ಪಶ್ಚಿಮ ಬಂಗಾಳದ ಪ್ರಬಲ ವಿರೋಧ ಪಕ್ಷ ಭಾರತೀಯ ಜನತಾ ಪರ್ಟಿಯ ಹಣೆಬರಹ ಯಾಕೋ ಸರಿ ಇದ್ದಂತೆ ಕಾಣುತ್ತಿಲ್ಲ. ಒಂದು ಕಡೆ ದೀದಿ ಬಿಜೆಪಿಯಿಂದ ಚುನಾಯಿತರಾದ ಶಾಸಕರನ್ನು ಘರ್ವಾಪ್ಸಿ ಹೆಸರಿನಲ್ಲಿ ಟಿಎಂಸಿಗೆ ಕರೆತರುತ್ತಿದ್ದಾರೆ. ಇತ್ತ ಬಿಜೆಪಿ ಸಂಘಟಿತವಾಗಿ ಹೋರಾಟ ಮಾಡುವ ಬದಲು ತನ್ನ ಆಂತರಿಕ ತಿಕ್ಕಾಟದಿಂದ ಪಕ್ಷದ ಎಲ್ಲಾ ಘಟಕಗಳನ್ನು ವಿಸರ್ಜನೆ ಮಾಡಿದೆ.
ಹೌದು, ಕೆಲವು ವಾರಗಳ ಹಿಂದೆ ವಿವಿಧ ಮೋರ್ಚಾಗಳಿಗೆ ರಚಿಸಲಾಗಿದ್ದ ಪದಾಧಿಕಾರಿಗಳು ಹಾಗೂ ಅಧ್ಯಕ್ಷರುಗಳ ನೇಮಕವಾಗಿತ್ತು. ಆದರೆ, ಮುಖಂಡರುಗಳ ನಡುವಿನ ಬಿನ್ನಾಭಿಪ್ರಾಯದಿಂದಾಗಿ ಮತ್ತು ಆಂತರಿಕ ತಿಕ್ಕಾಟದಿಂದಾಗಿ ಎಲ್ಲಾ ವಿಭಾಗಗಳ ನೇಮಕಾತಿ ರದ್ದುಗೊಳಿಸಿ ಪುನರ್ರಚಿಸುವಂತೆ ಆದೇಶಿಸಿದೆ.
ಈ ಕುರಿತು ಲಿಖಿತ ಆದೇಶ ಹೊರಡಿಸಿರುವ ಪಶ್ಚಿಮ ಬಂಗಾಳ ಬಿಜೆಪಿ ಆದ್ಯಕ್ಷ ಮತ್ತು ಸಂಸದ ಡಾ.ಸುಕಾಂತ ಮಜುಂದಾರ್ ಅವರ ಸೂಚನೆ ಮತ್ತು ಆದೇಶದ ಪ್ರಕಾರ ಎಲ್ಲಾ ವಿಭಾಗದ ಇಲಾಖೆಗಳು ಹಾಗೂ ಮೋರ್ಚಾಗಳಿಗೆ ಹೊಸದಾಗಿ ನೇಮಕಾತಿ ಮಾಡುವವರೆಗೆ ವಿಸರ್ಜಿಸುತ್ತೇವೆ ಎಂದು ತಾವು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಳೆದ ತಿಂಗಳು ನೂತನವಾಗಿ ರಚಿಸಲ್ಪಟ್ಟ ರಾಜ್ಯ ಸಮಿತಿಯನ್ನು ತೀವ್ರವಾಗಿ ಕೇಂದ್ರ ಸಚಿವ ಶಾಂತನೂ ಠಾಕೂರ್ ಹಾಗೂ 10 ಶಾಸಕರು ಇದನ್ನು ವಿರೋಧಿಸಿ ಪಕ್ಷದ ವಾಟ್ಸಪ್ ಗ್ರೂಪ್ ತೊರೆದಿದ್ದರು. ಸಚಿವರ ಆಪ್ತರಾದ ಸಯಂತನ್ ಬಸು ಹಾಗೂ ಜಯ್ಪ್ರಕಾಶ್ ಮಜುಂದಾರ್ ಅವರನ್ನು ಸಮಿತಿ ರಚಿಸುವ ಸಮಯದಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ ಎಂದು ಇಷ್ಟೆಲ್ಲಾ ಅಸಮಾಧಾನಕ್ಕೆ ಕಾರಣವಾಗಿದೆ.
ಹೊಸದಾಗಿ ಪಕ್ಷಕ್ಕೆ ಬರುವವರನ್ನು ನಾವು ಬೇಡ ಎಂದು ಹೇಳುವುದಿಲ್ಲ. ಆದರೆ, ರಾಜ್ಯದಲ್ಲಿ ತಳಮಟ್ಟದಿಂದ ಪಕ್ಷವನ್ನು ಕಟ್ಟಿ ಬೆಳೆಸಿದವರನ್ನು ಕಡೆಗಣಿಸುವುದರಿಂದ ಇಂತಹ ಸಮಸ್ಯೆಗಳು ಉದಭವವಾಗುತ್ತದೆ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.
ಸದ್ಯ ಅಸಮಾಧಾನಗೊಂಡಿರುವ ನಾಯಕರು ಸಭೆ ಸೇರಿ ತಮ್ಮ ಮುಂದಿನ ನಡೆಯನ್ನು ಪ್ರಕಟಿಸುವುದಾಗಿ ಹೇಳಿದ್ದರು. ಆದರೆ, ಅವರ ಹೇಳಿಕೆ ಬೆನ್ನಲ್ಲೇ ಬಿಜೆಪಿಯ ಈ ನಿರ್ಧಾರ ಹೊರ ಬಿದ್ದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಶಾಂತನ್ ಠಾಕೂರ್, ಈ ಸಮಯದಲ್ಲಿ ನಾನು ವಾಟ್ಸಪ್ ಗುಂಪುಗಳನ್ನು ಏಕೆ ತೊರೆದೆ ಎಂದು ಹೇಳಲು ಇಚ್ಚಿಸುವುದಿಲ್ಲ. ಸಮಯ ಸಂದರ್ಭನುಸಾರವಾಗಿ ನನ್ನ ಮುಂದಿನ ಯೋಜನೆಗಳನ್ನು ಆದಷ್ಟು ಬೇಗ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಕೇಂದ್ರ ಸಚಿವರ ಹಾದಿಯಾಗಿ ನಟ ಹಾಗೂ ಶಾಸಕ ಹಿರಾನ್ ಚಟರ್ಜಿ ಕೂಡ ಪಕ್ಷದ ಎಲ್ಲಾ ವಾಟ್ಸಪ್ ಗುಂಪುಗಳನ್ನು ತೊರೆದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಹಿರಾನ್ ರಾಜ್ಯ ಬಿಜೆಪಿ ಘಟಕಕ್ಕೆ ನನ್ನ ಅವಶ್ಯಕತೆ ಇಲ್ಲ ಎಂದು ಕಾಣಿಸುತ್ತಿದೆ. ನನ್ನ ಕ್ಷೇತ್ರದಲ್ಲಿ ನಡೆಯುವ ಪಕ್ಷದ ಕಾರ್ಯಕಮಗಳು ನನ್ನ ಗಮನಕ್ಕೆ ಬಾರದೆ ಮೊದಲೇ ನಿರ್ಧರಿಸಲ್ಪಟ್ಟಿರುತ್ತವೆ ಎಂದು ಕಿಡಿಕಾರಿದ್ದಾರೆ.