ಬೆಂಗಳೂರಲ್ಲಿ ಕಸದ ಸಮಸ್ಯೆಯು ತೀವ್ರವಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಇರಿಸಿದೆ. ಈಗ ಕಸವನ್ನು ಪ್ರಾಥಮಿಕ ಸಂಗ್ರಹಣಾ ವಾಹನ(ಆಟೋಟಿಪ್ಪರ್)ಗಳಿಂದ ಎರಡನೇ ಹಂತದ ಸಾಗಾಣಿಕ ವಾಹನಗಳಿಗೆ(ಕಾಂಪ್ಯಾಕ್ಟರ್) ಹಾಕಲಾಗುತ್ತಿದೆ.
ಬೆಂಗಳೂರಿನ ರಸ್ತೆ ಬದಿ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಕಸ ಸಂಗ್ರಹಿಸಲಾಗುತ್ತಿದೆ.ಇನ್ಮುಂದೆ ಈ ವಿಧಾನದಲ್ಲಿ ಕೆಲವು ಹೊಸ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ.
ಈಗ ಇರುವ ಕಸ ಸಂಗ್ರಹ ವಿಧಾನದಿಂದ ಒಂದೇ ಸ್ಥಳದಲ್ಲಿ ಕಸವನ್ನು ಒಂದು ಗಾಡಿಯಿಂದ ಇನ್ನೊಂದು ಗಾಡಿಗೆ ಹಾಕುತ್ತಿರುವುದರಿಂದ ಕಸ ಮತ್ತು ಲೀಚೆಟ್ (ಕೊಳಚೆ ನೀರು) ಸೋರಿಕೆಯಾಗಿ, ಕಸ ಸಂಗ್ರಹಿಸುವ ಸ್ಥಳಗಳು ಬ್ಲಾಕ್ ಸ್ಪಾಟ್ಗಳಾಗಿ ಬದಲಾಗುತ್ತಿವೆ. ಇದರಿಂದ ಬೆಂಗಳೂರಿನ ರಸ್ತೆಗಳಲ್ಲಿ ಬ್ಲಾಕ್ಸ್ಪಾಟ್ ಹಾಗೂ ಜನರ ಆರೋಗ್ಯ ಸಮಸ್ಯೆ ಆಗುತ್ತಿವೆ. ಅದನ್ನು ತಪ್ಪಿಸಲು ಬಿಬಿಎಂಪಿ ಹಾಗೂ ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಮುಂದಾಗಿದೆ.
ಬೆಂಗಳೂರಿನ ರಸ್ತೆಗಳಲ್ಲಿ ಬ್ಲಾಕ್ಸ್ಪಾಟ್ಗಳನ್ನು ತೆರವುಗೊಳಿಸಿ, ರಸ್ತೆಯಲ್ಲಿ ಸೋರುವ ಲೀಚೆಟ್ ನೀರನ್ನು ತಡೆದು ತ್ಯಾಜ್ಯ-ಮುಕ್ತ ಪ್ರದೇಶಗಳನ್ನಾಗಿ ಮಾರ್ಪಡಿಸಲು ಹಾಗೂ ನಗರದ ಸೌಂದರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ದೊಡ್ಡ ಕಸ ವರ್ಗಾವಣಾ ಕೇಂದ್ರಗಳನ್ನು ನಿರ್ಮಿಸಲು ಮುಂದಾಗಿದೆ.
ಇನ್ನು ಟ್ರಾನ್ಸ್ ಫರ್ ಸ್ಟೇಷನ್ಗಳು 2 ರಿಂದ 3 ಪಾಳಿಯಲ್ಲಿ ಕಾರ್ಯನಿರ್ವಹಿಸಲು ಯೋಜಿಸಲಾಗುತ್ತಿದೆ. ಇದರಿಂದ ವಾರ್ಡ್ಗಳಲ್ಲಿ ತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆಯಲ್ಲಿ ಉತ್ತಮ ಫಲಿತಾಂಶ ಕಂಡುಬಂದಿದೆ ಎಂದು ಬಿಬಿಎಂಪಿ ಹೇಳಿದೆ. ಟ್ರಾನ್ಸ್ ಫರ್ ಸ್ಟೇಷನ್ಗಳಲ್ಲಿ ದ್ವಿತೀಯ ಹಂತದ ಸಾಗಾಣಿಕ ವಾಹನಗಳಾದ ಕಂಟೈನರ್ಗಳು ಲಿಚೆಟ್ ಸೋರಿಕೆಯನ್ನು ತಡೆಗಟ್ಟುವ ತಂತ್ರಜ್ಞಾನವನ್ನು ಹೊಂದಿದ್ದು, ತ್ಯಾಜ್ಯ ವರ್ಗಾವಣೆಯನ್ನು ಬಹುಮುಖ್ಯವಾಗಿ ಉಂಟಾಗುವ ಕೊಳಚೆ ನೀರು ಸೋರಿಕೆಯನ್ನು ತಡೆಗಟ್ಟಬಹುದಾಗಿದೆ ಎಂದಿದೆ.
ಬೆಂಗಳೂರಲ್ಲಿ ಕಸ ನಿರ್ವಹಣೆ ವ್ಯವಸ್ಥೆ ಹೇಗಿದೆ:
ಘನತ್ಯಾಜ್ಯ ನಿರ್ವಹಣಾ ನಿಯಮ-2016ರ ಪ್ರಕಾರ ಕಸವನವನ್ನು ಉತ್ಪಾದಿಸುವವರು (ಮನೆ & ವಾಣಿಜ್ಯ ಯಾವುದೇ ಇರಲಿ) ಕಸವನ್ನು ಮೂಲದಲ್ಲಿಯೇ ಬೇರ್ಪಡಿಸಿ ಪಾಲಿಕೆ ನಿಗದಿ ಮಾಡಿರುವ ವಾಹನಗಳಿಗೆ ನೀಡುವುದು ಕಡ್ಡಾಯವಾಗಿದೆ. ಪಾಲಿಕೆಯು ತ್ಯಾಜ್ಯ ವಿಂಗಡಣೆಗೆ ವಿವಿಧ ಹಂತಗಳಲ್ಲಿ ಅನೇಕ ಕ್ರಮ ತೆಗೆದುಕೊಂಡಿದೆ.ಸಾರ್ವಜನಿಕರಿಗೆ ಮಾಹಿತಿ ಹಾಗೂ ಅರಿವಿನ ಕಾರ್ಯಕ್ರಮಗಳನ್ನು ಮೂಡಿಸಲಾಗುತ್ತಿದ್ದರೂ ಸಹ ಈವರೆಗೆ ತ್ಯಾಜ್ಯ ವಿಂಗಡಣೆಯಲ್ಲಿ ಶೇಕಡ 55% ರಷ್ಟು ಪ್ರಗತಿಯನ್ನು ಮಾತ್ರವೇ ಸಾಧಿಸಿದೆ. ತ್ಯಾಜ್ಯ ವಿಂಗಡಣೆಯು ವಿವಿಧ ವಾರ್ಡ್ಗಳಲ್ಲಿ ಕನಿಷ್ಟ ಶೇಕಡ 50% ರಿಂದ ಗರಿಷ್ಟ 85% ರವರೆಗೆ ಪ್ರಗತಿ ಆಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
ಎರಡನೇ ಹಂತದ ಕಸ ನಿರ್ವಹಣೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ದ್ವಿತೀಯ ಹಂತದ ಕಸ (ಘನತ್ಯಾಜ್ಯ) ವರ್ಗಾವಣೆ ಘಟಕ(Transfer Station) ಹಾಗೂ ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಘಟಕಗಳನ್ನು ಉದ್ಘಾಟನೆ ಮಾಡಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿ.ದಿಂದ ಬೆಂಗಳೂರಿನ ಪಶ್ಚಿಮ ವಲಯದ ಬಿನ್ನಿಮಿಲ್ ರಸ್ತೆಯ ಛಲವಾದಿ ಪಾಳ್ಯ ವಾರ್ಡ್ ವ್ಯಾಪ್ತಿಯಲ್ಲಿ ದ್ವಿತೀಯ ಹಂತದ ಘನತ್ಯಾಜ್ಯ ಘಟಕ ಹಾಗೂ ಸ್ವಯಂ ಚಾಲಿತ ತ್ಯಾಜ್ಯ ವಿಂಗಡಣೆ ಘಟಕವನ್ನು ನಿರ್ಮಿಸಲಾಗಿದೆ.
ದ್ವಿತೀಯ ಹಂತದ ಕಸ (ಘನತ್ಯಾಜ್ಯ) ವರ್ಗಾವಣೆ ಘಟಕ ಹಾಗೂ ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಘಟಕಗಳನ್ನು 12.50 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಚಾಮರಾಜಪೇಟೆ ವಿಭಾಗದ 6 ವಾರ್ಡ್ ಹಾಗೂ ಗಾಂಧಿನಗರ ವಿಭಾಗದ 3 ವಾರ್ಡ್ ಸೇರಿದಂತೆ 9 ವಾರ್ಡ್ಗಳಿಂದ ಉತ್ಪತ್ತಿಯಾಗುವ ಕಸವನ್ನು ಈ ಘಟಕದಲ್ಲಿ ಸ್ವೀಕರಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ನಿರ್ಧರಿಸಲಾಗಿದೆ.