2025ರಲ್ಲಿ ಕನ್ನಡ ಚಿತ್ರರಂಗ ಸಾಕಷ್ಟು ಏಳು-ಬೀಳುಗಳನ್ನು ಕಂಡಿದೆ. ವರ್ಷದ ಆರಂಭದಲ್ಲಿ ಹಲವು ಸಿನಿಮಾಗಳು ಕಲೆಕ್ಷನ್‌ನಲ್ಲಿ ನಿರಾಸೆ ಮೂಡಿಸಿದ್ದವು. ಕೆಲವು ಚಿತ್ರಗಳು ಭಾರೀ ಯಶಸ್ಸು ಗಳಿಸಿ ಸಿನಿರಂಗಕ್ಕೆ ಉಸಿರು ನೀಡಿವೆ. ಈ ವರ್ಷದಲ್ಲಿ ಬಿಡುಗಡೆಯಾದ ಪ್ರಮುಖ ಯಶಸ್ವಿ ಸಿನಿಮಾಗಳಲ್ಲಿ ಮತ್ತು ಬಾಕ್ಸ್ ಆಫೀಸ್ ಲೂಟಿಯಲ್ಲಿ ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆ ಕಾಂತಾರ ಚಾಪ್ಟರ್ 1 ವರ್ಷದ ಅತಿದೊಡ್ಡ ಹಿಟ್ ಚಿತ್ರಗಳ ಸಾಲಿಗೆ ಸೇರುತ್ತದೆ. ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸುಮಾರು 800 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸಿ ದಾಖಲೆ ಬರೆದಿದೆ. ಕನ್ನಡ ವರ್ಷನ್ ನೆಟ್ ಕಲೆಕ್ಷನ್ 149.85 ಕೋಟಿ. ಇದು 2025ರ ಅತಿ ಹೆಚ್ಚು ಗಳಿಕೆಯ ಕನ್ನಡ ಚಿತ್ರವಾಗಿರುವುದು ವಿಶೇಷವಾಗಿದೆ.

ಅಶ್ವಿನ್ ಕುಮಾರ್ ನಿರ್ದೇಶನ, ಅನಿಮೇಟೆಡ್ ಚಿತ್ರ ಮಹಾವತಾರ ನರಸಿಂಹ ಈ ಚಿತ್ರವು ಭಾರತದ ಅತಿ ಹೆಚ್ಚು ಗಳಿಕೆಯ ಅನಿಮೇಷನ್ ಚಿತ್ರವಾಗಿ ಹೆಸರು ಮಾಡಿದೆ. ಸುಮಾರು 325 ಕೋಟಿ ಕಲೆಕ್ಷನ್ ಮಾಡಿ ದೊಡ್ಡ ಯಶಸ್ಸು ಕಂಡಿದೆ. ಇನ್ನೂ ನಟ ರಾಜ್ ಬಿ. ಶೆಟ್ಟಿಯವರ ಸು ಫ್ರಂ ಸೋ ಸಣ್ಣ ಬಜೆಟಿನ ಚಿತ್ರವಾಗಿದ್ದರೂ ಕನ್ನಡ ವರ್ಷನ್‌ನಲ್ಲಿ ನೆಟ್ 84.45 ಕೋಟಿ ಗಳಿಸಿ ಅಚ್ಚರಿ ಮೂಡಿಸಿತು. ಕನ್ನಡ ವಿಭಾಗದಲ್ಲಿ ಇದು ಎರಡನೇ ಸ್ಥಾನವನ್ನು ಪಡೆದ ಚಿತ್ರವಾಗಿದೆ. ಅಲ್ಲದೇ ಇದೇ ರಾಜ್ ಬಿ. ಶೆಟ್ಟಿ ಅವರ ಅಭಿನಯದ ‘ರಕ್ಕಸಪುರದೊಳ್’ ಚಿತ್ರದ ಟೀಸರ್ ಬಿಡುಗಡೆಯಾಗಿ ಗಮನ ಸೆಳೆದಿದ್ದು, ಈ ವರ್ಷ ಕನ್ನಡದಲ್ಲಿ ಅತಿ ಬ್ಯೂಸಿ ನಟರಲ್ಲಿ ಒಬ್ಬರಾಗಿದ್ದಾರೆ.

ಇನ್ನು ಚಿತ್ರರಂಗದ ವಿಚಾರದಲ್ಲಿ ನೋಡಿದಾಗ ಹಲವು ಸ್ಟಾರ್ ನಟರ ಸಿನಿಮಾಗಳಿಲ್ಲದೆ ಆರಂಭದಲ್ಲಿ ಸಿನಿಪ್ರೇಮೆಗಳಿಗೆ ನಿರಾಸೆಯಾಗಿತ್ತು. ನಟರಾದ ಶ್ರೀಮುರುಳಿ, ಧ್ರುವ ಸರ್ಜಾ, ಯಶ್, ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಪ್ರಮುಖರ ಸಿನಿಮಾಗಳು ತೆರೆಗೆ ಬರಲಿಲ್ಲ. ಅಲ್ಲದೇ ಜನರ ನಿರೀಕ್ಷೆ ಹೆಚ್ಚಿಸಿದ್ದ ಚಿತ್ರಗಳಾಗಿ ತೆರೆ ಕಂಡ ಕೆಲ ಚಿತ್ರಗಳು ಹೆಸರು ಗಳಿಸಿದವೇ ಹೊರತು ಅಷ್ಟೊಂದು ಯಶಸ್ಸು ಪಡೆಯಲಿಲ್ಲ.

ಆದರೆ ಈ ವರ್ಷಾಂತ್ಯದಲ್ಲಿ ಸಿನಿ ಪ್ರೇಮಿಗಳಿಗೆ ಸ್ವಲ್ಪ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ನಟ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಾಕಷ್ಟು ಸದ್ದು ಮಾಡಿತು. ಬಳಿಕ ಬಿಡುಗಡೆಯಾದ ಕಿಚ್ಚ ಸುದೀಪ್ ನಟನೆಯ ಮಾರ್ಕ್ ಹಾಗೂ ಕರುನಾಡ ಚಕ್ರವರ್ತಿ ನಟ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್.ಬಿ.ಶೆಟ್ಟಿ ನಟಿಸಿರುವ 45 ಚಿತ್ರಗಳು ಸಿನಿ ರಸಿಕರಿಗೆ ಮನರಂಜನೆಯ ರಸದೌತಣ ನೀಡಿದವು.

2025ರ ವರ್ಷದಲ್ಲಿ 200ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾದರೂ, ಹೆಚ್ಚಿನವು ನಿರಾಸೆ ಮೂಡಿಸಿದವು. ಸ್ಟಾರ್ ಚಿತ್ರಗಳು ಹೆಚ್ಚಾಗಿ ವಿಫಲವಾದರೂ, ಕಾಂತಾರ ಚಾಪ್ಟರ್-1 ಮತ್ತು ಸು ಫ್ರಂ ಸೋ ನಂಥ ಚಿತ್ರಗಳು ಉದ್ಯಮಕ್ಕೆ ಆಸರೆಯಾದವು. ಒಟ್ಟಾರೆಯಾಗಿ, ಕನ್ನಡ ಚಿತ್ರಗಳು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದವು. 2025ರ ಆರಂಭದಲ್ಲಿ 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡ ಚಿತ್ರರಂಗದ ನಟ ನಟಿಯರು ಭಾಗವಹಿಸಿರಲಿಲ್ಲ ಆಗ ಡಿಸಿಎಂ ಡಿಕೆ ಶಿವಕುಮಾರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಲಾವಿದರ ವಿರುದ್ದ ತಮ್ಮ ಅಸಮಾಧಾನ ಹೊರಹಾಕಿದ್ದರು. ಅಲ್ಲದೆ ಡಿ.ಕೆ ಶಿವಕುಮಾರ್ ಇದೇ ವೇಳೆ ನಟ್ಟು ಬೋಲ್ಟು ಟೈಟ್ ಮಾಡಿ ರಿಪೇರಿ ಮಾಡಬೇಕೋ ಅಲ್ಲಿ ಮಾಡುತ್ತೇವೆ ಎಂದು ಗರಂ ಆಗಿದ್ದರು. ಈ ಹೇಳಿಕೆಯು ಹಲವು ತಿಂಗಳುಗಳ ಕಾಲ ರಾಜಕೀಯದಲ್ಲಿಯೂ ಸದ್ದು ಮಾಡಿತ್ತು.

ಇನ್ನು ಬಹುಭಾಷಾ ನಟ ಕಮಲ್ ಹಾಸನ್ 2025ರಲ್ಲಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಕನ್ನಡ ಭಾಷೆಯ ಮೂಲ ಕೆದಕಿ, ಕನ್ನಡವು ತಮಿಳಿನಿಂದ ಜನ್ಮ ಪಡೆದಿದೆ ಎಂಬ ಹೇಳಿಕೆ ನೀಡಿದ್ದರು. ಇದು ರಾಜ್ಯಾದ್ಯಂತ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಪ್ರತಿಫಲವಾಗಿ ಕಮಲ್ ಹಾಸನ್ ನಟನೆಯ ಥಗ್ ಲೈಫ್ ಚಿತ್ರದ ಬಿಡುಗಡೆಗೂ ರಾಜ್ಯದಲ್ಲಿ ಕನ್ನಡಪರ ಹೋರಾಟಗಾರರು ಅವಕಾಶ ನೀಡಲಿಲ್ಲ.












