ರಾಜ್ಯದಲ್ಲಿ ಒಂದು ಕಡೆ ಕರೋನಾ ಎರಡನೇ ಅಲೆಯ ಮಾರಣಹೋಮ ಮುಂದುವರಿದಿದ್ದರೆ, ಮತ್ತೊಂದು ಕಡೆ ಜನರ ಬದುಕನ್ನು ಬಲಿ ತೆಗೆದುಕೊಳ್ಳುತ್ತಿರುವ ಲಾಕ್ ಡೌನ್ ಎರಡನೇ ಅಲೆ ಕೂಡ ನಾಳೆಯಿಂದ ಜಾರಿಗೆ ಬರಲಿದೆ.
ನಿತ್ಯ ಸುಮಾರು ಐವತ್ತು ಸಾವಿರ ಹೊಸ ಪ್ರಕರಣಗಳು ಮತ್ತು ಬರೋಬ್ಬರಿ ನಿತ್ಯ 600ರ ಗಡಿ ದಾಟಿವೆ. ಈ ಸಾವುಗಳ ಪೈಕಿ ಬಹುತೇಕ ಆಮ್ಲಜನಕದ ಕೊರತೆಯಿಂದ, ಸಕಾಲದಲ್ಲಿ ಚಿಕಿತ್ಸೆ ಸಿಗದೆ ಸಂಭವಿಸುತ್ತಿವೆ ಎಂಬುದು ಗುಟ್ಟೇನಲ್ಲ. ರಾಜ್ಯದಲ್ಲಿ ಕಳೆದ ಹದಿನೈದು ದಿನಗಳಿಂದಲೂ ಆಮ್ಲಜನಕ ಕೊರತೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇದೆ. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟುಗಳು ಆದೇಶಿಸಿದರೂ ಕೇಂದ್ರದ ಬಿಜೆಪಿ ಸರ್ಕಾರ ಕನಿಷ್ಟ ರಾಜ್ಯದ ಪಾಲಿನ ಆಮ್ಲಜನಕ ನೀಡಲು ಕೂಡ ನಿರಾಕರಿಸುತ್ತಲೇ ಇದೆ. ರಾಜ್ಯ ಮತ್ತು ಕೇಂದ್ರದಲ್ಲಿ ಎರಡೂ ಕಡೆ ಬಿಜೆಪಿ ಆಡಳಿತವೇ ಇದ್ದರೂ, ಕರ್ನಾಟಕದ ಜನತೆ ಒಟ್ಟು 28 ಲೋಕಸಭಾ ಸ್ಥಾನಗಳ ಪೈಕಿ ಬರೋಬ್ಬರಿ 25 ಸ್ಥಾನಗಳಲ್ಲಿ ಬಿಜೆಪಿ ಸಂಸದರನ್ನೇ ಗೆಲ್ಲಿಸಿ ಕಳಿಸಿದ್ದರೂ, ಕರ್ನಾಟಕದ ಜನತೆಯ ಜೀವ ಉಳಿಸುವ ಪ್ರಾಣವಾಯು ಕೊಡುವ ವಿಷಯದಲ್ಲಿ ಕೂಡ ಕೇಂದ್ರ ಸರ್ಕಾರದ ಈ ಜನದ್ರೋಹಿ ನಡೆಯ ವಿರುದ್ಧ ಜನಸಾಮಾನ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮುಂಬರುವ ದಿನಗಳಲ್ಲಿ ಕರೋನಾ ಎರಡನೇ ಅಲೆಯ ಭೀಕರತೆ ಇನ್ನಷ್ಟು ವ್ಯಾಪಿಸಲಿದೆ ಎಂಬ ತಜ್ಞರ ಎಚ್ಚರಿಕೆಯ ಹಿನ್ನೆಲೆಯಲ್ಲಿ ಆಮ್ಲಜನಕದ ಬಿಕ್ಕಟ್ಟು ಇನ್ನಷ್ಟು ಬಿಗಡಾಯಿಸುವ ಮತ್ತು ಅದೇ ಹೊತ್ತಿಗೆ ಜನಾಕ್ರೋಶ ಕೂಡ ಭುಗಿಲೇಳುವ ಸೂಚನೆ ಅರಿತಿರುವ ಬಿ ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಸೋಮವಾರದಿಂದ ಇನ್ನಷ್ಟು ಬಿಗಿಕ್ರಮಗಳ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಕೈತೊಳೆದುಕೊಂಡಿದೆ. ನೆರೆಯ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಒಟ್ಟಾರೆ ಲಾಕ್ ಡೌನ್ ಕರ್ನಾಟಕದಷ್ಟು ಬಿಗಿಯಾಗಿಲ್ಲದೇ ಇದ್ದರೂ, ಅಲ್ಲಿನ ಬಿಜೆಪಿಯೇತರ ಸರ್ಕಾರಗಳು ಜನಸಾಮಾನ್ಯರು ಮತ್ತು ಬಡವರ ಬದುಕು ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡುವ ಪ್ರಯತ್ನದ ಭಾಗವಾಗಿ ವಿವಿಧ ನೆರವುಗಳನ್ನು ಘೋಷಿಸಿವೆ.
ಆದರೆ, ಪ್ರಧಾನಿ ಮೋದಿಯವರ ಹೆಸರು ಮತ್ತು ಅವರ ಅಚ್ಛೇದಿನದ ಭರವಸೆಯ ಮೇಲೆ ಅಧಿಕಾರಕ್ಕೆ ಬಂದಿರುವ ಕರ್ನಾಟಕ ಮಾತ್ರ ನಯಾಪೈಸೆ ನೆರವಾಗಲೀ, ಯಾವುದೇ ರೀತಿಯ ಜನಪರ ಯೋಜನೆಗಳನ್ನಾಗಲೀ ಘೋಷಿಸದೇ ಕೇವಲ ಲಾಕ್ ಡೌನ್ ಘೋಷಿಸಿ ಬಡವರ ಬದುಕನ್ನು ಕರೋನಾಕ್ಕಿಂತ ಘೋರ ಸಂಕಷ್ಟಕ್ಕೆ ದೂಡಿದೆ.
ಇಂತಹ ಹೊತ್ತಿನಲ್ಲಿ, ಜನರ ನೆರವಿಗೆ ಧಾವಿಸಬೇಕಾದುದು, ಅವರ ಸಂಕಷ್ಟಗಳನ್ನು ಆಳುವ ಮಂದಿಯ ಗಮನಕ್ಕೆ ತಂದು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದು ಲಾಕ್ ಡೌನ್ ಬಿಗಿ ಮಾಡಿ ಎಂದು ಹೇಳಬೇಕಾದುದು ಎಲ್ಲಾ ಸಾಮಾಜಿಕ ಕಾಳಜಿಯ, ನೈಜ ದೇಶಪ್ರೇಮಿಗಳ ಹೊಣೆಗಾರಿಕೆ. ಜನರ ಪರ ದನಿ ಎತ್ತುವ ಮಟ್ಟಿನ ದಿಟ್ಟತನ ತೋರಲಾಗದಿದ್ದರೂ, ಸಂಕಷ್ಟದ ಹೊತ್ತಲ್ಲಿ ತಮ್ಮ ಕೈಲಾದಷ್ಟು ತಮ್ಮ ಜನಪ್ರಿಯತೆ, ವರ್ಚಸ್ಸು ಬಳಸಿ; ಕನಿಷ್ಟ ಜನರಿಗೆ ನೆರವು ನೀಡುವ ಮಾನವೀಯತೆ ತೋರಬೇಕಾದುದು ಕೂಡ ಎಲ್ಲರ ಕರ್ತವ್ಯ. ಅದರಲ್ಲೂ ಯಾವುದೇ ವಿಷಯದಲ್ಲಿ ದೇಶಭಕ್ತಿ, ಹಿಂದುತ್ವದಂತಹ ವಿಷಯಗಳನ್ನು ಎಳೆದುಕೊಂಡು ಭಾರೀ ಪ್ರಚಾರ ಪಡೆಯುವ ಮಂದಿಯಂತೂ, ತಮ್ಮ ದೇಶಭಕ್ತಿ ಮತ್ತು ಧಾರ್ಮಿಕ ಕಾಳಜಿಯ ಅಸಲೀತನ ತೋರಬೇಕಾದ ಹೊತ್ತಿದು.
ಈ ಮಾತು ಆಡಳಿತಾರೂಢ ಬಿಜೆಪಿ ಮತ್ತು ಅದರ ಪರಿವಾರದೊಂದಿಗೆ ಗುರುತಿಸಿಕೊಂಡವರಿಗೆ ಇನ್ನಷ್ಟು ಅನ್ವಯವಾಗುತ್ತದೆ. ಯಾವುದೇ ಸಣ್ಣಪುಟ್ಟ ಘಟನೆಗಳಾದಾಗ ಅವುಗಳಿಗೆ ಕೋಮು ಬಣ್ಣ ಬಳಿದು, ದೇಶಭಕ್ತರು ವರ್ಸಸ್ ದೇಶದ್ರೋಹಿಗಳೆಂಬ ಹಣೆಪಟ್ಟಿ ಹಚ್ಚಿ ಮಾನವೀಯತೆ ಮರೆತು ಧರ್ಮಾಂಧತೆಯ, ಕೋಮು ದ್ವೇಷದ ಠೇಂಕಾರ ಪ್ರದರ್ಶಿಸುವ ಮಂದಿಯಂತೂ ತಮ್ಮ ಅಸಲೀ ಕಾಳಜಿಯನ್ನು(ಅಂತಹದ್ದುಇದ್ದರೆ!) ತೋರಲು ಇದಕ್ಕಿಂತ ಬೇರೆ ಸಂದರ್ಭ ಇನ್ನೇನು ಬರಬೇಕು?
ಇಂತಹ ಪ್ರಶ್ನೆಯನ್ನಿಟ್ಟುಕೊಂಡು ಇತ್ತೀಚಿನ ವರ್ಷಗಳಲ್ಲಿ ಹಿಂದುತ್ವ, ದೇಶಭಕ್ತಿ, ಬಿಜೆಪಿ ಮತ್ತು ಸಂಘಪರಿವಾರದ ವಿಷಯವನ್ನೇ ಮುಂದಿಟ್ಟುಕೊಂಡು ಭಾರೀ ಪ್ರಚಾರ ಪಡೆದ ಕೆಲವು ಸೆಲೆಬ್ರಿಟಿಗಳ ಸಾಮಾಜಿಕ ಜಾಲತಾಣದ ಚಟುವಟಿಕೆಗಳ ಮೇಲೆ ಕಣ್ಣಾಡಿಸಿದರೆ ಕಾಣುವುದು ಬೇರೆಯದೇ ಮುಖ.
ಉದಾಹರಣೆಗೆ ಚಕ್ರವರ್ತಿ ಸೂಲಿಬೆಲೆ ಎಂಬ ಉಗ್ರ ಹಿಂದುತ್ವವಾದಿ, ಎರಡನೇ ಅಲೆಯ ಭೀಕರತೆ ಕುರಿತ ತಜ್ಞರ ಎಚ್ಚರಿಕೆಯ ಹೊರತಾಗಿಯೂ ಯಾವ ತಯಾರಿಗಳನ್ನು ಮಾಡಿಕೊಳ್ಳದೇ ಲಕ್ಷಾಂತರ ಮಂದಿಯ ಜೀವ ಮತ್ತು ಬದುಕು ನಾಶವಾಗಲು ಕಾರಣವಾದ ಬಿಜೆಪಿ ಸರ್ಕಾರಗಳ ನಡೆಯ ಬಗ್ಗೆ ಈವರೆಗೆ ಚಕಾರವೆತ್ತಿಲ್ಲ. ಕನಿಷ್ಟ ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡಿ ಎಂಬ ಸಣ್ಣ ಕಾಳಜಿಯ ಮಾತನ್ನು ಕೂಡ(ಕನಿಷ್ಟ ಬಾಯುಪಚಾರಕ್ಕಾಗಿಯಾದರೂ) ಆಡಿದ ಬಗ್ಗೆ ಅವರ ಸಾಮಾಜಿಕ ಜಾಲತಾಣದ ಫೇಸ್ಬುಕ್, ಟ್ವಿಟರ್ ಖಾತೆಗಳಲ್ಲಿ ಸಾಕ್ಷ್ಯವಿಲ್ಲ! ಅದರ ಬದಲಾಗಿ ಅವರ ಫೇಸ್ಬುಕ್ ಖಾತೆಯ ಪ್ರಕಾರ, ಸದ್ಯ ಅವರು ‘ಬದುಕಿಗೆ ಭಗವದ್ಗೀತೆ’ ಎಂಬ ವೀಡಿಯೋ ಸರಣಿಯಲ್ಲಿ ವ್ಯಸ್ತರಾಗಿದ್ದು, ನಿತ್ಯ ಗೀತೆಯ ಅಧ್ಯಾಯಗಳ ಪಠಣದ ವೀಡಿಯೊ ಶೇರ್ ಮಾಡುತ್ತಿದ್ದಾರೆ. ಈ ನಡುವೆ ಕೆಲವು ದಿನಗಳ ಹಿಂದೆ ಆಮ್ಲಜನಕಕ್ಕಾಗಿ ಆಸ್ಪತ್ರೆಗಳಿಗೆ ಬರಬೇಡಿ, ಅದರ ಬದಲು ನಿಮ್ಮ ನಿಮ್ಮ ಮನೆಯಲ್ಲೇ ಇದ್ದು ಕರೋನ ವಿರುದ್ಧ ಹೋರಾಡಿ ಎಂದು ಜನತೆಗೆ ಬಿಟ್ಟಿ ಸಲಹೆಯನ್ನೂ ನೀಡಿದ್ದಾರೆ ಈ ಸಮಾಜಸೇವಕ!
ಇನ್ನು ಇದೇ ಕುತೂಹಲದಲ್ಲಿ; ಪ್ರಖರ ಹಿಂದುತ್ವವಾದಿ ಮತ್ತು ಗಟ್ಟಿಗಂಟಲಿನ ಬಿಜೆಪಿ ನಾಯಕಿ ಮಾಳವಿಕ ಅವಿನಾಶ್ ಅವರ ಟ್ವಿಟರ್ ಮೇಲೆ ಕಣ್ಣಾಡಿಸಿದರೆ; ಅಲ್ಲಿ ಅವರ ತೀರಾ ಇತ್ತೀಚಿನ ಟ್ವೀಟ್ ಕೂಡ ಹಿಂದುತ್ವಕ್ಕೆ ಸಂಬಂಧಿಸಿದ್ದೇ ಆಗಿದೆ ವಿನಃ ಇತ್ತೀಚಿನ ದಿನಗಳಲ್ಲಿ ಅವರು ಒಮ್ಮೆಯೂ ಆಮ್ಲಜನಕದ ಕೊರತೆಯ ಬಗ್ಗೆಯಾಗಲೀ, ಕೋವಿಡ್ ಮತ್ತು ಲಾಕ್ ಡೌನ್ ನಿಂದ ಸಾಯುತ್ತಿರುವ ಜನಗಳ ಬಗ್ಗೆಯಾಗಲೀ ಚಕಾರವೆತ್ತಿಲ್ಲ.
ಬದಲಾಗಿ ಕೋವಿಡ್ ವಿಷಯದಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರು ಅವರು ಎತ್ತಿದ ಪ್ರಶ್ನೆಯೊಂದಕ್ಕೆ, ‘ಹಿಂದುತ್ವ ಎಂದರೆ ತಾಳ್ಮೆ, ಸಹನೆ, ಜಾತ್ಯತೀತ, ಅಹಿಂಸಾವಾದಿ ಮತ್ತು ಎಲ್ಲರನ್ನೂ ಒಳಗೊಳ್ಳುವುದು’ ಬೋಧನೆ ಮಾಡಿರುವುದೇ ಅವರ ತಾಜಾ ಟ್ವೀಟ್!
ಹಾಗೇ ಹಿಂದುತ್ವದ ಹೆಸರಲ್ಲಿ ಬೆಂಕಿ ಕಾರುವ, ಬೆಂಕಿ ಹಚ್ಚುವ ಮಾತುಗಳಿಂದಲೇ ಸದಾ ಸುದ್ದಿಯಲ್ಲಿರುವ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರ ಟ್ವಿಟರ್ ಖಾತೆಯಲ್ಲಿ ಇನ್ನೂ ಬಂಗಾಳದ ಚುನಾವಣೋತ್ತರ ಹಿಂಸಾಚಾರವೇ ದೇಶದ ಅತಿದೊಡ್ಡ ಬಿಕ್ಕಟ್ಟು ಎಂಬಂತೆ ಸಾಲು ಸಾಲು ಟ್ವೀಟ್ ಗಳಿವೆ.
ತಾವೇ ಪ್ರತಿನಿಧಿಸುವ ಚಿಕ್ಕಮಗಳೂರಿನಲ್ಲಿ ಆಮ್ಲಜನಕದ ಕೊರತೆಯಿಂದ ರೋಗಿಗಳು ಸಾವನ್ನಪ್ಪುತ್ತಿರುವ ಬಗ್ಗೆಯಾಗಲೀ, ರಾಜ್ಯದ ಪಾಲಿನ ಆಮ್ಲಜನಕ ನೀಡಲು ತಮ್ಮದೇ ಕೇಂದ್ರ ಸರ್ಕಾರ ನಿರಾಕರಿಸುತ್ತಿರುವ ಬಗ್ಗೆಯಾಗಲೀ ಸಂಸದೆಯಾಗಿ ಶೋಭಾ ಈವರೆಗೆ ಒಂದೇ ಒಂದು ಟ್ವೀಟ್ ಮಾಡಿದ ನಿದರ್ಶನವಿಲ್ಲ! ಬದಲಾಗಿ ಈಗಲೂ ಅವರು ಕೋಮುವಾದಿ ಅಜೆಂಡಾದ ಮೇಲೆ ಪ್ರತಿಪಕ್ಷಗಳ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುವಲ್ಲಿ ಬ್ಯುಸಿಯಾಗಿದ್ದಾರೆ!
ರಾಜ್ಯದ ಬೇಡಿಕೆಯ ಆಮ್ಲಜನಕ ನೀಡದೆ, ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟಿಗೆ ಹೋಗಿ ಕರ್ನಾಟಕ ಭಾರತದ ಭಾಗವೇ ಅಲ್ಲ ಎಂಬಂತೆ ಹೇಯ ಮತ್ತು ಅಮಾನವೀಯ ನಡೆ ಅನುಸರಿಸುತ್ತಿರುವ ತಮ್ಮದೇ ಪಕ್ಷದ ಕೇಂದ್ರ ಸರ್ಕಾರದ ಕ್ರಮವನ್ನು ಕನಿಷ್ಟ ಟೀಕಿಸುವ ಎದೆಗಾರಿಕೆ ಇಲ್ಲದೇ ಹೋದರೂ, ಜನಪರವಾಗಿ ದನಿ ಎತ್ತಿ, ಜನರ ಸಂಕಷ್ಟಗಳನ್ನು ತಮ್ಮ ಕೇಂದ್ರದ ನಾಯಕರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಬೇಕಾದ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರ ಟ್ವಿಟರ್ ಖಾತೆಯಲ್ಲಿ ಸದ್ಯ ಚಾಲ್ತಿಯಲ್ಲಿರುವ ಸಂಗತಿ ಕೂಡ ಬಂಗಾಳದ ಚುನಾವಣೋತ್ತರ ಹಿಂಸಾಚಾರ ಮಾತ್ರ!
ಬಂಗಾಳದ ಚುನಾವಣೆಯ ಗುಂಗಿನಲ್ಲಿಯೇ ಇರುವ ನಳೀನ್ ಕುಮಾರ್ ಅವರಿಗೆ ರಾಜ್ಯದ ಆಮ್ಲಜನಕದ ಕೊರತೆಯ ಸರಣಿ ಸಾವುಗಳಾಗಲೀ, ಹಾಸಿಗೆ ಬ್ಲಾಕಿಂಗ್ ಹಗರಣವಾಗಲೀ ಬಹುಶಃ ಇನ್ನೂ ಕಿವಿಗೆ ಬಿದ್ದಿಲ್ಲ! ಹಾಗಾಗಿ ಅವರ ಟ್ವಿಟರ್ ಖಾತೆಯ ತಾಜಾ ಟ್ವೀಟ್ ರವೀಂದ್ರನಾಥ ಟ್ಯಾಗೋರರ ಜಯಂತಿಯ ಶುಭಾಶಯಗಳಿಗೇ ಸೀಮಿತವಾಗಿದೆ!
ಹಾಗೇ ಮತ್ತೊಬ್ಬ ಬಿಜೆಪಿ ತಾರಾ ನಾಯಕಿ ಶೃತಿ ಅವರ(ಶೃತಿ ಕೃಷ್ಣ) ಅವರ ಇನ್ ಸ್ಟಾಗ್ರಾಂ ಖಾತೆಯಲ್ಲಿ ಬಹುತೇಕ ಬಂಡೀಪುರ, ನಾಗರಹೊಳೆಯ ಸಫಾರಿಯ ಚಿತ್ರಗಳೇ ಹೆಚ್ಚು ಚಾಲ್ತಿಯಲ್ಲಿವೆ. ಅದು ಹೊರತುಪಡಿಸಿ, ಅವರ ತೀರಾ ಇತ್ತೀಚಿನ ಇನ್ಸ್ಟಾ ಪೋಸ್ಟಿನಲ್ಲಿ ನಟಿ ಮಾಲಾಶ್ರೀ ಅವರ ಪತಿ ರಾಮು ಸಾವಿನ ಕುರಿತು ಸಂತಾಪ ಮತ್ತು ಸಾಂತ್ವನದ ಮಾತುಗಳಿವೆ.
ರಾಜ್ಯದಲ್ಲಿ ಸಂಭವಿಸುತ್ತಿರುವ ಕೋವಿಡ್ ಸಾವುಗಳ ಬಗ್ಗೆಯಾಗಲೀ, ಆಮ್ಲಜನಕ ಕೊರತೆ, ಹಾಸಿಗೆ ಮತ್ತು ಚಿಕಿತ್ಸೆ ಲಭ್ಯವಾಗದೇ ಸಂಭವಿಸುತ್ತಿರುವ ಅನ್ಯಾಯದ ಸಾವುಗಳ ಬಗ್ಗೆಯಾಗಲೀ ಕಿಂಚಿತ್ತೂ ಪ್ರಸ್ತಾಪಿಸುವ ಕನಿಷ್ಟ ಔದಾರ್ಯವನ್ನೂ ತೋರಿಲ್ಲ ಎಂಬುದು ಅಚ್ಚರಿಯ ಸಂಗತಿ!
ಇನ್ನು ಮತ್ತೊಬ್ಬ ಬಿಜೆಪಿ ಸೆಲೆಬ್ರಿಟಿ ಸಂಸದ ಪ್ರತಾಪ್ ಸಿಂಹ ಅವರ ಟ್ವೀಟ್ ನಲ್ಲಿ ಆಮ್ಲಜನಕದ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿದ್ದಕ್ಕಿಂತ ಮೈಸೂರು ನೆರೆಹೊರೆಯ ಜಿಲ್ಲೆಗಳಲ್ಲಿ ಆಮ್ಲಜನಕ ಕೊಡುವ ವಿಷಯದಲ್ಲಿ ನಡೆಯುತ್ತಿರುವ ವಾಗ್ದಾದಗಳ ಬಗ್ಗೆ ಮಾತನಾಡಿರುವುದೇ ಹೆಚ್ಚಿದೆ. ಆ ಮಾತುಗಳಲ್ಲಿ ಕೂಡ ಪ್ರತಾಪ್, ಒಮ್ಮೆಯೂ ಈ ಬಿಕ್ಕಟ್ಟಿನ ಮೂಲವಾಗಿರುವ ಕೇಂದ್ರದ ಕರ್ನಾಟಕ ವಿರೋಧಿ ಧೋರಣೆಯ ಬಗ್ಗೆಯಾಗಲೀ, ಪರಿಸ್ಥಿತಿ ನಿಭಾಯಿಸುವಲ್ಲಿ ಮುನ್ನೆಚ್ಚರಿಕೆ ಮತ್ತು ಸಕಾಲಿಕ ಕ್ರಮಗಳ ವಿಷಯದಲ್ಲಿ ಸಂಪೂರ್ಣ ಎಡವಿದ ರಾಜ್ಯ ಸರ್ಕಾರದ ಲೋಪಗಳ ಬಗ್ಗೆಯಾಗಲೀ ಚಕಾರವೆತ್ತಿಲ್ಲ!
ಅಂದರೆ; ಯಾವುದೇ ಸಾವುಗಳಾದರೂ ಹಿಂದುತ್ವದ ಹೆಸರು ಹೇಳಿಕೊಂಡು ಮಲೆನಾಡಿಗೆ ಬೆಂಕಿ ಹಾಕುವ, ಕರಾವಳಿಗೆ ಬೆಂಕಿ ಹಾಕುವ ಮಾತನಾಡುತ್ತಾ ಆರ್ಭಟಿಸುತ್ತಿದ್ದ ಸದಾ ಕೋಮು ದಳ್ಳುರಿ ಹೊತ್ತಿಸಿ ಮತಬೇಟೆಯ ಬೆಂಕಿ ಕಾಯಿಸಿಕೊಳ್ಳಲು ಹವಣಿಸುತ್ತಿದ್ದ ಬಹುತೇಕ ಈ ನಾಯಕ-ನಾಯಕಿಯರು, ಈಗ ಹಿಂದುತ್ವವಾದಿ ತಮ್ಮದೇ ಸರ್ಕಾರದ ಹೊಣೆಗೇಡಿತನದಿಂದಾಗಿ ಬಹುತೇಕ ಅದೇ ಹಿಂದೂಗಳೇ ಹಾದಿಬೀದಿ ಹೆಣವಾಗುತ್ತಿರುವಾಗ ಮುಗುಮ್ಮಾಗಿ ಬಾಯಿಗೆ ಬೀಗ ಜಡಿದುಕೊಂಡು ಕೂತಿದ್ದಾರೆ.
ಚಾಮರಾಜನಗರದಲ್ಲಿ 28 ಮಂದಿಯನ್ನು ಬಲಿತೆಗೆದುಕೊಂಡ ಆಮ್ಲಜನಕದ ಬಿಕ್ಕಟ್ಟಿನ ಬಗ್ಗೆಯಾಗಲೀ, ತಮ್ಮದೇ ಪಕ್ಷದ ಶಾಸಕರು ಸೇರಿದಂತೆ ನಾಯಕರ ಬೆಡ್ ಬ್ಲಾಕಿಂಗ್ ದಂಧೆಯಿಂದಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಭವಿಸಿದ ನೂರಾರು ಸಾವುಗಳ ಬಗ್ಗೆಯಾಗಲೀ ಕನಿಷ್ಟ ಪ್ರಸ್ತಾಪಿಸುವಷ್ಟೂ ತ್ರಾಣವಿಲ್ಲದಂತೆ ಈ ಸೆಲೆಬ್ರಿಟಿಗಳ ಆತ್ಮಸಾಕ್ಷಿ ಸತ್ತುಹೋಗಿದೆ!
ಅತ್ಯಂತ ಕಷ್ಟದ ಕಾಲದಲ್ಲೇ ವ್ಯಕ್ತಿಯೊಬ್ಬನ ಅಸಲೀತನ ಬಯಲಾಗುವುದು ಎಂಬ ಮಾತು ಸದ್ಯಕ್ಕಂತೂ ಈ ಸೆಲೆಬ್ರಿಟಿ ರಾಜಕಾರಣಿಗಳ ಪಾಲಿಗೆ ನೂರಕ್ಕೆ ನೂರು ಅನ್ವಯವಾಗುತ್ತಿದೆ. ದೇಶಭಕ್ತಿ, ಹಿಂದುತ್ವ, ಧರ್ಮರಕ್ಷಣೆಯ ಮಾತುಗಳನ್ನು ಬಿಡಿ, ಕನಿಷ್ಟ ಮನುಷ್ಯತ್ವ ಇದ್ದ ಯಾವ ವ್ಯಕ್ತಿಯೂ ಮರುಗಬೇಕಾದ, ಜೀವ ಬಲಿ ಪಡೆಯುವ ವ್ಯವಸ್ಥೆಯ ಲೋಪಗಳನ್ನು ಪ್ರಶ್ನಿಸಬೇಕಾದ ಈ ಹೊತ್ತಿನಲ್ಲೂ ಈ ಸೆಲೆಬ್ರಿಟಿಗಳ ಇಂತಹ ಘನ ಮೌನಕ್ಕೆ, ಜಾಣ ಕಿವುಡುತನಕ್ಕೆ ಏನೆನ್ನಬೇಕು ಹೇಳಿ..