‘ಕ್ಷುಲ್ಲಕ’ ಮತ್ತು ‘ಪ್ರಚಾರ ಹಿತಾಸಕ್ತಿ ಮೊಕದ್ದಮೆ’ ಅರ್ಜಿಗಳನ್ನು ಸಲ್ಲಿಸಿದ್ದಕ್ಕಾಗಿ ಕರ್ನಾಟಕ ಹೈಕೋರ್ಟ್ ಗುರುವಾರ ಕೆಲವು ರಾಜಕಾರಣಿಗಳ ವಿರುದ್ಧ ವಾಗ್ದಾಳಿ ನಡೆಸಿದೆ.
ನ್ಯಾಯಾಲಯವು “ರಾಜಕೀಯ ನಾಯಕರು ಏಕೆ ನ್ಯಾಯಾಲಯಕ್ಕೆ ಬರಲು ಪ್ರಾರಂಭಿಸಿದ್ದಾರೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಲು ವಿಫಲರಾಗಿದ್ದೇವೆ. ಕಳೆದ 14 ತಿಂಗಳುಗಳಲ್ಲಿ ನಾವು ಆದೇಶಗಳನ್ನು ನೀಡುತ್ತಿದ್ದೇವೆ, ವಲಸಿಗರ ಸಮಸ್ಯೆ ಇದ್ದಾಗ ಒಬ್ಬ ರಾಜಕೀಯ ಮುಖಂಡರೂ ನ್ಯಾಯಾಲಯಕ್ಕೆ ಬರಲಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಗದಗದ ಶಾಸಕ ಡಾ.ಎಚ್.ಕೆ.ಪಾಟೀಲ್ ಅವರು ಸಲ್ಲಿಸಿದ ಅರ್ಜಿಯನ್ನು ಇಂದು ಮೊದಲು ಕೈಗೆತ್ತಿಕೊಳ್ಳಲಾಯಿತು ಮತ್ತು ವಜಾಗೊಳಿಸಲಾಯಿತು. ಅರ್ಜಿಯನ್ನು ಆಲಿಸಿದ ನ್ಯಾಯಾಲಯವು “ಅರ್ಜಿಯಲ್ಲಿ ವ್ಯಾಪಕವಾದ ಮತ್ತು ವಿಸ್ತಾರವಾದ ಕೋರಿಕೆಗಳಿವೆ ,ಇಂತಹ ಅರ್ಜಿಗಳನ್ನು ನಾವು ಹೇಗೆ ಉತ್ತೇಜಿಸಬಹುದು?” ಎಂದು ಕೇಳಿದೆ.
“ಶಾಸಕಾಂಗದ ಸದಸ್ಯರಾಗಿದ್ದುಕೊಂಡು ಸಾರ್ವಜನಿಕರಿಗೆ ನೀವು ಏನು ಮಾಡಿದ್ದೀರಿ ಎಂದು ನಮಗೆ ತಿಳಿಸಿ. ನಿಮ್ಮ ಕ್ಷೇತ್ರದಲ್ಲಿ ಆಮ್ಲಜನಕ ಘಟಕವನ್ನು ಸ್ಥಾಪಿಸಲು ನೀವು ಪ್ರಯತ್ನಿಸಿದ್ದೀರಾ? ಜನರಿಗೆ ಹಾಸಿಗೆಗಳನ್ನು ಒದಗಿಸಿದ್ದೀರಾ? ನೀವು ರಾಜಕೀಯ ನಾಯಕರಾಗಿದ್ದೀರಿ, ಮಂಡಮಸ್ ರಿಟ್ ಗಾಗಿ ಕೇಳುವ ಮೊದಲು ನೀವು ಕರ್ನಾಟಕದ ಜನರಿಗಾಗಿ ಏನಾದರೂ ಮಾಡಬೇಕಾಗಿತ್ತು ” ಎಂದು ಅರ್ಜಿದಾರರ ಪರ ವಕೀಲರಿಗೆ ಹೇಳಿದರು.
ಅರ್ಜಿಯನ್ನು ವಿಲೇವಾರಿ ಮಾಡುವಾಗ ನ್ಯಾಯಾಲಯವು “ಪ್ರಿವಿಲೆಜ್ಡ್ ಸ್ಥಾನದಲ್ಲಿರುವ ನೀವು ವಿಧಾನಸಭೆಯಲ್ಲಿ ಸಮಸ್ಯೆಗಳನ್ನು ಎತ್ತಬೇಕಿತ್ತು ಮತ್ತು ಅದನ್ನು ಮಾಡದೆ ನೀವು ರಿಟ್ ಅರ್ಜಿಯೊಂದಿಗೆ ನ್ಯಾಯಾಲಯಕ್ಕೆ ಧಾವಿಸಿದ್ದೀರಿ” ಎಂದು ಹೇಳಿದೆ.
ನ್ಯಾಯಾಲಯವು ಪರಿಗಣಿಸಿದ ಮುಂದಿನ ಅರ್ಜಿಯನ್ನು ಪ್ರತಿಪಕ್ಷದ ನಾಯಕ ಎಸ್ ಆರ್ ಪಾಟೀಲ್ ಸಲ್ಲಿಸಿದ್ದರು. ಬಾಗಲಕೋಟೆ ಜಿಲ್ಲೆಯ ಖಾಸಗಿ ನರ್ಸಿಂಗ್ ಹೋಂಗಳ ವಿರುದ್ಧ ಹೆಚ್ಚಿನ ರೋಗಿಗಳನ್ನು ದಾಖಲಿಸಿದ್ದಕ್ಕಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅರ್ಜಿ ಸಲ್ಲಿಸಲಾಗಿತ್ತು.
ಇದಕ್ಕೆ ಪ್ರತಿಕ್ರಿಯೆಯಾಗಿ ನ್ಯಾಯಾಲಯವು,
“ನೀವು ಖಾಸಗಿ ವ್ಯಕ್ತಿಗಳ ಪರ ನಿಲ್ಲುತ್ತಿದ್ದೀರಿ. ಒಬ್ಬ ಎಂಎಲ್ಸಿ ಖಾಸಗಿ ಆಸ್ಪತ್ರೆಗಳ ಪರ ನಿಲ್ಲುವುದನ್ನು ನಾವು ನಿರೀಕ್ಷಿಸುವುದಿಲ್ಲ” ಎಂದು ಹೇಳಿತು. ಅರ್ಜಿಯಲ್ಲಿ ಮಾಡಿದ ಕೋರಿಕೆಯನ್ನು ಉಲ್ಲೇಖಿಸಿ ನ್ಯಾಯಾಲಯವು, “ಜಿಲ್ಲೆಯ ಪ್ರತಿ ಆಸ್ಪತ್ರೆಗೆ 14 ಕೆಎಲ್ ಆಮ್ಲಜನಕವನ್ನು ನೀಡಬೇಕು ಎಂದು ನಾವು ನಿರ್ಧರಿಸಲು ಸಾಧ್ಯವಿಲ್ಲ. ಕೆಲವು ಆಸ್ಪತ್ರೆಯ ಅವಶ್ಯಕತೆಗಳು 1 ಕೆಎಲ್ ಆಕ್ಸಿಜನ್ ಆಗಿರಬಹುದು ಮತ್ತು ಇತರವುಗಳಿಗೆ ಈ ಅವಶ್ಯಕತೆ ಹೆಚ್ಚಿರಬಹುದು, ಆದ್ದರಿಂದ ಬಾಗಲಕೋಟೆಯ ಎಲ್ಲಾ ಆಸ್ಪತ್ರೆಗಳಿಗೆ 14ಕೆಎಲ್ ಆಕ್ಸಿಜನ್ ಹಂಚಿಕೆ ಮಾಡಲು ಸರ್ಕಾರಕ್ಕೆ ನಾವು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಹೇಳಿತು.
“ನೀವು ವಿರೋಧ ಪಕ್ಷದ ನಾಯಕರು. ಪ್ರಿವಿಲೇಜ್ಡ್ ಸ್ಥಾನದಲ್ಲಿರುವ ನೀವು ಈ ವಿಷಯವನ್ನು ಪರಿಷತ್ತಿನಲ್ಲಿ ಏಕೆ ಎತ್ತಬಾರದು?” ಎಂದೂ ಪ್ರಶ್ನಿಸಿದೆ.
ಶಾಸಕ ಕೆ.ಆರ್. ರಮೇಶ್ ಕುಮಾರ್ ಅವರು ರಾಜ್ಯದ ಹಳ್ಳಿಗಳಲ್ಲಿ ವಾಸಿಸುವ ಜನರ ಸ್ವ್ಯಾಬ್ ಮಾದರಿಗಳನ್ನು ಸ್ವೀಕರಿಸಲು ವ್ಯವಸ್ಥೆ ಮಾಡಲು ಮತ್ತು ಮೊಬೈಲ್ ಲ್ಯಾಬ್ಗಳನ್ನು ಸ್ಥಾಪಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮೂರನೆಯದಾಗಿ ಕೈಗೆತ್ತಿಕೊಂಡಿತು.
“ಅರ್ಜಿದಾರರು ವಿಧಾನಸಭೆಯ ಸದಸ್ಯರು. ಅವರ ಮೊದಲ ಕೋರಿಕೆಯು ಕರ್ನಾಟಕದ ಹಳ್ಳಿಗಳಿಂದ ಸ್ವ್ಯಾಬ್ ಮಾದರಿಗಳನ್ನು ಸಂಗ್ರಹಿಸಲು ವ್ಯವಸ್ಥೆಯಾಗಬೇಕು ಮತ್ತು ಮೊಬೈಲ್ ಲ್ಯಾಬ್ಗಳು ಲಭ್ಯವಾಗಬೇಕು ಎಂಬುವುದಾಗಿದೆ. ಸ್ವ್ಯಾಬ್ ಸ್ವೀಕರಿಸಲು ವ್ಯವಸ್ಥೆ ಮಾಡಬೇಕೆಂಬುವುದರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇರಲು ಸಾಧ್ಯವಿಲ್ಲ. ರಾಜ್ಯ ಸರ್ಕಾರವು ಈ ವಿಷಯವನ್ನು ಪರಿಗಣಿಸಬೇಕೆಂದು ನಿರ್ದೇಶನ ನೀಡುತ್ತೇವೆ” ಎಂದು ಅವರ ಅರ್ಜಿಯನ್ನು ವಿಚಾರಣೆ ನಡೆಸಿ ಹೇಳಿತು.
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ 2007 ರ ನಿಬಂಧನೆಗಳ ಅನುಷ್ಠಾನದ ಬಗೆಗಿನ ಇತರ ಕೋರಿಕೆಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯವು ರಾಜ್ಯದ ಎಲ್ಲಾ ಖಾಸಗಿ ಕೋವಿಡ್ ಆಸ್ಪತ್ರೆಗಳಿಗೆ 2011 ರ ಆಕ್ಟ್ನ ನಿಬಂಧನೆಗಳ ಬಗ್ಗೆ ಗಮನ ಹರಿಸುವಂತೆ ಮತ್ತು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸುತ್ತೋಲೆ ಹೊರಡಿಸಲು ನಿರ್ದೇಶಿಸಿತು.
ಒಟ್ಟಿನಲ್ಲಿ ಕೋವಿಡ್ ಸಂಕಟ ಕಾಲದಲ್ಲೂ ರಾಜಕೀಯ ಬೇಳೆ ಬೇಯಿಸಲು ಹೊರಟ ರಾಜಕೀಯ ನಾಯಕರಿಗೆ ಸರಿಯಾಗಿ ಚಾಟಿ ಬೀಸಿದ ಕೋರ್ಟ್ ಶಾಸಕಾಂಗ ಮತ್ತು ಕಾರ್ಯಾಂಗ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ವಿಫಲವಾದಾಗ ನ್ಯಾಯಾಂಗ ಸಾರ್ವಜನಿಕರ ಹೊಣೆಯನ್ನು ತನ್ನ ಹೆಗಲ ಮೇಲೆ ಹೊರಲು ಸಿದ್ಧ ಎಂದು ಮತ್ತೊಮ್ಮೆ ಸಾಬೀತುಪಡಿಸಿತು.