ಕಾಂಗ್ರೆಸ್ ಸೇರ್ಪಡೆ ಆದ ಬಳಿಕ ಸ್ವಕ್ಷೇತ್ರ ಚನ್ನಪಟ್ಟಣದ ಕಾಂಗ್ರೆಸ್ ಕಚೇರಿಗೆ ಯೋಗೇಶ್ವರ್ ಭೇಟಿ ನಿಡಿದ್ದಾರೆ. ಕಾಂಗ್ರೆಸ್ ಪಕ್ಷ ಸೇರಿದ ಬಳಿಕ ಮೊದಲ ಬಾರಿಗೆ ಭೇಟಿ ನಿಡಿದ್ದು, ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಕೂಡ ಉಪಸ್ಥಿತರಿದ್ದಾರೆ. ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದು, ಯೋಗೇಶ್ವರ್‌ಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ. ಆದರೆ ಚನ್ನಪಟ್ಟಣದಲ್ಲಿ ಕೆಲವರು ಯೋಗೇಶ್ವ ರ್ ಕಾಂಗ್ರೆಸ್ ಸೇರ್ಪಡೆಯನ್ನು ವಿರೋಧಿಸಿದ್ದು, ಪಕ್ಷವನ್ನು ನಾವು ಕಟ್ಟಿದ್ದೇವೆ, ಈಗ ಬಂದು ಪಕ್ಷ ಸೇರಿದರೆ ನಮ್ಮ ಕಥೆ ಏನು..? ನಮ್ಮನ್ನು ಗೌರವಿಸ್ತಾರಾ..? ಅನ್ನೋ ಪ್ರಶ್ನೆ ಎತ್ತಿದ್ದಾರೆ.
ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸಚಿವ ಚೆಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷದವರೇ ಆಗಿದ್ದಾರೆ. ಅವರನ್ನು ನಾವು ಸ್ವಾಗತಿಸುತ್ತೇವೆ, ಅವರು ಕಾಂಗ್ರೆಸ್‌ನವರೇ ಆಗಿದ್ದು, ಪಕ್ಷಕ್ಕೆ ಅವರು ಹೊಸಬರೇನಲ್ಲ ಎಂದಿದ್ದಾರೆ. ಇನ್ನು ಇದೇ ವಿಚಾರವಾಗಿ ಕೊಪ್ಪಳದಲ್ಲಿ KKRDB ಅಧ್ಯಕ್ಷ ಅಜಯ್ ಸಿಂಗ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಿದ್ದಾಂತ ಒಪ್ಪಿಕೊಂಡು ಯೋಗೇಶ್ವರ್ ಪಕ್ಷಕ್ಕೆ ಬಂದಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಸಿಎಂ ಸಿದ್ದರಾಮಯ್ಯ ಅಂದ್ರೆ ಪ್ರತಿಪಕ್ಷದವರಿಗೆ ಭಯ. ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಗೆಲ್ಲುತ್ತೇವೆ ಎಂದಿದ್ದಾರೆ.
ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್.ಸಿ ಮಹದೇವಪ್ಪ ಮಹದೇವಪ್ಪ ಮಾತನಾಡಿ, ಯೋಗೇಶ್ವರ್ ನಮ್ಮ ಪಕ್ಷಕ್ಕೆ ಬಂದಿರುವುದು ಸಂತೋಷದ ವಿಚಾರ. ನಮ್ಮ ಪಕ್ಷದಲ್ಲೂ ಬಹಳಷ್ಟು ಜನ ಅಭ್ಯರ್ಥಿಗಳಿದ್ದರು. ಆದರೂ ಬೇರೆ ಪಕ್ಷದಿಂದ ಬಂದ ಅಭ್ಯರ್ಥಿಗೆ ನಾವು ಟಿಕೆಟ್ ಕೊಟ್ಟಿದ್ದೇವೆ ಎಂದರೇ ಪಕ್ಷದ ಉದಾರತನ ಎಂತಹದ್ದು ಎಂಬುದನ್ನ ಗಮನಿಸಿ ಎಂದಿರುವ ಸಚಿವರು, ಉಪಚುನಾವಣೆ ನಡೆಯುತ್ತಿರುವ ಮೂರು ಕ್ಷೇತ್ರಗಳಲ್ಲೂ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊಪ್ಪಳದಲ್ಲಿ ಆರೋಗ್ಯ ಸಚಿವ ದಿನೇಶ ಗುಂಡುರಾವ್ ಮಾತನಾಡಿ, ಸಿ ಪಿ ಯೋಗೀಶ್ವರ ಕಾಂಗ್ರೆಸ್ ಪಕ್ಷದವರು, ಅವರು ಮತ್ತೆ ಪಕ್ಷಕ್ಕೆ ಬಂದಿದ್ದಾರೆ. ಸಂತೋಷವಾಗುತ್ತದೆ. ಅವರು ಅಭ್ಯರ್ಥಿ ಆಗುತ್ತಾರೆ. ನಮ್ಮ ಉಪಮುಖ್ಯಮಂತ್ರಿಗಳ ಜವಾಬ್ದಾರಿ ಕ್ಷೇತ್ರ. ನಾವು ಆಪರೇಷನ ಕಮಲ ಮಾಡಿಲ್ಲ. ಅವರೇ ಕಾಂಗ್ರೆಸ್ ಪಕ್ಷ ಒಪ್ಪಿಕೊಂಡು ಬಂದಿದ್ದಾರೆ. ಮೂರು ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ಬಿಜೆಪಿಯವರು ಮಾಡಬಾರದು ಮಾಡಿದ್ದಾರೆ. ಅವರು ನಮಗೆ ಪಾಠ ಮಾಡಬೇಕಾಗಿಲ್ಲ ಎಂದು ಚಾಟಿ ಬೀಸಿದ್ದಾರೆ.
ಚನ್ನ ಪಟ್ಟಣದಲ್ಲಿ ವಿರೋಧದ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿದ್ದು, ಶೇಕಡ 90 ರಷ್ಟು ಜನ ಯೋಗೇಶ್ವರ್ ಬೆಂಬಲಿಸ್ತಾರೆ. ಶೇಕಡ 10ರಷ್ಟು ಜನರು ಮಾತ್ರ ವಿರೋಧ ಮಾಡ್ತಾರೆ. ಆದರೆ ಕಾಂಗ್ರೆಸ್ ಪಕ್ಷದ ಒಳಗಿನ ವಿರೋಧವನ್ನು ತಣಿಸುವ ಕೆಲಸ ಮಾಡ್ತೇವೆ ಎಂದಿದ್ದಾರೆ.