
ಸಂವಿಧಾನ ಬದಲಾವಣೆ ಆಗುತ್ತೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ ಅನ್ನೋದು ರಾಷ್ಟ್ರ ರಾಜಕಾರಣದಲ್ಲಿ ತಲ್ಲಣ ಮೂಡಿಸಿದೆ. ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಡಿ.ಕೆ ಶಿವಕುಮಾರ್ ಮಾತಿಗೆ ಆಕ್ರೋಶ ವ್ಯಕ್ತವಾಗ್ತಿದೆ. ನ್ಯೂಸ್18 ಇಂಡಿಯಾ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಗುತ್ತಿಗೆಯಲ್ಲಿ ಮುಸ್ಲಿಂ ಮೀಸಲಾತಿ ಕುರಿತಾದ ಪ್ರಶ್ನೆಗೆ ಉತ್ತರ ಕೊಡುವ ವೇಳೆ ಮುಂದೆ ಸಂವಿಧಾನ ಬದಲಾಗುತ್ತೆ. ಕೆಲ ತೀರ್ಪುಗಳಿಂದ ಸಂವಿಧಾನ ತಿದ್ದುಪಡಿ ಕೂಡ ಆಗುತ್ತೆ ಎಂದಿದ್ರು. ಈ ಹೇಳಿಕೆ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಿಪಕ್ಷಗಳು ಕೂಡ ಆಕ್ರೋಶ ಹೊರ ಹಾಕಿವೆ.

ಡಿ.ಕೆ ಶಿವಕುಮಾರ್ ಸಂವಿಧಾನ ಬದಲಾವಣೆ ಹೇಳಿಕೆ ಬಗ್ಗೆ ಸಂಸತ್‌ನ ಉಭಯ ಕಲಾಪಗಳಲ್ಲೂ ಕೋಲಾಹಲ ಸೃಷ್ಟಿಸಿದೆ. ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಬಿಜೆಪಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿತು. ಸಚಿವ ಕಿರಣ್ ರಿಜಿಜು ಮಾತನಾಡಿ, ಕರ್ನಾಟಕ DCM ಡಿ.ಕೆ ಶಿವಕುಮಾರ್ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. ಅವರಿಂದ ಕೂಡಲೇ ರಾಜೀನಾಮೆ ಪಡೆಯಬೇಕು ಎಂದು ಆಗ್ರಹ ಮಾಡಿದ್ರು. ಇದಕ್ಕೆ ಸದನದಲ್ಲೇ ಸ್ಪಷ್ಟನೆ ನೀಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂವಿಧಾನವನ್ನ ಯಾರಿಂದಲೂ ಬದಲಿಸಲು ಆಗಲ್ಲ. ನಾವೆಲ್ಲಾ ಸಂವಿಧಾನವನ್ನ ಗೌರವಿಸ್ತೇವೆ ಅಂದ್ರು.

ಸಂವಿಧಾನ ಬದಲಾಯಿಸುತ್ತೇವೆ ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆಗೆ ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ವಿಜಯೇಂದ್ರ, ಕಾಂಗ್ರೆಸ್ ಓಲೈಕೆ ರಾಜಕೀಯ ಮಾಡುತ್ತಿದೆ. ಡಿಸಿಎಂ ಡಿಕೆಶಿ ಹೇಳಿಕೆಯಿಂದ ಕಾಂಗ್ರೆಸ್ ಬಂಡವಾಳ ಬಯಲಾಗಿದೆ ಅಂದ್ರು. ಇನ್ನು ವಿಪಕ್ಷ ನಾಯಕರ ಆರ್. ಅಶೋಕ್ ಕೂಡ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದು, ಕಾಂಗ್ರೆಸ್ ಬ್ರಿಟಿಷರ ಪಳೆಯುಳಿಕೆ. ಇನ್ಮುಂದೆ ಹಿಂದೂಗಳು ಕಾಂಗ್ರೆಸ್ಗೆ ಮತ ಹಾಕಲ್ಲ. ಇವಾಗ ಸಂವಿಧಾನದ ಬಗ್ಗೆ ಮಾತಾಡೋರು ಉತ್ತರ ಕೊಡಲಿ ಎಂದಿದ್ದಾರೆ.
ಸಂವಿಧಾನ ಬದಲಾವಣೆಗೆ ಆಗುತ್ತೆ ಎಂದಿದ್ದ ಹೇಳಿಕೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟನೆ ಪಡೆದಿದೆ. ಡಿಸಿಎಂ ಡಿ.ಕೆ ಶಿವಕುಮಾರ್ಗೆ ಕರೆ ಮಾಡಿದ ಪಿ.ಚಿದಂಬರಂ, ಡಿಕೆಶಿ ನೀಡಿರುವ ಹೇಳಿಕೆ ಬಗ್ಗೆ ವಿವರಣೆ ಪಡೆದುಕೊಂಡಿದ್ದಾರೆ. ನಾನು ಹಾಗೇ ಹೇಳೇ ಇಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಅಂತ ಚಿದಂಬರಂಗೆ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.

ಸಂವಿಧಾನ ಬದಲಾವಣೆ ಹೇಳಿಕೆ ವಿವಾದ ಸ್ವರೂಪ ಪಡೆದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಬಿಜೆಪಿಯವರು ನನ್ನ ಹೇಳಿಕೆಯನ್ನ ತಿರುಚಿದ್ದಾರೆ ಅಂತ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿಕೆಶಿ, ನಾನು ಸಂವಿಧಾನ ಬದಲಿಸ್ತೇವೆ ಅಂತ ಹೇಳಿಲ್ಲ. ಈ ದೇಶಕ್ಕೆ ಸಂವಿಧಾನ ತಂದಿದ್ದು ನಮ್ಮ ಪಕ್ಷ. ಈ ಸಂಬಂಧ ಕಾನೂನು ಹೋರಾಟ ಮಾಡ್ತೇನೆ ಅಂತ ಡಿ.ಕೆ ಶಿವಕುಮಾರ್ ತಿಳಿಸಿದ್ರು.