• Home
  • About Us
  • ಕರ್ನಾಟಕ
Monday, January 19, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ನಮ್ಮ ಸಾರ್ವಜನಿಕ- ಸಾಮಾಜಿಕ ಪ್ರಜ್ಞೆಗೆ ಏನಾಗಿದೆ ?

ನಾ ದಿವಾಕರ by ನಾ ದಿವಾಕರ
January 5, 2023
in ಅಂಕಣ
0
ನಮ್ಮ ಸಾರ್ವಜನಿಕ- ಸಾಮಾಜಿಕ ಪ್ರಜ್ಞೆಗೆ ಏನಾಗಿದೆ ?
Share on WhatsAppShare on FacebookShare on Telegram

ಸುತ್ತಲಿನ ಹಿಂಸೆ ಕ್ರೌರ್ಯ ಮತ್ತು ದೌರ್ಜನ್ಯಗಳು ಕೇವಲ ಕಾನೂನು ಸುವ್ಯವಸ್ಥೆಯ ಪ್ರಶ್ನೆಯೇ ?

ADVERTISEMENT

ಸಮಾಜದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಒಂದು ಆರೋಗ್ಯಕರ ವಾತಾವರಣವನ್ನು ಉಂಟುಮಾಡುವ ಜವಾಬ್ದಾರಿ ಯಾರದು ? ಬಹುಶಃ ಕಳೆದ ಒಂದು ವರ್ಷದಲ್ಲಿ ಕರ್ನಾಟಕದಲ್ಲಿ ನಡೆದಿರುವ ಹತ್ಯೆ, ಹಲ್ಲೆ, ಅತಿಕ್ರಮ ದಾಳಿ, ಅತ್ಯಾಚಾರ, ದೌರ್ಜನ್ಯ, ಅಸ್ಪೃಶ್ಯತೆಯ ಪ್ರಕರಣಗಳು ಇವೆಲ್ಲವನ್ನೂ ಗಮನಿಸಿದಾಗ ಈ ಪ್ರಶ್ನೆ ಮತ್ತಷ್ಟು ಗಹನವಾಗುತ್ತದೆ. ರಾಜ್ಯದಲ್ಲಿ ಒಂದು ಗೃಹ ಸಚಿವಾಲಯ ಇದೆ, ಪೊಲೀಸ್‌ ವ್ಯವಸ್ಥೆ ಇದೆ, ಕಾನೂನು ಕ್ರಮ ಕೈಗೊಳ್ಳುವಂತಹ ಪ್ರಜಾಸತ್ತಾತ್ಮಕ ಸಾಂಸ್ಥಿಕ ನೆಲೆಗಳು ಸಕ್ರಿಯವಾಗಿವೆ. ಇವೆಲ್ಲವೂ ಜಾಗೃತಾವಸ್ಥೆಯಲ್ಲಿದ್ದು ಸಮಾಜದಲ್ಲಿ ನಡೆಯುವ ಯಾವುದೇ ರೀತಿಯ ಅಕ್ರಮಗಳನ್ನು ನಿಯಂತ್ರಿಸುವ, ನಿರ್ಬಂಧಿಸುವ ಮತ್ತು ಗಮನಿಸುವ ನಿಟ್ಟಿನಲ್ಲಿ ಆಯಾ ಇಲಾಖೆಗಳು ಕ್ರಿಯಾಶೀಲವಾಗಿವೆ ಎಂದೇ ಭಾವಿಸೋಣ. ಈ ಸಾಂವಿಧಾನಿಕ ಸಾಂಸ್ಥಿಕ ನೆಲೆಗಳಿಂದ ಹೊರತಾಗಿಯೂ ಒಂದು ಸಮಾಜವೂ ನಮ್ಮ ನಡುವೆ ಜೀವಂತಿಕೆಯಿಂದ ಉಸಿರಾಡುತ್ತಿದೆ.

ದೈನಂದಿನ ಸಾರ್ವಜನಿಕ ಬದುಕಿನಲ್ಲಿ ನಡೆಯುವ ಅಕ್ರಮ ಮತ್ತು ಅತಿಕ್ರಮಗಳ ವಿರುದ್ಧ ಈ ಸಮಾಜದ ಒಳಗಿನಿಂದಲೇ ಪ್ರತಿರೋಧ, ವಿರೋಧ ವ್ಯಕ್ತವಾಗುತ್ತಲೇ ಇರುತ್ತದೆ. ಕೆಲವೊಮ್ಮೆ ಹತಾಶೆ ಆಕ್ರೋಶಗಳೂ ಸ್ಪೋಟಗೊಳ್ಳುವುದನ್ನೂ ಕಂಡಿದ್ದೇವೆ. ಎಂತಹುದೇ ಆಘಾತಕಾರಿ ಘಟನೆಯಾದರೂ ಆಡಳಿತ ವ್ಯವಸ್ಥೆಯ ಪ್ರತಿಕ್ರಿಯೆ ಡಿಜಿಟಲ್‌ ಭಾಷೆಯಲ್ಲಿ ಹೇಳುವುದಾದರೆ ಒಂದು Template ಮಾದರಿಯಲ್ಲಿರುತ್ತದೆ. “ ಗಂಭೀರ ತನಿಖೆ ನಡೆಸಲಾಗುತ್ತದೆ, ಆರೋಪಿಗಳನ್ನು ಬಂಧಿಸಲಾಗಿದೆ, ಅಪರಾಧಿಗಳಿಗೆ ಸೂಕ್ತ ಶಿಕ್ಷೆ ನೀಡಲಾಗುತ್ತದೆ ಮತ್ತು ಸಂತ್ರಸ್ತರಿಗೆ ನ್ಯಾಯ ದೊರಕಿಸಲಾಗುತ್ತದೆ “ ಎನ್ನುವ ಈ Template ನಿಂದ ಹೊರತಾಗಿಯೂ ಸುತ್ತಲಿನ ಬೆಳವಣಿಗೆಗಳ ಬಗ್ಗೆ ಕಣ್ಣಾಡಿಸಿದಾಗ, ನಾಗರಿಕತೆಯ ಉನ್ನತ ಹಂತದಲ್ಲಿರುವ ಒಂದು ಸಮಾಜ, ಅಮಾನುಷತೆಯನ್ನು ಹೇಗೆ ಸಹಿಸಿಕೊಳ್ಳಲು ಸಾಧ್ಯ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ.

ಕ್ರೌರ್ಯ ಮತ್ತು ಹಿಂಸೆಯ ಪರಾಕಾಷ್ಠೆ

ಕೆಲವು ದಿನಗಳ ಹಿಂದೆ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಪ್ರೆಸಿಡೆನ್ಸಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ, ನಡೆದ ಘಟನೆ ಅಧುನಿಕ ಮಾಧ್ಯಮ ಪರಿಭಾಷೆಯಲ್ಲಿ ಹೇಳುವುದಾದರೆ ಜಗತ್ತನ್ನೇ                           ʼ ಬೆಚ್ಚಿ ಬೀಳಿಸಬೇಕಿತ್ತು ʼ. ಬೆಂಗಳೂರಿನ ಹೊರವಲಯದಲ್ಲಿರುವ ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ 19 ವರ್ಷದ ಬಿ ಟೆಕ್‌ ವಿದ್ಯಾರ್ಥಿನಿಯೊಬ್ಬಳನ್ನು, ಮತ್ತೊಂದು ಕಾಲೇಜಿನ ಹುಡುಗ ಶಾಲೆಯ ಕೊಠಡಿಗೇ ನುಗ್ಗಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ತಾನೂ ಇರಿದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ. ಇದು ಕಾಲೇಜು ತೆರೆದಿದ್ದಾಗಲೇ, ಅನ್ಯ ವಿದ್ಯಾರ್ಥಿಗಳ ಎದುರಿನಲ್ಲೇ ನಡೆದಿರುವ ಘಟನೆ.

ಮತ್ತೊಂದು ಘಟನೆಯಲ್ಲಿ ನರಗುಂದ ತಾಲ್ಲೂಕಿನ ಹಡಲಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕನೊಬ್ಬ ನಾಲ್ಕನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 10 ವರ್ಷದ ಬಾಲಕನನ್ನು ಕಬ್ಬಿಣದ ಸಲಾಕೆಯಿಂದ ಥಳಿಸಿರುವುದೇ ಅಲ್ಲದೆ ಆ ಬಾಲಕನನ್ನು ಮೊದಲನೆ ಮಹಡಿಯಿಂದ ಕೆಳಕ್ಕೆಸೆದು ಹತ್ಯೆ ಮಾಡಿದ್ದಾನೆ. ಬಾಲಕನ ತಾಯಿಯ ಮೇಲೆಯೂ ಹಲ್ಲೆ ನಡೆಸಿದ್ದಾನೆ. ಈ ಘಟನೆ ಹತ್ತಾರು ಶಾಲಾ ಬಾಲಕರ ಸಮ್ಮುಖದಲ್ಲೇ ನಡೆದಿದೆ.

ಪಾಂಡವಪುರದ ಬಾಲಕಿಯರ ಸರ್ಕಾರಿ ಹಾಸ್ಟೆಲ್‌ ಒಂದರಲ್ಲಿ ವಿದ್ಯಾರ್ಥಿನಿಯರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಪ್ರೌಢಶಾಲಾ ಮುಖ್ಯ ಶಿಕ್ಷಕನನನ್ನು ಥಳಿಸಿರುವ ಘಟನೆಯೂ ನಡೆದಿದೆ. ತಮ್ಮ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ದಿಟ್ಟತನದಿಂದ ಎದುರಿಸಿದ ಬಾಲಕಿಯರು ಎಲ್ಲರ ಪ್ರಶಂಸೆಗೊಳಗಾಗಿರುವುದು ಸಹಜವೇ ಆಗಿದೆ. ಆದರೂ ಈ ಘಟನೆಯನ್ನು ಕೇವಲವಾಗಿ ಪರಿಗಣಿಸಲಾಗುವುದಿಲ್ಲ.

ಅಕ್ಟೋಬರ್‌ನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಮಳವಳ್ಳಿಯಲ್ಲಿ ಟ್ಯೂಷನ್‌ಗೆಂದು ಬರುತ್ತಿದ್ದ 10 ವರ್ಷದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಹತ್ಯೆ ಮಾಡಿರುವ ಶಿಕ್ಷಕನ ಮೃತ ದೇಹವನ್ನು ನೀರಿನ ತೊಟ್ಟಿಯೊಂದರಲ್ಲಿ ಎಸೆದು ಪರಾರಿಯಾಗಿದ್ದಾನೆ.

ದೆಹಲಿಯಲ್ಲಿ ನಡೆದ ಶ್ರದ್ಧಾ ವಾಲ್ಕರ್‌ ಹತ್ಯೆ ಮತ್ತು ಇದೇ ರೀತಿಯ ಹಲವು ಘಟನೆಗಳೂ ಕಳೆದ ಆರು ತಿಂಗಳಲ್ಲಿ ವರದಿಯಾಗಿದೆ. ಹತ್ಯೆ ಮಾಡಿ ಮೃತ ದೇಹವನ್ನು ಕತ್ತರಿಸಿ ಎಸೆಯುವ ಕ್ರೂರ ಮನಸ್ಥಿತಿಯನ್ನು ಕೆಲವು ಪ್ರಕರಣಗಳು ಬಿಂಬಿಸಿವೆ. ಇದರೊಂದಿಗೇ ಗಮನಿಸಬೇಕಾದ್ದು ಕರ್ನಾಟಕದ ಕರಾವಳಿಯಲ್ಲಿ, ರಾಜಧಾನಿಯಲ್ಲೂ ನಡೆದಂತಹ ಕೆಲವು ರಾಜಕೀಯ ಪ್ರೇರಿತ, ಕೋಮುದ್ವೇಷದ, ಮತದ್ವೇಷ ಪ್ರೇರಿತ ಹತ್ಯೆಗಳು. ಚಂದ್ರು, ಪ್ರವೀಣ್‌ ನೆಟ್ಟಾರ್‌, ಹರ್ಷ, ಜಲೀಲ್‌, ಮೊಹಮ್ಮದ್‌ ಫಾಜಿಲ್‌ ಮುಂತಾದ ಯುವಕರು ದ್ವೇಷ ರಾಜಕಾರಣದ ಹರಕೆಯ ಕುರಿಗಳಾಗಿ ಜೀವ ತೆತ್ತಿದ್ದಾರೆ. ಈ ಘಟನೆಗಳ ನಡುವೆಯೇ ಚಿತ್ರದುರ್ಗದ ಮುರುಘಾ ಮಠದ ಪ್ರಕರಣ ವಿಕೃತ-ಕ್ರೂರ ಸಮಾಜದ ಮತ್ತೊಂದು ಮುಖವಾಡವನ್ನು ನಮ್ಮ ಮುಂದೆ ತೆರೆದಿಟ್ಟಿದೆ.

ಈ ಎಲ್ಲ ಘಟನೆಗಳ ಬಗ್ಗೆ ತನಿಖೆ ನಡೆಯುತ್ತಿದ್ದು ಶೋಧ, ಬಂಧನ, ವಿಚಾರಣೆ, ನ್ಯಾಯಾಂಗ ಪ್ರಕ್ರಿಯೆಗಳು ಸಹಜವಾಗಿಯೇ ನಡೆಯುತ್ತದೆ. ಎಷ್ಟೋ ವರ್ಷಗಳ ತನಿಖೆ ಮತ್ತು ವಿಚಾರಣೆಯ ನಂತರ ಸಾಕ್ಷ್ಯಾಧಾರಗಳ ಕೊರತೆಯಿಂದ ಅಪರಾಧಗಳು ವಿಸ್ಮೃತಿಗೆ ಜಾರುವ ಸಾಧ್ಯತೆಗಳೂ ಇವೆ. ಕೆಲವರಿಗೆ ಶಿಕ್ಷೆಯಾಗಲೂಬಹುದು. ಕಾನೂನು ಮತ್ತು ನ್ಯಾಯಾಂಗ ವ್ಯಾಪ್ತಿಯ ಈ ಪ್ರಕ್ರಿಯೆಗಳನ್ನು ಹೊರತಾಗಿಯೂ ಒಂದು ಪ್ರಜ್ಞಾವಂತ ಸಮಾಜವಾಗಿ, ಈ ಸಮಾಜದ ಉಸ್ತುವಾರಿ ಹೊತ್ತಿರುವ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯಾಗಿ ನಾವು ಯೋಚಿಸಬೇಕಿರುವುದೇನನ್ನು ?

ಅಸ್ಮಿತೆಗಳಿಂದ ಮುಕ್ತವಾದ ಸಾಮಾಜಿಕ ಜವಾಬ್ದಾರಿ

ನಾವೇ ಸೃಷ್ಟಿಸಿಕೊಂಡಿರುವ ಜಾತಿ-ಮತ-ಲಿಂಗ ಮತ್ತಿತರ ಅಸ್ಮಿತೆಗಳಿಂದಾಚೆಗಿನ ಘಟನೆಗಳು ಎಷ್ಟೇ ಅಮಾನುಷವಾಗಿದ್ದರೂ, ಎಷ್ಟೇ ಹೃದಯವಿದ್ರಾವಕವಾಗಿದ್ದರೂ ಅದು ಸಮಾಜದಲ್ಲಿ ಸಂಚಲನ ಉಂಟುಮಾಡುವುದಿಲ್ಲ ಎಂಬ ದುರಂತ ವಾಸ್ತವದ ನೆಲೆಯಲ್ಲೇ ನಾವು ನಮ್ಮ ಹಾಗೂ ನಮ್ಮನ್ನಾಳುವ ಸರ್ಕಾರಗಳ ಸಾಮಾಜಿಕ ಜವಾಬ್ದಾರಿಯನ್ನು ಪ್ರಶ್ನಿಸಿಕೊಳ್ಳಬೇಕಿದೆ. ನರಗುಂದ ಶಾಲೆಯಲ್ಲಿ ಹತ್ಯೆಗೀಡಾದ 10 ವರ್ಷದ ಬಾಲಕನ ಪ್ರಕರಣವನ್ನೇ ಗಂಭೀರವಾಗಿ ಗಮನಿಸಿದಾಗ, ಈ ಘಟನೆಯ ವಿರುದ್ಧ ಯಾವುದೇ ಸಾಂಘಿಕ ಪ್ರತಿರೋಧ ಕಂಡುಬರಲಿಲ್ಲ, ಅನ್ಯಾಯ ದೌರ್ಜನ್ಯಗಳ ಹುಯಿಲು ಕೇಳಿಬರಲಿಲ್ಲ. ನ್ಯಾಯಕ್ಕಾಗಿ ಹಕ್ಕೊತ್ತಾಯದ ಧ್ವನಿಗಳು ರಾಜ್ಯವ್ಯಾಪಿ ಮೊಳಗಲಿಲ್ಲ. ಬಹುಶಃ ನತದೃಷ್ಟ ಬಾಲಕ ಸಾಮಾಜಿಕವಾಗಿ ನಾವು ನಿರ್ಮಿಸಿಕೊಂಡಿರುವ ಅಸ್ಮಿತೆಗಳ ಚೌಕಟ್ಟಿನಿಂದ ಹೊರತಾಗಿದ್ದ ಎನಿಸುತ್ತದೆ.

ಏನೇ ಆದರೂ ಈ ಘಟನೆ ನಡೆದಿರುವುದು ಶಾಲೆ ತೆರೆದಿದ್ದ ಸಮಯದಲ್ಲಿ. ಪ್ರಪಂಚಕ್ಕೆ ಇನ್ನೂ ಕಣ್ತೆರೆಯದ ಬಾಲಕ ಬಾಲಕಿಯರ ಸಮ್ಮುಖದಲ್ಲಿ. ತೆರೆಮರೆಯಲ್ಲಿ ನಡೆದು ನಂತರ ಬೆಳಕಿಗೆ ಬಂದ ಘಟನೆ ಇದಲ್ಲ. ಎಲ್ಲ ಕಣ್ಣೆದುರಿನಲ್ಲೇ ಆ ಬಾಲಕನನ್ನು ಥಳಿಸಿ ಕೊಲ್ಲಲಾಗಿದೆ. ಆಕೆಯ ತಾಯಿಯ ಮೇಲೆ ಹಲ್ಲೆ ನಡೆಸಲಾಗಿದೆ. ಬಹುಶಃ ಈ ಭೀಕರ ಘಟನೆಯನ್ನು ಕೆಲವು ವಿದ್ಯಾರ್ಥಿಗಳಾದರೂ ನೋಡಿರುವ ಸಾಧ್ಯತೆಗಳಿವೆ. ಈ ಕ್ರೌರ್ಯವನ್ನು ಕಣ್ಣಾರೆ ಕಂಡ ಉಳಿದ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಈ ಘಟನೆ ಯಾವ ರೀತಿಯ ಪ್ರಭಾವ ಬೀರಿರಬಹುದು ? ಇದಕ್ಕೆ ಮನಶ್ಶಾಸ್ತ್ರಜ್ಞರೇ ಉತ್ತರ ಹೇಳಬೇಕು. ಆದರೆ ಸಾಮಾನ್ಯ ಜ್ಞಾನ ಇರುವವರಿಗೂ ತಿಳಿಯಬಹುದಾದ ಅಂಶವೆಂದರೆ, ಆ ಉಳಿದ ಮಕ್ಕಳು ಆಘಾತಕ್ಕೊಳಗಾಗಿರುತ್ತಾರೆ. ಅವರ ಸುಪ್ತ ಪ್ರಜ್ಞೆಯಲ್ಲಿ ಈ ಘಟನೆ ಅಚ್ಚಳಿಯದೆ ಉಳಿಯುವ ಸಾಧ್ಯತೆಗಳಿವೆ. ಅಕ್ಷರ ಕಲಿಸುವ ಗುರು ಹಂತಕನೂ ಆಗಬಹುದು ಎಂಬ ವಾಸ್ತವವನ್ನು ನೋಡಿದ ಈ ಮಕ್ಕಳ ಮನಸ್ಸಿನಲ್ಲಿ ಭಯ, ಆತಂಕಗಳೊಂದಿಗೇ ಶಾಶ್ವತವಾದ ವ್ಯಾಕುಲತೆ ಅಥವಾ ತಲ್ಲಣಗಳೂ ದಾಖಲಾಗಬಹುದು. ಇದು ಆ ಮಕ್ಕಳ ಭವಿಷ್ಯದಲ್ಲಿ ಯಾವ ರೀತಿಯ ಪರಿಣಾಮಗಳನ್ನು ಉಂಟುಮಾಡಬಹುದು ?

ಪಾಂಡವಪುರ , ಮಳವಳ್ಳಿ, ಮುರುಘಾಮಠ, ಪ್ರೆಸಿಡೆನ್ಸಿ ಕಾಲೇಜು ಈ ಎಲ್ಲ ಪ್ರಕರಣಗಳಲ್ಲೂ ಆಘಾತಕ್ಕೀಡಾಗಿರುವುದು ಮಕ್ಕಳೇ ಎನ್ನುವುದನ್ನು ಗಮನಿಸಬೇಕಿದೆ. ಈ ಮಕ್ಕಳಿಗೆ ಸಾಂತ್ವನ ನೀಡಲು ಸಮಾಜ ಮುಂದೆ ಬರುವುದು ಸಹಜ. ಧೈರ್ಯ ನೀಡುವ ಪ್ರಯತ್ನಗಳೂ ಕೆಲವು ಸಂಘಟನೆಗಳಿಂದ ನಡೆದಿವೆ. ನ್ಯಾಯಾನ್ಯಾಯಗಳ ನಿಷ್ಕರ್ಷೆಯ ಪ್ರಶ್ನೆಯನ್ನು ಬದಿಗಿಟ್ಟು ನೋಡಿದರೂ, ಕೆಲವು ಜನಪರ ದನಿಗಳಾದರೂ ಆಘಾತಕ್ಕೊಳಗಾದ ಮಕ್ಕಳೊಂದಿಗೆ ನಿಂತು ಆತ್ಮಸ್ಥೈರ್ಯವನ್ನು ತುಂಬುವ ಪ್ರಯತ್ನವನ್ನು ಮಾಡಿವೆ. ಆದರೆ ಇಲ್ಲಿಗೆ ಪ್ರಶ್ನೆ ಬಗೆಹರಿಯವುದಿಲ್ಲ. ಕೆಲವು ಮೂಲಭೂತ ಪ್ರಶ್ನೆಗಳನ್ನು ನಮಗೆ ನಾವೇ ಹಾಕಿಕೊಳ್ಳಬೇಕಿದೆ :

  • ಶಾಲಾ ಕಾಲೇಜುಗಳ ಆವರಣದಲ್ಲಿ, ಪಾಠದ ಕೊಠಡಿಯ ಒಳಗೆ ಮಾರಕಾಸ್ತ್ರಗಳಿಂದ ಹತ್ಯೆ/ಹಲ್ಲೆ ನಡೆಯುವುದು ಹೇಗೆ ಸಾಧ್ಯ ?
  • ವಿದ್ಯೆ ಕಲಿಸುವ ಗುರು ಮತ್ತು ಸಂಸ್ಕೃತಿಯನ್ನು ಕಲಿಸುವ ಗುರು ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ ಎಸಗುತ್ತಿರುವುದು ಏಕೆ ?
  • ಶಾಲಾ ಕಾಲೇಜು ಆವರಣಗಳಲ್ಲೂ, ಎಲ್ಲರ ಸಮ್ಮುಖದಲ್ಲೇ ಹತ್ಯೆ ಮಾಡಲು, ಹಲ್ಲೆ ನಡೆಸಲು ಅವಕಾಶಗಳು ಲಭ್ಯವಾಗಿರುವುದಾದರೂ ಹೇಗೆ ?
  • “ ಜೀವ ನೀಡುವ ಶಕ್ತಿ ಇಲ್ಲದವರಿಗೆ ಜೀವ ತೆಗೆಯುವ ಹಕ್ಕು ಇರುವುದಿಲ್ಲ ”ಎಂಬ ಸಾರ್ವತ್ರಿಕ ಅಭಿಪ್ರಾಯದ ಹೊರತಾಗಿಯೂ, ಹತ್ಯೆ ಮಾಡುವುದು ಒಂದು ಸಹಜ ಪ್ರಕ್ರಿಯೆಯಾಗಿರುವುದಾದರೂ ಹೇಗೆ ?
  • ಕಾಲೇಜು ವಿದ್ಯಾರ್ಥಿಗಳು ಮತ್ತು ಬಾಹ್ಯ ಸಮಾಜದ ಯುವಕರಿಗೆ ಬಳಿ ಮಾರಕಾಸ್ತ್ರಗಳು ಸುಲಭವಾಗಿ ಲಭ್ಯವಾಗುತ್ತಿರುವುದಾದರೂ ಹೇಗೆ ?

ಈ ಜಟಿಲ , ಗಹನವಾದ ಪ್ರಶ್ನೆಗಳಿಗೆ ಉತ್ತರಗಳನ್ನು ಶೋಧಿಸುತ್ತಲೇ, ನಾಗರಿಕತೆಯ ವಾರಸುದಾರರಾಗಿ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಿರುವುದು ಢಾಳಾಗಿ ಕಾಣುತ್ತಿರುವ ಸಾರ್ವಜನಿಕ ʼಬೌದ್ಧಿಕ ನಿಷ್ಕ್ರಿಯತೆಯನ್ನುʼ. ಅಸ್ಮಿತೆಗಳ ಚೌಕಟ್ಟಿಗೆ ಒಳಪಡದ ಹತ್ಯೆಗಳು/ಅಸಹಜ ಸಾವುಗಳು ಸಹಜ ಸಾವುಗಳಾಗಿಬಿಡುವ ಒಂದು ಅಪಾಯಕಾರಿ ಸನ್ನಿವೇಶವನ್ನು ನಾವು ಕಾಣುತ್ತಿದ್ದೇವೆ. ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಸಂಭವಿಸಿದ 35 ಸಾವುಗಳು, ಸಮೀಪದ ಮಾಡ್ರಳ್ಳಿ ಮತ್ತು ಬಿಸಿವಲವಾಡಿಯ ಕಲ್ಲುಗಣಿ ಅವಘಡದಲ್ಲಿ ಸಂಭವಿಸಿದ ಹಲವು ಸಾವುಗಳು ನಮ್ಮ ನಡುವೆ ಸೂಕ್ಷ್ಮ ಚಿಂತನೆಯನ್ನೂ ಬಡಿದೆಬ್ಬಿಸಿಲ್ಲ ಎಂದಾದರೆ, ನಮ್ಮ ಸಾಮಾಜಿಕ ಪ್ರಜ್ಞೆಗೆ ಏನಾಗಿದೆ ಎಂಬ ಕುತೂಹಲವಾದರೂ ನಮ್ಮಲ್ಲಿ ಮೂಡಬೇಕಲ್ಲವೇ ? ಈ ಘಟನೆಗಳ ಹಿಂದೆ ಮೂಲತಃ ಕಾನೂನು ಉಲ್ಲಂಘನೆಯ ಪ್ರಶ್ನೆಯೇ ಇದ್ದರೂ, ಈ ಸಾವುಗಳಿಗೆ ನಾವು ಮತ್ತು ನಮ್ಮನ್ನಾಳುವ ಸರ್ಕಾರ, ಸರ್ಕಾರ ನಿರ್ವಹಿಸುವ ಜನಪ್ರತಿನಿಧಿಗಳು ಹಾಗೂ ವಿಶಾಲ ಸಮಾಜ ಎಲ್ಲರೂ ಬಾಧ್ಯರಲ್ಲವೇ ? ಇಷ್ಟಾದರೂ ಇಂತಹ ದುರಂತಗಳು, ಅವಘಡಗಳು ನಡೆಯುತ್ತಲೇ ಇರುತ್ತವೆ ನಾವು ಮರೆಯುತ್ತಲೇ ಹೋಗುತ್ತೇವೆ.  ಕಾನೂನು ಉಲ್ಲಂಘಿಸಿದವರು, ಕಾನೂನನ್ನು ಲೆಕ್ಕಿಸದವರು ನಿರ್ಭಿಡೆಯಿಂದ ತಿರುಗಾಡುತ್ತಲೇ ಇರುತ್ತಾರೆ.

ಈ ಔದ್ಯಮಿಕ/ಸಾಂಸ್ಥಿಕ ದುರಂತಗಳ ಹೊರತಾಗಿ ನಾವು ಯೋಚಿಸಬೇಕಿರುವುದು ಸಮಾಜದಲ್ಲಿ, ವಿಶೇಷವಾಗಿ ಯುವ ಸಮುದಾಯದಲ್ಲಿ ಕ್ರೌರ್ಯ ಮತ್ತು ಹಿಂಸೆ ಏಕೆ ನೆಲೆಗಾಣುತ್ತಿದೆ ? “ ನಾನು ಯಾರನ್ನಾದರೂ ಕೊಲ್ಲಬಹುದು” ಎಂಬ ಹುಂಬತನ ಯುವ ಸಮುದಾಯದಲ್ಲಿ ಮೂಡಬೇಕಾದರೆ, ಈ ಮನೊಭಾವವನ್ನು ಪ್ರಚೋದಿಸುವ ಒಂದು ಸಾಮಾಜಿಕ/ರಾಜಕೀಯ/ಸಾಂಸ್ಕೃತಿಕ  ಪ್ರಕ್ರಿಯೆಯೂ ಇರಲೇಬೇಕು. ಈ ಪ್ರಚೋದನೆಗಳಿಗೆ ಜಾತಿ-ಮತ ಶ್ರೇಷ್ಠತೆ, ಕೋಮು ದ್ವೇಷ ಮತ್ತು ಮತದ್ವೇಷ ಒಂದು ಕಾರಣವಾದರೆ ಮತ್ತೊಂದೆಡೆ ಸ್ತ್ರೀ ದ್ವೇಷ, ಪುರುಷಾಧಿಪತ್ಯದ ಮನೋಭಾವಗಳೂ ಕಾರಣವಾಗುತ್ತವೆ. ಈ ಮನೋಭಾವವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರಗಳಾಗಲೀ, ಸಾರ್ವಜನಿಕ ಸಂಘ-ಸಂಸ್ಥೆಗಳಾಗಲೀ, ಬೌದ್ಧಿಕ ಶಕ್ತಿ ಕೇಂದ್ರಗಳಾಗಲೀ ಯಾವ ಪ್ರಯತ್ನಗಳನ್ನು ಮಾಡುತ್ತಿವೆ ? ರಾಜಕೀಯ ಪಕ್ಷಗಳು ಈ ಬಗ್ಗೆ ಆಲೋಚನೆ ಮಾಡುವ ವ್ಯವಧಾನವನ್ನೂ ಕಳೆದುಕೊಂಡಿರುವ ಸಂದರ್ಭದಲ್ಲಿ, ನಾಗರಿಕತೆಯ ವಾರಸುದರಾರರಾಗಿ ಸಮಾಜದ ಸುಶಿಕ್ಷಿತ, ಪ್ರಜ್ಞಾವಂತ ಪ್ರಜೆಗಳಾದರೂ ತಮ್ಮ ಬಾಧ್ಯತೆಗಳನ್ನು ಅರಿತುಕೊಳ್ಳಬೇಕಲ್ಲವೇ ? ಕೊಲ್ಲುವವರನ್ನು, ಅತ್ಯಾಚಾರಿಗಳನ್ನು, ಹಲ್ಲೆಕೋರರನ್ನು ಶಿಕ್ಷಿಸಲು ಕಾನೂನು ವ್ಯವಸ್ಥೆ ಮತ್ತು ನ್ಯಾಯಾಂಗ ಸನ್ನದ್ಧವಾಗಿದೆ. ಆದರೆ ಒಂದು ಸಮಾಜವಾಗಿ ನಮ್ಮ ಆದ್ಯತೆಗಳೇನು ?

ಕಾರಣಗಳೇನೇ ಇರಲಿ, ಯುವ ಪೀಳಿಗೆಗೆ ನಿಮಗೆ ಕೊಲ್ಲುವ ಹಕ್ಕಿದೆ ಆಯುಧ ಹಿಡಿಯಿರಿ ಎಂಬ ಸಂದೇಶ ನೀಡುವುದು ಸಹಜ ಪ್ರಕ್ರಿಯೆಯಾಗಿರುವ ವಿಷಮ ಸನ್ನಿವೇಶವನ್ನು ನಾವು ಎದುರಿಸುತ್ತಿದ್ದೇವೆ. ಆಯುಧಧಾರಿಗಳ ಮನಸ್ಥಿತಿಯನ್ನು ನಿಯಂತ್ರಿಸುವ ಕ್ಷಮತೆಯಾಗಲೀ, ನಿರ್ಬಂಧಿಸುವ ಪ್ರಾಮಾಣಿಕತೆಯಾಗಲೀ, ದಂಡಿಸುವ ಸಮಾಜ-ನಿಷ್ಠೆಯಾಗಲೀ ನಮ್ಮಲ್ಲಿ ಮರೆಯಾಗುತ್ತಿದೆ. ಇಲ್ಲಿಯೂ ಸಹ ನಾವೇ ನಿರ್ಮಿಸಿಕೊಂಡಿರುವ ಅಸ್ಮಿತೆಯ ಚೌಕಟ್ಟುಗಳು ನಮ್ಮ ಆಲೋಚನಾ ಲಹರಿಯನ್ನು ನಿಯಂತ್ರಿಸುತ್ತವೆ. ನಮ್ಮ ಪ್ರತಿಕ್ರಿಯೆ, ಸ್ಪಂದನೆ-ಪ್ರತಿಸ್ಪಂದನೆ ಎಲ್ಲವೂ ಸಹ ಅಸ್ಮಿತೆಗಳಿಗನುಸಾರವಾಗಿ ವ್ಯಕ್ತವಾಗುತ್ತವೆ. ಈ ಅಸ್ಮಿತೆಗಳಿಗೆ ನಮ್ಮದೇ ಆದ ಮತೀಯ, ಜಾತಿನಿಷ್ಠೆಯ, ಸಾಮುದಾಯಿಕ, ಲಿಂಗಾಧಾರಿತ ಲಕ್ಷಣಗಳನ್ನು ಆರೋಪಿಸುತ್ತಾ, ನೈತಿಕತೆಯ ಪಾತಾಳಕ್ಕೆ ಕುಸಿಯುತ್ತಿರುವ ಸಮಾಜವನ್ನು ನಿರ್ಲಿಪ್ತತೆಯಿಂದ ವೀಕ್ಷಿಸುತ್ತಿರುತ್ತೇವೆ.

ಶೈಕ್ಷಣಿಕ, ಆಧ್ಯಾತ್ಮಿಕ, ಧಾರ್ಮಿಕ ಮತ್ತು ಸ್ವಾಸ್ಥ್ಯ ಕೇಂದ್ರಗಳೂ ಸಹ ಮಾನವನ ಅತಿರೇಕದ ವರ್ತನೆಗಳಿಗೆ, ಕ್ರೌರ್ಯ, ಹಿಂಸೆ, ದೌರ್ಜನ್ಯ, ಅತ್ಯಾಚಾರ ಮತ್ತು ಅಸ್ಪೃಶ್ಯತೆಯಂತಹ ಹೀನಾಚರಣೆಗಳಿಗೆ ಭೂಮಿಕೆಯಾಗುತ್ತಿರುವ ಈ ವಿಷಮ ಸನ್ನಿವೇಶದಲ್ಲಿ, ನಮ್ಮ ನಾಗರಿಕ ಲಕ್ಷಣವನ್ನು ಉಳಿಸಿಕೊಳ್ಳಲಾದರೂ ನಾವು ಜಾಗೃತರಾಗಬೇಕಾಗಿದೆ. ಈ ಬೆಳವಣಿಗೆಗಳನ್ನು ʼ ಸಾಮಾಜಿಕ ವ್ಯಾಧಿ ʼ ಎಂದು ಭಾವಿಸಿ ಪರಿಹಾರೋಪಾಯಗಳನ್ನು ಶೋಧಿಸಬೇಕೇ ಅಥವಾ ಕೇವಲ ಕಾನೂನು ಸುವ್ಯವಸ್ಥೆ್ ಪ್ರಶದರ‍್ನೆ ಎಂದು ನಿರ್ಲಿಪ್ತರಾಗಿರಬೇಕೇ ? ಉತ್ತರ ನಮ್ಮೊಳಗೇ ಇರಲು ಸಾಧ್ಯ. 

Previous Post

ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇ ಕಾಮಗಾರಿ ಪರಿಶೀಲಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

Next Post

ಬಾನದಾರಿಯಲ್ಲಿ ನಾನು ಹೊಸ ಸ್ಕಿಲ್ ಕಲಿಯೋಕೆ ಅವಕಾಶ ಸಿಕ್ಕಿದೆ

Related Posts

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ
Top Story

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ

by ನಾ ದಿವಾಕರ
January 18, 2026
0

ನಾ ದಿವಾಕರ   (ಸಂಗಾತಿ ಗುರುರಾಜ ದೇಸಾಯಿ ಅವರ ಕಿರು ಕಾದಂಬರಿಯ ಪರಿಚಯಾತ್ಮಕ ಲೇಖನ )  ಬದಲಾದ ಭಾರತದಲ್ಲಿ ಸಾಂಸ್ಕೃತಿಕ ರಾಜಕಾರಣ ಬೇರೂರುತ್ತಿರುವ ಹೊತ್ತಿನಲ್ಲಿ, ಧರ್ಮನಿರಪೇಕ್ಷತೆಯ ಮೌಲ್ಯ...

Read moreDetails
ವೈವಿಧ್ಯಮಯ ವಿಷಯಗಳ ಭಂಡಾರ -ʼ ಗೊನೆ ʼ

ವೈವಿಧ್ಯಮಯ ವಿಷಯಗಳ ಭಂಡಾರ -ʼ ಗೊನೆ ʼ

January 17, 2026
ಕನ್ನಡದ ವಾತಾವರಣ ನಿರ್ಮಾಣ ಮಾಡುವುದು ಕನ್ನಡಿಗರ ಜವಾಬ್ದಾರಿ : ಸಿಎಂ ಸಿದ್ದರಾಮಯ್ಯ

ಕನ್ನಡದ ವಾತಾವರಣ ನಿರ್ಮಾಣ ಮಾಡುವುದು ಕನ್ನಡಿಗರ ಜವಾಬ್ದಾರಿ : ಸಿಎಂ ಸಿದ್ದರಾಮಯ್ಯ

January 16, 2026
ಅಮೆರಿಕ ಮಣಿಸೋಕೆ ಸಿದ್ಧವಾದ ಭಾರತದ ಯುವ ಪಡೆ : ವೈಭವ್‌ ಮೇಲೆ ಹೆಚ್ಚಿದ ನಿರೀಕ್ಷೆ

ಅಮೆರಿಕ ಮಣಿಸೋಕೆ ಸಿದ್ಧವಾದ ಭಾರತದ ಯುವ ಪಡೆ : ವೈಭವ್‌ ಮೇಲೆ ಹೆಚ್ಚಿದ ನಿರೀಕ್ಷೆ

January 15, 2026
ಸುರಂಗ ಮಾರ್ಗದಿಂದ ಲಾಲ್ ಬಾಗ್ ಗೆ ಯಾವುದೇ ತೊಂದರೆ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಸುರಂಗ ಮಾರ್ಗದಿಂದ ಲಾಲ್ ಬಾಗ್ ಗೆ ಯಾವುದೇ ತೊಂದರೆ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

January 14, 2026
Next Post
ಬಾನದಾರಿಯಲ್ಲಿ ನಾನು ಹೊಸ ಸ್ಕಿಲ್ ಕಲಿಯೋಕೆ ಅವಕಾಶ ಸಿಕ್ಕಿದೆ

ಬಾನದಾರಿಯಲ್ಲಿ ನಾನು ಹೊಸ ಸ್ಕಿಲ್ ಕಲಿಯೋಕೆ ಅವಕಾಶ ಸಿಕ್ಕಿದೆ

Please login to join discussion

Recent News

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ
Top Story

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ

by ನಾ ದಿವಾಕರ
January 18, 2026
Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!
Top Story

Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!

by ಪ್ರತಿಧ್ವನಿ
January 18, 2026
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಸಂತೋಷ್‌ ಲಾಡ್‌

ಗಿಗ್‌ ಕಾರ್ಮಿಕರ ಸುರಕ್ಷತೆಯ ಬಗ್ಗೆ ಸಚಿವ ಲಾಡ್‌ ಕಳವಳ : 10 ನಿಮಿಷದ ಡೆಲಿವರಿ ಸ್ಥಗಿತದ ಕಾರ್ಮಿಕರ ಬೇಡಿಕೆಗೆ ಸ್ಪಂದನೆ

January 18, 2026
“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

January 18, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada