ಬಿಜೆಪಿಯ ರಾಜಕೀಯ ಪ್ರಯೋಗಶಾಲೆ ಎಂದೇ ಗುರುತಿಸಿಕೊಳ್ಳುವ ಗುಜರಾತ್ ಕಳೆದ ಕೆಲವು ದಿನಗಳಿಂದ ಮತ್ತೊಮ್ಮೆ ರಾಜಕೀಯ ಪಂಡಿತರ ಗಮನ ಸೆಳೆಯುತ್ತಿದೆ. ರಾಷ್ಟ್ರ ರಾಜಕಾರಣದ ವಿಷಯದಲ್ಲೂ ಪ್ರಧಾನಿ ನರೇಂದ್ರ ಮೋದಿಯವರು ಹೆಚ್ಚಾಗಿ ‘ಗುಜರಾತ್ ಮಾದರಿ’ಯ ಪ್ರಸ್ತಾಪವನ್ನು ಮಾಡುತ್ತಲೇ ಅಧಿಕಾರಕ್ಕೆ ಬಂದಿದ್ದಾರೆ. ಕೇವಲ 26 ಸಂಸದರನ್ನು ಹೊಂದಿರುವ ಈ ರಾಜ್ಯ ಸದಾ ರಾಜಕೀಯ ತಂತ್ರಗಾರಿಕೆಗಳಿಂದಲೇ ರಾಷ್ಟ್ರದ ಗಮನ ಸೆಳೆಯುತ್ತದೆ.
ಕಳೆದ ಆರು ತಿಂಗಳುಗಳಲ್ಲಿ ಕರ್ನಾಟಕವೂ ಸೇರಿದಂತೆ ನಾಲ್ಕು ಬಿಜೆಪಿ ಮುಖ್ಯಮಂತ್ರಿಗಳನ್ನು ಬದಲಾಯಿಸಲಾಗಿದೆ. ಕೆಲವು ಕಡೆ ಜಾತಿ ಸಮೀಕರಣಗಳನ್ನು ಸಮದೂಗಿಸಲು, ಇನ್ನು ಕೆಲವು ರಾಜ್ಯಗಳಲ್ಲಿ ಪಕ್ಷದ ಒಂದು ಗುಂಪಿನ ಬೇಡಿಕೆಯನ್ನು ಈಡೇರಿಸಲು ಮತ್ತು ಕೆಲವು ಕಡೆ ಸ್ಥಳೀಯ ನಾಯಕತ್ವ ಹೈಕಮಾಂಡ್‌ಗಿಂತಲೂ ಹೆಚ್ಚು ಬಲಿಷ್ಠವಾಗಬಾರದು ಎನ್ನುವ ಕಾರಣಕ್ಕೆ ಮುಖ್ಯಮಂತ್ರಿಗಳನ್ನು ಬದಲಾಯಿಸಲಾಗಿದೆ.
ಈಗ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಪದಚ್ಯುತಿಗೊಂಡ ನಾಲ್ಕನೇ ಮುಖ್ಯಮಂತ್ರಿಯಾಗಿದ್ದು ಭೂಪೇಂದ್ರ ಪಟೇಲ್ ಅವರನ್ನು ನೂತನ ಮುಖ್ಯಮಂತ್ರಿಯಾಗಿ ನೇಮಿಸಲಾಗಿದೆ. ಇದು ಗುಜರಾತ್‌ನಲ್ಲಿ ಮತ್ತೊಂದು ರಾಜಕೀಯ ಸ್ಥಿತ್ಯಂತರಕ್ಕೆ ಕಾರಣವಾಗಿದೆ. ಹೊಸ ಸರ್ಕಾರದಲ್ಲಿ ವಿಜಯ್ ರೂಪಾನಿ ಸರ್ಕಾರದ ಒಬ್ಬ ಸಚಿವರಿಗೂ ಅವಕಾಶ ನೀಡಲಾಗಿಲ್ಲ. ಹಿಂದಿನ ಸರ್ಕಾರದ ಎಲ್ಲಾ ಮಂತ್ರಿಗಳನ್ನು ಅಧಿಕಾರ ಕೇಂದ್ರದಿಂದ ಹೊರಗಿಟ್ಟಿರುವುದು ಬಹುಶಃ ದೇಶದಲ್ಲಿ ಇದೇ ಮೊದಲ ಬಾರಿ.
ಭೂಪೇಂದ್ರ ಪಟೇಲ್ ಅವರು ಮೊದಲ ಬಾರಿಯ ಶಾಸಕರಾಗಿದ್ದು ಯುಪಿ ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರ ಪರಮಾಪ್ತ. ಕೋವಿಡ್ -19 ಎರಡನೇ ಅಲೆಯನ್ನು ನಿರ್ವಹಿಸುವಲ್ಲಿ ರೂಪಾನಿ ನೇತೃತ್ವದ ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕಲು ಮತ್ತು ರಾಜ್ಯದ ಮತದಾರರಲ್ಲಿ ಸುಮಾರು 14 ಪ್ರತಿಶತದಷ್ಟು ಜನರನ್ನು ಹೊಂದಿರುವ ಪ್ರಬಲ ಪಾಟಿದಾರ್ ಸಮುದಾಯವನ್ನು ಸಮಾಧಾನಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂಬುವುದು ರಾಜಕೀಯ ಪಂಡಿತರ ಲೆಕ್ಕಾಚಾರ.
2001 ರಲ್ಲಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಂತರ, 2002 ರಲ್ಲಿ ವಿಧಾನಸಭಾ ಚುನಾವಣೆಯನ್ನು ದೊಡ್ಡ ಅಂತರದಲ್ಲಿ ಗೆದ್ದಿದ್ದರು. ಅದಾದ ನಂತರ, 2005 ರ ಚುನಾವಣೆಗಳಲ್ಲಿ ಅಚ್ಚರಿಯ ನಡೆಯೆಂಬಂತೆ ಮೋದಿ ಎಲ್ಲಾ ಹಾಲಿ ಕಾರ್ಪೊರೇಟರ್‌ಗಳನ್ನು ಬದಲಾಯಿಸಿದ್ದರು. ಆದರೆ ಎಲ್ಲರ ನಿರೀಕ್ಷೆಗಳನ್ನು ಮೀರಿ ಈ ಪ್ರಯೋಗವು ಭಾರೀ ಯಶಸ್ವಿಯಾಗಿತ್ತು.
ರಾಷ್ಟ್ರ ರಾಜಕಾರಣದಲ್ಲಿ ಮೋದಿಯವರು ಚಾಲ್ತಿಯಲ್ಲಿ ಇರಬೇಕಾದರೆ 2022ರಲ್ಲಿ ನಡೆಯಲಿರುವ ಗುಜರಾತ್ ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶವು ಅವರ ಪರ ಇರಲೇಬೇಕಿರುವುದನ್ನು ಗಮನದಲ್ಲಿಟ್ಟುಕೊಂಡು ಹೊಸ ಸರ್ಕಾರದಲ್ಲಿ ಜಾತಿ ಸಮೀಕರಣಗಳು ಸಮತೋಲಿತವಾಗಿರುವಂತೆ ನೋಡಿಕೊಳ್ಳಲಾಗಿದೆ. ಪ್ರಸ್ತುತ ಮಂತ್ರಿಮಂಡಲದ 10 ಕ್ಯಾಬಿನೆಟ್ ಮಂತ್ರಿಗಳು ಮತ್ತು 14 ರಾಜ್ಯ ಮಂತ್ರಿಗಳಲ್ಲಿ, ಏಳು ಪಾಟಿದಾರರು, ಏಳು ಒಬಿಸಿ ಸದಸ್ಯರು, ಇಬ್ಬರು ಬ್ರಾಹ್ಮಣರು, ಮೂರು ಎಸ್ಟಿಗಳು, ಇಬ್ಬರು ಎಸ್ಸಿಗಳು, ಇಬ್ಬರು ಕ್ಷತ್ರಿಯರು ಮತ್ತು ಒಬ್ಬ ಜೈನರಿದ್ದಾರೆ. ಈ ಸಂಪುಟದಲ್ಲಿ ಕೇವಲ ಮೂವರು ಮಂತ್ರಿಗಳು ಮಾತ್ರ ಆಡಳಿತಾತ್ಮಕ ಅನುಭವ ಹೊಂದಿದ್ದಾರೆ. ಆನಂದೀಬೆನ್ ಪಟೇಲ್ ಸರ್ಕಾರದಲ್ಲಿ ಸೇವೆ ಸಲ್ಲಿಸಿದ ರಾಜೇಂದ್ರ ತ್ರಿವೇದಿ, ಶಂಕರಸಿಂಹ ವಘೇಲಾ ಸರ್ಕಾರದಲ್ಲಿ ಮಂತ್ರಿಯಾಗಿದ್ದ ರಾಘವಜಿ ಪಟೇಲ್ ಮತ್ತು ಕೇಶುಭಾಯಿ ಪಟೇಲ್ ಮತ್ತು ನರೇಂದ್ರ ಮೋದಿ ಸರ್ಕಾರಗಳ ಭಾಗವಾಗಿದ್ದ ಕಿರಿತ್ಸಿನ್ ರಾಣಾ ಅವರನ್ನು ಹೊರತು ಪಡಿಸಿ ಉಳಿದ ಯಾರೂ ಅನುಭವಸ್ಥರಲ್ಲ.
ಜಿಡಿಪಿ ಕುಸಿತ, ಆರ್ಥಿಕ ನಿರ್ವಹಣೆಯಲ್ಲಿನ ವೈಫಲ್ಯ, ವಿತ್ತೀಯ ಕೊರತೆ, ತೈಲ ಬೆಲೆ ಏರಿಕೆ, ಕೋವಿಡ್ ನಿರ್ವಹಣೆಯಲ್ಲಿನ ವೈಫಲ್ಯ, ಅಸಮರ್ಪಕ ಜಿಎಸ್ಟಿ ನೀತಿ ಹೀಗೆ ಹಲವು ಕಾರಣಗಳಿಂದ ಜನರ ಕೆಂಗಣ್ಣಿಗೆ ಗುರಿಯಾಗಿರುವ ಸರ್ಕಾರ ಜನತೆಯ ಗಮನವನ್ನು ಬೇರೆ ಕಡೆ ಹರಿಸಲು ಮತ್ತು ಎಲ್ಲಾ ವೈಫಲ್ಯಗಳಿಗೂ ರಾಜ್ಯ ಸರ್ಕಾರವೇ ಕಾರಣ ಎಂಬಂತೆ ಬಿಂಬಿಸಲು ಮುಖ್ಯಮಂತ್ರಿಗಳನ್ನು ಬದಲಾಯಿಸುತ್ತಿದೆ ಎಂಬ ಅಭಿಪ್ರಾಯಗಳೂ ಇವೆ.
ಹೀಗೆ ದಿಢೀರನೆ, ಯಾವ ಕಾರಣವನ್ನೂ ನೀಡದೆ ಜನರಿಂದ ಆಯ್ಕೆಯಾದ ಮುಖ್ಯಮಂತ್ರಿಗಳನ್ನು ಬದಲಾಯಿಸುವ ಸಂಸ್ಕೃತಿ ಮೊದಲು ಕಾಂಗ್ರೆಸ್‌ನಲ್ಲಿತ್ತು. ಈಗ ಅದೇ ಸಂಸ್ಕೃತಿಯನ್ನು ಬಿಜೆಪಿಯು ಎರವಲು ಪಡೆದಂತೆ ತೋರುತ್ತಿದೆ. ಸದ್ಯಕ್ಕೆ ಗುಜರಾತ್ ಬಿಜೆಪಿಯಲ್ಲಿ ಎಲ್ಲವೂ ಸರಿಯಿರುವಂತೆ ಮೇಲ್ನೋಟಕ್ಕೆ ತೋರುತ್ತದೆ. ಆದರೆ ಕೊನೆಯ ಕ್ಷಣದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಒಂದು ದಿನ ಮುಂದೂಡಬೇಕಾಗಿ ಬಂದುದು ಯಾವ ಸ್ಥಿತಿಯನ್ನು ಸೂಚಿಸುತ್ತದೆ ಎಂಬುವುದಕ್ಕೆ ಕಾಲವೇ ಉತ್ತರ ನೀಡಬಲ್ಲುದಷ್ಟೇ.