ರಾಜ್ಯದ ಇಂದು ಸೇರಿದಂತೆ ಐದು ದಿನಗಳ ಕಾಲ ಭಾರಿ ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ ಭಾಗದಲ್ಲಿ ಅತಿಯಾದ ಮಳೆಯ ಸಂಭವವಿದ್ದು, ರಾಜಧಾನಿ ಬೆಂಗಳೂರಲ್ಲೂ ವರುಣಾರ್ಭಟಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.
18 ರಿಂದ 21ರ ವರೆಗೆ ರಾಜ್ಯದ ಕರಾವಳಿ ಭಾಗ ಸೇರಿದಂತೆ ಹಲವೆಡೆ ಭಾರಿ ಮಳೆ ಸಾಧ್ಯತೆ.!!
ಈಗಾಗಲೇ ರಾಜ್ಯದಲ್ಲಿ ಪೂರ್ವ ಮಾನ್ಸೂನ್ ಚುರುಕಾಗಿದ್ದು ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವರುಣಾರ್ಭಟ ಆಗುತ್ತಿದೆ. ಇದೀಗ ಮತ್ತೆ ಮುಂದಿನ ಐದು ದಿನಗಳ ಕಾಲ ಮತ್ತೆ ಮಳೆ ಅವಧಿ ಮುಂದುವರೆಯುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಲ್ಲೂ ಪ್ರಮುಖವಾಗಿ ಕರಾವಳಿ ಭಾಗದ ಮೂರು ಜಿಲ್ಲೆಗಳಲ್ಲಿಯೂ ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ ರಾಜಧಾನಿ ಬೆಂಗಳೂರಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಹೌದು, ನಗರದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯ ಎಚ್ಚರಿಕೆ ನೀಡಿದೆ ಭಾರತೀಯ ಹವಾಮಾನ ಇಲಾಖೆ. ಮಳೆ ಜೊತೆಗೆ ಗಂಟೆಗೆ 30-40 kmph ವೇಗದಲ್ಲಿ ಗಾಳಿ ಬೀಸುವ ಸಂಭವವಿದ್ದು, ಬೆಂಗಳೂರಿನಲ್ಲಿ ಇಂದು ಮತ್ತೆ ನಾಳೆ ಆರೆಂಜ್ ಅಲರ್ಟ್ ಘೋಷಿಸಿಲಾಗಿದೆ.
17 ರಿಂದ 21ರ ವರೆಗೆ ಹವಾಮಾನ ಇಲಾಖೆ ಪರಿಣಾಮಕಾರಿ ರೀತಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ. ಈ ಪೈಕಿ ಬೆಂಗಳೂರಿನಲ್ಲಿ ಇಂದು ಮತ್ತೆ ನಾಳೆ ಆರೆಂಜ್ ಅಲರ್ಟ್ ಇದ್ದು 20 ಮತ್ತು 21ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನು ನಾಲ್ಕು ಪ್ರಮುಖ ಕಾರಣಗಳಿಂದ ಮುಂದಿನ ಐದು ದಿನಗಳ ಕಾಲ ಮಳೆ ಎಚ್ಚರಿಕೆ ನೀಡಲಾಗಿದೆ.

ಐದು ದಿನದ ಮಳೆಗೆ ಕಾರಣವೇನು.!?
ಅರಬ್ಬಿ ಸಮುದ್ರದಲ್ಲಿ ತೇವಾಂಶ ತುಂಬಿದ ಗಾಳಿ ಗಂಟೆಗೆ 50-60 kmph ವೇಗದಲ್ಲಿ ಪಶ್ಚಿಮ ದಿಕ್ಕಿಂದ ಬೀಸಲಿದೆ. ಲಕ್ಷದ್ವೀಪ ಭಾಗದಿಂದ ಕರಾವಳಿ ಭಾಗಕ್ಕೆ ಮೇಲ್ಮೈ ಸುಳಿಗಾಳಿ ಸರಾಸರಿ 3 km ವೇಗದಲ್ಲಿ ಸುಳಿಗಾಳಿ ಹಾಗೂ ತಮಿಳುನಾಡು ಕರಾವಳಿ ಭಾಗದಿಂದ ರಾಜ್ಯ ಹೊರನಾಡು ಭಾಗಕ್ಕೆ ಸರಾಸರಿ 2 km ವೇಗದಲ್ಲಿ ಮೇಲ್ಮೈ ಸುಳಿಗಾಳಿ ಮತ್ತು ಉತ್ತರ ದಕ್ಷಿಣ ಟರ್ಫ್ ಸಮುದ್ರ ಭಾಗದಲ್ಲಿ ಬೀಸುತ್ತಿರುವ ಮೇಲ್ಮೈ ಸುಳಿಗಾಳಿ ಸಮುದ್ರ ಮಟ್ಟದಿಂದ 900 ಮೀ. ಎತ್ತರ ಏರಿಕೆಯಾಗಿರುವ ಹಿನ್ನೆಲೆ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹವಾಮಾನ ಇಲಾಖೆ ಎಚ್ಚರಿಕೆ ಹಿನ್ನೆಲೆ ಅಗತ್ಯ ಕ್ರಮಕ್ಕೆ ಬಿಬಿಎಂಪಿ ವಾರ್ಡ್ ಮಟ್ಟದ ಅಧಿಕಾರಿಗಳಿಗೆ ಸೂಚನೆ !
ಇನ್ನು ಹವಾಮಾನ ಇಲಾಖೆ ನೀಡಿರುವ ಮಾನ್ಸೂನ್ ಪೂರ್ವ ಮಳೆಯ ಎಚ್ಚರಿಕೆಯಿಂದ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಹಿರಿಯ ಅಧಿಕಾರಿಗಳು ವಾರ್ಡ್ ಮಟ್ಟದ ಅಧಿಕಾರಿಗಳಿಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಈಗಾಗಲೇ ಮಾನ್ಸೂನ್ ದೃಷ್ಟಿಯಲ್ಲಿಟ್ಟುಕೊಂಡು ಕೆಲಸ ಚುರುಕು ಮಾಡಿರುವ ಬಿಬಿಎಂಪಿ SWD ಹಾಗೂ ರಾಜಕಾಲುವೆ ಹೂಳೇತ್ತುವ ಕೆಲಸಕ್ಕೆ ವೇಗ ನೀಡಿದ್ದಾರೆ. ಜೊತೆಗೆ ಮಳೆ ಬಂದು ರಸ್ತೆ ಮೇಲೆ ನಿಲ್ಲುವ ನೀರಿಗೂ ಪರಿಹಾರ ಕಂಡುಹಿಡಿದ್ದಾರೆ. ಈಗಾಗಲೇ ಅತಿ ಹೆಚ್ಚು ಮಳೆ ನೀರು ನಿಲ್ಲುವ ರಸ್ತೆಗಳನ್ನು ಗುರುತು ಮಾಡಿದ್ದು, ಓರ್ವ ಸಿಬ್ಬಂದಿಯನ್ನು ಸ್ಥಳದಲ್ಲೇ ನಿಯೋಜಿಸಿ ಮಳೆ ನೀರಿನ ತೆರವು ಮಾಡಲು ಮುಂದಾಗಿದೆ. ಒಟ್ಟಾರೆ ಮಾನ್ಸೂನ್ ಪೂರ್ವ ಮಳೆಯ ಎಚ್ಚರಿಕೆ ಸಿಕ್ಕಿದ್ದು, ಮಳೆಯಿಂದ ಭೀತಿಗೊಳಗಾಗಿರುವ ಬೆಂಗಳೂರಿಗೆ ಮತ್ತಷ್ಟು ಆತಂಕ ಹೆಚ್ಚಿದೆ. ಈಗಾಗಲೇ ಮಳೆ ಅವಾಂತರಕ್ಕೆ ತತ್ತರಿಸುವ ಬೆಂಗಳೂರಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.