ಹನ್ನೆಡರನೇ ಶತಮಾನದಲ್ಲಿ ಕಲ್ಯಾಣದಲ್ಲಿ ಘಟಿಸಿದ ಸರ್ವಾಂಗೀಣ ವಚನ ಚಳುವಳಿ ಜಗತ್ತಿನ ಇತಿಹಾಸದಲ್ಲಿ ಒಂದು ಅಚ್ಚಳಿಯದ ಐತಿಹಾಸಿಕ ಕ್ರಾಂತಿ. ಬಸವಾದಿ ಶರಣರು ನೀಡಿದ ಜೀವಪರ ವಿಚಾರಗಳು ಪುರೋಹಿತಶಾಹಿಗಳಿಗೆ ಸಿಂಹಸ್ವಪ್ನದಂತೆ ಕಾಡುತ್ತವೆ. ಉತ್ಪಾದಕ ವರ್ಗದ (Productive class) ತಳ ಸಮುದಾಯದ ಕಾಯಕ ನಿರತ ಜನರು ಕಟ್ಟಿದ ಲಿಂಗಾಯತ ಚಳುವಳಿಯಲ್ಲಿ ಒಳಸೇರಿ ಅದರೊಳಗೆ ವೈದಿಕ ಆಚರಣೆಗಳನ್ನು ಕಲಬೆರಕೆ ಮಾಡಿದ್ದು ಆಂಧ್ರ ಮೂಲದ ವೀರಶೈವ ಆರಾಧ್ಯ ಬ್ರಾಹ್ಮಣರು. ಈ ಆರಾಧ್ಯ ಬ್ರಾಹ್ಮಣರು ಅನುತ್ಪಾದಕ (Non-productive) ಪರಾವಲಂಬಿ (parasitic) ಪಂಗಡಕ್ಕೆ ಸೇರಿದವರು. ಬಸವೋತ್ತರ ಯುಗದಲ್ಲಿ ಟಿಪಿಕಲ್ ಬ್ರಾಹ್ಮಣ ಪುರಾಣಗಳ ಶೈಲಿಯಲ್ಲಿ ಬಸವ ಚರಿತ್ರೆಯನ್ನು ಬರೆದು ಬಸವಣ್ಣನವರ ಬದುಕು ಮತ್ತು ಚಿಂತನೆಗಳಿಗೆ ಬ್ರಾಹ್ಮಣ್ಯದ ಸೋಂಕು ತಗಲಿಸಿದವರು ಇದೇ ಆರಾಧ್ಯ ಬ್ರಾಹ್ಮಣರು.
ತಮ್ಮ ಯಾವುದೇ ಒಂದು ವಚನಗಳಲ್ಲಿ ಈ ವೀರಶೈವ ಆಚಾರ್ಯರನ್ನು ಬಸವಣ್ಣನವರು ಸ್ಮರಿಸದೆ ಹೋದರೂ ಕೂಡ ಈ ಆಚಾರ್ಯ ವರ್ಗದ ವೀರಶೈವರು ಬಸವಣ್ಣನವರ ಬೆನ್ನು ಬಿಡುತ್ತಿಲ್ಲ. ಬಸವಣ್ಣ ನಮ್ಮ ಶಿಷ್ಯ ಎಂದು ಸುಳ್ಳು ಹೇಳುತ್ತ ಬಸವಾನುಯಾಯಿ ಲಿಂಗಾಯತರ ಬೆವರಿನ ದಕ್ಷಿಣೆಯಲ್ಲಿ ಬದುಕುತ್ತಿದ್ದಾರೆ ಮತ್ತು ಇಡೀ ಲಿಂಗಾಯತ ಸಮಾಜದ ಮೇಲೆ ಯಜಮಾನಿಕೆಯನ್ನು ಸ್ಥಾಪಿಸಿಕೊಂಡು ಅಡ್ಡ ಪಲ್ಲಕ್ಕಿಯಲ್ಲಿ ಮೆರೆಯುತ್ತಿದ್ದಾರೆ. ಈಗ ಬಸವ ಪ್ರಣೀತ ಲಿಂಗಾಯತರು ಜಾಗೃತಿಗೊಳ್ಳುತ್ತಿರುವುದು ಈ ವೀರಶೈವರಿಗೆ ಸಹಿಸಲು ಆಗುತ್ತಿಲ್ಲ. ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ತಪ್ಪಿಸಿದ ಈ ವೀರಶೈವರು ತಾವು ಮಾತ್ರ ಶೋಷಿತ ಜನಾಂಗದ ಬೇಡ ಜಂಗಮ ಪರಿಶಿಷ್ಟರ ಸೌಲಭ್ಯಕ್ಕಾಗಿ ಬಡಿದಾಡುತ್ತಿದ್ದಾರೆ.
ಬಸವಣ್ಣನವರನ್ನು ಮತ್ತವರ ಜೀವನ್ಮುಖಿ ವಿಚಾರಗಳನ್ನು ಮುಂಚಿನಿಂದ ದ್ವೇಷಿಸಿಕೊಂಡು ಬಂದಿರುವ ಪುರೋಹಿತಶಾಹಿಗಳು ಬಸವಣ್ಣನವರ ಭಾವಚಿತ್ರ ˌ ಹಾಗು ಸ್ಮಾರಕಗಳನ್ನು ಹೊಟ್ಟೆ ಹೊರೆಯಲು ಬಳಸಿದ್ದು ಅವರ ನಾಚಿಕೆಗೇಡು ಬದುಕಿಗೆ ಸಾಕ್ಷಿಯಾಗಿದೆ. ಬಸವಣ್ಣನವರನ್ನು ಸದಾ ದ್ವೇಷಿಸುವ ಈ ವೀರಶೈವರು ಕೂಡಲಸಂಗಮದಲ್ಲಿ ಬಸವಣ್ಣನವರ ಐಕ್ಯ ಮಂಟಪದ ಮೇಲೆ ಧಾರ್ಮಿಕ ಪೌರೋಹಿತ್ಯ ಮಾಡಲು ಲವಲೇಶವು ಹಿಂಜರಿಯಲಿಲ್ಲ. ಸ್ಥಾವರ ಪೂಜೆಯನ್ನು ದಿಕ್ಕರಿಸಿದ್ದ ಬಸವಣ್ಣನವರ ಸಮಾಧಿಯನ್ನೇ ಸ್ಥಾವರವಾಗಿಸಿ ಬದುಕಿದ ವೀರಶೈವರಿಂದ ಐಕ್ಯಮಂಟಪ ಮುಕ್ತಗೊಳ್ಳಲು ಶತಮಾನಗಳೆ ಬೇಕಾದವು. ಈಗ ಕಲ್ಯಾಣದ ಪರುಷ ಕಟ್ಟೆಯನ್ನು ಕೂಡ ವೀರಶೈವ ಪುರೋಹಿತ ಮುಕ್ತ ಮಾಡುವ ಅಗತ್ಯವಿದೆ.
ಬಸವಕಲ್ಯಾಣದಲ್ಲಿ ಐತಿಹಾಸಿಕ ಪರುಷ ಕಟ್ಟೆಯ ಮೇಲೆ ಧರ್ಮಗುರು ಬಸವಣ್ಣನವರು ಪ್ರತಿದಿನ ಅರಮನೆಗೆ ಹೋಗುವಾಗ ಒಂದಷ್ಟು ಸಮಯ ಕುಳಿತುಕೊಂಡು ಸಾಮಾಜ್ಯದ ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾಗುತ್ತಿದ್ದರು ಮತ್ತು ಜನರ ದೈನಂದಿನ ಸಮಸ್ಯೆಗಳು ಪರಿಹರಿಸುವ ಮಾಧ್ಯಮದಂತೆ ಪರುಷ ಕಟ್ಟೆಯನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದರು. ಕಲ್ಯಾಣದಲ್ಲಿ ವೈದಿಕರಿಂದ ಶರಣರ ಮಾರಣಹೋಮ ನಡೆದ ನಂತರ ಪರುಷ ಕಟ್ಟೆ ಬಸವಣ್ಣನವರ ಸ್ಮರಣಾರ್ಥವಾಗಿ ಹಾಗು ಐತಿಹಾಸಿಕ ಕುರುಹಾಗಿ ಹನ್ನೆರಡನೆ ಶತಮಾನದಿಂದ ೧೯೪೮ ರ ವರೆಗೆ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡು ಬಂದಿತ್ತು.
೧೯೪೮ ರ ರಜಾಕಾರ್ ಹಾವಳಿಯ ಸಂದರ್ಭವನ್ನು ಬಳಸಿಕೊಂಡು ಆ ಕಟ್ಟೆಯ ಮೇಲೆ ವೀರಶೈವ ಆರಾಧ್ಯ ಬ್ರಾಹ್ಮಣರು ದನ (ನಂದಿ) ದ ವಿಗ್ರಹ ಮತ್ತು ಕಾಣಿಕೆ ಪೆಟ್ಟಿಗೆಯನ್ನಿಟ್ಟು ತಮ್ಮ ಪರಾವಲಂಬಿ ಬದುಕಿಗೆ ಹಾದಿ ಹುಡುಕಿಕೊಂಡರು. ಈ ವೀರಶೈವರು ಬಸವಣ್ಣನವರನ್ನು ಹಿಂದಿನಿಂದಲೂ ದ್ವೇಷಿಸುತ್ತ ಅದೇ ಬಸವಣ್ಣನವರ ಸ್ಮಾರಕವನ್ನು ತಮ್ಮ ಉಪಜೀವನಕ್ಕೆ ಬಳಸಿಕೊಳ್ಳಲು ನಾಚಿಕೆ ಪಟ್ಟುಕೊಳ್ಳಲಿಲ್ಲ ಎನ್ಣುವುದೆ ದುರಂತದ ಸಂಗತಿಯಾಗಿದೆ. ಆ ಪರುಷಕಟ್ಟೆಯ ಐತಿಹಾಸಿಕ ಮಹತ್ವಕ್ಕೆ ವೀರಶೈವರು ಚ್ಯುತಿ ತಂದಿದ್ದಾರೆ. ಬಸವಣ್ಣನವರು ಕುಳಿತ ಪರುಷ ಕಟ್ಟೆಯ ಮೇಲೆ ಆಗಮಿಕ ವೀರಶೈವರ ದನ(ನಂದಿ)ದ ವಿಗ್ರಹವನ್ನಿಟ್ಟು ಅದನ್ನು ಅಪವಿತ್ರಗೊಳಿಸಿದ್ದಾರೆ. ಈಗ ಆ ವಿಗ್ರಹ ಅಲ್ಲಿಂದ ಎತ್ತಂಗಡಿ ಆಗಿದ್ದು ಬಸವಾನುಯಾಯಿಗಳಿಗೆ ಹರ್ಷ ತಂದಿದೆ.
ಇದೀಗ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರವು ಐತಿಹಾಸಿಕ ಪರುಷ ಕಟ್ಟೆಯನ್ನು ಸುಂದರವಾಗಿ ಹಾಗು ಅರ್ಥಪೂರ್ಣವಾಗಿ ಅಭಿವೃದ್ಧಿಗೊಳಿಸುತ್ತಿದ್ದು ಅದರ ಸುತ್ತಮುತ್ತಲು ಅನೇಕ ವರ್ಷಗಳಿಂದ ವಾಸಿಸುತ್ತಿದ್ದ ಮುಸ್ಲಿಮ್ ಬಾಂಧವರ ಕಟ್ಟಡಗಳನ್ನು ಸೌಹಾರ್ದ ಮಾತುಕತೆಯ ಮೂಲಕ ತೆರವುಗೊಳಿಸಿ ಅದನ್ನು ಒಂದು ಐತಿಹಾಸಿಕ ಮಹತ್ವದ ತಾಣವಾಗಿ ಅಭಿವೃದ್ಧಿ ಪಡಿಸುತ್ತಿದೆ. ಒಂದು ವಾರದ ಹಿಂದೆ ಆ ಐತಿಹಾಸಿಕ ಪರುಷ ಕಟ್ಟೆಯ ಮೇಲಿಟ್ಟಿದ್ದ ದನ (ನಂದಿ) ದ ವಿಗ್ರಹವನ್ನು ಅಭಿವೃದ್ಧಿ ಪ್ರಾಧಿಕಾರ ತೆರವುಗೊಳಿಸಿದೆ. ವೀರಶೈವ ಪುಂಡರು ಪ್ರಾಧಿಕಾರದ ಈ ಐತಿಹಾಸಿಕ ಕ್ರಮವನ್ನು ವಿರೋಧಿಸಿ ಸಂಬಂಧಿಸಿದವರ ಮೇಲೆ ಪುಂಡಾಟಿಕೆ ಮಾಡಿದ್ದಲ್ಲದೆ ಮತ್ತೆ ಪರುಷ ಕಟ್ಟೆಯ ಮೇಲೆ ಆ ವಿಗ್ರಹವನ್ನು ತಂದಿಡುವಂತೆ ಜಿಲ್ಲಾಡಳಿತದ ಮೇಲೆ ಒತ್ತಡ ಹೇರುತ್ತಿದ್ದಾರೆ.
ಬಸವಣ್ಣನವರು ಕುಳಿತ ಐತಿಹಾಸಿಕ ಸ್ಮಾರಕ ಪರುಷ ಕಟ್ಟೆಗೂ ಹಿಂದೂ ಮತಾಂಧರು ಹಾಗು ವೀರಶೈವ ಆಗಮಿಕರು ಆರಾಧಿಸುವ ದನ (ನಂದಿ) ದ ವಿಗ್ರಹಕ್ಕೂ ಯಾವುದೇ ಬಾದರಾಯಣ ಸಂಬಂಧವಿಲ್ಲ. ಬಸವಣ್ಣ ಸ್ಥಾಪಿಸಿರುವ ಲಿಂಗಾಯತ ಧರ್ಮದ ಅನುಯಾಯಿಗಳು ಸನಾತನ ವೈದಿಕ ಧರ್ಮದ ಅನುಯಾಯಿಗಳಲ್ಲವಾದ್ದರಿಂದ ಆ ನಂದಿ ವಿಗ್ರಹಕ್ಕೂ ಪರುಷ ಕಟ್ಟೆಗು ಹಾಗು ಲಿಂಗಾಯತ ಧರ್ಮಿಯರಿಗು ಯಾವುದೇ ಸಂಬಂಧವಿಲ್ಲ. ಆದರೂ ಬಸವಣ್ಣನವರಿಗೆ ಸಂಬಂಧಿಸಿದ ಆ ಐತಿಹಾಸಿಕ ಪರುಷ ಕಟ್ಟೆಯ ಮೇಲೆ ಪುರಾಣ ಕಲ್ಪಿತ ದನ(ನಂದಿ) ದ ವಿಗ್ರಹ ಇಡಬೇಕೆಂದು ಬಸವದ್ರೋಹಿಗಳು ಮತ್ತು ಹಿಂಗಾಯತ ಧರ್ಮದ್ರೋಹಿಗಳ ಪುಂಡಾಟಿಕೆ ಮುಂದುವರೆದಿದೆ.
ಕಳೆದ ವಾರ ಪರುಷ ಕಟ್ಟೆಯ ಮೇಲಿನ ಆ ನಂದಿ ವಿಗ್ರಹ ತೆರವುಗೊಳಿಸಿದಾಗ ಸ್ಥಳಿಯ ಬಿಜೆಪಿ ಶಾಸಕ ಮತ್ತು ಆತನ ಹಿಂದುತ್ವವಾದಿ ಪಟಾಲಮ್ ಅಲ್ಲಿ ಪುಂಡಾಟಿಕೆ ಮಾಡಿತ್ತು. ಸಂಬಂಧಿಸಿದವರಿಗೆ ಹೆದರಿಸುವˌ ಅನಾಗರಿಕವಾಗಿ ನಿಂದಿಸುವ ಗೂಂಡಾ ವರ್ತನೆ ತೋರಿತ್ತು. ವೀರಶೈವ ಮತ್ತು ಹಿಂದೂ ಮೂಲಭೂತವಾದಿ ಗೂಂಡಾಗಳ ಈ ಪುಂಡಾಟಿಕೆಯ ವಿರುದ್ಧ ಬಸವಪ್ರಜ್ಞೆಯುಳ್ಳ ಮಠಗಳು ಮತ್ತು ಸಂಘ-ಸಂಸ್ಥೆಗಳು ಬೀದಿಗಿಳಿದು ಹೋರಾಡುವ ಅಗತ್ಯವಿದೆ. ಪರುಷ ಕಟ್ಟೆ ಅಭಿವೃದ್ಧಿ ಹೊಂದಿದ ನಂತರ ಮತ್ತೆ ಆ ದನದ (ನಂದಿ) ವಿಗ್ರಹ ಪರುಷಕಟ್ಟೆ ಏರದಂತೆ ಜಿಲ್ಲಾಡಳಿತ ಜಾಗೃತೆ ವಹಿಸಬೇಕು ಮತ್ತು ಅದನ್ನು ಒಂದು ಐತಿಹಾಸಿಕ ಸ್ಮಾರಕವಾಗಿ ಹಾಗು ಬಸವಣ್ಣನವರ ಜಗದ್ವಿಖ್ಯಾತ ಉದಾತ್ ಕಾರ್ಯದ ಸಾಕ್ಷಿಯ ಕುರುಹಾಗಿ ರಕ್ಷಿಸಬೇಕೆ ಹೊರತು ಮೈಗಳ್ಳ ಪುರೋಹಿತರ ಪೂಜಾ ಕೇಂದ್ರವಾಗಿಸಬಾರದು.
ಪರುಷಕಟ್ಟೆಯ ಮೇಲೆ ಆ ದನ(ನಂದಿ) ದ ವಿಗ್ರಹವನ್ನು ಮರು ಸ್ಥಾಪಿಸದಂತೆ ಜಿಲ್ಲಾಡಳಿತ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮೇಲೆ ಒತ್ತಡ ಹೇರುವ ಜವಾಬ್ಧಾರಿ ನಾಡಿನ ಬಸವಪ್ರಜ್ಞೆಯ ವಿರಕ್ತ ಮಠಗಳ ಮೇಲಿದೆ. ಬಸವಣ್ಣನವರ ಹೆಸರಿನಲ್ಲಿ ಬದುಕು ಕಟ್ಟಿಕೊಂಡಿರುವ ವಿರಕ್ತ ಪರಂಪರೆಯ ಪಠಗಳು ಬಸವಣ್ಣನವರ ಋಣವನ್ನು ತೀರಿಸುವ ಮಹತ್ತರ ಕಾರ್ಯಕ್ಕೆ ಅಣಿಯಾಗಬೇಕಿದೆ. ಆ ಮಠಗಳ ಬೆಂಬಲಕ್ಕೆ ಬಸವಾನುಯಾಯಿಗಳು ಸದಾ ನಿಲ್ಲುಬಲ್ಲರು. ಇವರನ್ನು ಹೀಗೆ ಬಿಟ್ಟರೆ ನಾಳಿನ ದಿನ ನೂತನ ಅನುಭವ ಮಂಟಪದಲ್ಲಿ ಈ ಪುಂಡರು ಪೂಜಾ-ಪಾಠ ಆರಂಭಿಸಿ ತಮ್ಮ ಪರಾವಲಂಬಿ ಬದುಕಿಗೆ ಆಸರೆ ಹುಡುಕಬಲ್ಲರು ಮತ್ತು ಜನರನ್ನು ವೈಚಾರಾಕತೆಯ ಬದಲಿಗೆ ಮೌಢ್ಯಕ್ಕೆ ತಳ್ಳುವರು.
ಮೊನ್ನೆ ಲಿಂಗಾಯತ ಮಹಾಧಿವೇಷನದ ಮುನ್ನಾದಿನ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಸಭೆಯನ್ನು ಲಿಂಗಾಯತ ಅಧಿವೇಷನದ ಸ್ಥಳದಲ್ಲೇ ಆಯೋಜಿಸಿ ಕೇಶವ ಕೃಪಾದ ಆಚಾರ್ಯರು ಲಿಂಗಾಯತರಿಗೆ ತೊಂದರೆ ಕೊಟ್ಟಿದ್ದು ಜನರು ಇನ್ನೂ ಮರೆತ್ತಿಲ್ಲ. ಈಗ ಅಲ್ಲಿನ ಸ್ಥಳೀಯ ಬಿಜೆಪಿ ಶಾಸಕ ಪರುಷ ಕಟ್ಟೆಯ ಮೇಲೆ ಪುನಃ ದನದ (ನಂದಿ) ವಿಗ್ರಹ ಇಡಬೇಕೆಂದು ಹಠಕ್ಕೆ ಬಿದ್ದಿರುವ ಪಟ್ಟಭದ್ರ ಶಕ್ತಿಗಳೊಂದಿಗೆ ಕೈಜೋಡಿಸಿದ್ದೆ ಆದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಸವಾನುಯಾಯಿಗಳು ತಕ್ಕ ಪಾಠ ಕಲಿಸದೆ ಬಿಡುವುದಿಲ್ಲ. ಇದನ್ನು ಪಾಪ ಆ ಅಮಾಯಕ ಶಾಸಕ ತಿಳಿದುಕೊಂಡರೆ ಸಾಕು.