ಕಲ್ಲಿದ್ದಲು ಕೊರತೆ ಕೃತಕವೋ ಅಥವಾ ಸ್ವಾಭಾವಿಕವೋ ಎಂಬ ಬಗ್ಗೆ ಮೊದಲು ಗೊತ್ತಾಗಬೇಕು, ಕರ್ನಾಟಕದಲ್ಲಿ ಈ ವರೆಗೆ ವಿದ್ಯುತ್ ಅಭಾವ ಇರಲಿಲ್ಲ, ಯಾವಾಗಲೂ ವಿದ್ಯುತ್ ಉತ್ಪಾದನೆ ಅಗತ್ಯ ಪ್ರಮಾಣಕ್ಕಿಂತ ಹೆಚ್ಚಿತ್ತು. ನಮ್ಮಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳು ಸ್ಥಗಿತವಾಗಿರುವುದರಿಂದ ನಮ್ಮ ರಾಜ್ಯಕ್ಕೆ ಕಲ್ಲಿದ್ದಲಿನ ಅಗತ್ಯ ಹೆಚ್ಚಿಲ್ಲ. ಸರ್ಕಾರ ವಿದ್ಯುತ್ ಉತ್ಪಾದಕಾ ಘಟಕಗಳನ್ನು ಖಾಸಗಿಯವರಿಗೆ ನೀಡುವ ಉದ್ದೇಶದಿಂದ ಕೃತಕ ಅಭಾವ ಸೃಷ್ಟಿ ಮಾಡಬಾರದು. ಹಾಗೇನಾದರೂ ಸರ್ಕಾರ ಮಾಡಿದರೆ ನಾನು ಅದನ್ನು ಖಂಡಿಸುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ವಿದ್ಯುತ್ ಘಟಕಗಳನ್ನು ಖಾಸಗೀಕರಣ ಮಾಡಬಾರದು, ಇದರಿಂದ ರೈತರಿಗೆ ಅನ್ಯಾಯವಾಗಲಿದೆ. ಒಮ್ಮೆ ಖಾಸಗೀಕರಣಗೊಂಡರೆ ರೈತರಿಗೆ ಪೂರೈಕೆಯಾಗುತ್ತಿರುವ ಉಚಿತ ವಿದ್ಯುತ್ ಅನ್ನು ನಿಲ್ಲಿಸುತ್ತಾರೆ ಎಂಧು ಹೇಳಿದ್ದಾರೆ.
ದೇಶಭಕ್ತರ ಸರ್ಕಾರ ಬೆಂಗಳೂರು ನಗರ ಉಸ್ತುವಾರಿ ಸ್ಥಾನಕ್ಕಾಗಿ ಕಿತ್ತಾಟ ಮಾಡುತ್ತಿದೆ. ಇದು ಲಾಭದಾಯಕ ಸ್ಥಾನವಾಗಿರುವುದರಿಂದ ಇಷ್ಟೆಲ್ಲಾ ಗಲಾಟೆಗಳಾಗುತ್ತಿದೆ. ಜಿ.ಎಸ್.ಟಿ ಪರಿಹಾರ, ನಮ್ಮ ತೆರಿಗೆ ಪಾಲಿನ ಹಣವನ್ನು ರಾಜ್ಯ ಸರ್ಕಾರ ಗಟ್ಟಿಧ್ವನಿಯಲ್ಲಿ ಕೇಳಬೇಕು. ಇದೇನು ಭಿಕ್ಷೆಯಲ್ಲ, ಇದು ನಮ್ಮ ಹಕ್ಕು ಎಂಧು ಹೇಳಿದ್ದಾರೆ.
ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಆಗುತ್ತಿದೆ. ಏಪ್ರಿಲ್ ಇಂದ ಸೆಪ್ಟೆಂಬರ್ ವರೆಗೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 3,000 ಕೋಟಿ ರೂಪಾಯಿ ತೆರಿಗೆ ಹೆಚ್ಚು ಸಂಗ್ರಹವಾಗಿದೆ. ಸ್ಟಾಲಿನ್ ಸರ್ಕಾರ ಮೂರು ರೂಪಾಯಿ ತೆರಿಗೆ ಕಡಿಮೆ ಮಾಡಿದೆ, ನಮ್ಮ ರಾಜ್ಯದಲ್ಲಿ ಕನಿಷ್ಟ ಹತ್ತು ರೂಪಾಯಿ ಕಡಿಮೆ ಮಾಡಬೇಕು. ಆಗ ಅಗತ್ಯ ವಸ್ತುಗಳ ಬೆಲೆ ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿಮೆ ಮಾಡಬೇಕು. ಕಳೆದ ಏಳು ವರ್ಷದಲ್ಲಿ ಪೆಟ್ರೋಲ್ ಡೀಸೆಲ್ ಮೇಲಿನ ಅಬಕಾರಿ ಸುಂಕ ಒಂದರಿಂದಲೇ ಕೇಂದ್ರ ಸರ್ಕಾರಕ್ಕೆ 23 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ. ಕರ್ನಾಟಕವೊಂದರಿಂದಲೇ 1.20 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ. ಬಡವರ ಬಗ್ಗೆ ದೊಡ್ಡ ದೊಡ್ಡ ಮಾತನಾಡುವ ಬಿಜೆಪಿಯವರು ತೆರಿಗೆ ಕಡಿತ ಮಾಡಿ ಜನರಿಗೆ ಸಹಾಯ ಮಾಡಲಿ ಎಂದು ಹೇಳಿದ್ದಾರೆ.
ಮನಮೋಹನ್ ಸಿಂಗ್ ಅವರ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಾಗ ಡೀಸೆಲ್ ಮೇಲೆ 3 ರೂಪಾಯಿ 45 ಪೈಸೆ ಅಬಕಾರಿ ತೆರಿಗೆ ಇತ್ತು, ಈಗ ಅದು 31 ರೂಪಾಯಿ 84 ಪೈಸೆ ಆಗಿದೆ. ಪೆಟ್ರೋಲ್ ಮೇಲೆ 9 ರೂಪಾಯಿ 21 ಪೈಸೆ ತೆರಿಗೆ ಇತ್ತು ಇತ್ತು, ಈಗ 32 ರೂಪಾಯಿ 98 ಪೈಸೆಗೆ ಏರಿದೆ. ಇದರಲ್ಲಿ ಕನಿಷ್ಟ 50% ಕಡಿಮೆ ಮಾಡಲಿ. ಇದನ್ನೇ ನಾನು ಕ್ರಿಮಿನಲ್ ಲೂಟಿ ಎಂದು ಕರೆದಿದ್ದು ಎಂದು ಕಿಡಿಕಾರಿದ್ದಾರೆ.
ಕೋವಿಡ್ಗೂ ಪೆಟ್ರೋಲ್ ಬೆಲೆ ಏರಿಕೆಗೂ ಸಂಬಂಧ ಏನು? ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಬರುತ್ತಿಲ್ಲ ಎಂಬ ಕಾರಣಕ್ಕೆ ಬಡ ಜನರ ರಕ್ತ ಕುಡಿಯುವುದು ಸರಿನಾ? ಕಾರ್ಪೊರೇಟ್ ಸಂಸ್ಥೆಗಳ ಮೇಲೆ ತೆರಿಗೆ ಹೆಚ್ಚು ಮಾಡಲಿ. ಕೊರೊನಾ ಇದ್ದರೂ ಅದಾನಿ ಆಸ್ತಿ ನಾಲ್ಕು ಪಟ್ಟು ಹೆಚ್ಚಾಗಿದೆ, ಬಡವರ ಬದುಕು ಬೀದಿಗೆ ಬರುತ್ತಿದೆ. ಹೀಗಿದ್ದಾಗ ಯಾರ ಮೇಲೆ ತೆರಿಗೆ ಹೆಚ್ಚು ಮಾಡಬೇಕು ಅಂತ ಸರ್ಕಾರಕ್ಕೆ ಗೊತ್ತಾಗಲ್ವಾ? ಅದಾನಿ, ಅಂಬಾನಿ ಬೆಳಿಬೇಕು, ಬಡವರು ಸಾಯಬೇಕು, ಇದು ಬಿಜೆಪಿ ಅವರ ನೀತಿ ಎಂದು ಆರೋಪಿಸಿದ್ದಾರೆ.
ಯಡಿಯೂರಪ್ಪ ಅವರ ಮೇಲೆ ನನಗೆ ಪ್ರೀತಿಯಾಗಲಿ, ದ್ವೇಷವಾಗಲಿ ಇಲ್ಲ. ಬಿಜೆಪಿ ಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದರೆ ಸುಧಾಕರ್ ಪಕ್ಷಕ್ಕೆ ರಾಜೀನಾಮೆ ನೀಡಲಿ. ರಾಹುಲ್ ಗಾಂಧಿಯವರೇ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಬೇಕು ಎಂಬುದನ್ನು ಬಹುಕಾಲದಿಂದ ಹೇಳುತ್ತಾ ಬಂದಿದ್ದೇನೆ. ಈಗಲೂ ಆದಷ್ಟು ಬೇಗ ಅವರೇ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಬೇಕು ಎಂದು ಕೋರುತ್ತೇನೆಂದು ಸುದ್ದಿಘೋಷ್ಠಿಯಲ್ಲಿ ತಿಳಿಸಿದ್ದಾರೆ.