ವೈದ್ಯ ಜಗತ್ರು ಮಕ್ಕಳ ಅಪೌಷ್ಟಿಕತೆಯನ್ನು ‘ಕಡಿಮೆ ಪೌಷ್ಟಿಕತೆ’ (ಕ್ಯಾಲೋರಿಗಳ ಅಸಮರ್ಪಕ ಬಳಕೆ) ಮತ್ತು ‘ಅತಿಯಾದ ಪೋಷಣೆ’ (ಅಧಿಕ ಕ್ಯಾಲೋರಿಗಳ ಬಳಕೆ) ಎಂದು ಎರಡು ವಿಭಾಗವಾಗಿ ವರ್ಗೀಕರಿಸುತ್ತದೆ. ಇವುಗಳಲ್ಲಿ, ಕಡಿಮೆ ಪೌಷ್ಟಿಕತೆಯ ಮಕ್ಕಳಲ್ಲಿ ವಯಸ್ಸಿಗೆ ತಕ್ಕ ಎತ್ತರ ಇರುವುದಿಲ್ಲ ಅಥವಾ ಎತ್ತರದ ಕುಂಠಿತಕ್ಕೆ ಕಾರಣವಾಗುತ್ತದೆ. ಅಸಮರ್ಪಕ ಎತ್ತರವನ್ನು ಮಕ್ಕಳ ಅಪೌಷ್ಟಿಕತೆಯ ಅತ್ಯಂತ ಕೆಟ್ಟ ರೂಪವೆಂದು ಕರೆಯಲಾಗುತ್ತದೆ ಏಕೆಂದರೆ ಎತ್ತರದಲ್ಲಾದ ನಷ್ಟವನ್ನು ತಕ್ಷಣವೇ ಮರಳಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ, ಇದು ದೀರ್ಘಕಾಲದ ಅಪೌಷ್ಟಿಕತೆಯ ಸೂಚಕವಾಗಿದೆ. ಇದು ಮುಂದಿನ ಪೀಳಿಗೆಯನ್ನು ಸಹ ಭಾದಿಸುವಂಥದ್ದಾಗಿದ್ದು ಬದಲಾಯಿಸಲಾಗದ ಮಾನಸಿಕ ಮತ್ತು ದೈಹಿಕ ಹಾನಿಗೆ ಕಾರಣವಾಗಬಹುದು.
ಜಾಗತಿಕವಾಗಿ ಅಪೌಷ್ಟಿಕ ಮಕ್ಕಳಲ್ಲಿ ಮೂರನೇ ಒಂದು ಭಾಗದಷ್ಟು ಮಕ್ಕಳು ಭಾರತೀಯರು. ಮಕ್ಕಳ ಅಪೌಷ್ಟಿಕತೆಯ ಸಮಸ್ಯೆಯನ್ನು ಪರಿಹರಿಸದೆ ಯಾವುದೇ ದೇಶ ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವೇ ಇಲ್ಲ. ಮಕ್ಕಳ ಅಪೌಷ್ಟಿಕತೆಯನ್ನು ನಿಭಾಯಿಸಲು ಬಹುಮುಖಿ ವಿಧಾನದ ಅಗತ್ಯವಿದೆ ಎಂದು ಸಂಶೋಧನೆಯೊಂದು ಸೂಚಿಸುತ್ತದೆ, ಉದಾಹರಣೆಗೆ, ಆಹಾರ ಸೇವನೆಯ ಪ್ರಮಾಣ ಮತ್ತು ಗುಣಮಟ್ಟವನ್ನು ಸುಧಾರಿಸುವುದು, ನೈರ್ಮಲ್ಯದ ಮಟ್ಟಗಳು, ತಾಯಿಯ ಆರೋಗ್ಯ ಮತ್ತು ಶಿಕ್ಷಣ, ಸಾಮಾಜಿಕ ಸುರಕ್ಷತಾ ಕಾರ್ಯಕ್ರಮಗಳು ಇತ್ಯಾದಿ.
ಆರು ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರಿಗೆ ಸಮಗ್ರ ಆರೋಗ್ಯ ಮತ್ತು ಪೌಷ್ಠಿಕಾಂಶವಿರುವ ಆಹಾರ ವಿತರಣೆ, ಶಾಲೆಗೆ ಹೋಗುವ ಮಕ್ಕಳಿಗೆ ಮಧ್ಯಾಹ್ನದ ಊಟಗಳಂತಹ ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ (ಐಸಿಡಿಎಸ್ ) ಕಾರ್ಯಕ್ರಮಗಳನ್ನು ಸರ್ಕಾರವು ಜಾರಿಗೆ ತಂದಿದೆ. ಆದರೆ ಇವೆಲ್ಲವುಗಳ ಮಧ್ಯೆಯೂ ಭಾರತದಲ್ಲಿ ಇನ್ನೂ ಮಕ್ಕಳ ಅಪೌಷ್ಟಿಕತೆಯ ಬಗ್ಗೆ ಸಂಪೂರ್ಣ ಜಾಗೃತಿ ಮೂಡಿಲ್ಲ ಅನ್ನುವುದು ವಿಷಾದನೀಯ. NFHS-5 ಡಾಟಾ ಸಹ ಭಾರತದಲ್ಲಿ ಮಕ್ಕಳ ಅಪೌಷ್ಟಿಕತೆಯು ಮತ್ತಷ್ಟು ಹದಗೆಡುತ್ತಿರುವ ಮಾಹಿತಿ ನೀಡಿದೆ.
2015-16 ರಲ್ಲಿ ನಡೆದ NFHS-4 ಸಮೀಕ್ಷೆಗೆ ಐದು ವರ್ಷಕ್ಕಿಂತ ಕಡಿಮೆ ಇರುವ 90,000 ಮಕ್ಕಳು ಒಳಪಟ್ಟಿದ್ದರು. ಮಗುವಿನ ವಯಸ್ಸು (ತಿಂಗಳುಗಳಲ್ಲಿ; 0-5 ವರ್ಷದಿಂದ), ಲಿಂಗ, ಸೋಂಕುಗಳು ಸಂಭವಿಸುವುದು, ಔಷಧೀಯ ಸೇವನೆ, ಜನ್ಮ ಗುಣಲಕ್ಷಣಗಳು (ಹುಟ್ಟಿದಾಗಿನ ಗಾತ್ರ ಮತ್ತು ತೂಕ), ಅವರ ಆಹಾರ ಸೇವನೆ (ಸ್ತನ್ಯಪಾನ ಮತ್ತು ಆಹಾರ ವೈವಿಧ್ಯ), ಮಕ್ಕಳ ಪರಿಸರ (ಹಳ್ಳಿಯಲ್ಲಿ ಬಯಲು ಶೌಚದ ಮಟ್ಟ, ಕಲ್ಯಾಣ ಯೋಜನೆಗಳ ಪ್ರಯೋಜನಗಳ ಲಭ್ಯತೆ, ಸುಧಾರಿತ ಕುಡಿಯುವ ನೀರು, ಮನೆಯ ಗಾತ್ರ), ತಾಯಿಯ ಗುಣಲಕ್ಷಣಗಳು (ಎತ್ತರ, BMI, ಶಿಕ್ಷಣ, ಮತ್ತು ಮದುವೆಯ ವಯಸ್ಸು), ಆಕೆಯ ಪರಿಸರ (ಗರ್ಭಾವಸ್ಥೆಯಲ್ಲಿ ಐಸಿಡಿಎಸ್ ಕೇಂದ್ರಗಳಿಂದ ಪ್ರಯೋಜನಗಳು, ಆರೋಗ್ಯ ವಿಮೆ) ಮತ್ತು ಸಾಮಾಜಿಕ-ಆರ್ಥಿಕ ನಿಯಂತ್ರಣಗಳು (ಸಂಪತ್ತು, ವಾಸಸ್ಥಳ, ಇತ್ಯಾದಿ) ಮುಂತಾದ ಯುನಿಸೆಫ್ ಹಾಕಿಕೊಟ್ಟಿರುವ ಮಗುವಿನ ಅಪೌಷ್ಟಿಕತೆಯನ್ನು ವಿವರಿಸಲು ಬಳಸುವ ಹತ್ತು ಗುಂಪುಗಳ ಆಧಾರದ ಮೇಲೆ NFHS-4 ಡಾಟಾ ಸಂಗ್ರಹಿಸಲಾಗಿತ್ತು.
ಮಗುವಿನ HAZ (ಎತ್ತರ-ವಯಸ್ಸು)ಅಂಕಗಳು, ಮಗುವಿನ ವಯಸ್ಸು, ತಾಯಿಯ ಗುಣಲಕ್ಷಣಗಳ ಮತ್ತು ಸಾಮಾಜಿಕ-ಆರ್ಥಿಕ ನಿಯಂತ್ರಣಗಳನ್ನು ಅನುಸರಿಸಿರುವುದು ಈ ಸಮೀಕ್ಷೆಯಿಂದ ತಿಳಿದು ಬಂತು. ಈ ಫಲಿತಾಂಶವು ಮೊದಲ 24 ತಿಂಗಳಲ್ಲಿ ಮಗುವಿನ ಬೆಳವಣಿಗೆ ಕುಂಠಿತವಾಗುತ್ತದೆ ಎನ್ನುವ ಮಾಹಿತಿಯನ್ನು ಪ್ರಧಾನವಾಗಿ ಹೊರಗೆಡವಿತು.
ಇದೇ ರೀತಿಯಲ್ಲಿ ಮಗುವಿನ ಎತ್ತರವನ್ನು ನಿರ್ಧರಿಸುವ ಮತ್ತೊಂದು ಪ್ರಮುಖ ಅಂಶ ತಾಯಿಯ ಎತ್ತರವಾಗಿದೆ. ಎತ್ತರವನ್ನು ನಿರ್ಧರಿಸುವಲ್ಲಿ ಜೆನೆಟಿಕ್ಸ್ ಯಾವಾಗಲೂ ಪ್ರಮುಖ ಪಾತ್ರ ವಹಿಸುತ್ತದೆ ಎಂಬುವುದು ಹಿಂದೆಯೇ ಸಾಬೀತಾಗಿರುವ ವಿಷಯವಾಗಿದೆ. ಗರ್ಭಧಾರಣೆಯಿಂದ ಎರಡು ವರ್ಷಗಳವರೆಗೆ (ಅಂದರೆ ಜೀವನದ ಮೊದಲ 1,000 ದಿನಗಳು) ಮಕ್ಕಳಿಗೆ ಸಾಕಷ್ಟು ಪೌಷ್ಠಿಕಾಂಶವನ್ನು ಒದಗಿಸಲು ಹೆಚ್ಚುವರಿ ಪ್ರಯತ್ನಗಳನ್ನು ಮಾಡಲೇಬೇಕು ಎಂಬುವುದಕ್ಕೆ ಈ ಫಲಿತಾಂಶವು ಪುಷ್ಟಿ ನೀಡುತ್ತದೆ.
ಭಾರತದಲ್ಲಿ ಹೆಣ್ಣು ಮಕ್ಕಳು ಗಂಡು ಮಕ್ಕಳಿಗಿಂತ ಹೆಚ್ಚು ಅಪೌಷ್ಟಿಕತೆಗೆ ಒಳಗಾಗುತ್ತಾರೆ ಎನ್ನುವುದು ಈ ಸಮೀಕ್ಷೆಯ ಮತ್ತೊಂದು ಫಲಿತಾಂಶವಾಗಿದೆ. ಹುಡುಗಿಯರ ಪೌಷ್ಟಿಕಾಂಶದ ಅಗತ್ಯಗಳಿಗೆ ಆದ್ಯತೆ ನೀಡುವುದರಿಂದ ಈ ಸಮಸ್ಯೆಯನ್ನು ಪರಿಹರಿಸಬಹುದು ಎನ್ನುತ್ತದೆ ಅಧ್ಯಯನ. ಯಾಕೆಂದರೆ ಬಾಲ್ಯದಲ್ಲಿ ಬೆಳವಣಿಗೆಯ ಕುಂಠಿತವನ್ನು ಎದುರಿಸಿದ ತಾಯಂದಿರು ಪೂರ್ತಿ ಬೆಳಬಣಿಗೆ ಹೊಂದದ ಗರ್ಭಾಶಯವನ್ನು ಹೊಂದುವ ಅಪಾಯವಿದೆ. ಮುಂದೆ ಬೆಳವಣಿಗೆ ಕುಂಠಿತಗೊಂಡ ಮಕ್ಕಳ ಸಂತಾನೋತ್ಪತ್ತಿಗೂ ಕಾರಣವಾಗಬಹುದು.
‘ಐಸಿಡಿಎಸ್’ನ ‘ಪೋಶನ್ ಅಭಿಯಾನ್’ ಮಗುವಿನ ಜೀವನದ ಮೊದಲ 1,000 ದಿನಗಳಲ್ಲಿ ಸಾಕಷ್ಟು ಪೌಷ್ಠಿಕಾಂಶ ಸೇವನೆಯ ಮಹತ್ವವನ್ನು ತಿಳಿಸಿದರೂ, ಮಕ್ಕಳು ಮತ್ತು ಮಹಿಳೆಯರಿಗಾಗಿ ಇತರ ಕಲ್ಯಾಣ ಯೋಜನೆಗಳಂತೆಯೇ ಈ ಕಾರ್ಯಕ್ರಮವು ಕಳೆದ ಕೆಲವು ವರ್ಷಗಳಿಂದ ಬಜೆಟ್ ಕಡಿತವನ್ನು ಪಡೆಯುತ್ತಿದೆ. ಈ ಬಗ್ಗೆ ದೇಶದ ಅರ್ಥ ಶಾಸ್ತ್ರಜ್ಞರು ಎಚ್ವರಿಕೆ ನೀಡುತ್ತಾ ಬಂದಿದ್ದಾರೆ. ಮತ್ತು ಸರ್ಕಾರವು ತಾಯಂದಿರಿಗೆ ಅಗತ್ಯವಾದ ಪ್ರಸವಪೂರ್ವ ಆರೋಗ್ಯ ರಕ್ಷಣೆ ಮತ್ತು ಮಕ್ಕಳಿಗೆ ಸೂಕ್ತ ಪ್ರಮಾಣದ ಆಹಾರ ಮತ್ತು ಗುಣಮಟ್ಟವನ್ನು ಒದಗಿಸುವ ಜವಾಬ್ದಾರಿಯನ್ನು ಹೊರಬೇಕು ಎಂದು ಆಗ್ರಹಿಸಿದ್ದಾರೆ.
ಸಾಮಾಜಿಕ-ಆರ್ಥಿಕ ನಿಯಂತ್ರಣಗಳು HAZ ಸ್ಕೋರ್‌ಗಳನ್ನು ನಿರ್ಣಯಿಸುವ ಮತ್ತೊಂದು ಪ್ರಮುಖ ಅಂಶವಾಗಿದೆ. ಇದು ಕ್ಯಾಲೋರಿಗಳು ಮತ್ತು ಪೌಷ್ಟಿಕಾಂಶ, ಆರೋಗ್ಯ ರಕ್ಷಣೆ ಮತ್ತು ಸಾಮಾನ್ಯ ಜೀವನ ಪರಿಸ್ಥಿತಿಗಳಲ್ಲಿ ಸೂಕ್ತವಾದ ಆಹಾರವನ್ನು ಪಡೆಯುವ ಮಗುವಿನ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಪೂರಕ ಪೌಷ್ಠಿಕಾಂಶ ಕಾರ್ಯಕ್ರಮಗಳನ್ನು ಬಲಪಡಿಸಿದರೆ ಮಾತ್ರ ಮಕ್ಕಳ ಆರೋಗ್ಯ ಪರಿಸ್ಥಿತಿ ಸುಧಾರಿಸಬಹುದು.