2010ರಲ್ಲಿ ಜಾರ್ಖಂಡ್ ರಾಜ್ಯದ ಸಾರ್ವಜನಿಕ ಸಂಸ್ಥೆಗಳ ಗ್ರೂಪ್ ಡಿ ಹುದ್ದೆಗಳಿಗೆ ನೇಮಕಾತಿ ಸಂದರ್ಭದಲ್ಲಿ ಹುದ್ದೆಗಳ ಸಂಖ್ಯೆಯನ್ನು ಉಲ್ಲೇಖ ಮಾಡಿರಲಿಲ್ಲ, ಮೀಸಲಾತಿಯನ್ನು ಪಾಲಿಸಿಲ್ಲ ಎಂದು ಕೋರ್ಟ್ ನಲ್ಲಿ ತಕರಾರು ಅರ್ಜಿ ಸಲ್ಲಿಸಲಾಗಿತ್ತು.

ಇದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಪಂಕಜ್ ಮಿತ್ತಲ್ ಮತ್ತು ಸಂದೀಪ್(Pankaj Mittal and Sandeep)ಮೆಹ್ತಾ ಪೀಠವು ‘ಸಾರ್ವಜನಿಕ ಸಂಸ್ಥೆಗಳ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವಾಗ ಹುದ್ದೆಗಳ ಸಂಖ್ಯೆ, ಅದರಲ್ಲಿ ಮೀಸಲು ಹುದ್ದೆಗಳ ಸಂಖ್ಯೆಯನ್ನು ಪ್ರಕಟಿಸಬೇಕು… ಇಲ್ಲದೇ ಹೋದರೆ ಇಡೀ ನೇಮಕಾತಿ ಅನೂರ್ಜಿತಗೊಳ್ಳುತ್ತದೆ’ ಎಂದು ತೀರ್ಪು ನೀಡಿದ್ದಾರೆ.
ಉಮಾದೇವಿ ವರ್ಸಸ್ ಸ್ಟೇಟ್ ಆಫ್ ಕರ್ನಾಟಕ ಪ್ರಕರಣದಲ್ಲಿ ‘ವಿಧಿ 14 ಮತ್ತು 16ನ್ನು ಉಲ್ಲಂಘಿಸುವ ಯಾವುದೇ ನೇಮಕಾತಿಯು ಊರ್ಜಿತವಲ್ಲ’ ಎನ್ನುವ ತೀರ್ಪುನ್ನು ಈ ಪ್ರಕರಣಕ್ಕೂ ಅನ್ವಯಿಸುತ್ತಾರೆ. ಇದು ಸ್ವಾಗತಾರ್ಹ.
ಇದೇ ಸಂದರ್ಭದಲ್ಲಿ ‘ಒಂದು ವೇಳೆ ಸರ್ಕಾರಕ್ಕೆ ಮೀಸಲಾತಿ ಕಲ್ಪಿಸುವ ಉದ್ದೇಶವಿಲ್ಲದಿದ್ದರೆ ಅದನ್ನೂ ಹೇಳಬೇಕು’ ಎಂದು ಆದೇಶ ನೀಡಿದ್ದಾರೆ. ಇದು ಸಮಸ್ಯಾತ್ಮಕ ಅನಿಸುತ್ತದೆ. ಒಂದು ವೇಳೆ ಸರ್ಕಾರವು ಮೀಸಲಾತಿ ಕೊಡುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರೆ ಅದು ಸಿಂಧುವೇ? ಇದು ವಿಧಿ 14, 16ರ ಉಲ್ಲಂಘನೆಯಲ್ಲವೇ?

ಪೀಠವು ಈ ಕುರಿತು ನಿರ್ಲಕ್ಷಸಿದೆಯೇ? ಯಾವುದೇ ನೇಮಕಾತಿಯು ರೋಸ್ಟರ್ ಬಿಂದು ಪದ್ಧತಿ ಇಲ್ಲದೆ ಮಾಡುವಂತಿಲ್ಲ ಅಲ್ಲವೇ? ಪೀಠವು ಇದನ್ನು ಗಮನಿಸಲಿಲ್ಲವೇ?
ಮತ್ತು ಪೀಠವು ಅಗತ್ಯವೇ ಇಲ್ಲದಿದ್ದರೂ ಮೀಸಲಾತಿ ಮೂಲಭೂತ ಹಕ್ಕಲ್ಲ, ಸಮಂಜಸ ಕಾರಣವಿಲ್ಲದೆ ನಿರಾಕರಿಸುವಂತಿಲ್ಲ ಎಂದು ಹೇಳಿದ್ಯಾಕೆ? ಮೀಸಲಾತಿ ಕಲ್ಪಿಸಲು ಇಚ್ಚಿಸದ ಸರ್ಕಾರವು ಕೊಡುವ ಕಾರಣವನ್ನು ಸಮಂಜಸ ಎಂದು ನಿರ್ಧರಿಸುವವರು ಯಾರು? ಇದು ಪ್ರತಿಕ್ರಾಂತಿ ರೀತಿಯಂತಿದೆ
ಒಟ್ಟಿನಲ್ಲಿ ಸಾಮಾಜಿಕ ನ್ಯಾಯದ ಪ್ರಶ್ನೆ ಬಂದಾಗ ಎಲ್ಲವನ್ನೂ ಗೊಂದಲಗೊಳಿಸುವುದು ಮಾತ್ರ ಮುಂದುವರೆಯುತ್ತಿದೆ
— ಬಿ. ಶ್ರೀಪಾದ ಭಟ್