ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಥಾಯ್ಲ್ಯಾಂಡ್ನಲ್ಲಿ ನಿಧನರಾಗಿದ್ದಾರೆ. ಸ್ನೇಹಿತರ ಜೊತೆಗೆ ಥಾಯ್ಲ್ಯಾಂಡ್ಗೆ ಹೋಗಿದ್ದರು ಎನ್ನಲಾಗಿದ್ದು, ಒಂದು ದಿನದ ಹಿಂದೆ ಅಷ್ಟೇ ನಟ ವಿಜಯ್ ರಾಘವೇಂದ್ರ ಕೂಡ ಪತ್ನಿಯನ್ನು ಸೇರಿಕೊಂಡಿದ್ದರು. ಆ ಬಳಿಕ ರಾತ್ರಿ ಮಲಗಿದ್ದ ಸ್ಪಂದನಾ, ಬೆಳಗ್ಗೆ ಮೇಲಕ್ಕೆ ಏಳಲಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಇದ್ಯಾವುದೂ ಸತ್ಯವಲ್ಲ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೇ ಕಾರಣಕ್ಕೆ ಕಾಂಗ್ರೆಸ್ ನಾಯಕ ಹಾಗು ಸ್ಪಂದನಾ ಚಿಕ್ಕಪ್ಪ ಬಿ.ಕೆ ಹರಿಪ್ರಸಾದ್, ಯಾವುದೇ ಗಾಸಿಪ್ಗಳಿಗೆ ಕಿವಿಕೊಡಬೇಡಿ, ಅಲ್ಲಿ ಏನಾಗಿದೆ ಎನ್ನುವುದು ನಮಗೆ ನಿಖರವಾಗಿ ಗೊತ್ತಾಗಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಅದನ್ನು ನಾವೇ ಬಹಿರಂಗ ಮಾಡ್ತೇವೆ. ಹೃದಯಾಘಾತ ಎನ್ನುವುದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ.
ಡಯೆಟ್ ಮಾಡಿದ್ದೇ ಸ್ಪಂದನಾ ಸಾವಿಗೆ ಕಾರಣ ಆಗೋಯ್ತಾ..?
ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಸಾವಿಗೆ ನಿಖರ ಕಾರಣ ಏನು ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ. ಆದರೆ ಸದ್ಯಕ್ಕೆ ಸಿಗುತ್ತಿರುವ ಮಾಹಿತಿ ಪ್ರಕಾರ ಅತಿಯಾದ ಡಯೆಟ್ ಸ್ಪಂದನಾ ಸಾವಿಗೆ ಮುಳುವಾಯ್ತಾ..? ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ದೇಹದ ತೂಕ ಕಡಿಮೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದ ಸ್ಪಂದನಾ, ತೂಕ ಕಡಿಮೆ ಮಾಡಿಕೊಳ್ಳಲು ಡಯೆಟ್ ಮಾಡ್ತಿದ್ದರು ಎನ್ನುವ ವಿಚಾರ ಬಯಲಾಗಿದೆ. ಸಂಪೂರ್ಣವಾಗಿ ಊಟದ ಬದಲಿಗೆ ಕೇವಲ ಹಣ್ಣು, ತರಕಾರಿ ತಿನ್ನುತ್ತ ಜೀವನ ನಡೆಸುತ್ತಿದ್ರು. ಇದರ ಜೊತೆಗೆ ಕಠಿಣ ವ್ಯಾಯಾಮ ಕೂಡ ಮಾಡುತ್ತಿದ್ದರು ಎನ್ನಲಾಗಿದೆ. ಡಯೆಟ್ನಿಂದಾಗಿ ದೇಹದ ತೂಕ ಕೂಡ ಕಡಿಮೆ ಆಗಿತ್ತು. ದೇಹ ಸಣ್ಣಗಾದ ಬಳಿಕವೂ ಡಯೇಟ್ ಮುಂದುವರಿಸಿದ್ದ ಸ್ಪಂದನಾಗೆ ಬ್ಲಡ್ ಪ್ರೆಶರ್ ಕಡಿಮೆ ಆಗಿತ್ತು. ಇದಕ್ಕಾಗಿ ವೈದ್ಯರ ಮಾರ್ಗದರ್ಶನ ಕೂಡ ಪಡೆದಿದ್ರು ಅನ್ನೋ ಆರೋಗ್ಯ ಮಾಹಿತಿ ಹೊರ ಬಿದ್ದಿದೆ.
ಇಂದು ಮಧ್ಯಾಹ್ನ ಕರುನಾಡಿಗೆ ಸ್ಪಂದನಾ ಪಾರ್ಥಿವ ಶರೀರ..!
ಥಾಯ್ಲ್ಯಾಂಡ್ನ ಬ್ಯಾಂಕಾಕ್ನಲ್ಲಿರುವ ಸ್ಪಂದನಾ ಪಾರ್ಥಿವ ಶರೀರ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು, ಬುಧವಾರ ಬೆಳಗ್ಗೆ ಸುಮಾರು 9 ಗಂಟೆ ವಿಮಾನದಲ್ಲಿ ಪಾರ್ಥಿವ ಶರೀರ ತರುವುದಕ್ಕೆ ಕುಟುಂಬಸ್ಥರು ನಿರ್ಧಾರ ಮಾಡಿದ್ದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತರಲಿದ್ದಾರೆ. ಆ ಬಳಿಕ ಬೆಂಗಳೂರಿನ ನಿವಾಸಕ್ಕೆ ತರಲಿದ್ದು, ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲು ನಿರ್ಧಾರ ಮಾಡಲಾಗಿದೆ. ಆ ಬಳಿಕ ಬೆಂಗಳೂರಿನಲ್ಲೇ ಅಂತ್ಯಕ್ರಿಯೆ ಮಾಡಬೇಕಾ..? ಅಥವಾ ಮಂಗಳೂರಿನಲ್ಲಿ ಅಂತ್ಯಕ್ರಿಯೆ ನಡೆಸಬೇಕಾ ಅನ್ನೋ ಬಗ್ಗೆ ಇನ್ನು ಅಂತಿಮ ನಿರ್ಧಾರ ಆಗಿಲ್ಲ. ಬಹುತೇಕ ಬೆಳ್ತಂಗಡಿಗೆ ತೆಗೆದುಕೊಂಡು ಹೋಗುತ್ತಾರೆ ಅನ್ನೋ ಮಾಹಿತಿ ಸದ್ಯಕ್ಕೆ ಸಿಕ್ಕಿದೆ.
ಕೊರೊನಾ ಬಳಿಕ ಜಗತ್ತಿನಲ್ಲಿ ಹೆಚ್ಚಾಗಿದ್ಯಾ ಹೃದಯಾಘಾತ..?
ದೇಶದಲ್ಲಿ 32 ಸಾವಿರ ಜನರ ಮೇಲೆ ಸರ್ವೇ ಮಾಡಲಾಗಿದ್ದು, ದೇಶದ 357 ಜಿಲ್ಲೆಗಳಲ್ಲಿ ಜನರನ್ನು ಆಯ್ಕೆ ಮಾಡಿಕೊಂಡು ಸರ್ವೆ ಮಾಡಲಾಗಿದೆ. ಕೊರೊನಾಗೂ ಮೊದಲು ಹಾಗು ಕೊರೊನಾ ನಂತರ ಹೃದಯಾಘಾತಗಳು ಹೆಚ್ಚಾಗಿದ್ಯಾ..? ಅನ್ನೋ ಬಗ್ಗೆ ಸರ್ವೇ ಮಾಡಲಾಗಿದೆ. ಶೇಕಡ 62ರಷ್ಟು ಮಂದಿ 2 ಡೋಸ್ ವ್ಯಾಕ್ಸಿನ್ ಪಡೆದವರು ಹೃದಯಾಘಾತ ಸಂಭವಿಸಿದೆ. ಇನ್ನು ಶೇಕಡ 11ರಷ್ಟು ಮಂದಿ ಮೊದಲ ಡೋಸ್ ವ್ಯಾಕ್ಸಿನ್ ಪಡೆದವರಿಗೆ ಹೃದಯಾಘಾತ ಆಗಿದ್ದು, ಶೇಕಡ 8ರಷ್ಟು ಮಂದಿ ವ್ಯಾಕ್ಸಿನ್ ಪಡೆಯದವರು ಕೂಡ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಶೇಕಡ 61ರಷ್ಟು ಜನ ಒಮ್ಮೆ ಕೋವಿಡ್ ಸೋಂಕು ಕಂಡವರು ಹೃದಯ ಸಮಸ್ಯೆಗೆ ತುತ್ತಾಗಿದ್ದಾರೆ ಅನ್ನೋದು ಸರ್ವೇ ರಿಪೋರ್ಟ್ನಲ್ಲಿ ಬಯಲಾಗಿದೆ. ಆದರೆ ಕೊರೊನಾ ಬಳಿಕ ಹೃದಯದ ಬಗ್ಗೆ ಗಮನಹರಿಸುವುದು ಸೂಕ್ತ ಎನ್ನುತ್ತಾರೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ ಸಿ.ಎನ್ ಮಂಜುನಾಥ್.
ಕೃಷ್ಣಮಣಿ