ಮಹಾರಾಷ್ಟ್ರಕ್ಕೆ ರಾಜ್ಯದ ಬಸ್ಸುಗಳು ಓಡಾಡುತ್ತಿವೆ. ಇನ್ನಷ್ಟು ಕ್ರಮವಹಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ
ಮಂಗಳೂರು: ಶಿರಾಡಿಘಾಟ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.ಮಂಗಳೂರಿನಲ್ಲಿ ಶನಿವಾರ ನಡೆದ ಡಾ. ಪ್ರಭಾಕರ್ ಕಲ್ಲಡ್ಕ ಅವರ ಶಾಲಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿರಾಡಿಘಾಟ್ ರಸ್ತೆಯ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಕ್ರಮವಹಿಸಲಾಗಿದೆ.
ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರೊಂದಿಗೆ ಈ ವಾರ ವಿಶೇಷ ಸಭೆ ಕರೆದು ಚರ್ಚಿಸಿ ಸಮಗ್ರ ಪರಿಹಾರ ಒದಗಿಲಾಗುವುದು ಎಂದ ಅವರು, ಅಲ್ಲದೇ ಸದರಿ ರಸ್ತೆಯ ಡಾಂಬರೀಕರಣ, ವೈಟ್ ಟಾಪಿಂಗ್ ಹಾಗೂ ಸುರಂಗ ಮಾಡುವ ಬಗ್ಗೆಯೂ ಚರ್ಚಿಸಿ ಪರಿಹಾರ ಒದಗಿಸುವುದಾಗಿ ಸಿಎಂ ತಿಳಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಮಾತನಾಡಿದ ಅವರು, ಮಹಾರಾಷ್ಟ್ರಕ್ಕೆ ರಾಜ್ಯದ ಬಸ್ಸುಗಳು ಓಡಾಡುತ್ತಿವೆ. ಇನ್ನಷ್ಟು ಕ್ರಮವಹಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ. ಅಲ್ಲದೇ ಈ ಬಗ್ಗೆ ಚರ್ಚಿಸುವ ಸಲುವಾಗಿ ಡಿ.14ರಂದು ಕೇಂದ್ರ ಗೃಹ ಸಚಿವರು ಎರಡು ರಾಜ್ಯಗಳ ಸಿಎಂಗಳ ಸಭೆ ಕರೆದಿದ್ದಾರೆ. ಅಲ್ಲದೇ ಈ ಸಂಬಂಧ ಸಂಸದರು ಸೋಮವಾರ ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದಾರೆ ಎಂದ ಅವರು, ಕರ್ನಾಟಕದ ಹಿತರಕ್ಷಣೆ ಹಾಗೂ ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಹಿತರಕ್ಷಣೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದರು.
ಇದೇ ವೇಳೆ ಭಯೋತ್ಪಾದನೆ ನಿಗ್ರಹ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ದಲ್ಲಿ 15 ಸ್ಲೀಪರ್ ಸೆಲ್‌ಗಳ ಮೇಲೆ ದಾಳಿ ಮಾಡಿ ಭಯೋತ್ಪಾದಕರನ್ನು ಸೆರೆಹಿಡಿಯಲಾಗಿದೆ.
ಈ ಕೆಲಸವನ್ನ ನಿರಂತರವಾಗಿ ಮಾಡಲಾಗುತ್ತಿದ್ದು, ಬಂಧಿತರ ಸಂಪರ್ಕ, ಹಣಕಾಸಿನ ವ್ಯವಸ್ಥೆಯೂ ನಿಗಾವಹಿಸಲಾಗಿದೆ. ನಮ್ಮ ಸಂಸ್ಥೆಗಳ ಜೊತೆಗೆ ಎನ್ಐಎ ಸಹ ಒಟ್ಟಿಗೆ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.