ತಮಿಳುನಾಡು ಮೂಲದ ನಿರ್ಮಲಾ ಸೀತಾರಾಮನ್ ಕರ್ನಾಟಕ ವಿಧಾನಸಭೆಯಿಂದ ಸತತ ಎರಡು ಬಾರಿ ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಿದ್ದಾರೆ. ಯಾವುದೇ ಒಂದು ರಾಜ್ಯದ ಸಂಸದರು ಮಂತ್ರಿಗಳಾಗಿ ಕಾರ್ಯ ನಿರ್ವಹಣೆ ಮಾಡುವಾಗ ಕೆಲವೊಂದು ಯೋಜನೆಗಳನ್ನು ಜಾರಿ ಮಾಡುವ ಮೂಲಕ ಅವರ ಹೆಸರಾಗಿ ಆ ಯೋಜನೆಗಳನ್ನು ನೋಡಿಕೊಳ್ತಾರೆ. ಒಬ್ಬರು ಅಧಿಕಾರದಲ್ಲಿ ಇದ್ದಾಗ ತಮ್ಮ ಕ್ಷೇತ್ರ, ತಾವು ಆಯ್ಕೆಯಾಗಿ ಬಂದ ರಾಜ್ಯಕ್ಕೆ ಕೊಂಚ ಹೆಚ್ಚಿನ ಆದ್ಯತೆಯನ್ನು ಕೊಟ್ಟಿರುವ ಸಂಗತಿಗಳು ನೂರಾರು ಇವೆ. ಆದರೆ ತಮಿಳುನಾಡಿಗೂ ಕರ್ನಾಟಕಕ್ಕೂ ಆತ್ಮೀಯ ಸಂಬಂಧವಿಲ್ಲ. ತಮಿಳುನಾಡಿಲ್ಲ ಬಿಜೆಪಿ ಅಭ್ಯರ್ಥಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸದರಾಗುವುದು ಇತಿಹಾಸಲದಲ್ಲಿ ಇಲ್ಲೀವರೆಗೂ ಆಗಿಲ್ಲ. ನಿರ್ಮಲಾ ಸೀತಾರಾಮನ್ ಅವರನ್ನು ಸಂಸದರಾಗಿ ಮಾಡುವ ಉದ್ದೇಶದಿಂದ ಕರ್ನಾಟಕ ವಿಧಾನಸಭೆಯಿಂದ ಆಯ್ಕೆ ಮಾಡಲಾಗ್ತಿದೆ. ಸತತ ಎರಡು ಬಾರಿ ರಾಜ್ಯಸಭೆಗೆ ಆಯ್ಕೆ ಆಗಿದ್ದರೂ ನಿರ್ಮಲಾ ಸೀತಾರಾಮನ್ ಅವರಿಗೆ ಕರುನಾಡಿನ ಬಗ್ಗೆ ಕಿಂಚಿತ್ತು ಆತ್ಮೀಯ ಭಾವನೆ ಇಲ್ಲ ಎನ್ನುವುದನ್ನು ಸಾಬೀತು ಮಾಡಿದ್ದಾರೆ.
ಬರದ ನಾಡು ಕೋಟೆನಾಡು ಚಿತ್ರದುರ್ಗಕ್ಕೆ 5300ಕೋಟಿ..!
ಕೇಂದ್ರದ ಬಜೆಟ್ನಲ್ಲಿ ಎದ್ದು ಕಾಣಿಸಿದ ಒಂದೇ ಒಂದು ಯೋಜನೆ ಅಂದ್ರೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ 5300 ಕೋಟಿ ಘೋಷಣೆ ಮಾಡಿರುವುದು ಮಾತ್ರ. ಕೇಂದ್ರ ಸರ್ಕಾರದ ನಿರ್ಧಾರವನ್ನ ರೈತರು, ರಾಜಕೀಯ ಮುಖಂಡರು ಸ್ವಾಗತಿಸಿದ್ದಾರೆ. ಮಳೆ, ಬೆಳೆಯಿಲ್ಲದೆ ಬರಗಾಲದಲ್ಲೇ ಜೀವನ ಮಾಡ್ತಿದ್ದ ಚಿತ್ರದುರ್ಗದ ಜನರಿಗೆ ನೀರಾವರಿ ಯೋಜನೆಗಳು ಯಾವುದೂ ಇಲ್ಲ. ಚಿತ್ರದುರ್ಗದ ರೈತರ ಬದುಕು ಅಯೋಮಯ ಎನ್ನುವಂತಾಗಿತ್ತು. ಹೀಗಾಗಿಯೇ ಕಳೆದ 3 ದಶಕಗಳಿಂದ ಹೋರಾಟ ನಡೆಯುತ್ತಿತ್ತು. 3 ದಶಕಗಳ ಹೋರಾಟದ ಫಲ ಭದ್ರಾ ಮೇಲ್ದಂಡೆ ಯೋಜನೆ ಘೋಷಣೆ ಎನ್ನಲಾಗ್ತಿದೆ. ಭದ್ರಾ ಮೇಲ್ದಂಡೆ ಯೋಜನೆ ಸಂಪೂರ್ಣ ಅನುಷ್ಟಾಮನ ಆದರೆ ಬರ ಪೀಡಿತ ಪ್ರದೇಶದ ಜನರ ಬಾಳು ಹಸನಾಗುವ ಸಂತಸದಲ್ಲಿ ಚಿತ್ರದುರ್ಗದ ಜನರಿದ್ದಾರೆ. ಮೋದಿ ಸರ್ಕಾರ ಕರ್ನಾಟಕಕ್ಕೆ ಘೋಷಣೆ ಮಾಡಿರುವ ಇದೊಂದೇ ಯೋಜನೆಯನ್ನು ಹಿಡಿದುಕೊಂಡು ಭಾರತೀಯ ಜನತಾ ಪಾರ್ಟಿ ಕೇಂದ್ರ ಸರ್ಕಾರವನ್ನು ಸಮರ್ಥನೆ ಮಾಡಿಕೊಳ್ತಿದೆ.

ಧಾರವಾಡದಿಂದಲೇ ರವಾನೆ ಆಗಿತ್ತು ಕಾಟನ್ ಸೀರೆ..!
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡನೆ ವೇಳೆ ಉಟ್ಟಿದ್ದ ಸೀರೆ ನಮ್ಮ ಕರ್ನಾಟಕದ ಧಾರವಾಡದ್ದು ಎನ್ನುವುದು ಹೆಮ್ಮೆಯ ಸಂಗತಿ. ಸಾಮಾನ್ಯ ಒಂದು ಸೀರೆಯಂತೆ ಉಟ್ಟು ಬಂದಿದ್ದ ಸೀರೆ ಸಾಮಾನ್ಯ ಜನರು ಧರಿಸುವಂತಹದ್ದು ಅಲ್ಲ. ಆ ಸೀತೆಯ ಮೇಲೆ ಕಸೂತಿ ಕೆಲಸ ಮಾಡಲಾಗಿತ್ತು. ಸಾಂಪ್ರದಾಯಿಕ ಕಸೂತಿ ಕಲೆಯ ಚಿತ್ರಗಳನ್ನು ಬಿಡಿಸಿದ್ದು ಧಾರವಾಡದ ನಾರಾಯಣಪುರದಲ್ಲಿರುವ ಆರತಿ ಕ್ರಾಫ್ಟ್ ಸಂಸ್ಥೆ. ನಿರ್ಮಲಾ ಸೀತಾರಾಮನ್ ಅವರು ಧರಿಸಿದ್ದ ಸೀರೆಯ ಮೇಲೆ ಇದ್ದ ಕಸೂತಿ ಕಲೆ ಧಾರವಾಡ ಜಿಲ್ಲೆಯ ನವಲಗುಂದ ಕಸೂತಿ ಕಲೆ. ಕೈಮಗ್ಗದಿಂದ ತಯಾರಿಸಿದ್ದ ಇಳಕಲ್ ರೇಷ್ಮೆ ಸೀರೆಯ ಮೇಲೆ ಆರತಿ ಕ್ರಾಫ್ಟ್ನ ಮಹಿಳ ಉದ್ಯೋಗಿಗಳು ತೇರು, ಗೋಪುರ, ನವಿಲು, ಕಮಲದ ಚಿತ್ರಗಳನ್ನು ಕಸೂತಿ ಹಾಕಿದ್ದರು. ಕೈಮಗ್ಗ ಉದ್ಯಮಕ್ಕೆ ಪ್ರೋತ್ಸಾಹಿಸುವ ಮತ್ತು ಸ್ವಯಂ ಉದ್ಯೋಗ ನಿರತ ಮಹಿಳೆಯರನ್ನು ಬೆನ್ನು ತಟ್ಟುವ ಉದ್ದೇಶದಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರಿಗೆ ಹೇಳಿ ಸೀರೆಯನ್ನು ತರಿಸಿಕೊಂಡಿದ್ದಾರೆ.
ಬರೀ ರಾಜ್ಯಸಭೆಗೆ ಗೆಲುವು, ಸೀರೆ ಕೊಂಡರೆ ಸಾಕೇ..?
ಕೇಂದ್ರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಅವರು ನಮ್ಮ ಕರ್ನಾಟಕದಿಂದ ಆಯ್ಕೆ ಆಗಿದ್ದಾರೆ ಎನ್ನುವುದು ಸಂತೋಷದ ವಿಚಾರವೇ ಸರಿ. ಇನ್ನು ಧಾರವಾಡದ ಕಸೂತಿ ಕಲೆಯ ಮೇಲೆ ಆಕರ್ಷಿತರಾಗಿ ಧಾರವಾಡದಿಂದ ಇಳಕಲ್ ರೇಷ್ಮೆ ಸೀರೆಗೆ ಕಸೂತಿ ಮಾಡಿಸುಕೊಂದು ಉಡುತ್ತಾರೆ ಎನ್ನುವುದು ನಮ್ಮ ಕರ್ನಾಟಕದ ಹೆಮ್ಮೆಯ ಸಂಗತಿ. ಕನ್ನಡಿರಾಗಿ ನಾವು ನಿರ್ಮಲಾ ಸೀತಾರಾಮನ್ ಬಗ್ಗೆ ಇಷ್ಟೊಂದು ಹೆಮ್ಮೆ ವ್ಯಕ್ತಪಡಿಸುವಾಗ ನಿರ್ಮಲಾ ಅವರಿಗೂ ಕನ್ನಡಿಗರ ಮೇಲೆ ಕಿಂಚಿತ್ತು ವಿಶ್ವಾಸ ಇರಬಾರದೇ..? ಎನ್ನುವುದು ಕನ್ನಡಿಗರ ಪ್ರಶ್ನೆ. ಭದ್ರಾ ಮೇಲ್ದಂಡೆ ಯೋಜನೆ ಒಂದನ್ನು ಬಿಟ್ಟರೆ ರಾಜ್ಯಕ್ಕೆ ಒಂದೇ ಒಂದು ಯೋಜನೆಯನ್ನೂ ಕೊಟ್ಟಿಲ್ಲ. ಬೆಂಗಳೂರಿಗೂ ಯಾವುದೇ ಯೋಜನೆ ಬಂದಿಲ್ಲ. ಅಂದರೆ ಕೇಂದ್ರ ಸರ್ಕಾರದ ಬಳಿ ಹಣ ಇಲ್ಲವೋ..? ಅಥವಾ ಬಜೆಟ್ ಎಂದರೆ ಇದೇ ರೀತಿ ಇರಬೇಕು. ಯೋಜನೆಗಳನ್ನು ರಾಜ್ಯ ಸರ್ಕಾರವೇ ಮಾಡಬೇಕು ಅನ್ನೋ ಕಾರಣಕ್ಕೆ ಹೀಗೆ ಮಾಡಿದ್ದಾರೋ ಎನ್ನುವುದನ್ನ ಜನರೇ ನಿರ್ಧಾರ ಮಾಡಿಕೊಳ್ಳಬೇಕಿದೆ.