ಇಬ್ಬರೂ ನಾಯಕರ ನಿಜವಾದ ಕಾಳಜಿ ಜಲಾಶಯದ ಸುರಕ್ಷತೆಯೇ ಆಗಿದ್ದರೆ, ಅಕ್ರಮ ಗಣಿಗಾರಿಕೆಯ ವಿರುದ್ಧ, ಜಲಾಶಯಕ್ಕೆ ಧಕ್ಕೆ ತರುವ ಚಟುವಟಿಕೆಗಳ ವಿರುದ್ಧ ಜನಪರವಾಗಿ ನಿಲ್ಲುವುದೇ ಆಗಿದ್ದರೆ ಈ ಕೆಸರೆರಚಾಟ ಬೇಕಿತ್ತೆ? ಹಾಗಿದ್ದರೆ, ಈ ವಿವಾದದ ಹಿಂದಿನ ಹಿತಾಸಕ್ತಿ ಏನು?
ಮಂಡ್ಯದ ಕೆಆರ್ ಎಸ್ ಜಲಾಶಯದ ಪ್ರದೇಶದಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ವಿಷಯದಲ್ಲಿ ಅಲ್ಲಿನ ಸಂಸದೆ ಸುಮಲತಾ ಅಂಬರೀಶ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನಡುವೆ ಕಳೆದ ಮೂರ್ನಾಲ್ಕು ದಿನಗಳಿಂದ ನಡೆಯುತ್ತಿರುವ ಪರಸ್ಪರ ಕೆಸರೆರಚಾಟ ಮುಂದುವರಿದಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲೂಕುಗಳಲ್ಲಿ ಕಾವೇರಿ ನದಿ ಅಣೆಕಟ್ಟೆಯ ಸಮೀಪದಲ್ಲಿಯೇ ಭಾರೀ ಪ್ರಮಾಣ ಸ್ಫೋಟಕಗಳನ್ನು ಬಳಸಿ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ವರದಿಗಳು ಇತ್ತೀಚಿನ ವರ್ಷಗಳಲ್ಲಿ ಪದೇಪದೆ ಕೇಳಿಬರುತ್ತಲೇ ಇವೆ. ಅಕ್ರಮ ಗಣಿಗಾರಿಕೆ ಚಟುವಟಿಕೆಯ ಭಾಗವಾಗಿ ಬಳಸುವ ಸ್ಫೋಟಕಗಳು ಜಲಾಶಯದ ಸುರಕ್ಷತೆಗೇ ಧಕ್ಕೆ ತರುತ್ತಿವೆ ಎಂಬ ರೈತ ನಾಯಕರು ಮತ್ತು ಸಾರ್ವಜನಿಕರ ಆತಂಕದ ಹಿನ್ನೆಲೆಯಲ್ಲಿ 2018ರಲ್ಲೇ ಆ ಬಗ್ಗೆ ಅಧ್ಯಯನ ನಡೆಸಿದ್ದ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ತಂಡ, ಆ ಪ್ರದೇಶದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಚಟುವಟಿಕೆಗಳಿಂದ ಜಲಾಶಯಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ. ಹಾಗೂ ಜಲಾಶಯದ ಸುತ್ತಮುತ್ತ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ನಿಷೇಧಿಸಬೇಕು ಎಂದು ವರದಿ ನೀಡಿತ್ತು.
ಸ್ವತಃ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೇ, ಅವರ ಸರ್ಕಾರಕ್ಕೆ ಈ ತಂಡ ವರದಿ ಸಲ್ಲಿಸಿತ್ತು. ಆದರೆ, ಅಂದು ಈ ಬಗ್ಗೆ ಕಾಳಜಿ ತೋರದೆ ಮುಗ್ಗುಮ್ಮಾಗಿದ್ದ ಕುಮಾರಸ್ವಾಮಿ, ಇದೀಗ ಮಂಡ್ಯ ಸಂಸದೆ ಅಕ್ರಮ ಗಣಿಗಾರಿಕೆಯ ಚಟುವಟಿಕೆಗಳ ವಿರುದ್ಧ ವ್ಯಾಪಕ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾದಾಗ ಅವರ ವಿರುದ್ಧ ನಿಂದನೆಯ ಮಟ್ಟದ ವೈಯಕ್ತಿಕ ದಾಳಿಗೆ ಮುಂದಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಅದರಲ್ಲೂ ಮಾಜಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರು ಮಹಿಳಾ ಸಂಸದೆಗೆ, ಜಲಾಶಯ ಸುರಕ್ಷಿತವಾಗಿರಬೇಕೆಂದರೆ ಅವರನ್ನೇ ಅಡ್ಡ ಮಲಗಿಸಬೇಕು ಎಂಬ ಹೇಳಿಕೆ ನೀಡಿದ ಬಳಿಕ ಇಡೀ ವಿವಾದ ಬೇರೆಯದೇ ಸ್ವರೂಪ ಪಡೆದುಕೊಂಡಿದೆ. ಜಲಾಶಯಕ್ಕೆ ಧಕ್ಕೆಯಾಗುತ್ತಿದೆ ಎಂದು ಸರ್ಕಾರದ ಸಂಸ್ಥೆಯೇ ಹೇಳಿದ ಮೇಲೆ, ಸ್ಥಳೀಯ ರೈತ ಸಂಘಟನೆಗಳು ಹಲವು ವರ್ಷಗಳಿಂದ ಈ ಬಗ್ಗೆ ಹೋರಾಟ, ಮನವಿಗಳ ಮೂಲಕ ಸರ್ಕಾರದ ಗಮನ ಸೆಳೆಯುತ್ತಿರುವಾಗ, ಆ ಜಲಾಶಯದ ಜಲಾನಯನ ಪ್ರದೇಶದ ಪ್ರಭಾವಿ ನಾಯಕರೂ ಆಗಿ ಕುಮಾರಸ್ವಾಮಿ ವಾಸ್ತವವಾಗಿ ಜನರ ದನಿಯಾಗಿ ನಿಲ್ಲಬೇಕಿತ್ತು ಮತ್ತು ಸ್ವತಃ ತಾವೇ ಮುಖ್ಯಮಂತ್ರಿಯಾಗಿ ವರದಿ ಕೈಸೇರಿದ ಕೂಡಲೇ ಅಕ್ರಮ ಗಣಿಗಾರಿಕೆಗಳ ವಿರುದ್ಧ ಪ್ರಹಾರ ನಡೆಸಬೇಕಿತ್ತು.
ಆದರೆ, ಅದಕ್ಕೆ ವ್ಯತಿರಿಕ್ತವಾಗಿ ಇದೀಗ ಸಂಸದೆಯಾಗಿ ಸುಮಲತಾ ಅವರು ಅಕ್ರಮ ಗಣಿಗಾರಿಕೆಯ ಪರಿಶೀಲನೆಗೆ ಮುಂದಾದಾಗ ಅವರ ವಿರುದ್ಧವೇ ತೀರಾ ಅವಹೇಳನಕಾರಿ ಮಾತುಗಳನ್ನು ಆಡಿರುವುದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ಮಂಡ್ಯದ ಮೈಶುಗರ್ಸ್ ಸಕ್ಕರೆ ಕಾರ್ಖಾನೆಯನ್ನು ಬಿಜೆಪಿಯ ಪ್ರಭಾವಿ ನಾಯಕ ಮತ್ತು ಸಚಿವ ನಿರಾಣಿ ಅವರ ಕಂಪನಿಗೆ ಮಾರಾಟ ಮಾಡುವ ಪ್ರಕ್ರಿಯೆಗೆ ಸುಮಲತಾ ಬೆಂಬಲಿಸಿದ್ದಾರೆ ಎಂಬ ವಿಷಯಕ್ಕೆ ಆರಂಭವಾದ ಇಬ್ಬರು ನಾಯಕರ ನಡುವಿನ ವಾಗ್ವಾದ ಇದೀಗ ಕನ್ನಂಬಾಡಿಯ ಒಡಲಿಗೆ ಬಂದು ನಿಂತಿದೆ.
ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಗಳ ಸ್ವಯಂ ಪರಿಶೀಲನೆಗೆ ಮುಂದಾದ ಸಂಸದೆ ಸುಮಲತಾ ಅವರಿಗೆ, ಗಣಿಗಳಿಗೆ ತೆರಳುವ ಮಾರ್ಗಮಧ್ಯೆ ರಸ್ತೆಯಲ್ಲಿ ಗುಂಡಿ ತೋಡಿ ತಡೆಯಲಾಗಿದೆ. ಕೆಲವು ಕಡೆ ಗಣಿ ಮಾಫಿಯಾದ ಕೆಲವರು ಅವರ ವಾಹನಕ್ಕೆ ಅಡ್ಡಲಾಗಿ ನಿಂತು ಗಣಿಗಳಿಗೆ ಭೇಟಿ ನೀಡದಂತೆ ತಡೆದಿದ್ದಾರೆ. ಅಷ್ಟೇ ಅಲ್ಲ ಸ್ಥಳೀಯ ಜೆಡಿಎಸ್ ಶಾಸಕರು ಕೂಡ ತಮಗೆ ಅಕ್ರಮ ಗಣಿಗಾರಿಕೆ ವಿಷಯದಲ್ಲಿ ತಲೆ ಹಾಕದಂತೆ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಸಂಸದೆ ಹೇಳಿದ್ದಾರೆ. ಹಾಗಾಗಿ ತಾವು ಅಕ್ರಮ ಗಣಿಗಾರಿಕೆಗಳ ಕೇಂದ್ರಬಿಂದು ಬೇಬಿ ಬೆಟ್ಟಕ್ಕೆ ತೆರಳಲು ಸಾಧ್ಯವಾಗಿಲ್ಲ. ನಾನೊಬ್ಬ ಸಂಸದೆಯಾಗಿ ನನಗೇ ಈ ಮಟ್ಟದ ಬೆದರಿಕೆ, ಅಡ್ಡಿಗಳನ್ನು ಒಡ್ಡುವ ಮಂದಿ, ಗಣಿ ಮತ್ತು ಇತರೆ ಇಲಾಖೆಯ ಅಧಿಕಾರಿಗಳಿಗೆ ಯಾವ ಮಟ್ಟದ ಬೆದರಿಕೆ ಒಡ್ಡಿರಬಹುದು ಊಹಿಸಿ ಎಂದೂ ಅವರು ಹೇಳಿದ್ದಾರೆ.
ಈ ನಡುವೆ ಸುಮಲತಾ ಸಂಸದೆಯಾಗಿ ಎರಡು ವರ್ಷದಲ್ಲಿ ಪಿಕ್ ನಿಕ್ ರೀತಿ ಮಂಡ್ಯಕ್ಕೆ ಬಂದುಹೋಗುತ್ತಿದ್ದರು. ಕೋವಿಡ್ ಸಂದರ್ಭದಲ್ಲಿ ಕೂಡ ಜನರ ಕಷ್ಟಗಳಿಗೆ ಕಿವುಡಾಗಿದ್ದರು. ಆ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಇದೀಗ ಅವರು ಅಕ್ರಮ ಗಣಿಗಾರಿಕೆಯ ವಿರುದ್ಧದ ಹೋರಾಟವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ಸ್ಥಳೀಯ ಶಾಸಕರು ಆರೋಪಿಸಿದ್ದಾರೆ. ಇನ್ನು ಎಚ್ ಡಿ ಕುಮಾರಸ್ವಾಮಿ ಅವರಂತೂ ತಮ್ಮ ಕುಟುಂಬವನ್ನು ಒಡೆಯಲು ಯತ್ನಿಸುತ್ತಿದ್ದಾರೆ ಎಂದು ನೇರ ಆರೋಪ ಮಾಡಿದ್ದಾರೆ ಮತ್ತು ಸುಮಲತಾ ಅವರ ವ್ಯವಹಾರಗಳೇನು, ಅವರೇನು ಎಂಬುದು ಗೊತ್ತು, ಅವರ ಆಡಿಯೋ ಬಾಂಬ್ ಹೊರಬಂದರೆ ಜನರಿಗೆ ಎಲ್ಲಾ ಗೊತ್ತಾಗಲಿದೆ ಎಂದು ಪ್ರಹಾರ ಮಾಡಿದ್ದಾರೆ.
ಆದರೆ, ಸುಮಲತಾ ವಿರುದ್ಧ ಜೆಡಿಎಸ್ ನಾಯಕರು ಮತ್ತು ಶಾಸಕರು ಮಾಡುತ್ತಿರುವ ಆರೋಪ ಮತ್ತು ವೈಯಕ್ತಿಕ ನಿಂದನೆಗಳೇ ಸಂಸದೆಗೆ ವರವಾಗುತ್ತಿದ್ದು, ಹಿಡಿತ ತಪ್ಪಿ ಆಡಿದ ಮಾತುಗಳೇ ಜೆಡಿಎಸ್ ಮುಖಂಡರಿಗೆ ತಿರುಗುಬಾಣಗಳಾಗುತ್ತಿವೆ. ಸ್ವತಃ ಜೆಡಿಎಸ್ ನಾಯಕ ವೈ ಎಸ್ ವಿ ದತ್ತ ಸೇರಿದಂತೆ ಹಲವು ಮುಖಂಡರು, ಸಾರ್ವಜನಿಕರು ಕುಮಾರಸ್ವಾಮಿ ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ಸಂಸದೆಯ ವಿರುದ್ಧ ಬಳಸಿದ ಮಾತುಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ನಡುವೆ, ಸ್ಥಳೀಯ ಶಾಸಕರು ಜೆಡಿಎಸ್ ಪಕ್ಷದವರೇ ಆಗಿರುವುದು ಮತ್ತು ಜೆಡಿಎಸ್ ರಾಜ್ಯ ನಾಯಕರು ಅಲ್ಲಿನ ಅಕ್ರಮ ಗಣಿಗಾರಿಕೆಯಲ್ಲಿ ಪಾಲುದಾರರಾಗಿರುವುದೇ ಹೀಗೆ ಸಂಸದೆ ಪರಿಶೀಲನೆಗೆ ಅಡ್ಡಗಾಲು ಹಾಕಲು ಕಾರಣ. ಸಂಸದೆ ಸುಮಲತಾ ಅವರಿಗೂ ಅಲ್ಲಿನ ಅಕ್ರಮಗಳ ಹಿಂದೆ ಯಾರಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಿದೆ. ಹಾಗಾಗಿಯೇ ಅವರು ಸಂಸದೆಯಾಗಿ ಎರಡು ವರ್ಷದ ಬಳಿಕ ಇದೀಗ ದಿಢೀರನೇ ನೆನಪಾದವರಂತೆ ಅಕ್ರಮ ಗಣಿಗಾರಿಕೆಯ ವಿಷಯದಲ್ಲಿ ಇಷ್ಟೊಂದು ಆಸಕ್ತಿ ತೋರಿಸುತ್ತಿದ್ದಾರೆ. ವಾಸ್ತವವಾಗಿ ಕೆ ಆರ್ ಎಸ್ ಜಲಾಶಯದ ಸುರಕ್ಷತೆಯಾಗಲೀ, ಅಕ್ರಮ ಗಣಿಗಾರಿಕೆಯ ಅಪಾಯಗಳಾಗಲೀ ಈ ಇಬ್ಬರೂ ನಾಯಕರ ನಡುವಿನ ಈ ವಾಗ್ವಾದದ ಹಿಂದಿನ ನೈಜ ಕಾಳಜಿಯಲ್ಲ. ಬದಲಾಗಿ, ಮಂಡ್ಯದ ಅಕ್ರಮ ಗಣಿಗಾರಿಕೆ, ಹಾಲು ಉತ್ಪಾದಕರ ಒಕ್ಕೂಟ, ಮೈಶುಗರ್ಸ್ ಸೇರಿದಂತೆ ಹಲವು ಆದಾಯ ಮೂಲಗಳು ಮತ್ತು ವ್ಯವಹಾರಿಕ ಹಿತಾಸಕ್ತಿಗಳ ರಕ್ಷಣೆಗಾಗಿ ಇಬ್ಬರು ನಾಯಕರ ನಡುವೆ ನಡೆಯುತ್ತಿರುವ ಗುದ್ದಾಟ ಇದು ಎಂಬುದು ಸ್ಥಳೀಯರ ವಿಶ್ಲೇಷಣೆ.
ಅಷ್ಟಕ್ಕೂ ಈ ಇಬ್ಬರೂ ನಾಯಕರ ನಿಜವಾದ ಕಾಳಜಿ ಜಲಾಶಯದ ಸುರಕ್ಷತೆಯೇ ಆಗಿದ್ದರೆ, ಅಕ್ರಮ ಗಣಿಗಾರಿಕೆಯ ವಿರುದ್ಧ , ಜಲಾಶಯಕ್ಕೆ ಧಕ್ಕೆ ತರುವ ಚಟುವಟಿಕೆಗಳ ವಿರುದ್ಧ ಜನಪರವಾಗಿ ನಿಲ್ಲುವುದೇ ಆಗಿದ್ರೆ, ಇಬ್ಬರ ನಡುವೆ ಇಷ್ಟೆಲ್ಲಾ ಕೆಸರೆರಚಾಟದ ಜರೂರುತ್ತೇನಿದೆ? ಎಂಬುದು ಮಂಡ್ಯದ ಬಡ ಬೋರೇಗೌಡನ ಪ್ರಶ್ನೆ.
ಹಾಗಾಗಿ, ಜಲಾಶಯಕ್ಕೆ ಅಡ್ಡ ಮಲಗಿಸುವ, ಆಡಿಯೋ ಬಾಂಬ್ ಸಿಡಿಸುವ, ಚುನಾವಣೆಯಲ್ಲಿ ಪ್ರತ್ಯುತ್ತರ ಕೊಡುವ ಹೇಳಿಕೆಗಳನ್ನು ಬಿಟ್ಟು ಇಬ್ಬರೂ ನಾಯಕರು ತಾವು ಜನಪರ ಇದ್ದೀವಿ ಎಂಬುದನ್ನು ಸಾಬೀತುಪಡಿಸಲು ಮೊದಲು ಅಕ್ರಮ ಗಣಿಗಾರಿಕೆಯ ವಿರುದ್ಧ ಕ್ರಮ ಜರುಗಿಸಲು ಅಧಿಕಾರಿಗಳ ಮೇಲೆ ಒತ್ತಡ ತರಲಿ, ಜಲಾಶಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಸಕ್ರಮ ಗಣಿಗಾರಿಕೆ ಚಟುವಟಿಕೆಗೆ ಬೇಕಾದ ವ್ಯವಸ್ಥೆ ಮಾಡಲು ಮುಂದಾಗಲಿ. ಅದು ಬಿಟ್ಟು ಟಿವಿ ಕ್ಯಾಮರಾಗಳ ಮುಂದೆ ಹಾವು ಮುಂಗುಸಿ ಆಟವಾಡಿ ಜನರನ್ನು ಮರಳು ಮಾಡುವ ಚಾಣಾಕ್ಷತನ ಬೇಡ ಎಂಬ ಜನರ ಮಾತುಗಳಿಗೆ ಈ ನಾಯಕರು ಕಿವಿಗೊಡುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.