ, ನಿಮ್ಮ ಪಾಲನ್ನು ನಿಮಗೆ ಕೊಡಲೇ ಬೇಕಲ್ಲವಾ.? ಎಲ್ಲರಿಗೂ ಸಮಾನವಾಗಿ ಹಂಚಿಕೆ ಆದಾಗ ಮಾತ್ರ ಸಮಾನತೆ ಬರುತ್ತದೆ. ಅರ್ಥಿಕ, ಸಾಮಾಜಿಕ, ಶೈಕ್ಷಣಿಕ ವಾಗಿ ಸಮಾನತೆ ಬರಬೇಕು ಎಂದಿದ್ದಾರೆ.
