ನಾಳೆ ಪ್ರಧಾನಿ ನರೇಂದ್ರ ಮೋದಿ ಚಿಕ್ಕಬಳ್ಳಾಪುರ ಹಾಗು ಬೆಂಗಳೂರಿನಲ್ಲಿ ಸಮಾವೇಶ ಹಮ್ಮಿಕೊಂಡಿದ್ದಾರೆ. ಆದರೆ ನರೇಂದ್ರ ಮೋದಿ ಸ್ವಾಗತಕ್ಕೆ ಕಾಂಗ್ರೆಸ್ ತಯಾರಿ ಮಾಡಿಕೊಂಡಿದೆ. ನಾಳೆ ಚೊಂಬಿನ ಸ್ವಾಗತ ನೀಡುತ್ತೇವೆ ಎಂದು ಮಾಜಿ ಎಂಎಲ್‌ಸಿ ರಮೇಶ್ ಬಾಬು ವ್ಯಂಗ್ಯ ಮಾಡಿದ್ದಾರೆ. ಪತ್ರಿಕೆಗಳಲ್ಲಿ ಚೊಂಬಿನ ಜಾಹೀರಾತು ವಿರೋಧಿಸಿ ಬಿಜೆಪಿಯಿಂದ ದೂರು ಸಲ್ಲಿಕೆ ಮಾಡಿರುವ ವಿಚಾರದಲ್ಲಿ ರಮೇಶ್ ಬಾಬು ಮಾತನಾಡಿದ್ದು, ಸ್ಟೀಲ್ ಚೊಂಬು, ಹಿತ್ತಾಳೆ ಚೊಂಬು ಪಡೆಯದಿದ್ರು ಪರವಾಗಿಲ್ಲ. ಸಿಲ್ವರ್ ಚೊಂಬನ್ನೇ ನಾವು ಕೊಡ್ತೇವೆ. ಅವರಿಗೆ ಚೊಂಬಿನ ಸ್ವಾಗತ ಮಾಡ್ತೇವೆ. ಮೇಕ್ರಿ ಸರ್ಕಲ್ ಬಳಿ ಮೋದಿಗೆ ಚೊಂಬಿನ ಸ್ವಾಗತ ಕೋರುತ್ತೇವೆ. ಆಗಲಾದರೂ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸುತ್ತಾರ ನೋಡೋಣ ಎಂದಿದ್ದಾರೆ.
ಮೋದಿ ಸರ್ಕಾರ ರಾಜ್ಯದ ಜನತೆಗೆ ಚೊಂಬು ನೀಡಿದೆ ಎಂಬ ಕಾಂಗ್ರೆಸ್ ಆರೋಪವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿ ಪ್ರಣಾಳಿಕೆ ಅನ್ನೋದು ಕನ್ನಡಿಯೊಳಗಿನ ಗಂಟು. ಬಿಜೆಪಿ ಪ್ರಣಾಳಿಕೆ ಯಾರಿಗೂ ಸಿಗುವುದಿಲ್ಲ ಎಂದು ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದ್ದಾರೆ. ಯುಪಿಎ ಸರ್ಕಾರ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿದೆ ಎಂದು ಅಧಿಕಾರಕ್ಕೆ ಬಂದ ಮೋದಿ ಸರ್ಕಾರ, ಯಾವುದೇ ವಸ್ತುಗಳ ಬೆಲೆ ಇಳಿಕೆ ಮಾಡಿಲ್ಲ. ಆದಾಯ ಕೂಡ ಯಾರಿಗೂ ಜಾಸ್ತಿ ಆಗಿಲ್ಲ. ಮೋದಿಯವರು ವೋಟು ಕೇಳಲು ಮಾತ್ರ ಬರ್ತಾರೆ ಆದ್ರೆ ಜನರ ಕಷ್ಟ ಕೇಳೋಕೆ ಬರೋದಿಲ್ಲ. ಜಿಎಸ್‌ಟಿ ಮತ್ತು ಟ್ಯಾಕ್ಸ್‌ನಲ್ಲಿ ರಾಜ್ಯಕ್ಕೆ ಮೋದಿ ಅನ್ಯಾಯ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ರೆ ರಾಜ್ಯಕ್ಕೆ ಅನ್ಯಾಯ ಮುಂದುವರಿಯಲಿದೆ. ಬಿಜೆಪಿ ಸರ್ಕಾರ ಬದಲಾವಣೆ ಆಗಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಈ ಬಾರಿಯ ಬಜೆಟ್‌ನಲ್ಲಿ, ಯೋಜನೆ ಹೆಸರಲ್ಲಿ, ಕರ್ನಾಟಕದ ತೆರಿಗೆ ಪಾಲಿನಲ್ಲೂ ವಂಚಿಸಿ, ಚೊಂಬು ಕೊಟ್ಟಿದೆ. 15ನೇ ಹಣಕಾಸು ಯೋಜನೆ ಹೆಸರಿನ ಮೂಲಕ ದೇಶದ ಜನತೆಗೆ ಬಿಜೆಪಿ ಚೊಂಬನ್ನ ಕೊಟ್ಟಿತ್ತು. ಇದೀಗ ಈ ಬಾರಿಯ ಚುನಾವಣೆಯಲ್ಲಿ ಜನರು ಬಿಜೆಪಿ ಹಾಗೂ ಪ್ರಧಾನಿ ಮೋದಿಗೆ ಚೊಂಬನ್ನು ಉಡುಗೊರೆಯಾಗಿ ಕೊಡ್ತಾರೆ ಎಂದು ಸುರ್ಜೇವಾಲ ಭವಿಷ್ಯ ನುಡಿದಿದ್ದಾರೆ.