ಜಾತಿ ಜನಗಣತಿ ಸಂಘರ್ಷದಲ್ಲಿ ರಾಜ್ಯ ಸರ್ಕಾರವೇ ಅಸ್ತಿತ್ವ ಕಳೆದುಕೊಳ್ಳುತ್ತಾ ಅನ್ನೋ ಚರ್ಚೆಗಳು ಶುರು ಆಗಿವೆ. ರಾಜ್ಯ ಒಕ್ಕಲಿಗ ಸಂಘದ ಸಭೆ ನಡೆದಿದ್ದು, ರಾಜ್ಯ ಸರ್ಕಾರದ ವಿರುದ್ಧ ಕೆಂಡಾಕ್ರೋಶ ಹೊರ ಹಾಕಿದ್ದಾರೆ. ಒಕ್ಕಲಿಗ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಕ್ಕಲಿಗರಿಗೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ ಅನ್ನೋ ಬಗ್ಗೆ ಒಕ್ಕೋರಲಿನಿಂದ ಖಂಡಿಸಿದ್ದಾರೆ. ಸಭೆಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಭಾಗಿಯಾಗಿದ್ದು, ಜಾತಿ ಜನಗಣತಿ ವರದಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಒಕ್ಕಲಿಗ ಸಂಘದ ಸಭೆಯಲ್ಲಿ ಜಾತಿ ಜನಗಣತಿ ವಿರೋಧಿಸಿ ಮುಂದಿನ ಹೋರಾಟ ಕುರಿತು ಚರ್ಚೆ ನಡೆಸಲಾಯ್ತು. ಜಾತಿ ಜನಗಣತಿ ಮಾಡಬೇಕು ಎನ್ನುವುದಿದ್ರೆ ನಾವು ತಡೆಯಲ್ಲ. ವೋಟರ್ ಲಿಸ್ಟ್ ಇದೆ, ಜಿಯೋ ಟ್ಯಾಗ್ ಇದೆ. ಆ ಮೂಲಕ ಮಾಡಿ, ವರದಿ ಸಿದ್ದಪಡಿಸಿ. ಚಿನ್ನಪ್ಪ ರೆಡ್ಡಿ ಆಯೋಗ, ವೆಂಕಟ ಸ್ವಾಮಿ ಆಯೋಗ ಬಂದಾಗ ನಾವು ಹೇಗೆ ವಿರೋಧಿಸಿದ್ದೆವೋ ಅದಕ್ಕಿಂತಲೂ ಹೆಚ್ಚಾಗಿ ಹೋರಾಟ ಮಾಡ್ತೇವೆ. ವೀರಶೈವ ಸಮಯದಾಯದವರು ಸೇರಿಸಿಕೊಂಡು ಅನ್ಯಾಯಕ್ಕೆ ಒಳಗಾದವರೆಲ್ಲ ಸೇರಿ ಹೋರಾಟ ಮಾಡ್ತೇವೆ. ನಮ್ಮ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ಮಾಡ್ತೇವೆ ಎಂದು ಎಚ್ಚರಿಸಿದ್ದಾರೆ.

ನಮ್ಮ ಜನಾಂಗದ ಬೆಂಬಲದಿಂದ ಗೆದ್ದು ಈಗ ಸುಮ್ಮನೆ ಕುಳಿತರ ನಾವು ನಿಮ್ಮ ವಿರುದ್ಧ ಹೋರಾಟ ಮಾಡ್ತೇವೆ. ಯಾಕೆ ಸಮುದಾಯ ಸಹಾಯದಿಂದ ಮಂತ್ರಿ ಆಗಿಲ್ವಾ..? ಬನ್ನಿ ನಿಮ್ಮನ್ನ ಮತ್ತೆ ಮಂತ್ರಿಮಾಡ್ತೇವೆ ಎಂದು ಕಾಂಗ್ರೆಸ್ ಪಕ್ಷದ ಮತ್ರಿಗಳಿಗೆ ಟಾಂಟ್ ಕೊಟ್ಟಿದ್ದಾರೆ. ದೊಡ್ಡ ಹೋರಾಟದ ಬಗ್ಗೆ ನಾಡಿದ್ದು ತೀರ್ಮಾನ ಮಾಡ್ತೇವೆ. ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟದಲ್ಲಿ ಹೋರಾಟ ಮಾಡ್ತೇವೆ. ಬೆಂಗಳೂರಲ್ಲಿಯೂ ದೊಡ್ಡ ಮಟ್ಟದ ಹೋರಾಟ ಮಾಡ್ತೇವೆ, ಕರ್ನಾಟಕ ಬಂದ್ ಆಗುವ ರೀತಿ ಹೋರಾಟ ಮಾಡ್ತೇವೆ ಎಂದಿದ್ದಾರೆ.

ನಾವೂ ಕೂಡ ಸಮೀಕ್ಷೆ ಮಾಡ್ತೇವೆ, ಹಣ ಎಷ್ಟೇ ಖರ್ಚಾಗಲಿ ನಾವು ಸರ್ವೇ ಮಾಡ್ತೇವೆ. ಜಾತಿಗಣತಿ ವರದಿ ಅವೈಜ್ಞಾನಿಕವಾಗಿದೆ. ಯಾವುದೇ ಕಾರಣಕ್ಕೂ ವರದಿ ಜಾರಿ ಮಾಡಬಾರದು. ವೈಜ್ಞಾನಿಕವಾಗಿ ವರದಿ ಮಾಡಿ ಜಾರಿ ಮಾಡಲಿ. ಸರಿಯಾಗಿ ಸಮೀಕ್ಷೆಯನ್ನೇ ಮಾಡಿಲ್ಲ. ಅನ್ಯಾಯವಾದ ಇತರೆ ಸಮಾಜದೊಂದಿಗೆ ನಾವು ಮಾತುಕತೆ ಮಾಡ್ತಿದ್ದೇವೆ. ಸ್ವಾಮೀಜಿಗಳೊಂದಿಗೆ ಮಾತುಕತೆ ಮಾಡಿ ಹೋರಾಟದ ರೂಪುರೇಷೆ ತಿದ್ದುಪಡಿ ಮಾಡ್ತೇವೆ. ನಮ್ಮ ಜನಾಂಗದ ಜನಸಂಖ್ಯೆ ಕಡಿಮೆ ತೋರಿಸಿದ್ದಾರೆ. ಒಕ್ಕಲಿಗರು ನ್ಯಾಯದ ಪರವಾಗಿರೋರು. ನಾವು ಜಾತಿಗಣತಿಗೆ ವಿರೋಧವಿಲ್ಲ. ಪುನಃ ಜಾತಿಗಣತಿ ಮಾಡಿ, ನ್ಯಾಯ ಒದಗಿಸಲಿ ಎಂದಿದ್ದಾರೆ.
ರಾಜ್ಯ ಒಕ್ಕಲಿಗ ಸಂಘದ ಖಜಾಂಚಿ ನೆಲ್ಲಿಗೆರೆ ಬಾಲು ಮಾತನಾಡಿ, ವರದಿ ಜಾರಿ ಮಾಡಿದ್ರೆ ಈ ಸರ್ಕಾರವನ್ನ ಕಿತ್ತೆಸೆಯುತ್ತೇವೆ. ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವ ಆಸೆಯಲ್ಲಿ ಹೀಗೆ ಮಾಡ್ತಿದ್ದಾರೆ. ಒಕ್ಕಲಿಗರಿಗೆ, ವೀರಶೈವರಿಗೆ ಅನ್ಯಾಯವಾಗಿದೆ. ವೈಜ್ಞಾನಿಕವಾಗಿ ಸಮೀಕ್ಷೆಯನ್ನ ಮಾಡಿಲ್ಲ. ಯಾವುದೇ ಕಾರಣಕ್ಕೂ ಈ ವರದಿ ಜಾರಿಯಾಗಬಾರದು. ಒಕ್ಕಲಿಗರ ಶಕ್ತಿಯನ್ನ ತೋರಿಸುತ್ತೇವೆ. ನಮ್ಮ ಸಮುದಾಯದ ನಾಯಕೆಲ್ಲರೂ ಒಂದಾಗ್ತಾರೆ. ಡಿಸಿಎಂ ಸಾಹೇಬ್ರು ಒಕ್ಕಲಿಗರ ಸಂಘದ ಸೂಚನೆಯಂತೆ ವರದಿ ವಿರೋಧಿಸಿ ಸಹಿ ಹಾಕಿದ್ರು. ಈಗ ಎಲ್ಲರೂ ಒಗ್ಗಟ್ಟಾಗಿ ನಿಲ್ತಾರೆ. ಏ್ರಪ್ರಿಲ್ 17ರ ಬಳಿಕ ದೊಡ್ಡ ಹೋರಾಟ ಮಾಡ್ತೇವೆ ಎಂದಿದ್ದಾರೆ.