2022 ರಲ್ಲಿ ಖಾಸಗಿ ವಾಹಿನಿಯೊಂದಕ್ಕೆ ಬಹುಭಾಷಾ ನಟಿ ಸಾಯಿ ಪಲ್ಲವಿ ನೀಡಿದ್ದ ಸಂದರ್ಶನವೊಂದರ ತುಣುಕು ಮತ್ತೆ ಮುನ್ನಲೆಗೆ ಬಂದಿದ್ದು, ವಿವಾದವನ್ನು ಹುಟ್ಟು ಹಾಕಿದೆ.
ಬಲಪಂಥೀಯ ನೆಟ್ಟಿಗರು ನಟಿಯ ಚಿತ್ರಗಳ ವಿರುದ್ಧ ಬಾಯ್ಕಾಟ್ ಕರೆ ನೀಡಿದ್ದು, ಹಿಂದೂ ವಿರೋಧಿ ನಟಿ ರಾಮಾಯಣ ಚಿತ್ರದಲ್ಲಿ ಸೀತಾ ಮಾತೆಯ ಪಾತ್ರದಲ್ಲಿ ನಟಿಸಬಾರದೆಂಬ ಕೂಗು ಕೇಳಿ ಬಂದಿದೆ. ಅಲ್ಲದೆ, ನಟಿ ಅಭಿನಯಿಸಿದ ಭಾರತೀಯ ಸೈನಿಕರ ಕುರಿತಾದ ಚಿತ್ರ ʼಅಮರನ್ʼ ಬಹಿಷ್ಕಾರಕ್ಕೂ ಆನ್‌ಲೈನ್ ನಲ್ಲಿ ಅಭಿಯಾನ ಆರಂಭವಾಗಿದೆ.
ಈ ಹಿಂದೆ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಕುರಿತು ಮಾತನಾಡಿದ್ದ ನಟಿ, ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ವಲಸೆಗೆ ಕಾರಣವಾದ ಭಯೋತ್ಪಾದನೆ ಮತ್ತು ಗೋ ಸಾಗಾಟಗಾರರು ಎಂಬ ಅನುಮಾನದಲ್ಲಿ ಮುಸ್ಲಿಮರ ಮೇಲೆ ನಡೆಯುವ ಹಲ್ಲೆಗಳೂ ತಪ್ಪು ಎಂದು ಹೇಳಿದ್ದರು. ಗೋಸಾಗಣಿಕೆದಾರನೊಬ್ಬ ಮುಸ್ಲಿಂ ಎಂಬ ಕಾರಣಕ್ಕೆ ಆತನ ಹತ್ಯೆ ನಡೆದ ಘಟನೆಯನ್ನು ಉಲ್ಲೇಖಿಸಿದ್ದ ನಟಿ ಕಾಶ್ಮೀರದಲ್ಲಿ ನಡೆದಿರುವುದಕ್ಕೂ ಈ ಘಟನೆಗೂ ಏನು ವ್ಯತ್ಯಾಸವಿದೆ? ಎಲ್ಲಾ ರೀತಿಯ ಹಿಂಸೆಯೂ ತಪ್ಪು ಎಂದು ಹೇಳಿದ್ದರು.
ಮಾತ್ರವಲ್ಲದೆ, ಪಾಕಿಸ್ತಾನ ಸೇನೆಯನ್ನು ಭಾರತೀಯರು ಭಯೋತ್ಪಾದಕರು ಎಂದು ಭಾವಿಸುವ ಹಾಗೆ, ಭಾರತೀಯ ಸೇನೆಯನ್ನು ಪಾಕಿಸ್ತಾನಿಗಳು ಉಗ್ರರು ಎಂದು ಭಾವಿಸುತ್ತಾರೆ. ಇದೆಲ್ಲಾ ದೃಷ್ಟಿಕೋನದ ಬದಲಾವಣೆ ಎಂದು ನಟಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬಗ್ಗೆ ಭಜರಂಗದಳ ಮುಖಂಡರೊಬ್ಬರು ನಟಿಯ ವಿರುದ್ಧ ದೂರು ಕೂಡಾ ನೀಡಿದ್ದರು.
ನಂತರ ಸ್ಪಷ್ಟನೆ ನೀಡಿದ್ದ ನಟಿ ಸಾಯಿ ಪಲ್ಲವಿ, ಯಾರನ್ನೂ ನೋಯಿಸುವ ಉದ್ದೇಶದಲ್ಲಿ ನಾನು ಹೇಳಿರಲಿಲ್ಲ. ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ. ಎಲ್ಲಾ ರೀತಿಯ ಹಿಂಸೆಯೂ ತಪ್ಪೇ ಎಂದು ಹೇಳಲು ನಾನು ಬಯಸಿದ್ದೆ ಎಂದು ಹೇಳಿದ್ದರು.
ಅದಾಗಿ ಎರಡು ವರ್ಷಗಳ ಬಳಿಕ ಇದೀಗ ಮತ್ತೆ ವಿವಾದಿತ ವಿಡಿಯೋ ತುಣುಕು ಮತ್ತೆ ಮುನ್ನಲೆಗೆ ಬಂದಿದ್ದು, ಸಾಯಿ ಪಲ್ಲವಿ ಅವರ ಚಿತ್ರಗಳನ್ನು ಬಹಿಷ್ಕರಿಸಬೇಕೆಂದು ಟ್ವಿಟರ್ ಬಳಕೆದಾರರು ಮತ್ತೊಮ್ಮೆ ಆನ್‌ಲೈನ್ ಅಭಿಯಾನವನ್ನು ಆರಂಭಿಸಿದ್ದಾರೆ.
ಶಿವಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ತಮಿಳು ಚಿತ್ರ ʼಅಮರನ್ʼ ಅಕ್ಟೋಬರ್ 31 ಕ್ಕೆ ಬಿಡುಗಡೆಯಾಗಲಿದ್ದು, ಈ ಚಿತ್ರವು ಭಾರತೀಯ ಸೈನಿಕರ ಕುರಿತ ಕಥೆಯನ್ನು ಹೊಂದಿದೆ. ಈ ಚಿತ್ರದ ಪ್ರಮೋಷನ್ ಭಾಗವಾಗಿ ನಟಿ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೂ ಭೇಟಿ ನೀಡಿದ್ದಾರೆ. ಅಲ್ಲದೆ, ದಂಗಲ್ ಖ್ಯಾತಿಯ ನಿತೀಶ್ ತಿವಾರಿ ನಿರ್ದೇಶನದ ʼರಾಮಾಯಣʼ ಚಿತ್ರದಲ್ಲಿ ಸಾಯಿ ಪಲ್ಲವಿ ಅವರು ಸೀತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಚಿತ್ರದಿಂದ ನಟಿಯನ್ನು ಕೈಬಿಡಬೇಕೆಂದು ನೆಟ್ಟಿಗರ ಆಗ್ರಹಿಸಿದ್ದಾರೆ. ಈ ಚಿತ್ರದಲ್ಲಿ ರಣಬೀರ್ ಕಪೂರ್, ಯಶ್ ಕೂಡಾ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆಂದು ಹೇಳಲಾಗಿದೆ.